ಆಸ್ಟ್ರೇಲಿಯಾ ಮತ್ತು ಭಾರತ (IND sv AUS) ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ (Border–Gavaskar Trophy) ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡದ ಕೆಲ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೌದು, ಮೊದಲು ಜಸ್ಪ್ರೀತ್ ಬುಮ್ರಾ (Jasprit Bumrah) ನಂತರ ರಿಷಭ್ ಪಂತ್ (Rishabh Pant ) ಮತ್ತು ಈಗ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಟೆಸ್ಟ್ ಸರಣಿಯಿಂದ ಅಯ್ಯರ್ ಔಟ್:
ಮಾಧ್ಯಮ ವರದಿಗಳ ಪ್ರಕಾರ ಭಾರತದ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಶ್ರೇಯಸ್ ಅಯ್ಯರ್ ಬೆನ್ನಿನ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು.
ಶ್ರೇಯಸ್ ಅಯ್ಯರ್ ಭಾರತದ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ ಶ್ರೇಯಸ್ ಅವರ ಗಾಯ ನಿರೀಕ್ಷಿತ ಮಟ್ಟದಲ್ಲಿ ವಾಸಿಯಾಗಿಲ್ಲ ಮತ್ತು ಅವರು ಮತ್ತೆ ಕ್ರಿಕೆಟ್ ಆಡಲು ಕನಿಷ್ಠ ಎರಡು ವಾರಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಲಭ್ಯವಿರುವುದಿಲ್ಲ ಎನ್ನಲಾಗಿದೆ. ಅಲ್ಲದೆ, ಎರಡನೇ ಟೆಸ್ಟ್‌ಗೆ ಅವರ ಲಭ್ಯತೆ ಅವರ ಫಿಟ್‌ನೆಸ್ ವರದಿಯನ್ನು ಅವಲಂಬಿಸಿರುತ್ತದೆ ಎನ್ನಲಾಗಿದ್ದು, ಆದರೆ ಈ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: IND vs AUS: ಕ್ರಿಕೆಟ್ ಅಭಿಮಾನಿಗಳಿಗೆ ಸುವರ್ಣ ಅವಕಾಶ, ಜಸ್ಟ್ 10 ರೂಪಾಯಿಗೆ ಭಾರತ-ಆಸೀಸ್ ಪಂದ್ಯ ನೋಡಿ!
ಅಯ್ಯರ್ ವೃತ್ತಿ ಜೀವನ:
ಇನ್ನು, ಶ್ರೇಯಸ್ ಅಯ್ಯರ್ 2022ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ಕಳೆದ ವರ್ಷ 17 ODIಗಳಲ್ಲಿ 724 ರನ್ ಗಳಿಸಿದ್ದಾರೆ. ಭಾರತೀಯ ODI ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅಲ್ಲದೆ, ಶ್ರೇಯಸ್ ಅಯ್ಯರ್ ಇದುವರೆಗೆ ಭಾರತ ತಂಡಕ್ಕಾಗಿ 7 ಟೆಸ್ಟ್, 42 ODI ಮತ್ತು 49 T20I ಪಂದ್ಯಗಳನ್ನು ಆಡಿದ್ದಾರೆ. ಇನ್ನು ಭಾರತ ಟೆಸ್ಟ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಬದಲು ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಆರಂಭವಾಗಲಿದೆ. ಫೆಬ್ರವರಿ 9 ರಿಂದ ಮಾರ್ಚ್ 13 ರವರೆಗೆ ಈ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಪಂದ್ಯ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಜಡೇಜಾ ಕಂಬ್ಯಾಕ್:
ಇನ್ನು, ಸ್ಟಾರ್ ಆಟಗಾರರು ತಂಡದಿಂದ ಹೊರಗುಳಿಯುತ್ತಿದ್ದರೆ, ಇತ್ತ ರವೀಂದ್ರ ಜಡೇಜಾ ಅವರು ಇಂಜುರಿಯಿಂದ ಗುಣಮುಖರಾಗಿದ್ದು, ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಗಾಯದ ನಂತರ ಈ ಸರಣಿಯಿಂದ ವಾಪಸಾಗುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಟಿ20 ವಿಶ್ವಕಪ್‌ಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.
ಆಸೀಸ್ ವಿರುದ್ಧದ 2 ಟೆಸ್ಟ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ