ಏಷ್ಯನ್ ಕಪ್: ಛೇಟ್ರಿ ಮಿಂಚು; ಥಾಯ್ಲೆಂಡ್ ವಿರುದ್ಧ ಭಾರತ ಜಯಭೇರಿ

ಬಿ ಗುಂಪಿನಲ್ಲಿ ಭಾರತ ಶುಭಾರಂಭ ಮಾಡಿದೆ. ಕಳೆದ 55 ವರ್ಷದಲ್ಲಿ ಏಷ್ಯನ್ ಕಪ್​ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಗೆಲುವು ಇದಾಗಿದೆ. ಜ. 10ರಂದು ಯುಎಇ ತಂಡದ ಸವಾಲು ಭಾರತಕ್ಕೆ ಎದುರಾಗಲಿದೆ.

Vijayasarthy SN | news18
Updated:January 6, 2019, 9:26 PM IST
ಏಷ್ಯನ್ ಕಪ್: ಛೇಟ್ರಿ ಮಿಂಚು; ಥಾಯ್ಲೆಂಡ್ ವಿರುದ್ಧ ಭಾರತ ಜಯಭೇರಿ
ಗೋಲು ಗಳಿಸಿದ ಸಂಭ್ರಮದಲ್ಲಿ ಸುನೀಲ್ ಛೇಟ್ರಿ ಮತ್ತಿತರರು
Vijayasarthy SN | news18
Updated: January 6, 2019, 9:26 PM IST
ಅಬುಧಾಬಿ(ಜ. 06): ಭಾರತ ಫುಟ್ಬಾಲ್ ತಂಡದ ಭರ್ಜರಿ ಓಟ ಏಷ್ಯನ್ ಕಪ್​ನಲ್ಲೂ ಮುಂದುವರಿದಿದೆ. ಏಷ್ಯಾದ ಅತ್ಯುತ್ತಮ ತಂಡಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಭಾರತ ಯಶಸ್ವೀ ಮೊದಲ ಹೆಜ್ಜೆ ಇರಿಸಿದೆ. ಇಂದು ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಭಾರತ 4-1 ಗೋಲುಗಳಿಂದ ಜಯಭೇರಿ ಭಾರಿಸಿದೆ. ಭಾರತದ ಸ್ಟಾರ್ ಆಟಗಾರ ಸುನೀಲ್ ಛೇಟ್ರಿ ಎಂದಿನಂತೆ ದೇಶದ ಕೀರ್ತಿ ಪತಾಕೆ ಹಾರಲು ಪ್ರಮುಖ ಕಾರಣರಾದರು. ಬೆಂಗಳೂರು ಎಫ್​ಸಿ ಆಟಗಾರ ಛೇಟ್ರಿ ಎರಡು ಗೋಲು ಗಳಿಸಿದರು. ಭವಿಷ್ಯದ ಉಜ್ವಲ ಪ್ರತಿಭೆ ಎನ್ನಲಾದ ಅನಿರುದ್ಧ್ ಥಾಪಾ ಹಾಗೂ ಜೇಜೇ ಲಾಲ್​ಪೆಖ್ಲುವಾ ಅವರು ಮತ್ತೆರಡು ಗೋಲು ಗಳಿಸಿ ತಂಡಕ್ಕೆ ಅಮೂಲ್ಯ ಗೆಲುವು ತಂದಿತ್ತರು.

ಇವತ್ತಿನ ಈ ಪಂದ್ಯದಲ್ಲಿ ಛೇಟ್ರಿ 27ನೇ ನಿಮಿಷದಲ್ಲಿ ಪಡೆದ ಪೆನಾಲ್ಟಿ ಅವಕಾಶದಿಂದ ಗೋಲು ಗಳಿಸಿ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಆದರೆ ಆ ಖುಷಿ ಉಳಿದದ್ದು ಕೇವಲ 6 ನಿಮಿಷ ಮಾತ್ರ. ಥಾಯ್ಲೆಂಡ್ ತಂಡ 33ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಆದರೆ, ದ್ವಿತೀಯಾರ್ಧದಲ್ಲಿ ಭಾರತೀಯರು ಹೆಚ್ಚು ಆಕ್ರಮಣಕಾರಿಯಾಗಿ ಆಡಿದರು. ಎರಡನೇ ಅವಧಿಯ ಎರಡನೇ ನಿಮಿಷದಲ್ಲೇ ಸುನೀಲ್ ಛೇಟ್ರಿ ಗೋಲು ಗಳಿಸಿದರು. ಅದಾದ ನಂತರ ಭಾರತ ಇನ್ನಷ್ಟು ಹುಮ್ಮಸ್ಸಿನಿಂದ ಥಾಯ್ಲೆಂಡ್ ಕೋಟೆಗೆ ಲಗ್ಗೆ ಹಾಕಿತು. ಅದರ ಫಲವಾಗಿ 68 ಮತ್ತು 80ನೇ ನಿಮಿಷದಲ್ಲಿ ಗೋಲುಗಳು ಬಂದವು. ಅಷ್ಟರಲ್ಲಿ ಭಾರತಕ್ಕೆ ಗೆಲುವು ಕಟ್ಟಿಟ್ಟ ಬುತ್ತಿಯಾಗಿತ್ತು. ಪಂದ್ಯದ ಅಂತ್ಯ ಸಮೀಪಿಸುತ್ತಿರುವಂತೆ ಥಾಯ್ಲೆಂಡ್ ತಂಡ ಗೋಲು ಗಳಿಸಲು ಶಕ್ತಿಮೀರಿ ಯತ್ನಿಸಿದರೂ ಭಾರತದ ಪ್ರಬಲ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಭಾರತದ ಗೋಲ್​ಕೀಫರ್ ಗುರುಪ್ರೀತ್ ಸಿಂಗ್ ಸಂಧು ಅವರ ಆಟವೂ ಕೂಡ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಭಾರತ ಇರುವ ಎ ಗುಂಪಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಯುಎಇ ಮತ್ತು ಬಹ್ರೇನ್ ತಂಡಗಳು 1-1ರಿಂದ ಸಮಬಲ ಸಾಧಿಸಿದವು. ಜನವರಿ 10ರಂದು ನಡೆಯುವ ಎರಡನೇ ಸುತ್ತಿನಲ್ಲಿ ಪ್ರಬಲ ಯುಎಇ ತಂಡದ ಸವಾಲನ್ನು ಭಾರತ ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತವೇನಾದರೂ ಗೆಲುವು ಸಾಧಿಸಿದರೆ ನಾಕೌಟ್ ಪ್ರವೇಶ ಖಚಿತವಾಗಲಿದೆ. ಮೂರನೇ ಸುತ್ತಿನ ಪಂದ್ಯವು ಜನವರಿ 14ರಂದು ನಡೆಯಲಿದೆ.

ಬಿ ಗುಂಪಿನ ಪಂದ್ಯವೊಂದರಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡ ಸೋಲಿನ ಆಘಾತ ಅನುಭವಿಸಿದೆ. ಜೋರ್ಡಾನ್ ತಂಡವು ಕಾಂಗರೂಗಳ ಪಡೆಯನ್ನು ಏಕೈಕ ಗೋಲಿನಿಂದ ಮಣಿಸಿತು.

ಎಎಫ್​ಸಿ ಏಷ್ಯನ್ ಕಪ್ ಟೂರ್ನಿಯಲ್ಲಿ ಭಾರತ ಆಡುತ್ತಿರುವುದು ಇದು ನಾಲ್ಕನೇ ಬಾರಿ. 1964ರ ಉದ್ಘಾಟನಾ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಆಗಿತ್ತು. ಅದಾದ ನಂತರ 1984 ಮತ್ತು 2011ರಲ್ಲಿ ನಡೆದ ಏಷ್ಯನ್ ಕಪ್ ಟೂರ್ನಿಗಳಲ್ಲಿ ಭಾರತ ಒಂದೂ ಪಂದ್ಯ ಗೆಲ್ಲದೇ ಹೊರದಬ್ಬಿಸಿಕೊಂಡಿತ್ತು. ಈ ಬಾರಿಯ ಏಷ್ಯನ್ ಕಪ್​ನಲ್ಲಿ ತುಸು ಸುಲಭದ ಗುಂಪಿಗೆ ಭಾರತ ಸೇರಿದ್ದು, ನಾಕೌಟ್ ಹಂತ ಪ್ರವೇಶಿಸುವ ಅವಕಾಶ ಹೆಚ್ಚಾಗಿದೆ. ಕೋಚ್ ಸ್ಟೀಫನ್ ಕಾನ್ಸ್​ಟಂಟೈನ್ ಗರಡಿಯಲ್ಲಿ ಭಾರತ ಫುಟ್ಬಾಲ್ ತಂಡ ವಿಶ್ವ ಶ್ರೇಯಾಂಕದಲ್ಲಿ 97ನೇ ಸ್ಥಾನಕ್ಕೆ ಜಿಗಿಯುವಲ್ಲಿ ಯಶಸ್ವಿಯಾಗಿದೆ.
First published:January 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ