"ಗೋಡೆ" ಎಂಬ (The Wall) ಅಡ್ಡ ಹೆಸರಿನಿಂದಲೇ ಪ್ರಖ್ಯಾತವಾಗಿದ್ದ ರಾಹುಲ್ ದ್ರಾವಿಡ್ (Rahul Dravid) ಭಾರತ ಕ್ರಿಕೆಟ್ (Team India) ರಂಗ ಕಂಡ ದಿಗ್ಗಜ ಕ್ರಿಕೆಟಿಗರ ಪೈಕಿ ಒಬ್ಬರಾಗಿದ್ದರು. ಕ್ರಿಕೆಟ್ ಆಟದಲ್ಲಿ ಭಾರತ ತ್ವರಿತವಾಗಿ ವಿಕೆಟ್ ಗಳನ್ನು ಕಳೆದುಕೊಳ್ಳುತ್ತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗಲೆಲ್ಲ "ದಿ ವಾಲ್" ಖ್ಯಾತಿಯ ರಾಹುಲ್ ದ್ರಾವಿಡ್ ಭದ್ರವಾಗಿ ಮೈದಾನದಲ್ಲಿ ನೆಲೆಯೂರಿ ತಂಡವನ್ನು ರಕ್ಷಿಸಿದ್ದಾರೆ. ಎದುರಾಳಿ ಪಾಳಯದ ಎಂತೆಂತಹ ಕಠಿಣ ಬೌಲರ್ ಗಳು ಆಕ್ರಮಣ ಮಾಡಿದರೂ ಎಲ್ಲ ರೀತಿಯ ಚೆಂಡುಗಳನ್ನು ಸಮರ್ಥವಾಗಿ ಎದುರಿಸುತ್ತ ವಿಕೆಟ್ ಒಪ್ಪಿಸದೆಯೇ ಸದೃಢವಾಗಿ ಮೈದಾನದಲ್ಲಿ ನಿಲ್ಲುತ್ತಿದ್ದ ರಾಹುಲ್ ದ್ರಾವಿಡ್ ಆಟದ ಪರಿಯನ್ನು ಮೆಚ್ಚಿಕೊಳ್ಳದ ಇತರೆ ಕ್ರಿಕೆಟಿಗರು ಯಾರೂ ಇಲ್ಲ ಎಂತಲೇ ಹೇಳಬಹುದು.
ಸದ್ಯ ರಾಹುಲ್ ದ್ರಾವಿಡ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಾಗಿದೆ. ಆದಾಗ್ಯೂ ಭಾರತದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಬ್ಬ ದ್ರಾವಿಡ್ ಸಿಗಬಹುದೇ ಎಂಬ ಆಸೆ, ಕಾತುರ ಯಾವಾಗಲೂ ಇದ್ದೆ ಇದೆ.
ಈಗ ಆ ಅಭಿಮಾನಿಗಳೆಲ್ಲರ ಕನಸು ನನಸಾಗುವಂತಹ ಸೂಚನೆ ಸಿಕ್ಕಿದೆ ಅಂತ ಹೇಳಬಹುದು. ಏಕೆಂದರೆ, ಸ್ವತಃ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ಅವರು ಈಗ ಜೋನಲ್ ವಲಯದಲ್ಲಿ ನಡೆಯಲಿರುವ ಪಂದ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ 14 ವಯೋಮಾನದೊಳಗಿನವರ ಕ್ರಿಕೆಟ್ ತಂಡಕ್ಕೆ ನಾಯಕರಾಗಲಿದ್ದಾರೆ.
ಅನ್ವಯ್ ಒಬ್ಬ ಪ್ರತಿಭಾವಂತ ಆಟಗಾರರಾಗಿದ್ದು ತಮ್ಮ ಕಠಿಣ ಪರಿಶ್ರಮ ಹಾಗೂ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಸದ್ಯ ಕರ್ನಾಟಕದ ಜೂನಿಯರ್ ತಂಡವನ್ನು ಅವರು ಪ್ರತಿನಿಧಿಸುತ್ತಿದ್ದು, ಇದೀಗ ತಂಡದ ನಾಯಕನಾಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: T20 World Cup 2024: ವಿಶ್ವಕಪ್ ತಂಡದಿಂದ ರೋಹಿತ್-ಕೊಹ್ಲಿ ಔಟ್, ಮಹತ್ವದ ನಿರ್ಧಾರ ತಿಳಿಸಿದ ದ್ರಾವಿಡ್!
ಇನ್ನೊಂದು ಆಸಕ್ತಿಕರ ವಿಷಯವೆಂದರೆ ಅಪ್ಪನ ಹಾಗೇ ಅನ್ವಯ್ ವಿಕೆಟ್ ಕೀಪರ್ ಸಹ ಆಗಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ಪೂರ್ಣಾವಧಿಯ ವಿಕೆಟ್ ಕೀಪರ್ ಆಗಿಯೂ ತಮ್ಮ ಕೈಚಳಕ ತೋರಿದ್ದರು.
ಭಾರತ ಇನ್ನೂ ಉತ್ತಮವಾದ ವಿಕೆಟ್ ಕೀಪರ್ ಪಡೆಯದಿದ್ದ ಸಂದರ್ಭದಲ್ಲಿ ಅವರು ಗ್ಲೌಸ್ ಹಾಕಿಕೊಂಡು ಭಾರತದ ಪರ ವಿಕೆಟ್ ಕೀಪರ್ ಆಗಿಯೂ ಆಡಿದ್ದರು. ತದನಂತರ ಎಂ.ಎಸ್ ಧೋನಿಯ ಆಗಮನವಾಗಿ ಮತ್ತೆ ರಾಹುಲ್ ತಮ್ಮ ಎಂದಿನ ಬ್ಯಾಟರ್ ರೂಪಕ್ಕೆ ಮರಳಿದ್ದರು.
ಇಲ್ಲಿ ಇನ್ನೊಂದು ವಿಚಾರವೆಂದರೆ ಅನ್ವಯ್ ಮಾತ್ರವೇ ತಮ್ಮ ಅಪ್ಪನ ರೀತಿಯಲ್ಲಿ ಒಬ್ಬ ಸಾಧಕ ಕ್ರಿಕೆಟರ್ ಆಗಬೇಕೆಂದು ಬಯಸುತ್ತಿಲ್ಲ, ಬದಲಾಗಿ ಅವರ ಹಿರಿಯ ಸಹೋದರರಾಗಿರುವ ಸಮಿತ್ ಸಹ ಒಬ್ಬ ಕ್ರಿಕೆಟರ್ ಆಗಿದ್ದಾರೆ.
ಇತ್ತೀಚಿನ 2019-20 ಋತುಮಾನದಲ್ಲಿ ನಡೆದಿದ್ದ ಅಂಡರ್-14 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಮಿತ್ ಎರಡು ದ್ವಿಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ: IND vs BAN Test: ದ್ರಾವಿಡ್ ಬಳಿ ಕ್ಷಮೆ ಕೇಳಿದ ಅಲನ್ ಡೊನಾಲ್ಡ್! ಹೇಗಿತ್ತು ನೋಡಿ ಟೀಂ ಇಂಡಿಯಾ ಪ್ರತಿಕ್ರಿಯೆ
ರಾಹುಲ್ ದ್ರಾವಿಡ್ ಹಾಗೂ ಅವರ ಪುತ್ರರು
ಭಾರತದ ದಂತಕಥೆ ಕ್ರಿಕೆಟರ್ ರಾಹುಲ್ ದ್ರಾವಿಡ್ ತುಂಬ ಸರಳ ವ್ಯಕ್ತಿತ್ವದವರು. ರಾಹುಲ್ ಕ್ರಿಕೆಟ್ ಮೂಲಕ ಭಾರತೀಯರ ಮನಗೆದ್ದು ಸಾಕಷ್ಟು ಜನಪ್ರಿಯತೆ ಪಡೆದಿದ್ದರೂ ಸಹ ಅವರು ತಮ್ಮ ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿರಿಸಿದ್ದರು ಹಾಗೂ ಯಾವುದೇ ರೀತಿಯ ವಿವಾದಕ್ಕೊಳಗಾದವರಲ್ಲ. ಅವರ ಹಿರಿಯ ಪುತ್ರ ಸಮಿತ್ ಹಾಗೂ ಕಿರಿಯ ಪುತ್ರ ಅನ್ವಯ್. ಇಬ್ಬರೂ ಈಗ ಅಪ್ಪನ ಪಥದಲ್ಲೇ ಸಾಗುತ್ತಿದ್ದು, ಕ್ರಿಕೆಟ್ ಕ್ಷೇತ್ರದಲ್ಲಿ ಸದ್ದಿಲ್ಲದೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ನಿವೃತ್ತಿ ಪಡೆದ ನಂತರವೂ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳಲ್ಲಿ ಬ್ಯೂಸಿಯಾಗಿರುವ ರಾಹುಲ್ ದ್ರಾವಿಡ್ ತಮ್ಮ ಸಾಮರ್ಥ್ಯಾನುಸಾರ ತಮ್ಮ ಇಬ್ಬರೂ ಪುತ್ರರಿಗೆ ಕ್ರಿಕೆಟ್ ಕುರಿತಂತೆ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಅವರ ಪ್ರಯತ್ನಕ್ಕೆ ಫಲವೆಂಬಂತೆ ಇಬ್ಬರೂ ಪುತ್ರರು ಉತ್ತಮ ಸಾಧನೆಯನ್ನೇ ಮಾಡುತ್ತಿದ್ದಾರೆ. ಇದೀಗ ಅನ್ವಯ್ ಅಂಡರ್-14 ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗುವ ಮೂಲಕ ಅಪ್ಪ ಹೆಮ್ಮೆ ಪಡುವಂತೆ ಮಾಡಿರುವುದರಲ್ಲಿ ಸಂಶಯವೇ ಇಲ್ಲ.
ಇನ್ನೊಂದೆಡೆ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಬ್ಬ ಸದೃಢವಾದ ಜೂನಿಯರ್ "ವಾಲ್" ಒಬ್ಬನು ಭಾರತ ಕ್ರಿಕೆಟ್ ತಂಡಕ್ಕೆ ಲಭಿಸಬಹುದೇನೋ ಎಂಬ ಆಸೆ ಮೂಡಿದಂತಾಗಿರುವುದು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ