ಭಾರತ-ಶ್ರೀಲಂಕಾ ಅಂಡರ್-19: ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲು

news18
Updated:August 2, 2018, 6:24 PM IST
ಭಾರತ-ಶ್ರೀಲಂಕಾ ಅಂಡರ್-19: ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲು
news18
Updated: August 2, 2018, 6:24 PM IST
ನ್ಯೂಸ್ 18 ಕನ್ನಡ

ಶ್ರೀಲಂಕಾ ಪ್ರವಾವಸದಲ್ಲಿರುವ ಭಾರತ ಅಂಡರ್-19 ತಂಡ ತನ್ನ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಅಂಡರ್-19 ವಿರುದ್ಧ ಹೀನಾಯ ಸೋಲು ಕಂಡಿದೆ. ಲಂಕಾ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಭಾರತ ಸೋಲೊಪ್ಪಿಗೊಂಡಿದ್ದು, ಸರಣಿ ಸಮಬಲಗೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಉತ್ತಮ ಆರಂಭ ದೊರಕುವಲ್ಲಿ ಎಡವಿತು. ಅನುಜ್ ರಾವತ್(3), ಅಥರ್ವ ತೈದೆ(8), ನಾಯಕ ಆರ್ಯನ್ ಜುಯಾಲ್(8) ಬೇಗನೆ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಪವನ್ ಷಾ ಹಾಗೂ ಆಯುಷ್ ಬಾದೊನಿ ಇನ್ನಿಂಗ್ಸ್​ ಕಟ್ಟಲು ಮುಂದಾದರು. ಆದರೆ ಷಾ ಅರ್ಧಶತಕದ ಅಂಜಿನಲ್ಲಿ 49 ರನ್​ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ಜೈಸ್ವಾಲ್ ಕೂಡ 1 ರನ್​ಗೆ ಸುಸ್ತಾದರು. ಇತ್ತ ಬಾದೊನಿ ಕೂಡ 36 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಸಮೀರ್ 32 ಹಾಗೂ ಅಜಯ್ ದೇವ್ ಗೌಡ್ 24 ರನ್ ಗಳಿಸಿದ್ದೆ ಹೆಚ್ಚು. ಅಂತಿಮವಾಗಿ ಭಾರತ 47 ಓವರ್​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು. ಲಂಕಾ ಪರ ದುಲ್ಶಾನ್ 3 ವಿಕೆಟ್ ಕಿತ್ತರೆ, ಫೇರ್ನಾಂಡೊ, ಮನಸಿಂಗೇ ಹಾಗೂ ಪರನವಿತನಾ ತಲಾ 2 ವಿಕೆಟ್ ಪಡೆದರು.

194 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಶ್ರೀಲಂಕಾಕ್ಕೆ ಉತ್ತಮ ಆರಂಭ ಸಿಕ್ಕಿಲ್ಲವಾದರು ನಿಫುಣ್ ಧನಂಜಯ್ ಹಾಗೂ ಸೂರ್ಯಬಂದರ ಅವರ ಜೊತೆಯಾಟದ ಫಲವಾಗಿ ಲಂಕಾ ಗೆಲುವಿನ ದಡ ಸೇರಿತು. ಧನಂಜಯ್ 112 ಎಸೆತಗಳಲ್ಲಿ 7 ಬೌಂಡರಿ ಜೊತೆ ಅಜೇಯ 92 ರನ್ ಸಿಡಿಸಿದರೆ, ಸೂರ್ಬಂದರ 52 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಲಂಕಾ 45.4 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಭಾರತ ಅಂಡರ್-19 ಪರ ದೇವ್ ಗಡ್ ಹಾಗೂ ದೇಸಾಯ್ 2 ವಿಕೆಟ್ ಕಿತ್ತು ಮಿಂಚಿದರೆ ಮೋಹಿತ್ ಜಂಗ್ರಾ 1 ವಿಕೆಟ್ ಪಡೆದರು.

ಈ ಮೂಲಕ ಶ್ರೀಲಂಕಾ ಅಂಡರ್-19 ತಂಡ 5 ವಿಕೆಟ್​ಗಳ ಭರ್ಜರಿ ಜಯ ಕಂಡಿದೆ. 5 ಏಕದಿನ ಪಂದ್ಯಗಳ ಸರಣಿಯಲ್ಲಿ ಸದ್ಯ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದು ಸರಣಿ ಸಮಬಲ ಸಾಧಿಸಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ