• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • National Sport- ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

National Sport- ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆ: ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಭಾರತ ಹಾಕಿ ತಂಡದ ಫೈಲ್ ಚಿತ್ರ

ಭಾರತ ಹಾಕಿ ತಂಡದ ಫೈಲ್ ಚಿತ್ರ

ಕ್ರಿಕೆಟ್ ನೆರಳಿನಲ್ಲಿ ಹಾಕಿ ಕ್ರೀಡೆಯ ಜನಪ್ರಿಯತೆ ಕಡಿಮೆಯಾಗಿದೆ. ಹಾಕಿ ಹಾಗೂ ಇತರ ಕ್ರೀಡೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮಾಡಿಕೊಳ್ಳಲಾಗಿದ್ದ ಪಿಐಎಲ್​ವೊಂದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

  • Share this:

ನವದೆಹಲಿ: ಹಾಕಿ ಕ್ರೀಡೆಯನ್ನು ಭಾರತದ ರಾಷ್ಟ್ರೀಯ ಕ್ರೀಡೆಯಾಗಿ ಮಾನ್ಯತೆ ಕೊಡಲು ಕೇಂದ್ರ ಸರ್ಕಾರ ಹಾಗೂ ಇತರ ಕ್ರೀಡಾ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಈ ವಿಚಾರದಲ್ಲಿ ತಾನು ಏನು ಮಾಡಲು ಬರುವುದಿಲ್ಲ. ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೊಡಲು ಆಗುವುದಿಲ್ಲ ಎಂದು ದೂರುದಾರ ವಿಶಾಲ್ ತಿವಾರಿ ಅವರಿಗೆ ನ್ಯಾ| ಉದಯ್ ಲಲಿತ್, ನ್ಯಾ| ಎಸ್ ರವೀಂದ್ರ ಭಟ್ ಮತ್ತು ನ್ಯಾ| ಬೇಲಾ ತ್ರಿವೇದಿ ಅವರಿದ್ದ ಸುಪ್ರೀಂ ನ್ಯಾಯಪೀಠ ಸ್ಪಷ್ಟಪಡಿಸಿತು.”ನಾವು ಏನು ಮಾಡಲು ಆಗುವುದಿಲ್ಲ. ನೀವು ಅರ್ಜಿ ಹಿಂಪಡೆಯಬಹುದು. ಇಲ್ಲದಿದ್ದರೆ ನಾವೇ ಇದನ್ನು ತಿರಸ್ಕರಿಸುತ್ತೇವೆ” ಎಂದು ನ್ಯಾ| ಉದಯ್ ಲಲಿತ್ ನೇತೃತ್ವದ ನ್ಯಾಯಪೀಠ ಹೇಳಿತು. ಕೊನೆಗೆ ವಿಶಾಲ್ ತಿವಾರಿ ತಮ್ಮ ಪಿಐಎಲ್ ಹಿಂಪಡೆಯಬೇಕಾಯಿತು.


“ಈ ದೇಶದಲ್ಲಿ ರಾಷ್ಟ್ರೀಯ ಪ್ರಾಣಿ ಇದೆ. ಆದರೆ, ರಾಷ್ಟ್ರೀಯ ಕ್ರೀಡೆ ಯಾಕಿಲ್ಲ” ಎಂದು ವಿಶಾಲ್ ತಿವಾರಿ ಅವರು ತಮ್ಮ ಪಿಐಎಲ್ ಅರ್ಜಿಯಲ್ಲಿ ಪ್ರಶ್ನೆ ಮಾಡಿದ್ದರು. ಭಾರತದಲ್ಲಿ ಅಥ್ಲೆಟಿಕ್ಸ್ ಹಾಗೂ ಇತರ ಕ್ರೀಡೆಗಳ ಅಭಿವೃದ್ಧಿಗೆ ಮತ್ತು ಕ್ರೀಡಾಪಟುಗಳಿಗೆ ಹಣದ ನೆರವು, ಉತ್ಕೃಷ್ಟ ತರಬೇತಿ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದೂ ಅವರು ಮನವಿ ಮಾಡಿಕೊಂಡಿದ್ದರು.


ಇದನ್ನೂ ಓದಿ: Eng Vs India - ಭಾರತ ವಿರುದ್ಧ ಇಂಗ್ಲೆಂಡ್ ಸೋತಿದ್ದು ಯಾಕೆ? ಆಂಗ್ಲರ ನಾಯಕ ಕೊಟ್ಟ ಕಾರಣ ಇದು


“ಕ್ರಿಕೆಟ್​ನಲ್ಲಿ ಭಾರತ ಸೂಪರ್ ಪವರ್ ಆಗಿದೆ. ಈ ಕ್ರೀಡೆಯಲ್ಲಿ ಅತ್ಯುತ್ತಮ ಆಟಗಾರರನ್ನ ನಿರ್ಮಿಸಿದೆ. ಆದರೆ, ಬೇರೆ ಕ್ರೀಡೆಗಳು ಹಿಂದುಳಿದಿವೆ. ಕ್ರಿಕೆಟ್​ನ ನೆರಳಿನಲ್ಲಿ ಹಾಕಿ ಕ್ರೀಡೆಯ ಜನಪ್ರಿಯತೆ ಕುಂದುಹೋಗಿದೆ. ಭಾರತ ಸರ್ಕಾರದಿಂದ ಸರಿಯಾದ ಉತ್ತೇಜನವೂ ಸಿಗುತ್ತಿಲ್ಲ” ಎಂದು ವಿಶಾಲ್ ತಿವಾರಿ ತಮ್ಮ ಪಿಐಎಲ್​ನಲ್ಲಿ ಅಲವತ್ತುಕೊಂಡಿದ್ದರು.


ಆದರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅನಿಸಿಕೆ ಬೇರೆಯದ್ದಾಗಿತ್ತು. “ಜನರಲ್ಲೇ ಆಸಕ್ತಿ ಮೂಡಬೇಕು. ಮೇರಿ ಕೋಮ್ ಅವರಂಥ ಕ್ರೀಡಾಪಟುಗಳು ಎಲ್ಲಾ ಅಡೆತಡೆಗಳನ್ನ ಮೀರಿ ಬೆಳೆಯುತ್ತಾರೆ. ನಿಮ್ಮ ಪಿಐಎಲ್ ವಿಚಾರದಲ್ಲಿ ನ್ಯಾಯಾಲಯ ಏನೂ ಮಾಡಲಾಗುವುದಿಲ್ಲ” ಎಂದು ನ್ಯಾ| ಉದಯ್ ಲಲಿತ್ ತಮ್ಮ ತೀರ್ಪಿನಲ್ಲಿ ಹೇಳಿದರು.


ವಿಶಾಲ್ ತಿವಾರಿ ಅವರ ಅರ್ಜಿಯನ್ನು ಸುಪ್ರೀಂ ನ್ಯಾಯಪೀಠ ತಿರಸ್ಕರಿಸಿದರೂ ಅವರ ಕಾಳಜಿಗೆ ಸಹಾನುಭೂತಿ ವ್ಯಕ್ತಪಡಿಸಿತು. ಆದರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನ ಕೊಡಲು ಆಗುವುದಿಲ್ಲ ಎಂದು ಅಸಹಾಯಕತೆಯನ್ನೂ ವ್ಯಕ್ತಪಡಿಸಿತು.


ಇದನ್ನೂ ಓದಿ: Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ


ಭಾರತದಲ್ಲಿ ಹಾಕಿ ಕ್ರೀಡೆ ಅಧಿಕೃತವಾಗಿ ಅಲ್ಲದಿದ್ದರೂ ರಾಷ್ಟ್ರೀಯ ಕ್ರೀಡೆ ಎಂದೇ ಜನಜನಿತವಾಗಿದೆ. 1980ರ ದಶಕದವರೆಗೂ ಭಾರತ ಹಾಕಿಯಲ್ಲಿ ಅಕ್ಷರಶಃ ಸೂಪರ್ ಪವರ್ ಆಗಿತ್ತು. ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಕೈತಪ್ಪುವ ಅವಕಾಶವೇ ಇಲ್ಲ ಎನ್ನುವಂತೆ ನಮ್ಮ ತಂಡದ ಪ್ರಾಬಲ್ಯ ಇತ್ತು. ಆದರೆ, ನಂತರದ ದಶಕಗಳಲ್ಲಿ ಹಾಕಿ ಕಳೆಗುಂದಿದೆ. ಆಗಾಗ ಚೇತರಿಸಿಕೊಂಡಿದೆಯಾದರೂ ವಿಶ್ವದ ಕೆಲ ದೇಶಗಳು ಆಧುನಿಕ ತಂತ್ರಜ್ಞಾನ ಇತ್ಯಾದಿಗಳ ನೆರವಿನಿಂದ ಮುನ್ನಡೆ ಸಾಧಿಸಿವೆ. ಆದಾಗ್ಯೂ ವಿಶ್ವದ ಅಗ್ರ ಹಾಕಿ ದೇಶಗಳಲ್ಲಿ ಭಾರತವೂ ಇದೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ಎರಡೂ ಹಾಕಿ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಪುರುಷರ ತಂಡ ಕಂಚಿನ ಪದಕವನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಲವು ವರ್ಷಗಳ ಬಳಿಕ ಭಾರತಕ್ಕೆ ಹಾಕಿಯಲ್ಲಿ ಒಲಿಂಪಿಕ್ಸ್ ಪದಕ ಸಿಕ್ಕಿದೆ.

top videos
    First published: