ಭಾರತ ತಂಡ (Team India) ಕೋಲ್ಕತ್ತಾದಲ್ಲಿ ನಡೆದ ಶ್ರೀಲಂಕಾ (Sri Lanka) ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ. ಸರಣಿ ಗೆದ್ದ ಖುಷಿಯಲ್ಲಿದ್ದ ರೋಹಿತ್ ಬಳಗದ ಡ್ರೆಸ್ಸಿಂಗ್ ರೂಮ್ನಲ್ಲಿ (Dressing Room) ಬೇಸರ ಮೂಡಿದೆ. ಟೀಮ್ ಇಂಡಿಯಾ ತಿರುವನಂತಪುರಂನಲ್ಲಿ ನಡೆಯುವ ಕೊನೆಯ ಏಕದಿನ ಪಂದ್ಯವನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಇಲ್ಲದೆ ಆಡಬೇಕಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಜನ್ಮದಿನವನ್ನಾಚರಿಸಿಕೊಂಡಿದ್ದ ಟೀಂ ಇಂಡಿಯಾ ಕೋಚ್ ದ್ರಾವಿಡ್ ಅನಾರೋಗ್ಯ ಕಾರಣ ಭಾರತ ತಂಡದೊಂದಿಗೆ ತಿರುವನಂತಪುರಂಗೆ ತೆರಳುವ ಬದಲಿಗೆ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ವರದಿಗಳಾಗಿವೆ.
ಎರಡನೇ ಏಕದಿನ ಪಂದ್ಯವನ್ನಾಡುವ ವೇಳೆಯೇ ಅನಾರೋಗ್ಯದಿಂದ ಬಳಲುತ್ತಿದ್ದ ರಾಹುಲ್ ದ್ರಾವಿಡ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ . ಜನವರಿ 15ರಂದು ಭಾನುವಾರ ಭಾರತ ಮತ್ತು ಶ್ರೀಲಂಕಾ ನಡುವೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಈ ವೇಳೆಗೆ ದ್ರಾವಿಡ್ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆಯೇ ಎನ್ನುವುದರ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.
ರಕ್ತದೊತ್ತಡದಲ್ಲಿ ಏರುಪೇರು
ಭಾರತ ತಂಡದ ಮಾಜಿ ನಾಯಕ ಈಡನ್ ಗಾರ್ಡನ್ ಪಂದ್ಯಕ್ಕೂ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ತಂಡ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ದ್ರಾವಿಡ್ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಎರಡನೇ ಪಂದ್ಯಕ್ಕೂ ಮುನ್ನ ದ್ರಾವಿಡ್ ರಕ್ತದೊತ್ತಡದಲ್ಲಿ ಏರುಪೇರು ಕಂಡುಬಂದಿದೆ. ತಕ್ಷಣವೇ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದ್ರಾವಿಡ್ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಆಗಮಿಸಿದ್ದು, ವೈದ್ಯರ ಅನುಮತಿಸಿದರೆ ಮೂರನೇ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ.
50ನೇ ಜನ್ಮದಿನಾಚರಣೆ
ಭಾರತ ತಂಡದ ಲೆಜೆಂಡರಿ ಬ್ಯಾಟರ್ ಬುಧವಾರವಷ್ಟೇ (ಜನವರಿ 11) ಭಾರತ ತಂಡದ ಆಟಗಾರರ ಜೊತೆಗೆ 50 ನೇ ಜನ್ಮದಿನಾಚರಣೆ ಮಾಡಿಕೊಂಡಿದ್ದರು. ಕರ್ನಾಟಕ ಕ್ರಿಕೆಟಿಗನಿಗೆ ಭಾರತ ತಂಡದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭಾರೈಸಿದ್ದರು. ಇದೀಗ ಅನಾರೋಗ್ಯದಿಂದ ತಂಡವನ್ನು ತ್ಯಜಿಸಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಶುಕ್ರವಾರ ಪ್ರಯಾಣ ಬೆಳೆಸಲಿರುವ ಭಾರತ ತಂಡ
ಟಿ20 ಹಾಗೂ ಏಕದಿನ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ತಂಡ ಕೊನೆಯ ಹಾಗೂ ಔಪಚಾರಿಕ ಪಂದ್ಯವನ್ನಾಡಲು ಶುಕ್ರವಾರ ತಿರುವನಂತಪುರಂಗೆ ಪ್ರಯಾಣ ಬೆಳೆಸಲಿದೆ. ಟೀಮ್ ಇಂಡಿಯಾ ಮೊದಲ ಪಂದ್ಯವನ್ನು 67 ರನ್ಗಳಿಂದ ಜಯಿಸಿದರೆ, ಈಡನ್ ಗಾರ್ಡನ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ಗಳ ಜಯ ಸಾಧಿಸಿ 2023 ರ ವರ್ಷದ ಮೊದಲ ಸರಣಿ ಜಯಿಸಿತ್ತು.
ಜನವರಿ 27ರಿಂದ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ
ಶ್ರೀಲಂಕಾ ವಿರುದ್ಧ ಭಾನುವಾರ ಕೊನೆಯ ಏಕದಿನ ಪಂದ್ಯ ಮುಗಿಯುತ್ತಿದ್ದಂತೆ ನ್ಯೂಜಿಲ್ಯಾಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಕಿವೀಸ್ ಪಡೆ ಭಾರತದಲ್ಲಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಈ ಸರಣಿಗೆ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಟಿ20 ಪಂದ್ಯ ಜನವರಿ 27 ರಂದು ರಾಂಚಿಯಲ್ಲಿ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ