ಬೆಂಗಳೂರು, ಆ. 05: ದಶಕಗಳ ಬಳಿಕ ಒಲಿಂಪಿಕ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4 ಗೋಲುಗಳ ಅಂತರದಿಂದ ರೋಚಕ ರೀತಿಯಲ್ಲಿ ಸೋಲಿಸಿ ಕಂಚಿನ ಪದಕ ಪಡೆಯಿತು. 1980ರ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್ನಲ್ಲಿ ಗಿಟ್ಟಿಸಿರುವ ಮೊದಲ ಪದಕ ಇದಾಗಿದೆ. ಟೋಕಿಯೋದಲ್ಲಿ ನಡೆದ ಈ ರೋಚಕ ಹಣಾಹಣಿಯಲ್ಲಿ ಜರ್ಮನಿ ತಂಡ ಒಂದು ಹಂತದಲ್ಲಿ 3-1 ಗೋಲುಗಳಿಂದ ಮುನ್ನಡೆ ಹೊಂದಿತ್ತು. ಆದರೆ, ಭಾರತ ಸತತ 4 ಗೋಲು ಗಳಿಸಿ 5-3 ಮುನ್ನಡೆ ಪಡೆಯಿತು. ಕೊನೆಯ ಕ್ವಾರ್ಟರ್ನಲ್ಲಿ ಜರ್ಮನಿ ಕಂಬ್ಯಾಕ್ ಮಾಡಿ 4ನೇ ಗೋಲು ಗಳಿಸಿತು. ಅಂತಿಮವಾಗಿ ಗೆಲುವಿನ ಮಾಲೆ ಭಾರತಕ್ಕೆ ಒಲಿಯಿತು. ಭಾರತ ಹಾಕಿ ತಂಡ ಗೆದ್ದ ಈ ಪದಕ ಈ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಸಿಕ್ಕಿರುವ ನಾಲ್ಕನೇ ಪದಕವಾಗಿದೆ. ಇದರೊಂದಿಗೆ ಭಾರತದ ಬುಟ್ಟಿಯಲ್ಲಿ 1 ಬೆಳ್ಳಿ ಮತ್ತು 3 ಕಂಚಿನ ಪದಕ ಇವೆ. ಅತ್ತ, ಭಾರತ ಮಹಿಳಾ ಹಾಕಿ ತಂಡ ಕೂಡ ಕಂಚಿನ ಪದಕಕ್ಕಾಗಿ ನಾಳೆ ಪ್ರಯತ್ನಿಸುತ್ತಿದೆ.
ಇದೇ ವೇಳೆ, ಭಾರತದ ಪರ ಚಿನ್ನ ಗೆಲ್ಲಲು ಫೇವರಿಟ್ ಎನಿಸಿರುವ ವಿನೇಶ್ ಫೋಗಾಟ್ ಕ್ವಾರ್ಟರ್ ಫೈನಲ್ನಲ್ಲಿ ಸೋಲನುಭವಿಸಿದ್ದಾರೆ. ಮಹಿಳೆಯರ 53 ಕಿಲೋ ವಿಭಾಗದಲ್ಲಿ ಫೋಗಾಟ್ ಅವರು ಅದ್ಭುತ ಪ್ರದರ್ಶನ ನೀಡಿ ಪ್ರೀ ಕ್ವಾರ್ಟರ್ ಫೈನಲ್ ಜಯಿಸಿದರು. ಪ್ರೀಕ್ವಾರ್ಟರ್ ಫೈನಲ್ ಎನಿಸಿದ ಮೊದಲ ಸುತ್ತಿನಲ್ಲಿ ಸೋಫಿಯಾ ಮ್ಯಾಗ್ಡೆಲೆನಾ ಮ್ಯಾಟ್ಸನ್ ಅವರನ್ನ ವಿನೇಶ್ ಫೋಗಾಟ್ 7-1 ಅಂಕಗಳಿಂದ ಸುಲಭವಾಗಿ ಮಣಿಸಿದರು. ಆದರೆ, ಕ್ವಾರ್ಟರ್ ಫೈನಲ್ನಲ್ಲಿ ಬೆಲಾರಸ್ ದೇಶದ ವನೆಸಾ ಕಲಾಜಿಂಸ್ಕಯಾ ವಿರುದ್ಧ 9-3 ಅಂಕಗಳಿಂದ ವಿನೇಶ್ ಪರವಾಭವಗೊಂಡರು. ಇದರೊಂದಿಗೆ ವಿನೇಶ್ ಅವರ ಚಿನ್ನ ಪದಕ ಗೆಲ್ಲುವ ಕನಸು ನನಸಾಗಲಿಲ್ಲ. ಆದರೆ, ಬೆಲಾರಸ್ ಆಟಗಾರ್ತಿ ಫೈನಲ್ ಪ್ರವೇಶಿಸಿದರೆ ರಪೆಶಾಜ್ ಬೌಟ್ ಮೂಲಕ ವಿನೇಶ್ ಅವರಿಗೆ ಕಂಚಿನ ಪದಕ ಗೆಲ್ಲುವ ಅವಕಾಶ ಸಿಗುತ್ತದೆ. ಇಂದು ಮಧ್ಯಾಹ್ನ ವನೆಸಾ ಅವರ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: India Vs England – ಭಾರತದ ವೇಗಿಗಳ ದಾಳಿಗೆ ಇಂಗ್ಲೆಂಡ್ ಧೂಳೀಪಟ; ಎರಡನೇ ದಿನ ಕಾಡುತ್ತಾ ಮಳೆ?
ಇನ್ನೊಂದೆಡೆ, ಮತ್ತೊಬ್ಬ ಭಾರತೀಯ ಕುಸ್ತಿ ಆಟಗಾರ್ತಿ ಅಂಶು ಮಲಿಕ್ ಅವರ ಪದಕದ ಆಸೆ ಅಂತ್ಯಗೊಂಡಿತು. ಆರಂಭದ ಸುತ್ತಿನಲ್ಲೇ ನಿರ್ಗಮಿಸಿದರೂ ರಪೆಶಾಜ್ ಬೌಟ್ನ ಅವಕಾಶ ಪಡೆದ ಅಂಶು ಮಲಿಕ್ ಅಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ಬಾರಿಯ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಕುಸ್ತಿಪಟು ರಷ್ಯಾದ ವಲೇರಿಯಾ ಕೋಬ್ಲೋ ವಿರುದ್ಧ ಅಂಶು ಮಲಿಕ್ ಸೋಲನುಭವಿಸಿದರು.
ಇವತ್ತು ಕುಸ್ತಿ ಸ್ಪರ್ಧೆಯಲ್ಲಿ ರವಿ ಕುಮಾರ್ ದಾಹಿಯಾ ಅವರು ಚಿನ್ನದ ಪದಕಕ್ಕಾಗಿ ಹಾಗೂ ದೀಪಕ್ ಪೂನಿಯಾ ಅವರು ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ಈ ಎರಡೂ ಪಂದ್ಯಗಳು ಮಧ್ಯಾಹ್ನದ ನಂತರ ನಡೆಯಲಿವೆ.
ಇದನ್ನೂ ಓದಿ: Repechage- ಒಲಿಂಪಿಕ್ಸ್ ಕುಸ್ತಿಯಲ್ಲಿ ರಪೆಶಾಜ್ ಎಂದರೇನು? ಭಾರತಕ್ಕೆ 3 ಪದಕ ತಂದಿತ್ತ ಇದರ ನಿಯಮಗಳೇನು?
ಗಾಲ್ಫ್ ಕ್ರೀಡೆಯಲ್ಲಿ ಭಾರತಕ್ಕೆ ಶುಭ ಸುದ್ದಿ ಇದೆ. ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಅವರು ಇವತ್ತಿನ ಎರಡನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ ಅದಿತಿ ಅವರು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ಧಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ