• Home
  • »
  • News
  • »
  • sports
  • »
  • Virat Kohli: ಕನಸು ಈಡೇರದೇ ಹಿಂತಿರುಗುತ್ತಿದ್ದೇನೆ! ಕೊಹ್ಲಿ ಪೋಸ್ಟ್ ನೋಡಿ ಭಾವುಕರಾದ ಫ್ಯಾನ್ಸ್

Virat Kohli: ಕನಸು ಈಡೇರದೇ ಹಿಂತಿರುಗುತ್ತಿದ್ದೇನೆ! ಕೊಹ್ಲಿ ಪೋಸ್ಟ್ ನೋಡಿ ಭಾವುಕರಾದ ಫ್ಯಾನ್ಸ್

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನಿಂದ ಬೇಸರಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

  • Share this:

ಭಾರತ ತಂಡ 2022ರ ಟಿ20 ವಿಶ್ವಕಪ್‌ನ (T20 World Cup) ಅಂತಿಮ ರೇಸ್‌ನಿಂದ ಹೊರಗುಳಿದಿದೆ. ಆದರೆ ಇಡೀ ಟೂರ್ನಿಯಲ್ಲಿ ಅನುಭವಿ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ (Virat Kohli) ಪ್ರದರ್ಶನ ಅದ್ಭುತವಾಗಿತ್ತು. ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಅಂದಗೊಳಿಸುವ ಕೆಲಸ ಮಾಡಿದರು. ಟೀಂ ಇಂಡಿಯಾ (Team India) ಮತ್ತೊಮ್ಮೆ ಪ್ರಶಸ್ತಿ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ನಿರಾಸೆಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.


ಕನಸು ಈಡೇರದೆ ಹಿಂತಿರುಗುತ್ತಿದ್ದೇನೆ:


ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಅವರು, 'ನಾವು ನಮ್ಮ ಹೃದಯದಲ್ಲಿ ನಿರಾಶೆಯೊಂದಿಗೆ ಮತ್ತು ನಮ್ಮ ಕನಸನ್ನು ಈಡೇರಿಸದೆ ಆಸ್ಟ್ರೇಲಿಯಾದಿಂದ ಹಿಂತಿರುಗುತ್ತಿದ್ದೇವೆ. ಆದರೆ ನಾವು ಈ ಪಂದ್ಯಾವಳಿಯಿಂದ ಕೆಲವು ಉತ್ತಮ ನೆನಪುಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಗುಂಪಿನಂತೆ ಉತ್ತಮವಾಗಿರುತ್ತೇವೆ. ಮೈದಾನದಲ್ಲಿ ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬ ಅಭಿಮಾನಿಗಳಿಗೆ ಧನ್ಯವಾದಗಳು. ಈ ಜೆರ್ಸಿಯನ್ನು ಧರಿಸಿ ಈ ದೇಶಕ್ಕಾಗಿ ಆಡಲು ನಾನು ಯಾವಾಗಲೂ ಹೆಮ್ಮೆಪಡುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಭಾರತ ತಂಡದ ಅಭಿಮಾನಿಗಳು ಭಾವನಾತ್ಮಕವಾಗಿ ಪೋಸ್ಟ್‌ಗೆ ಕಾಮೆಂಟ್​ ಮಾಡುತ್ತಿದ್ದಾರೆ.



ವಿಶ್ವಕಪ್​ನಲ್ಲಿ ಮಿಂಚಿದ ಕಿಂಗ್ ಕೊಹ್ಲಿ:


ವಿರಾಟ್ ಕೊಹ್ಲಿ 2022 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರವಾಗಿ ಒಟ್ಟು ಆರು ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರ ಆರು ಇನ್ನಿಂಗ್ಸ್‌ಗಳಲ್ಲಿ 98.66 ಸರಾಸರಿಯಲ್ಲಿ ಒಟ್ಟು 296 ರನ್‌ಗಳನ್ನು ಸಿಡಿಸಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇಡೀ ಟೂರ್ನಿಯಲ್ಲಿ ಕೊಹ್ಲಿ ಬ್ಯಾಟ್‌ನಿಂದ ನಾಲ್ಕು ಅರ್ಧಶತಕಗಳು ಹೊರಬಂದಿವೆ.


ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧವೂ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸಿತ್ತು. ತಂಡದ ಪರ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಇಂಗ್ಲೆಂಡ್ ವಿರುದ್ಧ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅವರು 40 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ವೇಳೆ ಅವರು ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಆದರೆ, ಈ ಉತ್ತಮ ಇನ್ನಿಂಗ್ಸ್ ಹೊರತಾಗಿಯೂ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು.


ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪಾಂಡ್ಯ:


ಈ ನೋವು ಮರೆಯುವುದು ಕಷ್ಟ, ನಮಗೆಲ್ಲರಿಗೂ. ನಾವು ಪ್ರತಿ ಹೆಜ್ಜೆಯಲ್ಲೂ ಪರಸ್ಪರ ಹೋರಾಡಿದ್ದೇವೆ. ನಮ್ಮ ಬೆಂಬಲ ಸಿಬ್ಬಂದಿಗೆ ಅವರ ಅಂತ್ಯವಿಲ್ಲದ ಸಮರ್ಪಣೆ ಮತ್ತು ತಿಂಗಳುಗಳವರೆಗೆ ಕಠಿಣ ಪರಿಶ್ರಮಕ್ಕಾಗಿ ಧನ್ಯವಾದಗಳು ಎಂದು ಟೀಂ ಇಂಡಿಯಾ ಆಲ್​ ರೌಂಡರ್​ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಜೊತೆಗೆ ನಮ್ಮನ್ನು ಬೆಂಬಲಿಸಿದ ನಮ್ಮ ಅಭಿಮಾನಿಗಳಿಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ. ನಾವು ಹೋರಾಡುತ್ತಲೇ ಇರುತ್ತೇವೆ ಎಂದು ಅಭಿಮಾನಿಗಳಿಗೂ ಸಂದೇಶ ರವಾನಿಸಿದ್ದಾರೆ. ಇನ್ನು, ಅದೇ ರೀತಿ ನಾಯಕ ರೋಹಿತ್ ಶರ್ಮಾ ಸಹ ಪಂದ್ಯದ ಬಳಿಕ ಡಗೌಟ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಇದರ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದ್ದು, ಕ್ರಿಕೆಟ್​ ಅಭಿಮಾನಿಗಳೂ ಸಹ ಇದೀಗ ಭಾರತೀಯ ತಂಡದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ.

Published by:shrikrishna bhat
First published: