Tokyo Olympics Golf- ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ನಿರಾಸೆ; ಸ್ವಲ್ಪದರಲ್ಲಿ ಕೈತಪ್ಪಿತು ಒಲಿಂಪಿಕ್ ಪದಕ

ಕಳೆದ ಬಾರಿಯ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಅಚ್ಚರಿ ಮೂಡಿಸಿದ್ದ ಬಾಗಲಕೋಟೆ ಹುಡುಗಿ ಅದಿತಿ ಅಶೋಕ್ ಈ ಬಾರಿ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾಗಿದ್ದಾರೆ. ಕೊನೆಯ ಹೋಲ್ವರೆಗೂ ಸ್ಪರ್ಧೆಯಲ್ಲಿದ್ದ ಅವರು ಅಂತಿಮವಾಗಿ 4ನೇ ಸ್ಥಾನ ಪಡೆದಿದ್ದಾರೆ.

ಅದಿತಿ ಅಶೋಕ್

ಅದಿತಿ ಅಶೋಕ್

  • Share this:
ಬೆಂಗಳೂರು: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕನ್ನಡತಿ ಹಾಗೂ ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಪದಕ ಗೆಲ್ಲುವುದರಿಂದ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ. ಇಂದು ನಡೆದ ನಾಲ್ಕನೇ ಹಾಗೂ ಅಂತಿಮ ಸುತ್ತಿನ ಬಳಿಕ ಅದಿತಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಾಲ್ಕು ಸುತ್ತುಗಳಿಂದ ಒಟ್ಟು 72 ಹೋಲ್​ಗಳ ಸ್ಪರ್ಧೆ ಸೇರಿ ಅದಿತಿ ಅಂಡರ್ 15 ಅಂಕ ಪಡೆದರು. ನಿನ್ನೆ ಮೂರನೇ ಸುತ್ತಿನ ನಂತರ ಎರಡನೇ ಸ್ಥಾನದಲ್ಲಿದ್ದ ಅದಿತಿಗೆ ಇಂದು ಹೆಚ್ಚು ಅದೃಷ್ಟ ಒಲಿಯಲಿಲ್ಲ. ಅಮೆರಿಕದ ನೆಲ್ಲಿ ಕೋರ್ಡಾ ಅಗ್ರಸ್ಥಾನವನ್ನು ಇಂದೂ ಮುಂದುವರಿಸಿ ಅಂಡರ್ 17 ಅಂಕಗಳೊಂದಿಗೆ ಚಿನ್ನದ ಪದಕ ಪಡೆದರು. ಆದರೆ, ಇಂದು ಒಂದೇ ಸುತ್ತಿನಲ್ಲಿ ಅಂಡರ್ 6 ಅಂಕಗಳೊಂದಿಗೆ ಒಟ್ಟಾರೆ ಅಂಡರ್ 16 ಪಾಯಿಂಟ್​ಗಳನ್ನ ಪಡೆದ ಜಪಾನ್ ದೇಶದ ಇನಾಮಿ ಮೋನೆ ಮತ್ತು ನ್ಯೂಜಿಲೆಂಡ್ ದೇಶದ ಲಿಡಿಯಾ ಕೋ ಅವರಿಬ್ಬರೂ ಜಂಟಿ 2ನೇ ಸ್ಥಾನ ಪಡೆದರು. ಇವರಿಬ್ಬರ ಮಧ್ಯೆ ಬೆಳ್ಳಿ ಪದಕಕ್ಕಾಗಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.

ಆದರೆ, ಭಾರತದ 23 ವರ್ಷದ ಅದಿತಿ ಅಶೋಕ್ ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕೊನೆಯ ಘಳಿಗೆಯಲ್ಲಿ ಕೂದಲೆಳೆ ಅಂತದಲ್ಲಿ ಪದಕದಿಂದ ವಂಚಿತರಾಗಿದ್ದು ದುರದೃಷ್ಟಕರವೇ. ಇವತ್ತಿನ ಸುತ್ತಿನಲ್ಲಿ 9 ಮತ್ತು 11ನೇ ಹೋಲ್​ನಲ್ಲಿ ಅದಿತಿ ಹೆಚ್ಚು ಸ್ಟ್ರೋಕ್​ಗಳನ್ನ ತೆಗೆದುಕೊಂಡಿದ್ದು ಅವರಿಗೆ ಹಿನ್ನಡೆಯಾಯಿತು. ಕೊನೆಯ ನಾಲ್ಕು ಹೋಲ್​ನಲ್ಲಿ ಅವರು ಒಂದಾದರೂ ಬರ್ಡಿ ಹೊಡೆದಿದ್ದರೂ ಪದಕ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ನಾಲ್ಕೂ ಹೋಲ್​ನಲ್ಲಿ ಅವರದ್ದು ಪಾರ್ ಸ್ಕೋರ್ ಆಗಿತ್ತು. 14 ಹೋಲ್​ಗಳ ಬಳಿಕ ಅದಿತಿ ಅವರು ಎರಡನೇ ಸ್ಥಾನಕ್ಕೇರಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯನ್ನೂ ಮೂಡಿಸಿದ್ದರು. ಆ ಬಳಿಕ ಜಪಾನ್ ಮತ್ತು ನ್ಯೂಜಿಲೆಂಡ್ ಆಟಗಾರ್ತಿಯರು ಸ್ಥಿರವಾಗಿ ಪಾಯಿಂಟ್ ಕಲೆ ಹಾಕಿ ಅದಿತಿಯನ್ನು ಹಿಂದಿಕ್ಕಿದರು.

ಇದರೊಂದಿಗೆ ಗಾಲ್ಫ್ ಇತಿಹಾಸದಲ್ಲಿ ಭಾರತಕ್ಕೆ ಚೊಚ್ಚಲ ಪದಕ ದೊರೆಯದೇ ಕೈತಪ್ಪಿತು. ಈ ಒಲಿಂಪಿಕ್ಸ್​ನಲ್ಲಿ ಇಬ್ಬರು ಪುರುಷರು ಸೇರಿ ಒಟ್ಟು ನಾಲ್ವರು ಭಾರತೀಯ ಗಾಲ್ಫ್ ಆಟಗಾರರು ಸ್ಪರ್ಧಿಸಿದ್ದrಉ. ಪುರುಷರ ವೈಯಕ್ತಿಕ ವಿಭಾಗದಲ್ಲಿ ಅನಿರ್ಬನ್ ಲಾಹಿರಿ ಮತ್ತು ಉದಯನ್ ಮಾನೆ ಕ್ರಮವಾಗಿ 42 ಮತ್ತು 56ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಅದಿತಿ ಅಶೋಕ್ ಅಮೋಘ ಆಟವಾಡಿ 3ನೇ ಸ್ಥಾನ ಪಡೆದರೆ, ದೀಕ್ಷಾ ದಾಗರ್ 50ನೇ ಸ್ಥಾನ ಪಡೆದು ನಿರಾಶೆ ಅನುಭವಿಸಿದರು.

ಇದನ್ನೂ ಓದಿ: ಕಣ್ಣೀರು ಹಾಕಬೇಡಿ, ಇಡೀ ದೇಶಕ್ಕೆ ನಿಮ್ಮ ಮೇಲೆ ಹೆಮ್ಮೆಯಿದೆ: ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನ

ಭಾರತಕ್ಕೆ ಈಗ ಪದಕದ ಸಾಧ್ಯತೆ ಉಳಿದಿರುವುದು ಎರಡು ಮಾತ್ರವೇ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಫೈನಲ್​ನಲ್ಲಿ ಕಣದಲ್ಲಿದ್ಧಾರೆ. ಕುಸ್ತಿ ಕ್ರೀಡೆಯ 65 ಕಿಲೋ ವಿಭಾಗದಲ್ಲಿ ಬಜರಂಗ್ ಪೂನಿಯಾ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ಈ ಎರಡೂ ಸ್ಪರ್ಧೆಗಳು ಮಧ್ಯಾಹ್ನದಂದು ನಡೆಯಲಿವೆ. ಜಾವೆಲಿನ್ ಥ್ರೋನದಲ್ಲಿ ನೀರಜ್ ಚೋಪ್ರಾ ತಮ್ಮ ವೈಯಕ್ತಿಕ ಸಾಧನೆಯನ್ನು ಮೀರಿ ನಿಂತರೆ ಚಿನ್ನದ ಪದಕವನ್ನೂ ಗೆಲ್ಲುವ ಸಾಧ್ಯತೆ ಹೊಂದಿದ್ದಾರೆ.

ಭಾರತ ಇದುವರೆಗೆ 2 ಚಿನ್ನ 3 ಕಂಚು ಸೇರಿ 5 ಪದಕಗಳನ್ನ ಗೆದ್ದಿದೆ. ಇನ್ನೊಂದು ಪದಕ ಗೆದ್ದರೆ 2012ರ ದಾಖಲೆಯನ್ನ ಸರಿಗಟ್ಟಿದಂತಾಗುತ್ತದೆ. ಒಂದು ಚಿನ್ನದ ಪದಕ ಸಿಕ್ಕರೆ ಭಾರತಕ್ಕೆ ಇದು ಸರ್ವಶ್ರೇಷ್ಠ ಸಾಧನೆಯಾಗಲಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: