ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಸರ್ಕಾರ ಗೋಲ್ಡನ್ ವೀಸಾ ನೀಡಿದೆ. ಈ ಮೂಲಕ 'ದುಬೈ ಗೋಲ್ಡನ್ ವೀಸಾ' ಪಡೆದಿರುವ ಮೂರನೇ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಹಿಂದೆ ಬಾಲಿವುಡ್ ನಟರಾದ ಶಾರೂಖ್ ಖಾನ್ ಮತ್ತು ಸಂಜಯ್ ದತ್ ಅವರಿಗೆ ಗೋಲ್ಡನ್ ವೀಸಾ ನೀಡಲಾಗಿತ್ತು.
ಇದೀಗ ಸಾನಿಯಾ ಮಿರ್ಜಾ ಹಾಗೂ ಪತಿ ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯಬ್ ಮಲಿಕ್ ಅವರಿಗೆ 10 ವರ್ಷಗಳವರೆಗಿನ ಗೋಲ್ಡನ್ ವೀಸಾ ನೀಡಲಾಗಿದೆ. ಅದರಂತೆ ಇನ್ಮುಂದೆ ಸಾನಿಯಾ-ಶೊಯೇಬ್ ಜೋಡಿ ಯುಎಇ ನಿವಾಸಿಯಾಗಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾನಿಯಾ ಮಿರ್ಜಾ,
"ದುಬೈ ಗೋಲ್ಡನ್ ವೀಸಾವನ್ನು ನೀಡಿದ್ದಕ್ಕಾಗಿ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ & ಸ್ಪೋರ್ಟ್ಸ್ ದುಬೈ ಪ್ರಾಧಿಕಾರಕ್ಕೆ ಹಾಗೂ ಶೇಕ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
ದುಬೈ ನನಗೆ ಮತ್ತು ನನ್ನ ಕುಟುಂಬಕ್ಕೆ ಅತ್ಯಂತ ನೆಚ್ಚಿನ ತಾಣ. ಅಷ್ಟೇ ಅಲ್ಲದೆ ಇದು ನನ್ನ ಎರಡನೇ ಮನೆಯಿದ್ದಂತೆ. ಇಲ್ಲಿ ಹೆಚ್ಚು ಸಮಯ ಕಳೆಯಲು ಎದುರು ನೋಡುತ್ತಿದ್ದೇವೆ. ಈ ವೀಸಾ ಪಡೆದಿರುವ ಕೆಲವೇ ಕೆಲವು ಭಾರತೀಯರಲ್ಲಿ ನಾನು ಕೂಡ ಒಬ್ಬಳು ಎಂಬುದಕ್ಕೆ ಹೆಮ್ಮೆಯಿದೆ ಎಂದು ಸಾನಿಯಾ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಗೋಲ್ಡನ್ ವೀಸಾದಿಂದಾಗಿ ದುಬೈನಲ್ಲಿ ಟೆನಿಸ್ ಮತ್ತು ಕ್ರಿಕೆಟ್ ಅಕಾಡೆಮಿಗಳನ್ನು ಆರಂಭಿಸುವ ನಮ್ಮ ಯೋಜನೆಯಗೆ ಅವಕಾಶ ಸಿಕ್ಕಂತಾಗಿದೆ' ಎಂದಿದ್ದಾರೆ. ಶೊಯೇಬ್ ಮಲಿಕ್ ಹಾಗೂ ಸಾನಿಯಾ ಕ್ರಿಕೆಟ್-ಟೆನಿಸ್ ಅಕಾಡೆಮಿಯನ್ನು ಆರಂಭಿಸುವ ಇರಾದೆಯಲ್ಲಿದ್ದು, ಇದೀಗ ಗೋಲ್ಡನ್ ವೀಸಾ ಲಭಿಸಿದ್ದರಿಂದ ಶೀಘ್ರದಲ್ಲೇ ಅಕಾಡೆಮಿ ಕಾರ್ಯಗಳು ಆರಂಭವಾಗಲಿದೆ ಎಂದು ತಿಳಿಸಲಾಗಿದೆ. ಸದ್ಯ ಸಾನಿಯಾ ಟೋಕಿಯೋ ಒಲಿಂಪಿಕ್ಸ್ನತ್ತ ಮುಖ ಮಾಡಿದ್ದು, ಮಹಿಳಾ ಡಬಲ್ಸ್ ವಿಭಾಗದಲ್ಲಿ ಮೂಗುತಿ ಸುಂದರಿ ಅಂಕಿತಾ ರೈನಾ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
ಏನಿದು ಗೋಲ್ಡನ್ ವೀಸಾ?
2019 ರಿಂದ ವಿದೇಶಿಯರಿಗೆ ಯುಎಇ ಸರ್ಕಾರ 'ಗೋಲ್ಡನ್ ವೀಸಾ'ವನ್ನು ನೀಡುತ್ತಿದೆ. ಇದರಿಂದ ವಿದೇಶಿಯರು ಯುಎಇನಲ್ಲಿ ಯಾವುದೇ ಅನುಮತಿ ಇಲ್ಲದೆ ಹೂಡಿಕೆ ಮಾಡಬಹುದು. ಹಾಗೆಯೇ ವಿದ್ಯಾಭ್ಯಾಸ, ಕೆಲಸ ಹಾಗೂ ಉದ್ಯಮಗಳನ್ನು ನಡೆಸಬಹುದಾಗಿದೆ. ಒಂದಾರ್ಥದಲ್ಲಿ ಹೇಳುವುದಾದರೆ ದ್ವಿತೀಯ ದರ್ಜೆಯ ಪೌರತ್ವ ಎನ್ನಬಹುದು. ಅಂದರೆ ಗೋಲ್ಡನ್ ವೀಸಾ ಹೊಂದಿರುವವರು ಅಲ್ಲಿನ ಪೌರತ್ವ ಇಲ್ಲದೆ ಯುಎಇನಲ್ಲಿ ಶೇ.100 ರಷ್ಟು ಹೂಡಿಕೆ ಮಾಡಬಹುದು. ಅಥವಾ ನಿರ್ದಿಷ್ಟ ಆಸ್ತಿಗಳನ್ನು ಖರೀದಿಸಬಹುದಾಗಿದೆ. 10 ವರ್ಷಗಳಿಗೆ ನೀಡಲಾಗುವ ಈ ವೀಸಾವನ್ನು ಆ ಬಳಿಕ ನವೀಕರಿಸಿಕೊಳ್ಳಬಹುದು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ