• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Olympics Hockey: ಭಾರತ ಮಹಿಳಾ ಹಾಕಿ ತಂಡದ ಕಂಚು ಆಸೆ ಭಗ್ನ; ಬ್ರಿಟನ್ ವಿರುದ್ಧ ವೀರೋಚಿತ ಸೋಲು

Olympics Hockey: ಭಾರತ ಮಹಿಳಾ ಹಾಕಿ ತಂಡದ ಕಂಚು ಆಸೆ ಭಗ್ನ; ಬ್ರಿಟನ್ ವಿರುದ್ಧ ವೀರೋಚಿತ ಸೋಲು

ಭಾರತ ಮಹಿಳಾ ಹಾಕಿ ತಂಡ

ಭಾರತ ಮಹಿಳಾ ಹಾಕಿ ತಂಡ

ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ 2020 ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಹಾಕಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡ 4-3 ಗೋಲುಗಳಿಂದ ಭಾರತದ ಮಹಿಳೆಯರ ತಂಡವನ್ನು ಸೋಲಿಸಿತು.

 • Share this:

  ಬೆಂಗಳೂರು, ಅ. 06: ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿ ದಾಖಲೆ ಬರೆದಿದ್ದ ಭಾರತ ಮಹಿಳಾ ಹಾಕಿ ತಂಡ ಸ್ವಲ್ಪದರಲ್ಲೇ ಕಂಚು ಪದಕದಿಂದ ವಂಚಿತವಾಗಿದೆ. ಪ್ರಬಲ ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 3-4 ಗೋಲುಗಳಿಂದ ಸೋಲನುಭವಿಸಿದರು. ಆದರೆ, ರಾಣಿ ರಾಮಪಾಲ್ ನೇತೃತ್ವದ ಭಾರತ ಹಾಕಿ ತಂಡ ಅಷ್ಟು ಸುಲಭಕ್ಕೆ ಸೋತಿಲ್ಲ. ಸೋಲುವ ಮುನ್ನ ವೀರೋಚಿತ ಹೋರಾಟದಿಂದ ಕೆಚ್ಚೆದೆಯ ಪ್ರದರ್ಶನ ನೀಡಿದರು. ಕೊನೆಯ ಕ್ಷಣದವರೆಗೂ ಭಾರತ ತಂಡ ಉತ್ತಮ ಹೋರಾಟ ತೋರಿತು.


  ಪಂದ್ಯದಲ್ಲಿ ಎರಡು ಗೋಲುಗಳಿಂದ ಆರಂಭಿಕ ಹಿನ್ನಡೆ ಅನುಭವಿಸಿದರೂ ಭಾರತದ ಮಹಿಳೆಯರು ಹತಾಶರಾಗದೇ ಪ್ರತಿರೋಧ ತೋರಿ ಸತತ ಮೂರು ಗೋಲು ಗಳಿಸಿ ಒಂದು ಹಂತದಲ್ಲಿ ಮುನ್ನಡೆ ಕೂಡ ಹೊಂದಿದ್ದರು. ಆದರೆ, ಬ್ರೇಟ್ ಬ್ರಿಟನ್ ಆಟಗಾರ್ತಿಯರೂ ಚುರುಕಿನ ದಾಳಿ ಸಂಘಟಿಸಿ ಎರಡು ಗೋಲು ಗಳಿಸಿ ಅಂತಿಮವಾಗಿ ಗೆದ್ದು ಕಂಚಿನ ಪದಕ ಗಿಟ್ಟಿಸಿದರು. ಬ್ರಿಟನ್ ಪರ ಎಲೀ ರೇಯರ್ 16ನೇ ನಿಮಿಷ, ಸಾರಾ ರಾಬರ್ಟ್ಸನ್ 24ನೇ ನಿಮಿಷ, ನಾಯಕಿ ಹಾಲೀ ಪೇರ್ನೆ-ವೆಬ್ 35ನೇ ನಿಮಿಷ ಹಾಗೂ ಗ್ರೇಸ್ ಬಾಲ್ಡ್​ಸನ್ 48ನೇ ನಿಮಿಷದಲ್ಲಿ ಗೋಲು ಗಳಿಸಿದರು. ಭಾರತದ ಪರ ಗುರಜೀತ್ ಕೌರ್ 25 ಮತ್ತು 26ನೇ ನಿಮಿಷ, ವಂದನಾ ಕಟಾರಿಯಾ 29ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆದರೆ, ಕೊನೆಯ ಕ್ಷಣದಲ್ಲಿ ಬಾಲ್ಡ್​ಸನ್ ಗಳಿಸಿದ ಗೋಲು ಭಾರತದ ಸೋಲಿಗೆ ಕಾರಣವಾಯಿತು.


  ಭಾರತದ ಮಹಿಳಾ ಹಾಕಿ ತಂಡಕ್ಕೆ ಕಂಚಿನ ಪದಕ ಸಿಗದೇ ಇದ್ದರೂ ಅದರ ಹೋರಾಟದ ಕೆಚ್ಚು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಕೌಟ್ ಹಂತಕ್ಕೆ ಹೋಗುವ ನಿರೀಕ್ಷೆಯೇ ಇಲ್ಲದ ತಂಡ ಕ್ವಾರ್ಟರ್ ಫೈನಲ್​ನಲ್ಲಿ ಆಸ್ಟ್ರೇಲಿಯಾದಂತ ಬಲಿಷ್ಠ ತಂಡವನ್ನೇ ಸೋಲಿಸಿ ಇತಿಹಾಸ ಸೃಷ್ಟಿಸಿದ್ದು ಗಮನಾರ್ಹ ಸಂಗತಿ. ಮೊದಲ ಮೂರು ಪಂದ್ಯಗಳನ್ನ ಸತತವಾಗಿ ಸೋತರೂ ಎದೆಗುಂದದೆ ತಂಡ ಪುಟಿದೆದ್ದು ಸೆಮಿಫೈನಲ್ ತಲುಪಿದ್ದು ಭಾರತದ ಹಾಕಿ ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ. ಇದೇ ಬ್ರಿಟನ್ ವಿರುದ್ಧ ಗ್ರೂಪ್ ಹಂತದಲ್ಲಿ ಭಾರತ ಸುಲಭವಾಗಿ ಶರಣಾಗಿತ್ತು. ಆದರೆ ಸೆಮಿಫೈನಲ್​ನಲ್ಲಿ ಬ್ರಿಟಿಷ್ ಮಹಿಳೆಯರು ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕಾಯಿತು.


  ಇನ್ನೊಂದೆಡೆ ಭಾರತ ಪುರುಷರ ಹಾಕಿ ತಂಡ ನಿನ್ನೆ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದಿತ್ತು. 41 ವರ್ಷಗಳ ಬಳಿಕ ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್​ನಲ್ಲಿ ದೊರೆತ ಮೊದಲ ಪದಕ ಅದಾಗಿದೆ.


  ಇದನ್ನೂ ಓದಿ: Ravi Kumar Dahiya: ಒಲಿಂಪಿಕ್ಸ್​​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಕುಸ್ತಿಪಟು ರವಿಕುಮಾರ್ ದಹಿಯಾ


  ಇನ್ನು, ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಇವತ್ತಿನ ಇತರ ಸ್ಪರ್ಧೆಗಳ ಪೈಕಿ ಕುಸ್ತಿಪಟು ಬಜರಂಗ್ ಪೂನಿಯಾ ಮುನ್ನಡೆ ಹೊಂದಿದರೆ, ಮಹಿಳಾ ಕುಸ್ತಿಪಟು ಸೀಮಾ ಬಿಸ್ಲಾ ಮೊದಲ ಸುತ್ತಿನಲ್ಲೇ ಸೋತಿದ್ದಾರೆ. ಇನ್ನು, ಪುರುಷರ 50 ಕಿಮೀ ನಡಿಗೆ ರೇಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಗುರುಪ್ರೀತ್ ಸಿಂಗ್ ಅವರು ರೇಸ್ ಮುಗಿಸಲು ಸಾಧ್ಯವಾಗದೇ ನಿರ್ಗಮಿಸಿದರು. ಗಾಲ್ಫ್​ನಲ್ಲಿ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಇಂದಿನ ಮೂರನೇ ಸುತ್ತಿನಲ್ಲಿ ಪದಕದ ಆಸೆಯನ್ನ ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ, ಇವತ್ತು ಮಹಿಳೆಯರ 20 ಕಿಮೀ ನಡಿಗೆ ರೇಸ್​ನಲ್ಲಿ ಭಾರತದ ಪ್ರಿಯಾಂಕಾ ಗೋಸ್ವಾಮಿ ಮತ್ತು ಭಾವನಾ ಜಾಟ್ ಅವರು ಸ್ಪರ್ಧಿಸುತ್ತಿದ್ದಾರೆ. 4X400 ರಿಲೇ ಓಟದ ಸ್ಪರ್ಧೆಯಲ್ಲಿ ಭಾರತದ ಅಮೋಜ್ ಜೇಕಬ್, ರಾಜೀವ್ ಅರೋಗಿಯಾ, ಪಾಂಡಿ ನಾಗನಾಥನ್, ನಿರ್ಮಲ್ ಟಾಮ್ ನೋವಾ ಮತ್ತು ಮೊಹಮ್ಮದ್ ಅನಾಸ್ ಅವರು ಕಣದಲ್ಲಿದ್ದಾರೆ.

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು