ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕದ ನಿರೀಕ್ಷೆ ಹೆಚ್ಚಿರುವ ಕುಸ್ತಿ ಸ್ಪರ್ಧೆಗಳು ಮೊನ್ನೆ ಆರಂಭಗೊಂಡಿವೆ. 57 ಕಿಲೋ ಪುರುಷರ ವಿಭಾಗದಲ್ಲ ರವಿಕುಮಾರ್ ದಾಹಿಯಾ ಈಗಾಗಲೇ ಫೈನಲ್ ತಲುಪಿ ಹೊಸ ಇತಿಹಾಸ ರಚನೆಯ ಹೊಸ್ತಿಲಲ್ಲಿದ್ದಾರೆ. ಘಟಾನುಘಟಿ ಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಬಜರಂಗ್ ಪೂನಿಯಾ ಅವರು ಇನ್ನೂ ಅಖಾಡಕ್ಕೆ ಇಳಿಯಬೇಕಿದೆ. ಆದರೆ, ಮೂವರು ಭಾರತೀಯ ಕುಸ್ತಿಪಟುಗಳು ವಿವಿಧ ಹಂತಗಳಲ್ಲಿ ಸೋತಿದ್ದಾರೆ. ಮಹಿಳಾ ಕುಸ್ತಿಪಟುಗಳಾದ ಅಂಶು ಮಲಿಕ್ ಮತ್ತು ಸೋನಮ್ ಮಲಿಕ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ದೀಪಕ್ ಪೂನಿಯಾ ಸೆಮಿಫೈನಲ್ನಲ್ಲಿ ಸೋತಿದ್ಧಾರೆ. ಈಗ ಅಂಶ ಮಲಿಕ್ ಮತ್ತು ಸೋನಮ್ ಮಲಿಕ್ ಮೊದಲ ಸುತ್ತಿನಲ್ಲೇ ಸೋತಿದ್ದರೂ ಅಂಶು ಮಲಿಕ್ ಅವರಿಗೆ ಕಂಚಿನ ಪದಕ ಗೆಲ್ಲುವ ಅವಕಾಶ ಸಿಕ್ಕಿದೆ. ಒಲಿಂಪಿಕ್ಸ್ ಕುಸ್ತಿಯಲ್ಲಿ 2008ರಿಂದ ರಪೆಶಾಜ್ (Repechage) ನಿಯಮ ಜಾರಿಯಲ್ಲಿದೆ. ಇದು ಕೆಲ ಕುಸ್ತಿಪಟುಗಳಿಗೆ ಪದಕ ಗೆಲ್ಲುವ ಅವಕಾಶ ನೀಡುತ್ತದೆ. ಸೋನಮ್ ಮಲಿಕ್ಗೆ ಸಿಗದ ಅವಕಾಶ ಅಂಶು ಮಲಿಕ್ಗೆ ಹೇಗೆ ಸಿಕ್ಕಿತು? ರಪೆಶಾಜ್ ನಿಯಮದ ಪರಿಚಯ ಇಲ್ಲಿದೆ:
ರಪೆಶಾಜ್ಗೆ ಮರು ಅವಕಾಶ ಎಂಬ ಒಂದು ಅರ್ಥ ಇದೆ. ಇಲ್ಲಿ ಸ್ವಲ್ಪದರಲ್ಲಿ ಪದಕದಿಂದ ಕೈತಪ್ಪಿದ ಕ್ರೀಡಾಪಟುವಿಗೆ ಮತ್ತೊಂದು ಅವಕಾಶ ಕಲ್ಪಿಸುವುದು ಉದ್ದೇಶ. ಕುಸ್ತಿಯಲ್ಲಿ ಇದಕ್ಕೆ ಕೆಲ ನಿಯಮಗಳನ್ನ ರೂಪಿಸಲಾಗಿದೆ. ಒಂದು ಸ್ಪರ್ಧೆಯಲ್ಲಿ ಇಬ್ಬರು ಕುಸ್ತಿಪಟುಗಳು ಫೈನಲ್ ತಲುಪುತ್ತಾರೆ. ಫೈನಲ್ ಹಾದಿಯಲ್ಲಿ ಅವರು ಸೋಲಿಸಿದ ಸ್ಪರ್ಧಾಳುಗಳನ್ನ ಪ್ರತ್ಯೇಕವಾಗಿ ಗುಂಪು ಮಾಡಲಾಗುತ್ತದೆ. ಉದಾಹರಣೆಗೆ ಎ ಮತ್ತು ಬಿ ಆಟಗಾರ ಫೈನಲ್ ತಲುಪುತ್ತಾರೆ. ಫೈನಲ್ ಹಾದಿಯಲ್ಲಿ ಎ ಆಟಗಾರನಿಂದ ಸೋತ ಎಲ್ಲಾ ಆಟಗಾರರನ್ನು ಒಂದು ಗುಂಪು ಮಾಡಲಾಗುತ್ತದೆ. ಬಿ ಆಟಗಾರನಿಂದ ಸೋತ ಎಲ್ಲರನ್ನೂ ಮತ್ತೊಂದು ಗುಂಪಿಗೆ ಸೇರಿಸಲಾಗುತ್ತದೆ. ಈಗ ಎ ಆಟಗಾರನಿಂದ ಆರಂಭಿಕ ಸುತ್ತಿನಲ್ಲಿ ಸೋತ ಆಟಗಾರ ಹಾಗೂ ಎರಡನೇ ಸುತ್ತಿನಲ್ಲಿ ಸೋತ ಆಟಗಾರನ ನಡುವೆ ರಪೆಶಾಜ್ ಹಂತದ ಕುಸ್ತಿ ನಡೆಯುತ್ತದೆ. ಅದರಲ್ಲಿ ಗೆದ್ದವರು ಮುಂದಿನ ಹಂತದಲ್ಲಿರುವವರನ್ನು ಎದಿರುಗೊಳ್ಳುತ್ತಾರೆ. ಅಂತಿಮವಾಗಿ ಸೆಮಿಫೈನಲ್ನಲ್ಲಿ ಸೋತ ಸ್ಪರ್ಧಿ ಹಾಗೂ ರಪೆಶಾಜ್ ಮೂಲಕ ಪ್ರವೇಶ ಮಾಡಿದ ಸ್ಪರ್ಧಿ ಮಧ್ಯೆ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಯುತ್ತದೆ.
ಇದನ್ನೂ ಓದಿ: Olympics Boxing: ಬಾಕ್ಸಿಂಗ್ ಸೆಮಿಫೈನಲ್ನಲ್ಲಿ ಲವ್ಲಿನಾಗೆ ಸೋಲು; ಭಾರತಕ್ಕೆ ಕಂಚು ಪ್ರಾಪ್ತಿ
ಇಲ್ಲಿ ಅಂಶು ಮಾಲಿಕ್ ಅವರ ಉದಾಹರಣೆ ನೀಡಿದರೆ ಸ್ಪಷ್ಟವಾಗುತ್ತದೆ. ಅಂಶು ಮಾಲಿಕ್ ಅವುರ ಮೊದಲ ಸುತ್ತಿನಲ್ಲಿ (ಪ್ರೀಕ್ವಾರ್ಟರ್ ಫೈನಲ್) ಸೋತಿದ್ದು ಇರಿನಾ ಕುರಾಚ್ಕಿನಾ ಎಂಬಾಕೆಯ ಮೇಲೆ. ಬೆಲಾರಸ್ ದೇಶದ ಇರಿನಾ ಅವರು ಇದೀಗ ಫೈನಲ್ ಪ್ರವೇಶಿಸಿದ್ದಾರೆ. ತಮ್ಮ ಫೈನಲ್ ಹಾದಿಯಲ್ಲಿ ಮೊದಲಿಗೆ ಅಂಶು ಮಲಿಕ್ ಅವರನ್ನ ಸೋಲಿಸಿದರು. ಬಳಿಕ ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ವೆಲೇರಿಯಾ ಕೊಬ್ಲೋವಾ ಅವರನ್ನ ಸೋಲಿಸಿದರು. ಬಳಿಕ ಸೆಮಿಫೈನಲ್ನಲ್ಲಿ ಬಲ್ಗೇರಿಯಾದ ಎವೆಲಿನಾ ನಿಕೋಲೋವಾ ಅವರನ್ನ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.
ಈಗ ಇರಿನಾ ವಿರುದ್ಧ ಸೋತಿರುವ ಅಂಶು ಮಾಲಿಕ್, ವೆಲೇರಿಯಾ ಕೋಬ್ಲೋವಾ ಮತ್ತು ಎವೆಲಿನಾ ನಿಕೋಲೋವಾ ಅವರ ಮಧ್ಯೆ ಕಂಚಿನ ಪದಕಕ್ಕಾಗಿ ರಪೆಶಾಜ್ ಹಂತದ ಸ್ಪರ್ಧೆ ನಡೆಯುತ್ತದೆ. ಮೊದಲಿಗೆ ಅಂಶು ಮಾಲಿಕ್ ಮತ್ತು ವೆಲೇರಿಯಾ ಕೋಬ್ಲೋವಾ ಮಧ್ಯೆ ಕುಸ್ತಿ ನಡೆಯುತ್ತದೆ. ಅದರಲ್ಲಿ ಗೆದ್ದವರು ಅಂತಿಮವಾಗಿ ಎವೆಲಿನಾ ನಿಕೋಲೊವಾ ಅವರನ್ನ ಕಂಚಿನ ಪದಕಕ್ಕಾಗಿ ಎದಿರುಗೊಳ್ಳುತ್ತಾರೆ.
ಇದನ್ನೂ ಓದಿ: Tokyo Olympics: ಫೈನಲ್ಗೆ ಜಾವೆಲಿನ್ ಪಟು ನೀರಜ್ ಚೋಪ್ರಾ; ಸೆಮಿಫೈನಲ್ಗೆ ಕುಸ್ತಿಪಟುಗಳಾದ ರವಿ ದಾಹಿಯಾ, ದೀಪಕ್ ಪೂನಿಯಾ
ಅಂಶು ಮಲಿಕ್ ಅವರಂತೆಯೇ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಸೋನಮ್ ಮಲಿಕ್ ಅವರಿಗೆ ರಪೆಶಾಜ್ ಹಂತದ ಅವಕಾಶ ಇಲ್ಲ. ಯಾಕೆಂದರೆ 62 ಕಿಲೋ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೋನಮ್ ಮಲಿಕ್ ಅವರು ಸೋತಿದ್ದು ಮಂಗೋಲಿಯಾದ ಖುರೇಲ್ಕುಗೀನ್ ಬೊಲೋರ್ಟುಯಾ ವಿರುದ್ಧ. ಮಂಗೋಲಿಯಾದ ಈ ಆಟಗಾರ್ತಿ ಫೈನಲ್ ತಲುಪಲು ವಿಫಲರಾದರು. ಹೀಗಾಗಿ, ಸೋನಮ್ ಮಲಿಕ್ ಅವರಿಗೆ ಕಂಚಿನ ಪದಕಕ್ಕೆ ಪ್ರಯತ್ನಿಸುವ ಮರು ಅವಕಾಶ ಸಿಗಲಿಲ್ಲ.
2008ರಲ್ಲಿ ಒಲಿಂಪಿಕ್ಸ್ ಕುಸ್ತಿಯಲ್ಲಿ ರಪೆಶಾಜ್ ಹಂತದ ಸ್ಪರ್ಧೆಗಳನ್ನ ಜಾರಿಗೆ ತರಲಾಯಿತು. ಆಗ ಪ್ರೀ ಕ್ವಾರ್ಟರ್ ಫೈನಲ್ನಲ್ಲೇ ಸೋತಿದ್ದ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ಈ ನಿಯಮ ವರದಾನವಾಗಿ ಪರಿಣಮಿಸಿತು. ರಪೆಶಾಜ್ ಹಂತದಲ್ಲಿ ಮಿಂಚಿದ ಸುಶೀಲ್ ಕುಮಾರ್ ಕಂಚಿನ ಪದಕ ಜಯಿಸಿದರು. ಯೋಗೇಶ್ವರ್ ದತ್ ಹಾಗೂ ಸಾಕ್ಷಿ ಮಲಿಕ್ ಅವರು ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲಲು ಇದೇ ರಪೆಶಾಜ್ ನಿಯಮಗಳು ಅವಕಾಶ ಕಲ್ಪಿಸಿದ್ದವು. ಈಗ ಅಂಶು ಮಾಲಿಕ್ಗೂ ಕಂಚಿನ ಪದಕ ಪಡೆಯುವ ಅವಕಾಶ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ