• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Tokyo Olympics- ಅದಿತಿ ಅದ್ವಿತೀಯ ಆಟ; ಸೆಮಿಫೈನಲ್​ಗೆ ಬಜರಂಗ್; ಭಾರತ ಇನ್ನೆಷ್ಟು ಗೆಲ್ಲುತ್ತೆ ಪದಕ?

Tokyo Olympics- ಅದಿತಿ ಅದ್ವಿತೀಯ ಆಟ; ಸೆಮಿಫೈನಲ್​ಗೆ ಬಜರಂಗ್; ಭಾರತ ಇನ್ನೆಷ್ಟು ಗೆಲ್ಲುತ್ತೆ ಪದಕ?

ಬಜರಂಗ್ ಪೂನಿಯಾ

ಬಜರಂಗ್ ಪೂನಿಯಾ

ಬೆಂಗಳೂರಿನ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅದ್ವಿತೀಯ ಪ್ರದರ್ಶನ ಮುಂದುವರಿಸಿದ್ಧಾರೆ. ಮೂರನೇ ಸುತ್ತಿನ ಬಳಿಕ 2ನೇ ಸ್ಥಾನದಲ್ಲಿದ್ದಾರೆ. ಕುಸ್ತಿಪಟು ಬಜರಂಗ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

  • Share this:

ಬೆಂಗಳೂರು: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ 2020ರ ಒಲಿಂಪಿಕ್ಸ್​ನಲ್ಲಿ ಭಾರತ ತನ್ನ ಸರ್ವಶ್ರೇಷ್ಠ ಪ್ರದರ್ಶನದತ್ತ ಹೆಜ್ಜೆ ಹಾಕುತ್ತಿದೆ. 2008 ಮತ್ತು 2012ರ ಒಲಿಂಪಿಕ್ಸ್​ನಲ್ಲಿ ತೋರಿದ ಸಾಧನೆಯನ್ನ ಮೀರುವ ಸಾಧ್ಯತೆ ಇದೆ. ಈಗಾಗಲೇ 2 ಬೆಳ್ಳಿ ಹಾಗೂ 3 ಕಂಚು ಸೇರಿ ಐದು ಪದಕಗಳನ್ನ ಭಾರತ ಗೆದ್ದಿದೆ. ಇನ್ನೂ ಮೂರು ಪದಕಗಳನ್ನ ಗೆಲ್ಲುವ ಅವಕಾಶ ಹೊಂದಿದೆ. ಇಂದು ಕ್ರೀಡಾಕೂಟದ 13ನೇ ದಿನ ಭಾರತೀಯ ಕ್ರೀಡಾಪಟುಗಳಿಗೆ ಮಿಶ್ರಫಲ ಸಿಕ್ಕಿತು. ನಿನ್ನೆ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ಶಹಬ್ಬಾಸ್ ಗಿರಿ ಪಡೆದರೆ ಇಂದು ಮಹಿಳಾ ತಂಡ ವೀರೋಚಿತ ಸೋಲನುಭವಿಸಿ ಕಂಚಿನ ಪದಕದಿಂದ ವಂಚಿತವಾಯಿತು. ಆದರೆ, ಕುಸ್ತಿಪಟು ಬಜರಂಗ್ ಪೂನಿಯಾ ಎರಡು ಪಂದ್ಯಗಳನ್ನ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು. ಬೆಂಗಳೂರಿನ ಗಾಲ್ಫರ್ ಅದಿತ್ ಅಶೋಕ್ ಮಹಿಳಾ ವಿಭಾಗದಲ್ಲಿ ಮೂರನೇ ದಿನವೂ ಅದ್ವಿತೀಯ ಪ್ರದರ್ಶನ ನೀಡಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.


ಕುಸ್ತಿ ಕ್ರೀಡೆಯಲ್ಲಿ ಬಜರಂಗ್ ಪೂನಿಯಾ ಈ ಒಲಿಂಪಿಕ್ಸ್​ನಲ್ಲಿ ಕಣದಲ್ಲಿ ಉಳಿದುಕೊಂಡಿರುವ ಏಕೈಕ ಭಾರತೀಯ ಆಟಗಾರ. ಪುರುಷರ 65 ಕಿಲೋ ವಿಭಾಗದಲ್ಲಿ ಬಜರಂಗ್ ಅವರು ಮೊದಲ ಸುತ್ತಾದ ಪ್ರೀಕ್ವಾರ್ಟರ್​ಫೈನಲ್​ನಲ್ಲಿ ಕಜಕಸ್ತಾನದ ಎರ್​ನಜರ್ ಅಕ್ಮಾಟಲಿಯೆವ್ ವಿರುದ್ಧ ರೋಚಕ ಗೆಲುವು ಪಡೆದರು. ಕ್ವಾರ್ಟರ್​ಫೈನಲ್​ನಲ್ಲಿ ಇರಾನ್​ನ ಪ್ರಬಲ ಕುಸ್ತಿಪಟು ಮೊರ್ತೇಜಾ ಘಿಯಾಸಿ ವಿರುದ್ಧವೂ ರೋಚಕ ಜಯ ಪಡೆದು ಸೆಮಿಫೈನಲ್ ಪ್ರವೇಶಿಸಿದರು. ಫೈನಲ್ ಹಂತಕ್ಕಾಗಿ ಅವರು ಇಂದು ಮಧ್ಯಾಹ್ನ ಅಜರ್​ಬೈಜಾನ್ ದೇಶದ ಕುಸ್ತಿಪಟು ಹಾಜಿ ಆಲಿಯೆವ್ ಅವರನ್ನ ಎದುರಿಸಲಿದ್ಧಾರೆ. ಹಾಜಿ ಆಲಿಯೆವ್ ಅವರು ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರೂ ಸದ್ಯದ ಫಾರ್ಮ್ ಲೆಕ್ಕದಲ್ಲಿ ಬಜರಂಗ್ ಪೂನಿಯಾ ಫೇವರಿಟ್ ಎನಿಸಿದ್ದಾರೆ. ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿರುವ ಬಜರಂಗ್ ಅವರು ಫೈನಲ್ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ವೆಳೆ ಸೆಮಿಫೈನಲ್​ನಲ್ಲಿ ಅವರು ಸೋತರೂ ರಪೆಶಾಜ್ ಬೌಟ್ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶವನ್ನಂತೂ ಹೊಂದಿದ್ಧಾರೆ.


ಇಂದು ಮಹಿಳಾ ಕುಸ್ತಿಪಟು ಸೀಮಾ ಬಿಸ್ಲಾ ಮೊದಲ ಸುತ್ತಿನಲ್ಲೇ ಸೋತರು. 50 ಕಿಲೋ ವಿಭಾಗದಲ್ಲಿ ಅವರು ಟುನಿಶಿಯಾ ದೇಶದ ಸಾರಾ ಹಮದಿ ಅವರಿಗೆ ಶರಣಾದರು. ದುರದೃಷ್ಟವೆಂದರೆ ಸೀಮಾ ವಿರುದ್ಧ ಗೆದ್ದ ಸಾರಾ ಅವರು ಮುಂದಿನ ಸುತ್ತಿನಲ್ಲಿ ಸೋತರು. ಇದರೊಂದಿಗೆ ಸೀಮಾ ಬಿಸ್ಲಾಗೆ ರಪೆಶಾಜ್ ಹಂತದಲ್ಲಿ ಕಂಬ್ಯಾಕ್ ಮಾಡುವ ಬಾಗಿಲು ಬಂದ್ ಆಯಿತು. ಕುಸ್ತಿ ಸ್ಪರ್ಧೆಯಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದದ್ದು ಬಿಟ್ಟರೆ ಭಾರತಕ್ಕೆ ಇನ್ನೊಂದು ಪದಕ ಬಂದಿಲ್ಲ. ದೀಪಕ್ ಪೂನಿಯಾ ಸ್ವಲ್ಪದರಲ್ಲಿ ಕಂಚು ಪದಕ ತಪ್ಪಿಸಿಕೊಂಡರು. ಈಗ ಬಜರಂಗ್ ಪೂನಿಯಾ ಅವರೊಬ್ಬರೇ ಕಣದಲ್ಲಿ ಉಳಿದಿರುವುದು.


ಇದನ್ನೂ ಓದಿ: Olympics Hockey: ಭಾರತ ಮಹಿಳಾ ಹಾಕಿ ತಂಡದ ಕಂಚು ಆಸೆ ಭಗ್ನ; ಬ್ರಿಟನ್ ವಿರುದ್ಧ ವೀರೋಚಿತ ಸೋಲು


ಭಾರತಕ್ಕೆ ಗಾಲ್ಫ್ ಕ್ರೀಡೆಯಲ್ಲಿ ರೋಮಾಂಚನ ಮೂಡಿಸುವ ಸುದ್ದಿ ಇದೆ. ಬೆಂಗಳೂರಿನ ಹುಡುಗಿ ಅದಿತಿ ಅಶೋಕ್ ಮಹಿಳಾ ವಿಭಾಗದಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಇಂದು ಮುಕ್ತಾಯಗೊಂಡ ಮೂರು ಸುತ್ತುಗಳಲ್ಲಿ ಅದಿತಿ ಅಂಡರ್ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ನಾಳೆ ನಾಲ್ಕನೇ ಹಾಗೂ ಕೊನೆಯ ಸುತ್ತು ಇದ್ದು ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ಅದಿತಿ ಅವರು ಬೆಳ್ಳಿ ಪದಕ ಗೆಲ್ಲುವುದು ನಿಶ್ಚಿತವಾಗಿದೆ. ಸದ್ಯ ಅಮೆರಿಕದ ನೆಲ್ಲಿ ಕೋರ್ಡಾ ಅವರು ಅಂಡರ್ 15 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅದಿತಿ ಇಂದು ನಡೆದ ಸುತ್ತಿನಲ್ಲಿ ಅಂಡರ್ 3 ಅಂಕ ಪಡೆದಿದ್ದಾರೆ. ಆದರೆ, ಹಿಂದಿನ, ಅಂದರೆ 2ನೇ ಸುತ್ತಿನಲ್ಲಿ ಅದಿತಿ ಅಂಡರ್ 5 ಸ್ಕೋರ್ ಮಾಡಿದ್ದರು. ನಾಳೆಯ ಅಂತಿಮ ಸುತ್ತಿನಲ್ಲಿ ನೆಲ್ಲಿ ಕೋರ್ಡಾ ಕಳಪೆ ಪ್ರದರ್ಶನ ನೀಡಿದರೆ ಹಾಗೂ ಅದಿತಿ ಅಶೋಕ್ 2ನೇ ಸುತ್ತಿನ ರೀತಿಯ ಪ್ರದರ್ಶನ ನೀಡಿದರೆ ಚಿನ್ನದ ಪದಕ ಪಡೆದು ಇತಿಹಾಸ ನಿರ್ಮಿಸುವ ಸಾಧ್ಯತೆಯಂತೂ ಇದೆ. ಶೂಟಿಂಗ್ ಮತ್ತು ಆರ್ಚರಿ ರೀತಿಯಲ್ಲಿ ಗಾಲ್ಫ್​ನಲ್ಲಿ ಒಬ್ಬ ಆಟಗಾರರ ಫಾರ್ಮ್ ಆ ದಿನ ಹೇಗಾದರೂ ತಿರುಗಬಹುದು.


ಕುಸ್ತಿ ಮತ್ತು ಗಾಲ್ಫ್ ಬಿಟ್ಟರೆ ಭಾರತಕ್ಕೆ ಪದಕ ಗೆಲ್ಲುವ ನಿರೀಕ್ಷೆ ಇರುವುದು ಜಾವೆಲಿನ್ ಥ್ರೋನಲ್ಲಿ. ಮೊನ್ನೆ ನಡೆದ ಕ್ವಾಲಿಫಿಕೇಶನ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಮೊದಲ ಸ್ಥಾನಿಗರಾಗಿ ಫೈನಲ್​ಗೆ ಅರ್ಹತೆ ಪಡೆದಿದ್ದರು. ಅವರು ತಮ್ಮ ವೈಯಕ್ತಿಕ ಸಾಧನೆಯನ್ನು ಮೀರಿ ಫೈನಲ್​ನಲ್ಲಿ ಜಾವೆಲಿನ್ ಎಸೆದರೆ ಪದಕ ಗೆಲ್ಲುವ ಸಾಧ್ಯತೆ ದಟ್ಟವಾಗಿರಲಿದೆ. ನಾಳೆ ಅವರ ಸ್ಪರ್ಧೆ ನಡೆಯಲಿದೆ.


ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಸಾಧನೆ ಬಂದಿರುವುದು 2008 ಮತ್ತು 2012ರ ಒಲಿಂಪಿಕ್ಸ್​ಗಳಲ್ಲಿ. 2008ರ ಒಲಿಂಪಿಕ್ಸ್​ನಲ್ಲಿ ಭಾರತ 1 ಚಿನ್ನ ಹಾಗೂ 1 ಕಂಚು ಗಳಿಸಿತ್ತು. 2012ರಲ್ಲಿ 1 ಬೆಳ್ಳಿ ಹಾಗೂ 5 ಕಂಚು ಪದಕಗಳನ್ನ ಗೆದ್ದಿತ್ತು. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತ ಈಗಾಗಲೇ 2 ಬೆಳ್ಳಿ ಮತ್ತು 3 ಕಂಚು ಗೆದ್ದಿದೆ. ಇನ್ನೊಂದು ಚಿನ್ನ ಪದಕ ಗೆದ್ದರೆ ಇದು ಭಾರತದ ಸರ್ವೋಚ್ಚ ಸಾಧನೆ ಆಗಿರಲಿದೆ.

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು