Tokyo Paralympics- ಭಾರತಕ್ಕೆ ಎರಡು ಬೆಳ್ಳಿ ಮತ್ತು ಒಂದು ಕಂಚು; ಪದಕ ಗೆದ್ದ ನಿಶದ್, ವಿನೋದ್

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ನಾಲ್ಕನೇ ದಿನ ಭಾರತೀಯರು ಮೂರು ಪದಕ ಗೆದ್ದಿದ್ದಾರೆ. ಟೇಬಲ್ ಟೆನಿಸ್ನಲ್ಲಿ ಭಾವಿನಾ ಬೆಳ್ಳಿ, ಹೈಜಂಪ್​ನಲ್ಲಿ ನಿಶದ್ ಬೆಳ್ಳಿ ಹಾಗೂ ಡಿಸ್ಕಸ್ ಥ್ರೋನಲ್ಲಿ ವಿನೋದ್ ಕಂಚಿನ ಪದಕ ಜಯಿಸಿದ್ದಾರೆ.

ನಿಶದ್ ಕುಮಾರ್

ನಿಶದ್ ಕುಮಾರ್

 • Share this:
  ಬೆಂಗಳೂರು (ಆ. 29): ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಪಾರಾಲಿಂಪಿಕ್ಸ್ ಕ್ರೀಡಾಕೂಟದ ನಾಲ್ಕನೇ ದಿನವಾದ ಇಂದು ಭಾರತಕ್ಕೆ ಗೋಲ್ಡನ್ ಡೇ ಎನಿಸಿದೆ. ಇಂದು ಒಂದೇ ದಿನ ಭಾರತದ ಸ್ಪರ್ಧಿಗಳು ಮೂರು ಪದಕಗಳನ್ನ ಗೆದ್ದಿದ್ದಾರೆ. ಬೆಳಗ್ಗೆ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಬೆಳ್ಳಿ ಪದಕ ಪಡೆದರೆ ಸಂಜೆ ನಿಶದ್ ಕುಮಾರ್ ಅವರು ಪುರುಷರ ಹೈಜಂಪ್​ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು ಬೆಳ್ಳಿ ಜಯಿಸಿದರು. ಪುರುಷರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ವಿನೋದ್ ಕುಮಾರ್ ಕಂಚಿನ ಪದಕ ಗಿಟ್ಟಿಸಿದರು.

  ಪುರುಷರ ಟಿ47 ಕೆಟಗರಿಯ ಕ್ರೀಡಾಪಟುಗಳ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ನಿಶದ್ ಕುಮಾರ್ 2.06 ಎತ್ತರ ಜಿಗಿದು ಬೆಳ್ಳಿ ಪದಕ ಪಡೆದರು. ಅಮೆರಿಕದ ರಾಡೆರಿಕ್ ಟೌನ್​ಸೆಂಡ್ ರಾಬರ್ಟ್ಸ್ ಅವರು 2.15 ಎತ್ತರಕ್ಕೆ ಜಿಗಿದು ವಿಶ್ವದಾಖಲೆ ಸ್ಥಾಪಿಸಿದರು. ಅಮೆರಿಕದ ಮತ್ತೊಬ್ಬ ಅಥ್ಲೀಟ್ ಡಲ್ಲಾಸ್ ವೈಸ್ ಅವರೂ ಕೂಡ 2.06 ಎತ್ತರಕ್ಕೆ ಹೈಜಂಪ್ ಮಾಡಿದ್ದರಿಂದ ನಿಶದ್ ಕುಮಾರ್ ಜೊತೆ ಜಂಟಿ ಎರಡನೇ ಸ್ಥಾನ ಗಳಿಸಿದರು. ನಿಶದ್ ಕುಮಾರ್ ಅವರ ಜಿಗಿತವು ಏಷ್ಯನ್ ದಾಖಲೆಯಾಗಿದೆ. 2.09 ಮೀಟರ್ ಎತ್ತರಕ್ಕೆ ಜಿಗಿಯುವ ಇವರ ಪ್ರಯತ್ನ ವಿಫಲವಾಯಿತು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಭಾರತೀಯ ರಾಮ್ ಪಾಲ್ ಅವರಿಗೆ 1.94 ಮೀಟರ್ ಎತ್ತರಕ್ಕೆ ಮಾತ್ರ ಜಿಗಿಯಲು ಸಾಧ್ಯವಾಯಿತು.

  ಇನ್ನು ಪುರುಷರ ಎಫ್52 ಕೆಟಗರಿಯ ಕ್ರೀಡಾಪಟುಗಳ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ವಿನೋದ್ ಕುಮಾರ್ ಅವರು 19.91 ಮೀಟರ್ ದೂರಕ್ಕೆ ಡಿಸ್ಕಸ್ ಪ್ಲೇಟ್ ಎಸೆದು ಕಂಚಿನ ಪದಕ ಸಂಪಾದಿಸಿದರು. ಪೋಲೆಂಡ್​ನ ಪಿಯೋಟರ್ ಕೋಸೆವಿಚ್ 20.02 ಮೀಟರ್ ದೂರ ಎಸೆದು ಚಿನ್ನದ ಪದಕ ಪಡೆದರು. ವಿನೋದ್ ಕುಮಾರ್ ಅವರು ಆರು ಯತ್ನಗಳಲ್ಲಿ ಐದನೇ ಪ್ರಯತ್ನದಲ್ಲಿ 19.91 ಮೀಟರ್ ದೂರಕ್ಕೆ ಎಸೆದರು. ಅದೇ ಅವರ ಗರಿಷ್ಠ ದೂರವಾಯಿತು.

  ಇವತ್ತು ಬೆಳಗ್ಗೆ ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಭಾವಿನಾ ಪಟೇಲ್ ಬೆಳ್ಳಿ ಪದಕ ಜಯಿಸಿದರು. ಚೀನಾದ ಝೌ ಯಿಂಗ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಕೇವಲ 19 ನಿಮಿಷಗಳಲ್ಲಿ ನೇರ ಸೆಟ್​ಗಳಿಂದ ಭಾವಿನಾ ಸೋಲೊಪ್ಪಿದರು. ಈ ಮೂಲಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಟೇಬಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚೊಚ್ಚಲ ಪದಕ ಸಿಕ್ಕಂತಾಯಿತು. ಭಾರತ ಈ ಕ್ರೀಡಾಕೂಟದ ಇತಿಹಾಸದಲ್ಲಿ ಇದಕ್ಕೆ ಮುನ್ನ ಗೆದ್ದಿದ್ದು ಕೇವಲ 12 ಪದಕ ಮಾತ್ರ. ಈ ಕ್ರೀಡಾಕೂಟದಲ್ಲಿ ಈಗಲೇ 3 ಪದಕ ದೊರೆತಿದೆ.

  ಇದನ್ನೂ ಓದಿ: Tokyo Paralympics- ಖಾತೆ ತೆರೆದ ಭಾರತ; ಭಾವಿನಾ ಪಟೇಲ್​ಗೆ ಐತಿಹಾಸಿಕ ಬೆಳ್ಳಿ

  ಕೆಟಗರಿ ಮಾಡಿರುವುದು ಯಾಕೆ?

  ಇದು ವಿಶೇಷ ಚೇತನರಿಗಾಗಿ ಇರುವ ಕ್ರೀಡಾಕೂಟವಾಗಿದೆ. ಇಲ್ಲಿ ಅಂಗವೈಕಲ್ಯತೆ ಮಟ್ಟದಲ್ಲಿ ವ್ಯತ್ಯಾಸಗಳಿರುತ್ತವೆ. ಹೀಗಾಗಿ, ಒಂದೊಂದು ಸ್ಪರ್ಧೆಯಲ್ಲೂ ಸಮಾನ ವೈಕಲ್ಯತೆ ಇರುವ ಸ್ಪರ್ಧಿಗಳನ್ನ ಕಣಕ್ಕಿಳಿಸಲಾಗುತ್ತದೆ. ಉದಾಹರಣೆಗೆ ಹೈಜಂಪ್ ಪಟು ನಿಶದ್ ಕುಮಾರ್ ಅವರಿದ್ದ ಟಿ47 ಕೆಟಗರಿಯು ಒಂದು ಕೈ ಇಲ್ಲದವರದ್ದು. ಇವರೆಲ್ಲರ ಎರಡೂ ಕಾಲುಗಳು ಚೆನ್ನಾಗಿರುತ್ತವೆ.

  ಟೋಕಿಯೋ ಪಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯರು:

  1) ಭಾವಿನಾ ಪಟೇಲ್, ಟೇಬಲ್ ಟೆನಿಸ್ – ಬೆಳ್ಳಿ ಪದಕ
  2) ನಿಶದ್ ಕುಮಾರ್, ಹೈಜಂಪ್ – ಬೆಳ್ಳಿ ಪದಕ
  3) ವಿನೋದ್ ಕುಮಾರ್, ಡಿಸ್ಕಸ್ ಥ್ರೋ – ಕಂಚಿನ ಪದಕ

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: