ಮುಂಬೈನ ಪ್ರತೀಕ್ ಸೋನಾವಾನೆ 2022ರ ಪೋಲೋ ಕಪ್ ರಾಷ್ಟ್ರೀಯ ಚಾಂಪಿಯನ್ ( Polo Cup) ಆಗಿ ಹೊರಹೊಮ್ಮಿದ್ದಾರೆ. ಚೆನ್ನೆನಲ್ಲಿರುವ ಮದ್ರಾಸ್ ಅಂತಾರಾಷ್ಟಿಯ ಸರ್ಕ್ಯೂಟ್‌ನಲ್ಲಿ ನಡೆದ ರೇಸ್‌ನ ಅಂತಿಮ ಸುತ್ತಿನಲ್ಲಿ 3 ಬಾರಿ ಪೋಡಿಯಂ ಫಿನಿಶ್ ಮಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಯುವ ರೇಸರ್ ರಾಜ್ ಬಖ್ರು (Raaj Bakhru) ತಮ್ಮ ಪಾದಾರ್ಪಣಾ ಋತುವಿನಲ್ಲೇ 2ನೇ ಸ್ಥಾನ ಹಾಗೂ ಕಿರಿಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. ಬಾಂಗ್ಲಾದೇಶದ (Bangladesh) ಅವಿಕ್ ಅನ್ವರ್ 3ನೇ ಸ್ಥಾನ ಗಳಿಸಿದ್ದಾರೆ. ರಿತೇಶ್ ರೈ 1:56.00ಯಲ್ಲಿ ಮೊದಲ ಸುತ್ತು ಪೂರ್ಣಗೊಳಿಸಿದರು. ಸ್ಥಳೀಯ ರೇಸರ್ 1 ಹಾಗೂ 3ನೇ ರೇಸ್‌ನಲ್ಲಿ ಪೋಲ್ ಪೊಸಿಷನ್ ಪಡೆದಿದ್ದರು. ಇದೇ ವೇಳೆ ಮುಂಬೈ ರೇಸರ್‌ಗಳಾದ ಪ್ರತೀಕ್ ಸೋನಾವಾನೆ ಹಾಗೂ ರಾಜ್ ಬಖ್ರು ಉತ್ತಮ ಫೈಪೋಟಿ ನೀಡಿದರು.
ಭರ್ಜರಿ ಫೈಪೋಟಿ ನಡೆದಿದ್ದ ರೇಸ್:
ಆಕ್ರಮಣಕಾರಿ ಆರಂಭ ಪಡೆದ ರಿತೇಶ್ ರೈಗೆ ಸೋನಾವಾನೆಯಿಂದ ಭರ್ಜರಿ ಸ್ಪರ್ಧೆ ಎದುರಾಯಿತು. ಮೊದಲ ಕಾರ್ನರ್‌ನಲ್ಲಿ ಸೋನಾವಾನೆ ಓವರ್ ಟೇಕ್ ಮಾಡಲು ಯತ್ನಿಸಿ ವಿಫಲರಾದರು. 2ನೇ ತಿರುವಿನಲ್ಲಿ ರಾಜ್ ಬಖ್ರು ಅವರ ಯತ್ನವೂ ಕೈಗೂಡಲಿಲ್ಲ. ರಿತೇಶ್ ರೈ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿ ರೇಸ್ ಗೆದ್ದರು. ಮೊದಲ ರೇಸ್‌ನಲ್ಲಿ ಅಗ್ರ 8 ಸ್ಥಾನಗಳನ್ನು ಪಡೆದ ರೇಸರ್ಗಳನ್ನು 2ನೇ ರೇಸ್‌ನಲ್ಲಿ ಕೆಳಕ್ರಮಾಂಕದಿಂದ ಸ್ಪರ್ಧೆಗಿಳಿಸಲಾಯಿತು. ಹಲವು ವರ್ಷಗಳ ಬಳಿಕ ರೇಸ್‌ಗೆ ವಾಪಸಾದ ಪೋಲೋ ಕಪ್‌ನ ಮಾಜಿ ಅಂತಾರಾಷ್ಟ್ರೀಯ ಚಾಂಪಿಯನ್ ಪ್ರಶಾಂತ್ ಥಾರಣಿ ಸಿಂಗ್ ಪೋಲ್ ಪೊಸಿಷನ್‌ನೊಂದಿಗೆ ರೇಸ್ ಆರಂಭಿಸಿದ್ದರು.
ಡಿಕ್ಕಿ ಹೊಡೆದು ಸ್ಪರ್ಧೆಯಿಂದ ಹೊರಕ್ಕೆ:
ಈ ಸುತ್ತಿನಲ್ಲಿ ಪ್ರಶಾಂತ್‌ಗೆ ಪುಣೆಯ ಶ್ರೇಯಸ್ ಧಿಮಾತೆ ಉತ್ತಮ ಪೈಪೋಟಿ ನೀಡಿದರು. ಮತ್ತೊಂದೆಡೆ ಪ್ರಶಸ್ತಿ ಗೆಲ್ಲುವ ಫೇವರಿಟ್ಸ್ ಎನಿಸಿದ್ದ ಸೋನಾವನೆ ಹಾಗೂ ಬೆಂಗಳೂರಿನ ಆದಿತ್ಯ ಸ್ವಾಮಿನಾಥನ್ ಪರಸ್ಪರ ಡಿಕ್ಕಿ ಹೊಡೆದ ಕಾರಣ ಸ್ಪರ್ಧೆಯಿಂದ ಹೊರಬಿದ್ದರು. ಢಾಕಾ ನಿವಾಸಿ ಅನ್ವಿಕ್ ಅನ್ವರ್ ಉತ್ತಮ ಪ್ರದರ್ಶನ ತೋರಿದರು. 4ನೇ ಸ್ಥಾನದಿಂದ ರೇಸ್ ಆರಂಭಿಸಿದ ಅವರು ಥಾರಣಿ ಸಿಂಗ್ ಹಾಗೂ ಮುಂಬೈನ ಮುಂಜಲ್ ಸಾವ್ಲ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ರಿತೇಶ್ ರೈ ಸುಲಭವಾಗಿ ಜಯ:
ಚಾಂಪಿಯನ್‌ಶಿಪ್‌ನ ಅಂತಿಮ ರೇಸ್‌ನಲ್ಲಿ ಮತ್ತೊಬ್ಬ ಯುವ ರೇಸರ್ ಮುಂಬೈನ ಓಜಸ್ ಸುರ್ವೆ ಪೋಲ್ ಪೊಸಿಷನ್‌ನೊಂದಿಗೆ ಸ್ಪರ್ಧೆ ಆರಂಭಿಸಿ ಗಮನ ಸೆಳೆದರು. ಈ ಸುತ್ತಿನಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾದ ಬಖ್ರು, ಅನ್ವರ್ ಹಾಗೂ ಸೋನಾವಾನೆಯನ್ನು ಹಿಂದಿಕ್ಕುವಲ್ಲಿ ಓಜಸ್ ಯಶಸ್ವಿಯಾಗಿದ್ದು ಅಚ್ಚರಿ ಮೂಡಿಸಿತು. ಈ ಋತುವಿನ ಒಟ್ಟು 8 ರೇಸ್‌ಗಳಲ್ಲಿ 5ರಲ್ಲಿ ಪೋಡಿಯಂ ಫಿನಿಶ್ ಮಾಡಿ 122 ಅಂಕ ಕಲೆಹಾಕಿದ ಸೋನಾವಾನೆ ಚೊಚ್ಚಲ ರಾಷ್ಟ್ರೀಯ ಚಾಂಪಿಯನ್‌ಶಿಪ್ ಜಯಿಸಿದರು. 4 ಪೋಡಿಯಂ ಫಿನಿಶ್‌ಗಳೊಂದಿಗೆ ಒಟ್ಟು 108 ಅಂಕ ಪಡೆದ ಬಖ್ರು 2ನೇ ಸ್ಥಾನ ಪಡೆದರೆ, 107 ಅಂಕ ಪಡೆದ ಅನ್ವರ್ 3ನೇ ಸ್ಥಾನ ಗಳಿಸಿದರು. ಕೇವಲ 1 ಅಂಕದಿಂದ 2ನೇ ಸ್ಥಾನ ಅನ್ವರ್ ಕೈತಪ್ಪಿತು.
ಬಖ್ರು ಕಿರಿಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟಕ್ಕೇರಿದರೆ, ಅನ್ವರ್ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ 3ರಲ್ಲಿ ಸ್ಥಾನ ಪಡೆದರು. ಜೊತೆಗೆ ಪೋಡಿಯಂ ಫಿನಿಶ್ ಮಾಡಿದ ಬಾಂಗ್ಲಾದೇಶದ ಮೊದಲ ರೇಸರ್ ಎನ್ನುವ ಹಿರಿಮೆಗೂ ಪಾತ್ರರಾದರು. 2022ರ ಪೋಲೋ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 18 ಸ್ಪರ್ಧಿಗಳು ಪಾಲ್ಗೊಂಡಿದ್ದರು. 10 ವಿವಿಧ ರೇಸರ್‌ಗಳು ಪೋಡಿಯಂ ಫಿನಿಶ್ ಮಾಡಲು ಸಫಲರಾಗಿದ್ದು ವಿಶೇಷ. 2023ರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಜುಲೈನಲ್ಲಿ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ