PKL 8: ಚೊಚ್ಚಲ ಗೆಲುವಿಗೆ ತೆಲುಗು ಟೈಟಾನ್ಸ್ ಹಪಾಹಪಿ; ಇಲ್ಲಿದೆ ಟಾಪ್ ರೇಡರ್ಸ್ ಪಟ್ಟಿ

Pro Kabaddi League 2022: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಇಂದು ಸೆಣಸುತ್ತಿವೆ. ಪಟ್ನಾ ಪೈರೇಟ್ಸ್ ಮತ್ತು ಯು ಮುಂಬಾ ತಂಡಗಳೂ ಇಂದು ಮುಖಾಮುಖಿಯಾಗುತ್ತಿವೆ.

ತೆಲುಗು ಟೈಟಾನ್ಸ್ ತಂಡದ ಸಿದ್ಧಾರ್ಥ್ ದೇಸಾಯಿ ಮತ್ತಿತರರು

ತೆಲುಗು ಟೈಟಾನ್ಸ್ ತಂಡದ ಸಿದ್ಧಾರ್ಥ್ ದೇಸಾಯಿ ಮತ್ತಿತರರು

  • News18
  • Last Updated :
  • Share this:
    ಬೆಂಗಳೂರು, ಜ. 11: ಈ ಬಾರಿಯ ಪ್ರೋಕಬಡ್ಡಿ ಲೀಗ್​ನ ಮೊದಲ ಏಳು ಸುತ್ತಿನ ಬಳಿಕ ಒಂದೂ ಗೆಲುವು ಕಾಣದೇ ಇರುವ ಏಕೈಕ ತಂಡವೆಂದರೆ ಅದು ತೆಲುಗು ಟೈಟಾನ್ಸ್. ಪ್ರತೀ ಸೀಸನ್​ನಲ್ಲೂ ರೋಚಕ ಕಬಡ್ಡಿ ಆಡುವ ಟೈಟಾನ್ಸ್ ತಂಡಕ್ಕೆ ಈ ಬಾರಿ ದುರದೃಷ್ಟ ವಕ್ಕರಿಸಿದಂತೆ. ಮೊದಲ ಪಂದ್ಯದಲ್ಲೇ ತಮಿಳ್ ತಲೈವಾಸ್ ಎದುರು ಡ್ರಾ ಮಾಡಿಕೊಂಡ ತೆಲುಗು ಟೈಟಾನ್ಸ್ ಈಗ ಏಳು ಪಂದ್ಯವಾದರೂ ಗೆಲುವು ಕಾಣದೆ ಅಂಕಪಟ್ಟಿಯಲ್ಲಿ ತಳದಲ್ಲಿದೆ. ತನಗಿಂತ ಒಂದು ಸ್ಥಾನವಷ್ಟೇ ಮೇಲಿರುವ ಗುಜರಾತ್ ಜೈಂಟ್ಸ್ ಜೊತೆ ಇಂದು ತೆಲುಗು ಟೈಟಾನ್ಸ್ ಹಣಾಹಣಿ ಇದೆ. ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.

    ಗಾಯಗೊಂಡಿರುವ ಸಿದ್ಧಾರ್ಥ್ ‘ಬಾಹುಬಲಿ’ ದೇಸಾಯಿ ಗಾಯಗೊಂಡಿರುವುದು ತೆಲುಗು ಟೈಟಾನ್ಸ್ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆರಂಭದ ಕೆಲ ಪಂದ್ಯಗಳಲ್ಲಿ ಆಡಿದ್ದ ಸಿದ್ಧಾರ್ಥ್ ದೇಸಾಯಿ ತಮ್ಮ ಅಗಾಧ ಶಕ್ತಿ ಮೂಲಕ ಗಮನ ಸೆಳೆದಿದ್ದರು. ಅವರು ಗಾಯಗೊಂಡಿರುವುದು ತಂಡ ದುರ್ಬಲಗೊಂಡಂತೆ ತೋರುತ್ತಿದೆ.

    ಬೆಂಗಳೂರು ಬುಲ್ಸ್ ತಂಡದ ಮಾಜಿ ನಾಯಕ ರೋಹಿತ್ ಕುಮಾರ್ ಅವರಿಂದ ನಿರೀಕ್ಷಿತ ಧಮಾಕ ಬರುತ್ತಿಲ್ಲ. ಅಂಕಿತ್ ಬೇನಿವಾಲ್ ಮತ್ತು ಕರ್ನಾಟಕ ರಾಕೇಶ್ ಗೌಡ ಅವರಿಂದ ಒಂದಷ್ಟು ರೇಡಿಂಗ್ ಪಾಯಿಂಟ್ಸ್ ಸಿಗುತ್ತಿದೆ. ಆದರೆ, ಅತಿ ಹೆಚ್ಚು ರೇಡಿಂಗ್ ಅಂಕ ಗಳಿಸಿದವರ ಪಟ್ಟಿಯಲ್ಲಿ ಟೈಟಾನ್ಸ್ ತಂಡದ ಒಬ್ಬನೂ ಆಟಗಾರನಿಲ್ಲ. ಬಾಹುಬಲಿ ಅನುಪಸ್ಥಿತಿಯಲ್ಲಿ ತೆಲುಗು ಟೈಟಾನ್ಸ್ ಈಗ ತನ್ನ ಡಿಫೆನ್ಸ್ ವಿಭಾಗವನ್ನು ನೆಚ್ಚಿಕೊಳ್ಳುವಂತಾಗಿದೆ. ರುತುರಾಜ್ ಕೊರವಿ ಮೊದಲಾದವರು ಟ್ಯಾಕಲ್​ನಲ್ಲಿ ಸೈ ಎನಿಸಿದ್ಧಾರೆ.

    ಪಟ್ನಾ ಪೈರೇಟ್ಸ್ vs ಯು ಮುಂಬಾ:

    ತೆಲುಗು ಟೈಟಾನ್ಸ್ ಪಂದ್ಯಕ್ಕೆ ಮುನ್ನ ಪಟ್ನಾ ಪೈರೇಟ್ಸ್ ಮತ್ತು ಯು ಮುಂಬಾ ತಂಡಗಳ ಮಧ್ಯೆ ಹಣಾಹಣಿ ಇದೆ. ಪಟ್ನಾ ಪೈರೇಟ್ಸ್ ಈ ಪಂದ್ಯ ಗೆದ್ದರೆ ಅಗ್ರಸ್ಥಾನಕ್ಕೆ ಏರುವ ಅವಕಾಶ ಹೊಂದಿದೆ. ಯು ಮುಂಬಾ ತಂಡ ಟಾಪ್-3 ಸ್ಥಾನಕ್ಕೆ ಲಗ್ಗೆ ಇಡುವ ಅವಕಾಶ ಹೊಂದಿದೆ.

    ಇದನ್ನೂ ಓದಿ: PKL 8: ಯೋದ್ಧಾ ಎದುರು ನಡೆಯದ ಪವನ್ ಆಟ, ಬೆಂಗಳೂರಿಗೆ ಭಾರೀ ಸೋಲಿನ ಶಾಕ್

    ನಿನ್ನೆ ಪಂದ್ಯಗಳ ಫಲಿತಾಂಶ:

    ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ತಮಿಳ್ ತಲೈವಾಸ್ 45-26 ಅಂಕಗಳಿಂದ ಜಯಭೇರಿ ಭಾರಿಸಿತು. ಮತ್ತೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡ ಈ ಸೀಸನ್​ನಲ್ಲಿ ಮೊದಲ ಸೋಲು ಕಂಡಿತು. ದಬಂಗ್ ಡೆಲ್ಲಿಯನ್ನ ಜೈಪುರ್ ಪಿಂಕ್ ಪ್ಯಾಂಥರ್ಸ್ 30-28 ಅಂಕಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ದಬಂಗ್ ಡೆಲ್ಲಿಯ ನವೀನ್ ಕುಮಾರ್ ಮತ್ತು ಜೈಪುರ್ ತಂಡದ ಅರ್ಜುನ್ ದೇಶವಾಲ್ ಗಮನ ಸೆಳೆಯುವ ರೀತಿಯಲ್ಲಿ ಆಡಿದರು. ಕುತೂಹಲವೆಂದರೆ ಇವರಿಬ್ಬರೂ ಕೂಡ ಈ ಸೀಸನ್​ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಸೂಪರ್-10 ಗಳಿಸಿದ್ದಾರೆ.

    ಅತಿ ಹೆಚ್ಚು ಅಂಕಗಳನ್ನ ಗಳಿಸಿದವರು:

    1) ನವೀನ್ ಕುಮಾರ್: 133 ಅಂಕ
    2) ಅರ್ಜುನ್ ದೇಶವಾಲ್: 100
    3) ಪವನ್ ಶೆರಾವತ್: 100
    4) ಮಣಿಂದರ್ ಸಿಂಗ್: 100
    5) ವಿಕಾಶ್ ಕಂಡಾಲ: 62

    ಇದನ್ನೂ ಓದಿ: PKL 8: ಅರ್ಜುನ್ ದೇಶವಾಲ್ ಮತ್ತೊಂದು ಸೂಪರ್-10; ಜೈಪುರ್, ಹರ್ಯಾಣ ತಂಡಗಳಿಗೆ ಗೆಲುವು

    ಅಂಕಪಟ್ಟಿ:

    1) ದಬಂಗ್ ಡೆಲ್ಲಿ: 32 ಅಂಕ
    2) ಪಟ್ನಾ ಪೈರೇಟ್ಸ್: 29
    3) ಬೆಂಗಳೂರು ಬುಲ್ಸ್: 28
    4) ತಮಿಳ್ ತಲೈವಾಸ್: 27
    5) ಯು ಮುಂಬಾ: 25
    6) ಜೈಪುರ್ ಪಿಂಕ್ ಪ್ಯಾಂಥರ್ಸ್: 23
    7) ಯು ಪಿ ಯೋದ್ಧಾ: 20
    8) ಹರಿಯಾಣ ಸ್ಟೀಲರ್ಸ್: 20
    9) ಬೆಂಗಾಲ್ ವಾರಿಯರ್ಸ್: 17
    10) ಪುಣೇರಿ ಪಲ್ಟನ್: 16
    11) ಗುಜರಾತ್ ಜೈಂಟ್ಸ್: 15
    12) ತೆಲುಗು ಟೈಟಾನ್ಸ್: 10
    Published by:Vijayasarthy SN
    First published: