Tokyo Olympics: ಸೆಮಿಫೈನಲ್​ಗೆ ಭಾರತ ಮಹಿಳಾ ಹಾಕಿ ತಂಡ ಪ್ರವೇಶ; ಆಸ್ಟ್ರೇಲಿಯಾಗೆ ಶಾಕ್

ಭಾರತ ಮಹಿಳಾ ಹಾಕಿ ತಂಡ

ಭಾರತ ಮಹಿಳಾ ಹಾಕಿ ತಂಡ

ಗುರಜೀತ್ ಸಿಂಗ್ ಕೌರ್ ಅವರ ಗೋಲಿನ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ 1-0 ಗೋಲಿನಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಒಲಿಂಪಿಕ್ಸ್ ಹಾಕಿ ಸೆಮಿಫೈನಲ್ ತಲುಪಿದೆ. ಭಾರತದ ಮಹಿಳೆಯರು ಈ ಹಂತಕ್ಕೆ ಏರಿದ್ದು ಇದೇ ಮೊದಲು.

  • Share this:

ಟೋಕಿಯೋ, ಜಪಾನ್ (ಆ. 02): ನಿನ್ನೆ ಭಾರತ ಪುರುಷರ ಹಾಕಿ ತಂಡ ಬ್ರಿಟನ್ ವಿರುದ್ಧ ಗೆದ್ದು 41 ವರ್ಷಗಳ ನಂತರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಇದೀಗ ಇಂದು ಭಾರತದ ಮಹಿಳಾ ಹಾಕಿ ತಂಡ ಇನ್ನೂ ಗಮನಾರ್ಹ ಸಾಧನೆ ತೋರಿದೆ. ಪ್ರಬಲ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಭಾರತದ ವನಿತೆಯರು ಸೆಮಿಫೈನಲ್ ತಲುಪಿದ್ದಾರೆ. ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್ ತಲುಪಿದ್ದು ಇದೇ ಮೊದಲ ಬಾರಿಗೆ. ಆ ನಿಟ್ಟಿನಲ್ಲಿ ಭಾರತೀಯರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಚ್ಚರಿ ಎಂದರೆ ಭಾರತದ ಮಹಿಳಾ ತಂಡವು ತನ್ನ ಎ ಗುಂಪಿನಲ್ಲಿ 3 ಸೋಲು ಎರಡು ಗೆಲುವನ್ನು ಕಂಡು ಅದೃಷ್ಟದ ರೀತಿಯಲ್ಲಿ ಕೊನೆಯ ತಂಡವಾಗಿ ಕ್ವಾರ್ಟರ್ ಫೈನಲ್ ತಲುಪಿತ್ತು. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡ ತನ್ನ ಬಿ ಗುಂಪಿನಲ್ಲಿ ಎಲ್ಲಾ ಐದು ಪಂದ್ಯಗಳನ್ನ ಗೆದ್ದು ಟಾಪ್ ಆಗಿತ್ತು. ವಿಶ್ವದ ನಂಬರ್ 2 ತಂಡವಾಗಿದ್ದ ಆಸ್ಟ್ರೇಲಿಯಾವನ್ನು ಭಾರತದ ಮಹಿಳೆಯರು ಸೋಲಿಸುವ ಯಾವ ನಿರೀಕ್ಷೆಯೂ ಇರಲಿಲ್ಲ. ಇಂಥ ಹಿನ್ನೆಲೆಯಲ್ಲಿ ಭಾರತ ಅಭೂತಪೂರ್ವ ಪ್ರದರ್ಶನ ನೀಡಿ ಕಾಂಗರೂಗಳ ತಂಡಕ್ಕೆ ಆಘಾತ ಕೊಟ್ಟಿದ್ದಾರೆ. ಇದರೊಂದಿಗೆ ಭಾರತಕ್ಕೆ ಹಾಕಿಯಲ್ಲಿ ಎರಡು ಪದಕ ಪಡೆಯುವ ನಿರೀಕ್ಷೆ ಬಲಗೊಂಡಿದೆ.


ಇಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪರ ಗುರ್ಜೀತ್ ಕೌರ್ ವಿಜಯದ ಗೋಲು ಗಳಿಸಿದರು. ಗೋಲು ಸರಿಸಮ ಮಾಡಿಕೊಳ್ಳಲು ಕಾಂಗರೂಗಳು ಎಷ್ಟೇ ಪ್ರಯತ್ನಿಸಿದರೂ ಭಾರತದ ಪ್ರಬಲ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಭಾರತದ ಡಿಫೆಂಡರ್​ಗಳು ಇಂದು ಅದ್ಭುತ ಪ್ರದರ್ಶನ ನೀಡಿ ಪ್ರಬಲ ಆಸ್ಟ್ರೇಲಿಯನ್ನರನ್ನ ಬೇಸ್ತು ಬೀಳಿಸಿದರು. ಇದೇ ವೇಳೆ, ಇಂದು ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯನ್ನ 3-0 ಗೋಲುಗಳಿಂದ ಸೋಲಿಸಿ ಅರ್ಜೆಂಟೀನಾ ಮಹಿಳಾ ತಂಡವೂ ಸೆಮಿಫೈನಲ್ ತಲುಪಿದೆ. ಆಗಸ್ಟ್ 6ರಂದು ನಡೆಯುವ ಸೆಮಿಫೈನಲ್​ನಲ್ಲಿ ಭಾರತಕ್ಕೆ ಅರ್ಜೆಂಟೀನಾ ಸವಾಲು ಹಾಕಲಿದೆ. ಇಂದು ಸಂಜೆ ನಡೆಯಲಿರುವ ಮತ್ತೆರಡು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ನೆದರ್ ಲೆಂಡ್ಸ್-ನ್ಯೂಜಿಲೆಂಡ್ ಹಾಗೂ ಸ್ಪೇನ್-ಬ್ರಿಟನ್ ತಂಡಗಳು ಮುಖಾಮುಖಿಯಾಗಲಿವೆ.


ಭಾರತದ ಪುರುಷರ ಹಾಕಿ ತಂಡ 1980ರ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದ ಪಡೆದಿತ್ತು. ಅದಾದ ಬಳಿಕ ಮತ್ಯಾವಾಗಲೂ ಸೆಮಿಫೈನಲ್ ಹಂತ ಕೂಡ ತಲುಪಿರಲಿಲ್ಲ. ನಾಳೆ ನಡೆಯುವ ಸೆಮಿಫೈನಲ್​ನಲ್ಲಿ ಬೆಲ್ಜಿಯಂ ತಂಡವನ್ನು ಭಾರತ ಎದಿರುಗೊಳ್ಳಲಿದೆ. ಭಾರತ ಫೈನಲ್ ತಲುಪುವ ಸಾಧ್ಯತೆಯಂತೂ ಕಾಣುತ್ತಿದೆ. ನಾಳೆಯ ಮತ್ತೊಂದು ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಹಾಗೂ ಜರ್ಮನಿ ಮುಖಾಮುಖಿಯಾಗಲಿವೆ.


ಇದನ್ನೂ ಓದಿ: PV Sindhu won Bronze Medal: ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು: ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ಸಾಧನೆ


ಇಂದು ಬೆಳಗ್ಗೆ ನಡೆದ ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ದುತೀ ಚಂದ್ ಆರಂಭಿಕ ಸುತ್ತಿನಲ್ಲೇ ಕೊನೆಯ ಸ್ಥಾನ ಪಡೆದು ನಿರ್ಗಮಿಸಿದ್ದಾರೆ. ಇನ್ನು, ಇವತ್ತು ಮಹಿಳಾ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಕಮಲ್​ಪ್ರೀತ್ ಕೌರ್ ಅವರು ಪದಕ ಗೆಲ್ಲುವ ಸನ್ನಾಹದಲ್ಲಿದ್ಧಾರೆ. ಶೂಟಿಂಗ್​ನ ಪುರುಷರ 50 ಮೀಟರ್ ರೈಫಲ್ 3 ಪೊಸಿಶನ್​ನಲ್ಲಿ ಐಶ್ವಾರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸಂಜೀವ್ ರಾಜಪೂತ್ ಸ್ಪರ್ಧಿಸಿದ್ದಾರೆ. ಈಕ್ವೆಸ್ಟ್ರಿಯನ್​ನ ವೈಯಕ್ತಿಕ ಜಂಪಿಂಗ್​ನಲ್ಲಿ ಭಾರತದ ಫಾದ್ ಮಿರ್ಜಾ ಕಣದಲ್ಲಿದ್ಧಾರೆ.


ಭಾರತ ಇದೂವರೆಗೂ ಈ ಒಲಿಂಪಿಕ್ಸ್​ನಲ್ಲಿ ಎರಡು ಪದಕ ಮಾತ್ರ ಪಡೆದಿದೆ. ವೇಟ್ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದರೆ, ಬ್ಯಾಡ್ಮಿಂಟನ್​ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗಿಟ್ಟಿಸಿದ್ದಾರೆ. ಬಾಕ್ಸಿಂಗ್​ನಲ್ಲಿ ಲವ್ಲಿನಾ ಅವರು ಒಂದು ಪದಕ ಖಾತ್ರಿಪಡಿಸಿದ್ದಾರೆ. ಕುಸ್ತಿ ಕ್ರೀಡೆಯಲ್ಲಿ ಭಾರತಕ್ಕೆ ಕೆಲ ಪದಕಗಳು ದೊರಕುವ ನಿರೀಕ್ಷೆ ಇದೆ.

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು