Olympics - ನಂ. 1 ಬಾಕ್ಸರ್ ಎದುರು ಸಿಂಹದಂತೆ ಹೋರಾಡಿ ವೀರೋಚಿತ ಸೋಲುಂಡ ಸತೀಶ್ ಕುಮಾರ್

ಪ್ರೀಕ್ವಾರ್ಟರ್​ಫೈನಲ್​ನಲ್ಲಿ ಜಮೈಕಾದ ರಿಕಾರ್ಡೋ ಬ್ರೌನ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಭಾರತದ ಸೂಪರ್ ಹೆವಿವೈಟ್ ಬಾಕ್ಸರ್ ಸತೀಶ್ ಕುಮಾರ್ ಅವರು ಕ್ವಾರ್ಟರ್​ಫೈನಲ್​ನಲ್ಲಿ ವಿಶ್ವಚಾಂಪಿಯನ್ ಜಲೊಲೋವ್ ಎದುರು ಸೋಲನುಭವಿಸಿದ್ದಾರೆ.

ಭಾರತದ ಬಾಕ್ಸರ್ ಸತೀಶ್ ಕುಮಾರ್

ಭಾರತದ ಬಾಕ್ಸರ್ ಸತೀಶ್ ಕುಮಾರ್

  • News18
  • Last Updated :
  • Share this:
ಟೋಕಿಯೋ, ಜಪಾನ್ (ಆಗಸ್ಟ್ 01): ಈ ಬಾರಿಯ ಒಲಿಂಪಿಕ್ಸ್​ನಲ್ಲಿ ದಾಖಲೆ ಸಂಖ್ಯೆಯಲ್ಲಿ ಪದಕಗಳನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತದ ಆಸೆಗಳು ಒಂದೊಂದಾಗಿ ಕಮರುತ್ತಿದೆ. ಕ್ರೀಡಾಕೂಟದ ಒಂಬತ್ತನೇ ದಿನವಾದ ಇಂದು ಭಾರತದ ಬುಟ್ಟಿಗೆ ಬಂದಿರುವುದು ಕೇವಲ ಒಂದು ಬೆಳ್ಳಿ ಪದಕ ಮಾತ್ರ. ಪದಕಗಳ ಕೊರತೆ ಇದ್ದರೂ ಭಾರತದ ಕೆಲ ಆಟಗಾರರು ಈ ಕ್ರೀಡಾಕೂಟದಲ್ಲಿ ಅವಿಸ್ಮರಣೀಯ ಕ್ಷಣಗಳನ್ನಂತೂ ಭಾರತೀಯರಿಗೆ ನೀಡಿದ್ದಾರೆ. ಅಂಥ ಕೆಲ ಕ್ರೀಡಾಪಟುಗಳಲ್ಲಿ ಬಾಕ್ಸರ್ ಸತೀಶ್ ಕುಮಾರ್ ಒಬ್ಬರು. ಇಂದು ನಡೆದ ಸೂಪರ್ ಹೆವಿವೈಟ್ ತೂಕ ವಿಭಾಗದ ಕ್ವಾರ್ಟರ್ ಫೈನಲ್​ನಲ್ಲಿ ಸತೀಶ್ ಕುಮಾರ್ ಅವರು ಉಜ್ಬೆಕಿಸ್ತಾನದ ಬಲಿಷ್ಠ ಬಾಕ್ಸರ್ ಎದುರು ವೀರೋಚಿತ ಸೋಲುಂಡರು. ಹಾಲಿ ವಿಶ್ವ ಚಾಂಪಿಯನ್ ಹಾಗೂ ನಂಬರ್ ಒನ್ ಬಾಕ್ಸರ್ ಆಗಿರುವ ಉಜ್ಬೆಕಿಸ್ತಾನದ ಬಖೋದಿರ್ ಜಲೊಲೋವ್ ವಿರುದ್ಧ 0-5 ಅಂಕಗಳಿಂದ ಸೋತರು. ಉಜ್ಬೆಕಿ ಬಾಕ್ಸರ್ ನಿರಾಯಾಸವಾಗಿ ಗೆಲುವು ಸಾಧಿಸಿದರೂ ಭಾರತದ ಸತೀಶ್ ಬಾಕ್ಸರ್ ಅವರ ಹೋರಾಟದ ಕೆಚ್ಚು ಮೆಚ್ಚುವಂಥದ್ದಾಗಿತ್ತು.

ಬಾಕ್ಸಿಂಗ್​ನಲ್ಲಿ ಸೂಪರ್ ಹೆವಿವೈಟ್ ವಿಭಾಗ ಎಂದರೆ ಅದು 91 ಕಿಲೋಗಿಂತ ಹೆಚ್ಚು ತೂಕದವರು ಪಾಲ್ಗೊಳ್ಳುವ ಆಟ. ಓಟದಲ್ಲಿ 100 ಮೀಟರ್ ಸ್ಪರ್ಧೆಯಂತೆ ಬಾಕ್ಸಿಂಗ್​ನಲ್ಲಿ ಸೂಪರ್ ಹೆವಿವೈಟ್ ಎನ್ನುವುದು ಪರಮೋಚ್ಚ ಆಟ. ಮೈಕ್ ಟೈಸನ್, ಮೊಹಮ್ಮದ್ ಅಲಿಯಂಥ ದಿಗ್ಗಜರು ಸೂಪರ್ ಹೆವಿವೈಟ್ ಬಾಕ್ಸರ್​ಗಳಾಗಿದ್ದರು. ಘೇಂಡಾ ಮೃಗಗಳಂಥ ಮೈಕಟ್ಟು ಹೊಂದಿರುತ್ತಾರೆ. ಅಂಥವರ ಎದುರು ಸತೀಶ್ ಕುಮಾರ್ ಆಡುತ್ತಾರೆ. ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ ಮೊದಲ ಸೂಪರ್ ಹೆವಿವೈಟ್ ಬಾಕ್ಸರ್ ಅವರು. ಇತರ ಬಾಕ್ಸರ್​ಗಳಿಗಿಂತ ಮೈಕಟ್ಟಿನಲ್ಲಿ ಕೃಶ ಎನಿಸಿದರೂ ಚಾಕಚಕ್ಯತೆಯಲ್ಲಿ ಯಾರಿಗೂ ಕಡಿಮೆ ಅಲ್ಲ. ಜಮೈಕಾದ ಬಲಿಷ್ಠ ಬಾಕ್ಸರ್ ರಿಕಾರ್ಡೋ ಬ್ರೌನ್ ಅವರನ್ನ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಭಾರತದ ಬಾಕ್ಸಿಂಗ್ ವಲಯದವರನ್ನ ರೋಮಾಂಚನಗೊಳಿಸಿದ್ದರು.

ಆದರೆ, ದೇಹದಾರ್ಡ್ಯದಲ್ಲಿ ಬಹಳ ಗಟ್ಟಿಯಾಗಿದ್ದ ಬ್ರೌನ್ ವಿರುದ್ಧದ ಪಂದ್ಯದಲ್ಲಿ ಸತೀಶ್ ಕುಮಾರ್ ಸಾಕಷ್ಟು ಗಾಯಗೊಂಡಿದ್ದರು. ಅವರ ಗಾಯಗಳಿಗೆ ಏಳು ಹೊಲಿಗೆಗಳನ್ನ ಹಾಕಬೇಕಾಯಿತು. ಕ್ವಾರ್ಟರ್ ಫೈನಲ್​ನಲ್ಲಿ ಅವರು ಸ್ಪರ್ಧಿಸುವುದೇ ಅನುಮಾನ ಎಂಬಂತಿತ್ತು. ಉಜ್ಬೆಕಿಸ್ತಾನದ ವಿಶ್ವ ಚಾಂಪಿಯನ್ ಜಲೊಲೋವ್ ವಿರುದ್ಧ ಸೆಣಸಿದರೆ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆ ಇತ್ತು. ಆದರೂ ಎದೆಗುಂದದೆ ಸತೀಶ್ ಕುಮಾರ್ ಬಾಕ್ಸಿಂಗ್ ರಿಂಗ್​ಗೆ ಅಡಿ ಇಟ್ಟು ಗಮನ ಸೆಳೆದರು. ಜಲೊಲೋವ್ ವಿರುದ್ಧ ಸತೀಶ್ ಕುಮಾರ್ ಗೆಲ್ಲುವ ಯಾವ ನಿರೀಕ್ಷೆಯೂ ಯಾರಿಗೂ ಇರಲಿಲ್ಲ. ಇದೇ ಬಾಕ್ಸರ್ ವಿರುದ್ಧ ಈ ಹಿಂದೆ ಸತೀಶ್ ಕುಮಾರ್ ಎರಡು ಬಾರಿ ಸ್ಪರ್ಧಿಸಿ ಸೋಲಿಸಿದ್ದರು. ಆದರೆ, ಸ್ವಲ್ಪ ತಾಳ್ಮೆ ವಹಿಸಿದರೆ ಗೆಲ್ಲಬಹುದು ಎಂಬುದು ಭಾರತ ಬಾಕ್ಸಿಂಗ್ ಕೋಚ್ ಆಶಯವಾಗಿತ್ತು. ಆದರೆ, ಜಲೊಲೋವ್ ಅವರನ್ನ ತಾಳ್ಮೆಗೆಡಿಸಿ ಸೋಲಿಸಲು ಸತೀಶ್ ಕುಮಾರ್ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Sindhu Loses Semi-final: ಒಲಿಂಪಿಕ್ಸ್​​ನಲ್ಲಿ ಪಿ.ವಿ.ಸಿಂಧು ಚಿನ್ನದ ಕನಸು ಭಗ್ನ, ಕಂಚಿನ ಪದಕದ ನಿರೀಕ್ಷೆ

ಸತೀಶ್ ಕುಮಾರ್ ಸೋಲಿನ ನಂತರ ಭಾರತಕ್ಕೆ ಬಾಕ್ಸಿಂಗ್​ನಲ್ಲಿ ಉಳಿದಿರುವ ಸ್ಪರ್ಧಾಳುವೆಂದರೆ ಮಹಿಳಾ ಬಾಕ್ಸರ್ ಲೊವ್ಲಿನಾ. ಇವರು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿ ಭಾರತಕ್ಕೆ ಒಂದು ಪದಕವನ್ನ ಖಾತ್ರಿಗೊಳಿಸಿದ್ದಾರೆ. ಆಗಸ್ಟ್ 4ರಂದು ಇವರ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇನ್ನು, ಇವತ್ತು ಭಾರತ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್​ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸುತ್ತಿದೆ. ಬ್ಯಾಡ್ಮಿಂಟನ್​ನಲ್ಲಿ ಪಿ.ವಿ. ಸಿಂಧು ಅವರು ಕಂಚಿನ ಪದಕಕ್ಕಾಗಿ ಇವತ್ತು ಸೆಣಸಲಿದ್ದಾರೆ. ಈಕ್ವೆಸ್ಟ್ರಿಯನ್​ನಲ್ಲಿ ಪೌದ್ ಮಿರ್ಜಾ ಸ್ಪರ್ಧಾಕಣದಲ್ಲಿದ್ದಾರೆ. ಅದರೆ ಇವರಿಂದ ಪದಕದ ನಿರೀಕ್ಷೆ ಸಾಧ್ಯವಿಲ್ಲ. ಗಾಲ್ಫ್​ನಲ್ಲಿ ಅನಿರ್ಬನ್ ಲಾಹಿರಿ ಸೇರಿದಂತೆ ಇಬ್ಬರು ಭಾರತೀಯರು ಇದ್ದರೂ ಇವರ ಮುನ್ನಡೆ ಬಹಳ ಕಠಿಣ.

ಈಗ ಭಾರತ ಪದಕ ಗೆಲ್ಲುವ ಸಾಧ್ಯತೆ ಇರುವುದು ತೀರಾ ಕಡಿಮೆ. ವೇಟ್ ಲಿಫ್ಟಿಂಗ್​ನಲ್ಲಿ ಸಾಯಿಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗಳಿಸಿದರು. ಲವ್ಲಿನಾ ಅವರು ಬಾಕ್ಸಿಂಗ್​ನಲ್ಲಿ ಒಂದು ಪದಕ ಖಾತ್ರಿ ಪಡಿಸಿದ್ದಾರೆ. ಪಿ.ವಿ. ಸಿಂಧು ಇವತ್ತು ಗೆದ್ದರೆ ಒಂದು ಕಂಚು ಸಿಗುತ್ತದೆ. ಇದು ಬಿಟ್ಟರೆ ಭಾರತ ಪುರುಷರ ಹಾಕಿ ತಂಡ ಬ್ರಿಟನ್ ವಿರುದ್ಧ ಗೆದ್ದರೆ ಒಂದು ಪದಕ ನಿರೀಕ್ಷೆ ಇಟ್ಟುಕೊಳ್ಳಬಹುದು. ಆಸ್ಟ್ರೇಲಿಯಾ ಹೊರತುಪಡಿಸಿ ಉಳಿದ ಯಾವುದೇ ತಂಡವನ್ನೂ ಸೋಲಿಸುವಷ್ಟು ಸಮರ್ಥವಾಗಿದೆ ಭಾರತ ತಂಡ.

ಅಥ್ಲೆಟಿಕ್ಸ್​ನಲ್ಲಿ ಮಹಿಳಾ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಕಮಲ್​ಪ್ರೀತ್ ಕೌರ್ ಅವರಿಂಂದ ಪದಕದ ನಿರೀಕ್ಷೆ ಇಟ್ಟುಕೊಳ್ಳಬಹುದು. ಹಾಗೆಯೇ, ಜಾವೆಲಿನ್ ಥ್ರೋ ಸ್ಪರ್ಧಾಳುಗಳಾದ ನೀರಜ್ ಚೋಪ್ರಾ ಮತ್ತು ಅನ್ನುರಾಣಿ ಕೂಡ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಶೂಟಿಂಗ್​ನಲ್ಲಿ ಸಂಜೀವ್ ರಾಜಪೂತ್ ಮತ್ತು ಐಶ್ವರ್ಯ ತೋಮರ್ ಮಾತ್ರ ಭಾರತದ ಪರ ಉಳಿದಿರುವುದು. ಸಂಜೀವ್ ಅವರಿಗೆ ಪದಕ ಗೆಲ್ಲುವ ಸಾಮರ್ಥ್ಯ ಇದೆ.

ಕುಸ್ತಿಯಲ್ಲಿ ಭಾರತದ ಏಳು ಮಂದಿ ಸ್ಪರ್ಧಾಳುಗಳು ಇದ್ದಾರೆ. ಬಜರಂಗ್ ಪೂನಿಯಾ, ವಿನೇಶ್ ಫೋಗಾಟ್, ಸೋನಮ್ ಮಲಿಕ್, ಅಂಶು ಮಲಿಕ್ ಸೇರಿ ಐದಾರು ಪದಕದ ನಿರೀಕ್ಷೆ ಇದೆ. ಕುಸ್ತಿ ಸ್ಪರ್ಧೆಗಳು ಆಗಸ್ಟ್ 3ರಂದು ಪ್ರಾರಂಭವಾಗುತ್ತವೆ.
Published by:Vijayasarthy SN
First published: