ಕರ್ನಾಟಕದ ಸಿದ್ದಿಗಳಿಗೆ ಒಲಿಂಪಿಕ್ಸ್ ಚಿನ್ನದ ಗುರಿ; ಜನಾಂಗದ 24 ಪ್ರತಿಭೆಗಳಿಗೆ ತರಬೇತಿ

Siddi community for Olympics- ಮುಂದಿನ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇನ್ನೂ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಕ್ರೀಡಾ ಇಲಾಖೆ ಕ್ರಾಂತಿ ಹೆಜ್ಜೆ ಇರಿಸಿದ್ದು, ದೈಹಿಕ ಕ್ಷಮತೆ ಇರುವ ಸಿದ್ದಿ ಜನಾಂಗದ 24 ಪ್ರತಿಭೆಗಳನ್ನ ಒಲಿಂಪಿಕ್ಸ್ ತರಬೇತಿಗೆ ಆಯ್ಕೆ ಮಾಡಲಾಗಿದೆ.

ಸಿದ್ದಿ ಸಮುದಾಯದ ಕ್ರೀಡಾಪಟುಗಳು

ಸಿದ್ದಿ ಸಮುದಾಯದ ಕ್ರೀಡಾಪಟುಗಳು

 • Share this:
  ಬೆಂಗಳೂರು: ಇವರು ಸಾಮರ್ಥ್ಯವಿದ್ದರೂ ಅವಕಾಶ ವಂಚಿತರು. ಅರ್ಹತೆ ಇದ್ದರೂ ಮಾರ್ಗ ಗೊತ್ತಿಲ್ಲದವರು. ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೇರುವ ಶಕ್ತಿ ಇದ್ದರೂ ಯಾರೂ ಗುರುತಿಸುವ ಪ್ರಯತ್ನ ನಡೆಸಿರಲಿಲ್ಲ. ಹೀಗಾಗಿ ಎಲೆಮರೆ ಕಾಯಿಯಂತಿದ್ದ ಸಿದ್ದಿ ಜನಾಂಗದ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರ ಸೂಚನೆಯ ಹಿನ್ನೆಲೆಯಲ್ಲಿ ಇಲಾಖೆಯ ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ 24 ಕ್ರೀಡಾ ಪ್ರತಿಭೆಗಳನ್ನು ಗುರುತಿಸಿದ್ದು, ಸಚಿವ ಡಾ. ನಾರಾಯಣಗೌಡ ನಿನ್ನೆ ಅವರೊಂದಿಗೆ ಸಂವಾದ ನಡೆಸಿದರು.

  ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹಳಿಯಾಳ, ಯಲ್ಲಾಪುರ, ಮುಂಡಗೋಡ್‍ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸಿದ್ದಿ ಸಮುದಾಯದ ವಿದ್ಯಾರ್ಥಿಗಳನ್ನು ಕ್ರೀಡಾ ವಿಜ್ಞಾನ ಕೇಂದ್ರದ ಟೀಂ ವೈಜ್ಞಾನಿಕವಾಗಿ ಪರೀಕ್ಷೆಗೆ ಒಳಪಡಿಸಿದೆ. ಕ್ರೀಡಾ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಲ್ಲಿ ಯಾವ ಕ್ರೀಡೆಯ ಬಲವಿದೆ ಎನ್ನುವುದನ್ನು ವೈಜ್ಞಾನಿಕವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳ ಜೊತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಕುಶಲೋಪರಿ ನಡೆಸಿ, ಉನ್ನತ ತರಬೇತಿಗೆ ಚಾಲನೆ ನೀಡಿದರು.

  ಮುಂದಿನ ಒಲಿಂಪಿಕ್‍ ಗಮನದಲ್ಲಿರಿಸಿಕೊಂಡು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ ಕ್ರೀಡಾ ಪ್ರತಿಭಾನ್ವೇಷಣೆ ನಡೆಸುತ್ತಿದೆ. ಈ ಅಭಿಯಾನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ, 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಯಾವ ಬಗೆಯ ಕ್ರೀಡೆಯ ಆಸಕ್ತಿ ಹಾಗೂ ಸಾಮರ್ಥ್ಯವಿದೆ ಎನ್ನುವುದನ್ನು ಗುರುತಿಸಿ, ಅಂತರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡಲಾಗುವುದು. ರಾಜ್ಯದ ಪ್ರತಿಷ್ಟಿತ ವಿದ್ಯಾನಗರ ಹಾಗೂ ವಿವಿದೆಡೆ ಇರುವ ಕ್ರೀಡಾ ವಸತಿ ನಿಲಯದಲ್ಲಿ ಈ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕ್ರೀಡಾ ವಿಜ್ಞಾನ ಕೇಂದ್ರದ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ರೀತಿಯ ಪರೀಕ್ಷೆ ನಡೆಸದೆ ನೇರವಾಗಿ ಕ್ರೀಡಾ ವಸತಿ ನಿಲಯದಲ್ಲಿ ಪ್ರವೇಶ ನೀಡಲಾಗುವುದು.

  ಈ ಕ್ರೀಡೆಗಳಲ್ಲಿ ಇದೆ ಹೆಚ್ಚಿನ ಸಾಮರ್ಥ್ಯ:

  ಸಿದ್ದಿ ಜನಾಂಗದ ವಿದ್ಯಾರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆ. ಕ್ರೀಡೆಯಲ್ಲೂ ಹೆಚ್ಚು ಆಸಕ್ತಿ ಇದೆ. ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಕಬಡ್ಡಿ, ಬಾಕ್ಸಿಂಗ್, ರನ್ನಿಂಗ್ ಹಾಗೂ ಸ್ವಿಮ್ಮಿಂಗ್​​ನಲ್ಲಿ ಈ ವಿದ್ಯಾರ್ಥಿಗಳು ಹೆಚ್ಚು ಸಮರ್ಥರಿದ್ದಾರೆ. ಹೀಗಾಗಿ ಈ ಐದೂ ಕ್ರೀಡೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ನೀಡಲು ಸಚಿವರು ಸೂಚನೆ ನೀಡಿದರು. ಜಯನಗರ ಕ್ರೀಡಾ ವಸತಿ ಶಾಲೆ ಸೇರಿದಂತೆ ವಿವಿಧ ಕ್ರೀಡಾ ವಸತಿ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾಭ್ಯಾಸಕ್ಕೂ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚಿಸಿದರು.

  ಇದನ್ನೂ ಓದಿ: Suhas Yathiraj- ಎಂಜಿನಿಯರ್, ಐಎಎಸ್, ಒಲಿಂಪಿಕ್ ಪದಕ; ಹಾಸನದ ಲಾಳನಕೆರೆಯಿಂದ ಸುಹಾಸ್ ಯಶೋಗಾಥೆ

  ಬಂಗಾರದ ಪದಕ ಗೆಲ್ಲುವೆ: 

  ಸಚಿವರು ಎಲ್ಲ ವಿದ್ಯಾರ್ಥಿಗಳ ಜೊತೆ ನೇರವಾಗಿ ಮಾತುಕತೆ ನಡೆಸಿದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತುಂಬ ಆಸಕ್ತಿ ಇದೆ. ಉತ್ತಮ ಅವಕಾಶ ನೀಡಿದರೆ ಹೆಚ್ಚಿನ ತರಬೇತಿ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಪದಕೆ ಗೆದ್ದು ದೇಶದ ಕೀರ್ತಿ ಹೆಚ್ಚಿಸುವುದಾಗಿ ವಿಶ್ವಾಸದ ಮಾತನಾಡಿದರು. ಕ್ರೀಡಾ ಇಲಾಖೆ ಎಲ್ಲ ರೀತಿಯ ನೆರವು ನೀಡುತ್ತದೆ. ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಉತ್ತಮ ತರಬೇತುದಾರರು, ಗುಣಮಟ್ಟದ ಕ್ರೀಡಾ ಸೌಕರ್ಯ ಎಲ್ಲವನ್ನೂ ನೀಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

  ಯೋಜನೆ ಸಮರ್ಪಕವಾಗಿ ಅನುಷ್ಟಾನವಾಗಲಿದೆ:

  ಕೇಂದ್ರ ಸರ್ಕಾರ ಕ್ರೀಡೆಗೆ ಎಲ್ಲ ರೀತಿಯ ನೆರವು ನೀಡುತ್ತಿದೆ. ರಾಜ್ಯ ಸರ್ಕಾರ ಸಹ ವಿವಿಧ ಯೋಜನೆ ಘೋಷಿಸಿದೆ. ಕ್ರೀಡೆಗೆ ಸಾಕಷ್ಟು ನೆರವನ್ನೂ ನೀಡುತ್ತಿದೆ. ಇದೇ ಕಾರಣಕ್ಕಾಗಿ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಗಿದೆ. ಆಯ್ಕೆಯಾಗಿರುವ ಕ್ರೀಡಾ ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿ ಪಡೆಯಬೇಕು. ಅಧಿಕಾರಿಗಳು ಸಹ ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಹೇಳಿದರು. ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಕ್ರೀಡಾ ವಿಜ್ಞಾನ ಕೇಂದ್ರದ ಆಂತೋನಿ, ಮತ್ತಿತರ ಪ್ರಮುಖರು ಉಪಸ್ಥಿರಿದ್ದರು.

  ಸಿದ್ದಿ ಹುಡುಗರ ಬಲ ಕಂಡು ಅಯ್ಕೆಗಾರರಿಗೆ ಶಾಕ್?

  ಆಫ್ರಿಕಾ ಮೂಲದವರಾದ ಸಿದ್ಧಿ ಜನಾಂಗದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನೆಲಸಿದ್ದಾರೆ. ಇವರ ದೈಹಿಕ ಕ್ಷಮತೆ ಅಸಾಧಾರಣವಾದುದು. ಒಲಿಂಪಿಪ್ಸ್​ಗೆ ತರಬೇತಿ ನೀಡಲು ನಡೆಸಲಾದ ಟ್ರಯಲ್ಸ್​ನಲ್ಲಿ ಸಿದ್ಧಿ ಹುಡುಗರ ಕ್ಷಮತೆ ಕಂಡು ಆಯ್ಕೆ ಸಮಿತಿ ಸದಸ್ಯರಿಗೆ ಅಚ್ಚರಿ ಆಗಿತ್ತು. ಎಷ್ಟು ಓಡಿದರೂ ಈ ಹುಡುಗರಿಗೆ ಸುಸ್ತೇ ಆಗಲಿಲ್ಲವೆಂದು ಒಬ್ಬ ಸದಸ್ಯರು ಹೇಳುತ್ತಾರೆ. ಈ ಬಾರಿಯ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ಈಗ ಮುಂದಿನ ಒಲಿಂಪಿಕ್ಸ್​ಗೆ ಈಗಲೇ ಯೋಜನೆ ಹಮ್ಮಿಕೊಂಡಿದೆ. ಕರ್ನಾಟಕದ ಈ ಸಿದ್ದಿ ಜನಾಂಗದ ಹುಡುಗರು ಕರುನಾಡಿಗಷ್ಟೇ ಅಲ್ಲ ಭಾರತದ ಕೀರ್ತಿ ಪತಾಕೆ ಹಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಸೂಕ್ತ ತರಬೇತಿ ಸಿಗಬೇಕಷ್ಟೇ. ಸರ್ಕಾರ ತೋರಿರುವ ಆಸಕ್ತಿ ಹೀಗೇ ಮುಂದುವರಿದರೆ ಇದು ಸಾಧ್ಯವಾಗಬಲ್ಲುದು.
  Published by:Vijayasarthy SN
  First published: