ಟೀಂ ಇಂಡಿಯಾ(Team India)ದ ಮಾಜಿ ಆಟಗಾರ ಸುರೇಶ್ ರೈನಾ(Suresh Raina) ಈ ಬಾರಿಯ 2022ರ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League)ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಹಾಗೂ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ಕಮಾಲ್ ಮಾಡಿರುವ ಸುರೇಶ್ ರೈನಾ “ಮಿಸ್ಟರ್ ಐಪಿಎಲ್”(Mister IPL) ಎಂದೇ ಖ್ಯಾತಿ ಪಡೆದಿದ್ದಾರೆ. ಐಪಿಎಲ್ನ ಈ ಸ್ಟಾರ್ ಆಟಗಾರ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಇಷ್ಟು ವರ್ಷಗಳ ತಮ್ಮ ಆಟದ ಮೂಲಕ ಮೋಡಿ ಮಾಡಿದ್ದ ರೈನಾ, ಇದೀಗ ಮೈಕ್ ಹಿಡಿದು ಮಾತಿನ ಮೋಡಿ ಮಾಡಲು ಸಜ್ಜಾಗಿದ್ದಾರೆ.ಮೊದಲ ಸೀಸನ್ನಿಂದ 2021ರವರೆಗೆ ಐಪಿಎಲ್ನ ಭಾಗವಾಗಿದ್ದ ಸುರೇಶ್ ರೈನಾ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವುದೇ ತಂಡ ಕೂಡ ಖರೀದಿಸಿಲ್ಲ.
ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ ರೈನಾ!
ಹೀಗಾಗಿ ಕ್ರಿಕೆಟ್ ಲೋಕದ ಹೊಸ ಇನ್ನಿಂಗ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿರುವ 35 ವರ್ಷದ ರೈನಾ, ಈ ಬಾರಿಯ ಐಪಿಎಲ್ನಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನಲ್ನಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಈ ಹೊಸ ಹುದ್ದೆಯ ಕುರಿತು ಮಾತನಾಡಿರುವ ಸುರೇಶ್ ರೈನಾ, ನನ್ನ ಈ ಹೊಸ ವೃತ್ತಿ ಸಂತೋಷ ನೀಡಲಿದ್ದು, ಧೀರ್ಘಕಾಲ ಕ್ರಿಕೆಟ್ ಆಡಿರುವ ನನಗೆ ಎಲ್ಲಿ ಮತ್ತು ಹೇಗೆ ಮಾತನಾಡಬೇಕೆಂಬುದು ತಿಳಿದಿದೆ. ಹೊಸ ಹುದ್ದೆಯನ್ನು ನಿಭಾಯಿಸಲು ಉತ್ಸುಕನಾಗಿದ್ದು, ಆ ಮೂಲಕ ಪ್ರೇಕ್ಷಕರನ್ನ ರಂಜಿಸಲು ಮತ್ತು ಹೊಸ ಅನುಭವ ಪಡೆಯಲು ನಾನು ಸಿದ್ಧನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.
‘ಮೈಕ್ ಹಿಡಿದು ಕಾಮೆಂಟ್ರಿ ಮಾಡೋದು ಸವಾಲು’
ಅಲ್ಲದೆ ಮೈಕ್ ಹಿಡಿದು ಕಾಮೆಂಟ್ರಿ ಮಾಡುವುದು ವಿಭಿನ್ನ ಸವಾಲು ಎಂದು ವಿವರಿಸಿರುವ ಸುರೇಶ್ ರೈನಾ, ದೇಶಕ್ಕಾಗಿ ಹಾಗೂ ಐಪಿಎಲ್ನಲ್ಲಿ ಪ್ರೇಕ್ಷಕರ ಮುಂದೆ ಆಡಿದ ಅನುಭವ ನನಗಿದೆ. ಆದರೆ ಕಾಮೆಂಟ್ರಿ ಮಾಡುವುದು ನನಗೆ ಹೊಸ ಅನುಭವವಾಗಿದ್ದು, ಇದನ್ನು ಕಲಿಯಬೇಕಿದೆ ಎಂದಿದ್ದಾರೆ. ತಮ್ಮ ಈ ಹೊಸ ಜರ್ನಿ ವೇಳೆ ಟೀಂ ಇಂಡಿಯಾದಲ್ಲಿ ತಮ್ಮೊಂದಿಗೆ ಆಡಿದ ಹಲವು ಮಾಜಿ ಕ್ರಿಕೆಟಿಗರನ್ನು ಭೇಟಿ ಮಾಡುವ ಅವಕಾಶ ದೊರೆಯಲಿದೆ ಎಂದು ರೈನಾ ಹೇಳಿದ್ದಾರೆ.
ಇದನ್ನೂ ಓದಿ: ವ್ಹಾವ್.. ಇವ್ರೆ ನೋಡಿ ಈ ಬಾರಿ ಐಪಿಎಲ್ ನಡೆಸಿಕೊಡೋ ಸುಂದರ ನಿರೂಪಕಿಯರು!
ವಿಶೇಷವಾಗಿ ಇರ್ಫಾನ್ ಪಠಾಣ್ ಹಾಗೂ ನಾನು ಐಪಿಎಲ್ ಆಡುವ ಸಂದರ್ಭ ಸಾಕಷ್ಟು ಮಾತನಾಡುತ್ತಿದ್ದೆವು. ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ ಕೂಡ ಕಾಮೆಂಟ್ರಿಯಲ್ಲಿ ಜೊತೆಯಾಗಲಿದ್ದು, ಇವರುಗಳು ಸಹ ಸಾಕಷ್ಟು ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಖಂಡಿತವಾಗಿಯೂ ಇಲ್ಲಿ ಸಾಕಷ್ಟು ಸಂತಸದ ಕ್ಷಣಗಳಿಂದ ಕೂಡಿರಲಿದೆ ಎಂದು ರೈನಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಾಮೆಂಟ್ರಿ ಬಾಕ್ಸ್ಗೆ ಶಾಸ್ತ್ರಿ ರಿಟರ್ನ್ಸ್
ಸುರೇಶ್ ರೈನಾ ಅವರಂತೆ ಈ ಬಾರಿಯ ಐಪಿಎಲ್ ಕಾಮೆಂಟ್ರಿ ಪ್ಯಾನಲ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಭಾರತ ರಾಷ್ಟ್ರೀಯ ತಂಡದ ಕೋಚ್ ಆಗಿ ನಿಯೋಜನೆಗೊಂಡ ಬಳಿಕ ಹಲವು ವರ್ಷಗಳ ಕಾಲ ರವಿಶಾಸ್ತ್ರಿ, ಮೈಕ್ನಿಂದ ದೂರ ಉಳಿದಿದ್ದರು. ಈಗ ಮತ್ತೊಮ್ಮೆ ಕಾಮೆಂಟ್ರಿ ಪ್ಯಾನಲ್ಗೆ ರೀ ಎಂಟ್ರಿ ಕೊಡುತ್ತಿರುವುದಕ್ಕೆ ರವಿಶಾಸ್ತ್ರಿ ಕೂಡ ಅತ್ಯಂತ ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: RCB ಫ್ಯಾನ್ಸ್ ಇಲ್ಲಿ ಕೇಳಿ ಗುಡ್ನ್ಯೂಸ್.. ಮತ್ತೆ ಟೀಂ ಕ್ಯಾಪ್ಟನ್ ಆಗ್ತಾರಂತೆ ಕಿಂಗ್ ಕೊಹ್ಲಿ!
ಐದು ವರ್ಷಗಳ ಹಿಂದೆ ಭಾರತ v ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಕಾಮೆಂಟ್ರಿ ಮಾಡಿದ್ದೆ. ಇದೀಗ ಮತ್ತೊಮ್ಮೆ ಕಾಮೆಂಟ್ರಿ ಪ್ಯಾನಲ್ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ರವಿಶಾಸ್ತ್ರಿ ಅವರು ಕೋಚ್ ಹುದ್ದೆ 2021 ಟಿ20 ವಿಶ್ವಕಪ್ ಬಳಿಕ ಮುಕ್ತಾಯಗೊಂಡಿತ್ತು. ವಿಶೇಷವೇನೆಂದರೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಐಪಿಎಲ್ ಕಾಮೆಂಟ್ರಿ ಪ್ಯಾನಲ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುರೇಶ್ ರೈನಾ ಹಾಗೂ ರವಿಶಾಸ್ತ್ರಿ, ಹಿಂದಿಯಲ್ಲಿ ಕಾಮೆಂಟ್ರಿ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ