ಬಿಸಿಸಿಐ (BCCI) ಶುಕ್ರವಾರ ಮುಂಬರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿ, ಏಕದಿನ ಸರಣಿ ಹಾಗೂ ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡಗಳನ್ನು ಘೋಷಣೆ ಮಾಡಿದೆ. ಈ ತಂಡದಲ್ಲಿ ಕೆಲವು ಆಶ್ಚರ್ಯಕರ ಹೆಸರುಗಳು ಸೇರಿಕೊಂಡರೆ ಮತ್ತೆ ದೇಶಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕಳೆದೆರಡು ವರ್ಷಗಳಿಂದ ಅದ್ಭುತ ಪ್ರದರ್ಶನ ತೋರುತ್ತಿರುವ ಪೃಥ್ವಿ ಶಾ, ಸರ್ಫರಾಜ್ ಖಾನ್( Sarfaraz khan) ಅಂತಹ ಕೆಲವು ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಕ್ರಿಕೆಟ್ ವಿಶ್ಲೇಷಕರಿಗೆ ಹಾಗೂ ಅಭಿಮಾನಿಗಳಿಗೆ ಆಶ್ಚರ್ಯವನ್ನು ಉಂಟುಮಾಡಿದೆ. ವಿಶೇಷವೆಂದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ಇಶಾನ್ ಕಿಶನ್ರನ್ನು ಟೆಸ್ಟ್ ತಂಡಕ್ಕೆ (Test Team) ಪರಿಗಣಿಸಲಾಗಿದೆ.
ಇವರಿಬ್ಬರ ಆಯ್ಕೆಯನ್ನು ಪ್ರಶ್ನಿಸಿರುವ ಕೆಲವು ಕ್ರಿಕೆಟ್ ಅಭಿಮಾನಿಗಳು ರಣಜಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುವವರನ್ನು ಆಯ್ಕೆಗೆ ಪರಿಗಣಿಸಿದೆ ಸೀಮಿತ ಓವರ್ಗಳ ಆಟಗಾರರನ್ನು ಆಯ್ಕೆ ಮಾಡಿರುವುದು ರಣಜಿ ಕ್ರಿಕೆಟ್ಗೆ ಅವಮಾನ ಮಾಡಿದಂತೆ ಎಂದು ಕಿಡಿಕಾರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 9ರಿಂಧ 13ರವರೆಗ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ಫೆಬ್ರವರಿ 17ರಿಂದ 21ರವರೆಗೆ ನಡೆಯಲಿದೆ.
ಇದನ್ನೂ ಓದಿ: IND vs AUS: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಸ್ಟಾರ್ ಆಲ್ರೌಂಡರ್ ಕಂಬ್ಯಾಕ್, ಪಾಂಡ್ಯ ಔಟ್!
ಸರ್ಫರಾಜ್ರನ್ನು ಪರಿಗಣಿಸದಿದ್ದಕ್ಕೆ ಆಕ್ರೋಶ
ಕಳೆದ ಎರಡು ಆವೃತ್ತಿಗಳಿಂದ ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. 25 ವರ್ಷದ ಬ್ಯಾಟರ್ ಪ್ರಸಕ್ತ ಟೂರ್ನಿಯಲ್ಲಿ 5 ಪಂದ್ಯಗಳಿಂದ 431 ರನ್ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಸೇರಿದೆ. ಅಲ್ಲದೆ ಕಳೆದ ಆವೃತ್ತಿಯಲ್ಲಿ ಕೇವಲ 6 ಪಂದ್ಯಗಳಿಂದ 4 ಶತಕಗಳ ಸಹಿತ 122.5 ಸರಾರಿಯಲ್ಲಿ 982 ರನ್ಗಳಿಸಿದ್ದರು. ಹಾಗಾಗಿ ಅಭಿಮಾನಿಗಳು ಟೆಸ್ಟ್ ತಂಡದಲ್ಲಿ ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ಗಿಂತಲೂ ಸರ್ಫರಾಜ್ ಖಾನ್ ಉತ್ತಮ ಆಯ್ಕೆಯಾಗಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇಶಾನ್ ಕಿಶನ್ ಒಕೆ, ಸೂರ್ಯಕುಮಾರ್ ಯಾಕೆ?
ಭಾರತ ಪ್ರಧಾನ ವಿಕೆಟ್ ಕೀಪರ್ ಆಗಿದ್ದ ರಿಷಭ್ ಪಂತ್ ರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದು, 6 ತಿಂಗಳು ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ ಕೆಎಸ್ ಭರತ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾಗಿ ಬ್ಯಾಕ್ಅಪ್ ವಿಕೆಟ್ ಕೀಪರ್ ಆಗಿ ಕಿಶನ್ರನ್ನು ಆಯ್ಕೆ ಮಾಡಲಾಗಿದೆ. ಆದರೆ ಸರ್ಫರಾಜ್ಗಿಂತ ಸೂರ್ಯಕುಮಾರ್ಗೆ ಆದ್ಯತೆ ನೀಡಿರುವ ಆಯ್ಕೆ ಸಮಿತಿಯ ನಿರ್ಧಾರವನ್ನು ಅಭಿಮಾನಿಗಳು ಸಾಮಾಜಿಕ ಜಾಲಾತಾಣದಲ್ಲಿ ಪ್ರಶ್ನಿಸಿದ್ದಾರೆ.
ರಣಜಿ ಕ್ರಿಕೆಟ್ಗೆ ಅಪಮಾನ
ಟೆಸ್ಟ್ನಲ್ಲಿ ಸರ್ಫರಾಜ್ ಖಾನ್ ಕಡೆಗಣಿಸಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿರುವುದು ರಣಜಿ ಟ್ರೋಫಿಗೆ ಮಾಡಿದ ಅವಮಾನ. ಸರ್ಫರಾಜ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಂತ ಸ್ಥಿರವಾದ ರನ್ ಗಳಿಸುತ್ತಿರುವವರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ತಂಡದಲ್ಲಿ ಹೊಸದಾಗಿ ಸ್ಥಾನ ಪಡೆಯುವುದಕ್ಕೆ ಬೇರೆ ಯಾವುದೇ ಆಟಗಾರರಿಗಿಂತಲೂ ಅವರೇ ಹೆಚ್ಚು ಅರ್ಹರಾಗಿದ್ದಾರೆ. ಈ ಸಮಿತಿಯ ಆಯ್ಕೆ ಮತ್ತೊಮ್ಮೆ ಗೊಂದಲ ಮೂಡಿಸಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ.
ಸರ್ಫರಾಜ್ ಅಂಕಿ ಅಂಶ
ಭಾರತ ಟಿ20 ತಂಡದ ಇತ್ತೀಚಿನ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡು ಸೂರ್ಯಕುಮಾರ್ ಯಾದವ್ರನ್ನು ಆಯ್ಕೆ ಮಾಡುವುದಾದರೆ, ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕಳೆದ ಮೂರು ವರ್ಷಗಳಿಂದ ಸ್ಥಿರ ಪ್ರದರ್ಶನ ತೋರುತ್ತಿರುವ ಸರ್ಫರಾಜ್ ಖಾನ್ ಆಯ್ಕೆ ಸಾಧ್ಯವಿಲ್ಲ ಎಂದು ಕ್ರಿಕೆಟ್ ಅಂಕಿ ಅಂಶ ತಜ್ಞ ಮೋಹನ್ದಾಸ್ ಮೆನನ್ ಅಂಕಿ-ಅಂಶಗಳ ಸಹಿತ ಆಯ್ಕೆಸಮಿತಿಯನ್ನು ಪ್ರಶ್ನಿಸಿದ್ದಾರೆ. ಸರ್ಫರಾಜ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್ನ 2019/20ರ ಆವೃತ್ತಿಯಲ್ಲಿ 154ರ ಸರಾಸರಿಯಲ್ಲಿ 928 ರನ್ 2021/22ರ ಆವೃತ್ತಿಯಲ್ಲಿ 122.7ರ ಸರಾಸರಿಯಲ್ಲಿ 982 ರನ್ ಹಾಗೂ 2022/23ರ ಆವೃತ್ತಿಯಲ್ಲಿ 89 ಸರಾಸರಿಯಲ್ಲಿ 801 ರನ್ಗಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ