Sajan Prakash - ಭಾರತದ ಈಜು ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದ ಸಾಜನ್ ಪ್ರಕಾಶ್

ಸಾಜನ್ ಪ್ರಕಾಶ್

ಸಾಜನ್ ಪ್ರಕಾಶ್

ಆರು ರಾಷ್ಟ್ರೀಯ ದಾಖಲೆಗಳ ಸರದಾರ ಸಾಜನ್ ಪ್ರಕಾಶ್ ಅವರು ಎ ಸ್ಟಾಂಡರ್ಡ್ ಮಟ್ಟ ದಾಟುವ ಮೂಲಕ ಒಲಿಂಪಿಕ್ಸ್​ಗೆ (Tokyo Olympics) ಅರ್ಹತೆ ಗಿಟ್ಟಿಸಿದ ಮೊದಲ ಭಾರತೀಯ ಎನಿಸಿದ್ದಾರೆ.

  • News18
  • 2-MIN READ
  • Last Updated :
  • Share this:

ನವದೆಹಲಿ: ಜಾಗತಿಕ ಈಜು ಕ್ಷೇತ್ರದಲ್ಲಿ ಇನ್ನೂ ಬಾಲ್ಯಾವಸ್ತೆಯಲ್ಲಿರುವ ಭಾರತಕ್ಕೆ ಸಾಜನ್ ಪ್ರಕಾಶ್ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. 200 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆಯಲ್ಲಿ ಕೇರಳದ 27 ವರ್ಷದ ಸಾಜನ್ ಪ್ರಕಾಶ್ ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ. ಆದರೆ, ಬಹಳ ಕಠಿಣ ಎನಿಸಿದ ಎ ಸ್ಟಾಂಡರ್ಡ್ ಟೈಮಿಂಗ್ ಮಟ್ಟವನ್ನು ಅವರು ಮುಟ್ಟಿರುವುದು ಗಮನಾರ್ಹ. ಈಜಿನಲ್ಲಿ ಅಂತರರಾಷ್ಟ್ರೀಯ ಎ ಸ್ಟಾಂಡರ್ಡ್ ಮಟ್ಟ ಮುಟ್ಟಿದ ಮೊದಲ ಭಾರತೀಯ ಈಜುಪಟ ಎಂಬ ಕೀರ್ತಿಗೆ ಸಾಜನ್ ಬಾಜನರಾಗಿದ್ಧಾರೆ. ಇಟಲಿಯ ರೋಮ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವರು 200 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆಯಲ್ಲಿ 1:56:38 ನಿಮಿಷದಲ್ಲಿ ಈಜಿ ಚಿನ್ನದ ಪದ ಪಡೆದಿದ್ದಾರೆ. ಅವರ ಈ ಟೈಮಿಂಗ್ ಒಲಿಂಪಿಕ್​ಗೆ ನಿಗದಿಪಡಿಸಿದ್ದ 1:56:48 ನಿಮಿಷಗಳ ಎ ಸ್ಟಾಂಡರ್ಡ್ ಮಟ್ಟವನ್ನು ತಲುಪಿ ಭಾರತಕ್ಕೆ ಹೊಸ ಮೈಲಿಗಲ್ಲು ನಿರ್ಮಿಸಿದೆ.


ಕೇರಳದ ಇಡುಕ್ಕಿ ಜಿಲ್ಲೆಯವರಾದ ಸಾಜನ್ ಪ್ರಕಾಶ್ ಭಾರತದ ಈಜು ಕ್ಷೇತ್ರದ ಸೂಪರ್ ಸ್ಟಾರ್. ಆರು ರಾಷ್ಟ್ರೀಯ ದಾಖಲೆಗಳು ಇವರ ಹೆಸರಿನಲ್ಲಿದೆ. ಭಾರತದ ಈಜು ಕ್ಷೇತ್ರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದ ಹೆಸರು ಈಗ ಇವರಿಗೆ ಬಂದಿದೆ. ಜಾಗತಿಕ ಈಜಿನಲ್ಲಿ ಭಾರತ ಈಗೀಗ ದಿಟ್ಟ ಹೆಜ್ಜೆಗಳನ್ನ ಇಡುತ್ತಾ ಬಂದಿದೆ. ಎರಡು ದಶಕಗಳಿಗೆ ಮುನ್ನ ಪ್ರಾದೇಶಿಕ ಕೋಟಾ ಮೂಲಕ ಭಾರತೀಯ ಸ್ಪರ್ಧಿಗಳು ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುತ್ತಿದ್ದರು. 2000ರ ನಂತರ ರೇಹಾನ್ ಪೂಂಚ, ಆರೋನ್ ಡಿಸೋಜಾ ಅವರಂತಹ ಈಜುಪಟುಗಳು ಒಲಿಂಪಿಕ್ ಬಿ ಸ್ಟಾಂಡರ್ಡ್ ಮಟ್ಟವನ್ನು ಮುಟ್ಟಿ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದರು. ಈಗ ಸಾಜನ್ ಪ್ರಕಾಶ್ ಎ ಸ್ಟಾಂಡರ್ಡ್ ಮಟ್ಟ ಮುಟ್ಟಿ ಒಲಿಂಪಿಕ್ಸ್​ಗೆ ಕ್ವಾಲಿಫೈ ಆದ ಮೊದಲ ಭಾರತೀಯ ಎನಿಸಿದ್ದಾರೆ. ಈ ಮೂಲಕ ಉದಯೋನ್ಮುಖ ಭಾರತೀಯ ಈಜುಪಟುಗಳಿಗೆ ಪ್ರೇರಣೆಯಾಗಿದ್ದಾರೆ.


ಇಷ್ಟೇ ಅಲ್ಲ, ಸಾಜನ್ ಪ್ರಕಾಶ್ ಸತತ ಎರಡು ಬಾರಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಪಟುವೂ ಹೌದು. ಆದರೆ, ಕಳೆದ ಬಾರಿಯ ಒಲಿಂಪಿಕ್ಸ್​ಗೆ ಅವರು ಬಿ ಸ್ಟಾಂಡರ್ಡ್ ಟೈಮಿಂಗ್ ಮಟ್ಟವನ್ನು ಮುಟ್ಟಿ ಅರ್ಹತೆ ಪಡೆದಿದ್ದರು. ಈ ಬಾರಿ ಅವರು ಎ ಸ್ಟಾಂಡರ್ಡ್ ಮುಟ್ಟಿ ಇತಿಹಾಸ ನಿರ್ಮಿಸಿದ್ದಾರೆ.


ಇದನ್ನೂ ಓದಿ: ಒಲಿಂಪಿಕ್ ಕ್ವಾಲಿಫೈರ್​ನಲ್ಲಿ ಉಜ್ಬೆಕಿಗಳಿಂದ ಭಾರೀ ಗೋಲ್ಮಾಲ್? ಧ್ವನಿ ಎತ್ತಿದ ಭಾರತೀಯ ಸ್ವಿಮ್ಮರ್


ಸಾಜನ್ ಒಲಿಂಪಿಕ್ ಪದಕ ಗೆಲ್ಲುವ ಅವಕಾಶ ಎಷ್ಟು?


ಹೊಸ ಇತಿಹಾಸ ನಿರ್ಮಿಸಿದ ಸಾಜನ್ ಪ್ರಕಾಶ್ ಅವರಿಂದ ಒಲಿಂಪಿಕ್ ಪದಕ ಬರಬಹುದು ಎಂಬ ನಿರೀಕ್ಷೆ ಹಲವರಿಗೆ ಬಂದಿರಬಹುದು. ಆದರೆ, ಈಜಿನಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಕನಸು ನನಸಾಗುವ ಹಾದಿ ಇನ್ನೂ ಬಹಳ ದೂರ ಇದೆ. ರೋಮ್​ನಲ್ಲಿ ಸಾಜನ್ ಪ್ರಕಾಶ್ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ 1:56:38 ನಿಮಿಷದಲ್ಲಿ ಈಜಿದ್ದಾರೆ. ಆದರೆ, ಕಳೆದ ಬಾರಿಯ, ಅಂದರೆ 2016ರ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಹಂಗರಿಯ ಈಜುಪಟುವಿನ ಟೈಮಿಂಗ್ 1:53:62 ನಿಮಿಷ ಇತ್ತು. ಅಂದರೆ ಸಾಜನ್ ಪ್ರಕಾಶ್ ಅವರು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಬೇಕೆಂದರೆ ಕನಿಷ್ಠ 2 ಸೆಕೆಂಡ್​ಗಳಷ್ಟಾದರೂ ಟೈಮಿಂಗ್ ಇಂಪ್ರೂವ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸದ್ಯದ ಮಟ್ಟಕ್ಕೆ ಅಷ್ಟು ಗಮನಾರ್ಹವಾಗಿ ಟೈಮಿಂಗ್ ಉತ್ತಮಪಡಿಸಲು ತೀರಾ ಕಷ್ಟಸಾಧ್ಯ. ಭಾರತದ ಈಜು ಕ್ಷೇತ್ರವನ್ನು ಬಲ್ಲವರಾರೂ ಈಗಲೇ ಒಲಿಂಪಿಕ್ ಪದಕ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ, ಅವರು 200 ಮೀಟರ್ ಬಟರ್ ಫ್ಲೈ ಇವೆಂಟ್​ನಲ್ಲಿ ಫೈನಲ್ ತಲುಪುವ ಅವಕಾಶವನ್ನಂತೂ ಹೊಂದಿದ್ದಾರೆ.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

top videos
    First published: