ಕಬಡ್ಡಿಯಲ್ಲಿ ಭಾರತದ ಮೇಲೆ ಇರಾನ್ ಮೇಲುಗೈ ಸಾಧಿಸಲು ಏನು ಕಾರಣ? ಇಲ್ಲಿದೆ ಒಂದು ವಿಶ್ಲೇಷಣೆ


Updated:August 26, 2018, 2:51 PM IST
ಕಬಡ್ಡಿಯಲ್ಲಿ ಭಾರತದ ಮೇಲೆ ಇರಾನ್ ಮೇಲುಗೈ ಸಾಧಿಸಲು ಏನು ಕಾರಣ? ಇಲ್ಲಿದೆ ಒಂದು ವಿಶ್ಲೇಷಣೆ
ಇರಾನಿ ಕಬಡ್ಡಿ ತಂಡ
  • Share this:
- ನ್ಯೂಸ್18 ಕನ್ನಡ

ಬೆಂಗಳೂರು: ಕಬಡ್ಡಿ ಲೋಕದ ಅನಭಿಷಿಕ್ತ ದೊರೆ ಎಂದು ಬೀಗುತ್ತಿದ್ದ ಭಾರತಕ್ಕೆ ಇಂಡೋನೇಷ್ಯಾದಲ್ಲಿ ಮೂರು ಮರ್ಮಾಘಾತಗಳಾದವು. ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಚಿನ್ನ ಗೆಲ್ಲಲು ವಿಫಲವಾದವು. ಪುರುಷ ಮತ್ತು ಮಹಿಳೆಯರ ವಿಭಾಗ ಎರಡರಲ್ಲೂ ಇರಾನ್ ವಿಜಯಶಾಲಿಯಾಯಿತು. ವಿಶ್ವ ಕಬಡ್ಡಿಯ ಹೊಸ ಚಾಂಪಿಯನ್ ಆಗಿ ಇರಾನ್ ಹೊರಹೊಮ್ಮಿತು. ಭಾರತದ ಘಟಾನುಘಟಿಗಳಿರುವ ಪುರುಷರ ತಂಡವು ಕೊರಿಯಾ ಮತ್ತು ಇರಾನ್ ಎದುರು ಸೋಲಪ್ಪಿತು. ಮಹಿಳೆಯರ ತಂಡವು ಫೈನಲ್​ನಲ್ಲಿ ಇರಾನ್​ಗೆ ಮಣಿದು ಬೆಳ್ಳಿಗೆ ತೃಪ್ತಿಪಟ್ಟಿತು.

ಭಾರತೀಯ ಪುರುಷರ ತಂಡವು ಇರಾನ್ ಎದುರು ಭಾರತ ಯಾಕೆ ಸೋತಿತು ಎಂಬುದಕ್ಕೆ ಸಾಕಷ್ಟು ಚರ್ಚೆಗಳು ಮತ್ತು ವಿಶ್ಲೇಷಣೆಗಳು ನಡೆದಿವೆ, ನಡೆಯುತ್ತಿವೆ. ಭಾರತ ತಂಡದ ಆಯ್ಕೆಯಲ್ಲೇ ಲೋಪದೋಷವಾಗಿದೆ. ಅರ್ಹ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಕರ್ನಾಟಕದ ಮಾಜಿ ಕಬಡ್ಡಿ ಆಟಗಾರ ಹಾಗೂ ಮಾಜಿ ಟೀಮ್ ಇಂಡಿಯಾ ಕ್ಯಾಪ್ಟನ್ ಹೊನ್ನಪ್ಪ ಹೇಳಿದ್ದಾರೆ. ಈ ಮೂಲಕ ಭಾರತೀಯ ಕಬಡ್ಡಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸೂಚನೆ ಸಿಕ್ಕಿದೆ. ಭಾರತದ ಟಾಪ್ ರೇಡರ್​ಗಳಲ್ಲೊಬ್ಬರೆನಿಸಿದ್ದ ಹೊನ್ನಪ್ಪ ಅವರು ಏಷ್ಯಾಡ್​ಗೆ ಮುನ್ನವೇ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಎತ್ತಿದ್ದರು.

ಆದರೆ, ಹೊನ್ನಪ್ಪ ಅವರ ಸಮಕಾಲೀನ ಆಟಗಾರ ಬಿ.ಸಿ. ರಮೇಶ್ ಅವರ ಪ್ರಕಾರ, ಭಾರತ ತಂಡವೇನೂ ದುರ್ಬಲವಾಗಿರಲಿಲ್ಲ. ಬದಲಾಗಿ ಎದುರಾಳಿ ತಂಡಗಳು ಪ್ರಬಲವಾಗಿದೆ. ಅದರಲ್ಲೂ ಇರಾನ್ ತಂಡ ಸಕಲ ರೀತಿಯಲ್ಲಿ ಸಜ್ಜುಗೊಂಡು ಕ್ರೀಡಾಕೂಟಕ್ಕೆ ಆಗಮಿಸಿತ್ತು. ಹೀಗಾಗಿ, ಭಾರತದ ಸೋಲು ಅನಿರೀಕ್ಷಿತವೇನಲ್ಲವೆನ್ನಲಾಗಿದೆ. ಹಾಗೆಯೇ, ಮುಂಬೈನ ಕನ್ನಡಿಗ ಕಬಡ್ಡಿ ಆಟಗಾರ ರಿಷಾಂಕ್ ದೇವಾಡಿಗ ಕೂಡ ಕ್ರೀಡಾಕೂಟಕ್ಕೆ ಮುನ್ನ ಮಾತನಾಡುತ್ತಾ, ಭಾರತಕ್ಕೆ ಇರಾನ್ ತಂಡ ಪ್ರಬಲ ಸವಾಲು ಒಡ್ಡಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಎರಡು ತಿಂಗಳ ಹಿಂದಷ್ಟೇ ಕಬಡ್ಡಿ ಮಾಸ್ಟರ್ಸ್ ಟೂರ್ನಿಯ ಫೈನಲ್​ನಲ್ಲಿ ಭಾರತದ ಎದುರು ಇರಾನ್ ಸೋತುಸುಣ್ಣವಾಗಿತ್ತು. ಆಗ, ಇರಾನ್ ತಂಡದ ಕೋಚ್ ಆಡಿದ ಒಂದು ಮಾತನ್ನ ಇಲ್ಲಿ ಉಲ್ಲೇಖಿಸಲೇಬೇಕು. “ನಾವು ಈ ಟೂರ್ನಿಯಲ್ಲಿ ಚಾಂಪಿಯನ್ ಆಗುತ್ತೇವೆಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಯುವ ಆಟಗಾರರಿಗೆ ಒಂದು ಅನುಭವ ಬೇಕಾಗಿತ್ತು ಅಷ್ಟೇ. ಆದರೆ, ಜಕಾರ್ತದಲ್ಲಿ ನೀವು ಬೇರೆಯೇ ಇರಾನ್ ತಂಡವನ್ನು ನೋಡುತ್ತೀರಿ,” ಎಂದು ಕೋಚ್ ಗುಲಾಂರೇಜಾ ಮಸಾಂದರಾನಿ ಅವರು ಹೇಳಿದ್ದರು. ಸೋತ ತಂಡದವರು ಸಾಮಾನ್ಯವಾಗಿ ಹೇಳುವ ಮಾತಾದ್ದರಿಂದ ಯಾರೂ ಅದನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೇ, ಈ ವರ್ಷ ಇರಾನ್ ತೋರಿದ ಪ್ರದರ್ಶನವೂ ಅಂಥ ಆಶಾದಾಯಕವಾಗಿರಲಿಲ್ಲ. ಅದಕ್ಕೂ ಮಿಗಿಲಾಗಿ ಇರಾನ್​ನಲ್ಲಿ ಕಬಡ್ಡಿ ಕ್ರೀಡೆಗೆ ಸರಿಯಾದ ಉತ್ತೇಜನವೂ ಸಿಕ್ಕಿರಲಿಲ್ಲ. ಹಿಂದಿನ ಕೋಚ್ ಕೆ.ಸಿ. ಸುಥರ್ ಮತ್ತು ಆಟಗಾರರ ನಡುವೆ ಸಂಬಂಧ ಹದಗೆಟ್ಟಿತ್ತು. ಹೊಸ ಕೋಚ್ ಗುಲಾಂರೆಜಾ ಅವರ ನೇತೃತ್ವದಲ್ಲಿ ಹಾಗೂ ಹೀಗೂ ಕಷ್ಟಪಟ್ಟು ಅಭ್ಯಾಸಗಳನ್ನ ನಡೆಸಿಕೊಂಡು ಬರಲಾಗುತ್ತಿತ್ತಷ್ಟೇ. ಏಷ್ಯನ್ ಕಬಡ್ಡಿ ಚಾಂಪಿಯನ್​ಶಿಪ್ ಹಾಗೂ ಕಬಡ್ಡಿ ಮಾಸ್ಟರ್ಸ್ ಟೂರ್ನಿಗಳಲ್ಲಿ ಇರಾನ್ ವೈಫಲ್ಯ ಅನುಭವಿಸಿತ್ತು. ಭಾರತ ಮತ್ತು ಪಾಕಿಸ್ತಾನ ತಂಡಗಳ ಎದುರು ಸೋಲಪ್ಪಿತ್ತು. ಈ ಹಿನ್ನೆಲೆಯಲ್ಲಿ ಇರಾನ್ ತಂಡವು ಏಷ್ಯನ್ ಗೇಮ್ಸ್ ಚಿನ್ನ ಗೆಲ್ಲುತ್ತದೆಂಬ ನಿರೀಕ್ಷೆ ಯಾರಲ್ಲಿಯೂ ಇರಲಿಲ್ಲ. ಅಬ್ಬಬ್ಬಾ ಅಂದರೆ ಭಾರತಕ್ಕೆ ಒಂದಿಷ್ಟು ಪೈಪೋಟಿ ನೀಡಬಹುದೆಂಬ ನಿರೀಕ್ಷೆ ಇತ್ತು.

ಆದರೆ, ಇರಾನ್ ಕೋಚ್ ಘುಲಾಮ್​ರೇಜಾ ಮಸಂದರಾನಿ ಅವರ ತಲೆಯಲ್ಲಿ ಬೇರೆಯದೇ ಯೋಜನೆ ಇತ್ತು. ಭಾರತಕ್ಕೆ ಶಾಕ್ ಕೊಡಲು ಅವರು ಸರ್​ಪ್ರೈಸ್ ಫ್ಯಾಕ್ಟರ್ ಬಚ್ಚಿಟ್ಟಿದ್ದರು. ಭಾರತದಲ್ಲಿ ನಡೆಯುವ ಪ್ರೋಕಬಡ್ಡಿ ಲೀಗ್​ನಲ್ಲಿ ಹಲವು ಇರಾನಿ ಆಟಗಾರರು ಆಡಿ ಪಳಗಿಹೋಗಿದ್ದಾರೆ. ಫಜೆಲ್ ಅಟ್ರಾಚಲಿ, ಅಬೋಲ್​ಫಜಲ್ ಮಹಾಲ್ಲಿ, ಅಬೋಜರ್ ಮೊಹಾಜೆರ್ ಮಿಘಾನಿ, ಹಾಡಿ ಓಶಟೋರಕ್, ಮಿರಾಜ್ ಶೇಖ್, ಮೊಹಸೆನ್ ಮಘಸೌದ್ಲೂಜಫಾರಿ, ಹಾಡಿ ತಾಜಿಕ್ ಮತ್ತು ಫರ್ಹಾದ್ ರಹಿಮಿ ಮಿಲಾಘರ್ದನ್ ಅವರು ಭಾರತದಲ್ಲಿ ಆಡಿ ಅನುಭವ ಗಳಿಸಿದ್ದಾರೆ. ಮಿರಾಜ್ ಶೇಖ್ ಅವರಂತೂ ಮನೆಮಾತಾಗಿದ್ಧಾರೆ. ಫಜೆಲ್ ಅಟ್ರಾಚೆಲಿ ಅವರು ಈ ಬಾರಿಯ ಪಿಕೆಎಲ್​ನಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಮಾರಾಟವಾಗಿದ್ದಾರೆ. ಇವರಲ್ಲಿ ಫಜೆಲ್ ಅಟ್ರಾಚೆಲಿ ಮತ್ತು ಅಬೋಜರ್ ಮಿಘಾನಿ ಅವರು ಮಾತ್ರ ಇರಾನ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಉಳಿದವರಿಗೆ ಕೋಚ್ ಗೇಟ್​ಪಾಸ್ ಕೊಟ್ಟಿದ್ದರು. ಏಷ್ಯನ್ ಕಬಡ್ಡಿ ಚಾಂಪಿಯನ್​ಶಿಪ್ ಮತ್ತು ಕಬಡ್ಡಿ ಮಾಸ್ಟರ್ಸ್ ಟೂರ್ನಿಗಳಲ್ಲಿ ಆಡಿದ ಇರಾನ್ ತಂಡಕ್ಕೂ ಏಷ್ಯನ್ ಗೇಮ್ಸ್​ಗೆ ಆಯ್ಕೆಯಾದ ಇರಾನ್ ತಂಡಕ್ಕೂ ಸಾಕಷ್ಟು ವ್ಯತ್ಯಾಸವಾಗಿತ್ತು. ಹಲವು ಆಟಗಾರರು ಬದಲಾಗಿದ್ದರು. ಇದು ಒಂದು ಪ್ರಮುಖ ಸರ್​ಪ್ರೈಸ್ ಫ್ಯಾಕ್ಟರ್ ಆಗಿತ್ತು.

ಕಳೆದ ಮೂರು ಏಷ್ಯಾಡ್​ಗಳಲ್ಲಿ ಕಬಡ್ಡಿಯಲ್ಲಿ ಬೆಳ್ಳಿ ಪದಕ ಗೆಲ್ಲುತ್ತಾ ಬಂದಿದ್ದ ಇರಾನ್ ತಂಡಕ್ಕೆ ಈ ಬಾರಿ ಚಿನ್ನ ಗೆದ್ದೇ ಗೆಲ್ಲುವ ಹಂಬಲ ಮತ್ತು ಗುರಿ ಇದ್ದಂತಿತ್ತು. ಅದಕ್ಕಾಗಿ ಕೋಚ್ ಗಂಭೀರವಾಗಿ ರಣತಂತ್ರ ರೂಪಿಸಿದರು. ದಕ್ಷಿಣ ಕೊರಿಯಾ, ಭಾರತ ಮತ್ತು ಪಾಕಿಸ್ತಾನ ತಂಡಗಳ ಕಬಡ್ಡಿ ಆಟಗಳನ್ನ ಸೂಕ್ಷ್ಮವಾಗಿ ಅವಲೋಕಿಸಿದರು.ಇರಾನ್ ಕಬಡ್ಡಿ ತಂಡದ ಪ್ರಮುಖ ಅಸ್ತ್ರವೆಂದರೆ ಅದರ ಡಿಫೆನ್ಸ್ ಅಥವಾ ಟ್ಯಾಕ್ಲಿಂಗ್. ದೈಹಿಕವಾಗಿ ಸದೃಢವಾಗಿರುವ ಇರಾನೀ ಆಟಗಾರರು ಟ್ಯಾಕ್ಲಿಂಗ್​ನಲ್ಲಿ ಬಹಳ ಅಗ್ರೆಸ್ಸಿವ್. ಇದಕ್ಕೆ ಪ್ರತಿಯಾಗಿ ಏಷ್ಯನ್ ಗೇಮ್ಸ್​ನಲ್ಲಿ ಆಡಿದ ಭಾರತ ತಂಡದಲ್ಲಿ ಡಿಫೆನ್ಸ್ ದುರ್ಬಲವಾಗಿತ್ತು. ಅಜಯ್ ಠಾಕೂರ್, ರಿಷಾಂಕ್ ದೇವಾಡಿಗ, ಸುರೇಂದರ್ ನಾಡಾ ಮೊದಲಾದ ಘಟಾನುಘಟಿ ರೇಡರ್​ಗಳಿದ್ದರು. ಆದರೆ, ಇರಾನ್ ವಿರುದ್ಧದ ಸೆಮಿಫೈನಲ್​ನಲ್ಲಿ ಭಾರತದ ರೈಡರ್​ಗಳು ಮಂಕಾಗಿಬಿಟ್ಟರು. ಇರಾನಿಯರ ಆಕ್ರಮಣಕಾರಿ ರಕ್ಷಣಾ ವ್ಯೂಹವನ್ನು ಭೇದಿಸಲು ಭಾರತೀಯ ರೇಡರ್ಸ್​ಗೆ ಸಾಧ್ಯವಾಗಲಿಲ್ಲ. ಫಾಜೆಲ್ ಮತ್ತು ಅಬೋಹಾರ್ ಅವರಂತೂ ಡಿಫೆನ್ಸ್​ನಲ್ಲಿ ಪ್ರಬಲ ಕೋಟೆಯಾಗಿ ನಿಂತಿದ್ದರು. ಕೋರ್ಟ್​ನಲ್ಲಿ ಮೂವರೇ ಇದ್ದರೂ ರೇಡರ್​​ಗಳನ್ನ ಹಿಡಿದು ಮಲಗಿಸಿ ಸೂಪರ್ ಟ್ಯಾಕಲ್ ಮೂಲಕ ಅಂಕಗಳನ್ನ ಸೂರೆಗೊಳ್ಳುತ್ತಿದ್ದರು. ಭಾರತದ ಗಾಯದ ಮೇಲೆ ಬರೆ ಎಳೆದಂತೆ ಇರಾನ್​ ರೇಡರ್​ಗಳ ದುರ್ಬಲ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಡಿಫೆಂಡಿಂಗ್ ಆಟಗಾರರು ವಿಫಲರಾದರು. ಹೀಗಾಗಿ, ಟ್ಯಾಕ್ಲಿಂಗ್​ನಲ್ಲಿ ಬರಬಹುದಾದ ಅನೇಕ ಪಾಯಿಂಟ್​ಗಳು ಭಾರತೀಯರ ಕೈತಪ್ಪಿದವು. ಭಾರತದ ರೇಡಿಂಗ್ ಮತ್ತು ಟ್ಯಾಕ್ಲಿಂಗ್ ಎರಡೂ ವಿಫಲವಾದ್ದರಿಂದ ಇರಾನ್ ತಂಡಕ್ಕೆ ಗೆಲುವು ಸುಲಭವಾಯಿತು ಎಂದೆನ್ನಬಹುದು.

ಒಟ್ಟಾರೆಯಾಗಿ, ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆಲ್ಲಲು ವಿಫಲರಾದ ಮಾತ್ರಕ್ಕೆ ಭಾರತದಲ್ಲಿ ಕಬಡ್ಡಿ ಕ್ರೀಡೆ ನಶಿಸುತ್ತಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಭಾರತಕ್ಕೆ ಆದ ಸೋಲು ಆಘಾತಕಾರಿಯಂತೂ ಅಲ್ಲ. ಅದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಇರಾನ್, ಕೊರಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಥಾಯ್ಲೆಂಡ್, ಶ್ರೀಲಂಕಾ ದೇಶಗಳು ಕಬಡ್ಡಿಯಲ್ಲಿ ದಿನೇದಿನೇ ಬಲವೃದ್ಧಿಸಿಕೊಳ್ಳುತ್ತಿವೆ. ಇವು ವಿಶ್ವ ಕಬಡ್ಡಿಗೆ ಶುಭ ಸೂಚಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತದ ಏಕಸ್ವಾಮ್ಯಕ್ಕೆ ಸೆಡ್ಡು ಹೊಡೆಯುವ ತಂಡಗಳಿರುವುದು ಕಬಡ್ಡಿ ಬೆಳವಣಿಗೆಗೆ ಒಳ್ಳೆಯದು.

ದೈಹಿಕವಾಗಿ ಬಹಳ ಫಿಟ್ ಆಗಿರುವ ಇರಾನೀ ಕಬಡ್ಡಿ ಆಟಗಾರರು ಕಬಡ್ಡಿಯ ಹಲವು ಪಟ್ಟುಗಳನ್ನ ಕರತಲಾಮಲಕ ಮಾಡಿಕೊಂಡಿದ್ದಾರೆ. ಈಗ ಭಾರತವನ್ನು ಹಿಮ್ಮೆಟ್ಟಿಸುವಷ್ಟು ಆಕ್ರಮಣಕಾರಿ ಧೋರಣೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಮುಂದಿನ ಭಾರತ-ಇರಾನ್ ಪಂದ್ಯಗಳು ರೋಚಕವಾಗಿರುವುದರಲ್ಲಿ ಅನುಮಾನವೇ ಇಲ್ಲ.
First published: August 25, 2018, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading