ಏಷ್ಯನ್ ಗೇಮ್ಸ್: ಸೈನಾಗೆ ಕಂಚು; ಸಿಂಧುಗೆ ಕನಿಷ್ಠ ಬೆಳ್ಳಿ


Updated:August 27, 2018, 1:26 PM IST
ಏಷ್ಯನ್ ಗೇಮ್ಸ್: ಸೈನಾಗೆ ಕಂಚು; ಸಿಂಧುಗೆ ಕನಿಷ್ಠ ಬೆಳ್ಳಿ
ಪಿವಿ ಸಿಂಧು

Updated: August 27, 2018, 1:26 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 27): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಭಾರತಕ್ಕೆ ಪದಕ ಪ್ರಾಪ್ತವಾಗಿದೆ. ಸೈನಾ ನೆಹ್ವಾಲ್ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಪಿ.ವಿ. ಸಿಂಧು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫೈನಲ್ ತಲುಪಿದ್ಧಾರೆ. ಏಷ್ಯಾಡ್ ಬ್ಯಾಡ್ಮಿಂಟನ್​ನಲ್ಲಿ ಕಳೆದ 36 ವರ್ಷಗಳಲ್ಲಿ ಕಂಚು ಪಡೆದ ಮೊದಲ ವ್ಯಕ್ತಿ ಸೈನಾ ನೆಹ್ವಾಲ್ ಆಗಿದ್ದಾರೆ. ಹಾಗೆಯೇ, ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನ ಪಿ.ವಿ. ಸಿಂಧು ಬರೆದಿದ್ದಾರೆ.

ಇಂದು ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ ಪಿ.ವಿ. ಸಿಂಧು ಅವರು ಜಪಾನ್​ನ ಅಕಾನೆ ಯಮಗುಚಿ ಅವರನ್ನು 21-17, 15-21, 21-10ರಿಂದ ಸೋಲಿಸಿದರು. ಪಂದ್ಯದ ಬಹುತೇಕ ಅವಧಿಯಲ್ಲಿ ಸಿಂಧು ಅವರೇ ಪ್ರಾಬಲ್ಯ ಮೆರೆದರು. ಮೊದಲ ಗೇಮ್​ನ್ನು ಸಿಂಧು ಸುಲಭವಾಗಿಯೇ ಜಯಿಸಿದರು. ಎರಡನೇ ಗೇಮ್​ನಲ್ಲೂ ಸಿಂಧು ಅವರೇ ಹಿಡಿತ ಸಾಧಿಸಿ 7-4 ಮುನ್ನಡೆ ಗಳಿಸಿದರು. ಆ ನಂತರ ಸಿಂಧು ಸ್ವಲ್ಪ ಏಕಾಗ್ರತೆ ಕಳೆದುಕೊಳ್ಳುತ್ತಿರುವಂತೆಯೇ ಜಪಾನೀ ಆಟಗಾರ್ತಿ ಕಂಬ್ಯಾಕ್ ಮಾಡಿ ಗೇಮ್ ಜಯಿಸಿದರು. ಆದರೆ ಮೂರನೇ ಗೇಮ್​ನಷ್ಟರಲ್ಲಿ ಯಮಗುಚಿ ಬಳಲಿಹೋಗಿದ್ದರು. ಸಿಂಧು ನಿರ್ದಾಕ್ಷಿಣ್ಯವಾಗಿ ಆಡಿ ನಿರೀಕ್ಷೆ ಮೀರಿ ಆ ಗೇಮ್ ಮತ್ತು ಪಂದ್ಯವನ್ನು ಗೆದ್ದು ಫೈನಲ್ ತಲುಪಿದರು.

ಇದಕ್ಕೆ ಮುನ್ನ ನಡೆದ ಎರಡನೇ ಸೆಮಿಫೈನಲ್​ನಲ್ಲಿ ಸೈನಾ ನೆಹ್ವಾಲ್ ಅವರು ಸೋಲಪ್ಪಿಕೊಂಡು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಚೈನೀ ಥೈಪೆ ದೇಶದ ವಿಶ್ವದ ನಂಬರ್ ಒನ್ ಆಟಗಾರ್ತಿ ಟಾಯ್ ಜು ಯಿಂಗ್ ಅವರು ಸೈನಾ ಅವರನ್ನ 21-17, 21-14ರಿಂದ ಸೋಲಿಸಿದರು. ಸೈನಾ ಎಷ್ಟೇ ಪ್ರಯತ್ನಿಸಿದರೂ ಥೈಪೇ ಆಟಗಾರ್ತಿ ಅವರ ಮೇಲೆ ಮೈಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಆಟದ ಎಲ್ಲಾ ವಿಭಾಗದಲ್ಲೂ ಟಾಯ್ ಸು ಯಿಂಗ್ ಅವರು ಸೈನಾಗಿಂತ ಪ್ರಬಲವಾಗಿದ್ದರು. ಎರಡನೇ ಗೇಮ್​ನಲ್ಲಿ ಸಮಬಲ ಸಾಧಿಸಿದ ಸೈನಾ ನೆಹ್ವಾಲ್ ಕಂಬ್ಯಾಕ್ ಮಾಡುವ ಸೂಚನೆ ನೀಡಿದರಾದರೂ ಚೀನೀ ಥೈಪೆ ಆಟಗಾರ್ತಿ ಕೂಡಲೇ ಚೇತರಿಸಿಕೊಂಡು ನೇರ ಗೇಮ್​ಗಳಿಂದ ಪಂದ್ಯವನ್ನ ಗೆದ್ದರು.

ಇದೀಗ ಪಿ.ವಿ. ಸಿಂಧು ಮತ್ತು ಟಾಯ್ ಸು ಯಿಂಗ್ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಭಾರತೀಯ ಆಟಗಾರ್ತಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ. ಕಳೆದ ಬಾರಿಯ ಒಲಿಂಪಿಕ್ಸ್​ನಲ್ಲಿ ಕರೋಲಿನಾ ಮರಿನ್ ಎದುರು ಸೋಲುಂಡು ಸಿಂಧು ಅವರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶ ಕೈತಪ್ಪಿಹೋಗಿತ್ತು. ಈಗ ಏಷ್ಯನ್ ಗೇಮ್ಸ್​ನಲ್ಲಿ ಸಿಂಧು ಚಿನ್ನ ಗೆಲ್ಲುವ ಹಾದಿಯಲ್ಲಿ ಟಾಯ್ ಅವರು ಕೊನೆಯ ತಡೆಗೋಡೆಯಾಗಿದ್ದಾರೆ. ಸಿಂಧು ಈ ಪಂದ್ಯದಲ್ಲಿ ವಿಜಯಶಾಲಿಯಾಗುವ ಸಾಮರ್ಥ್ಯ ಹೊಂದಿದ್ದಾರೆ.

ಭಾರತದ ಈವರೆಗೂ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ 7 ಕಂಚಿನ ಪದಕಗಳನ್ನ ಗೆದ್ದಿದೆ. ಚಿನ್ನ ಮತ್ತು ಬೆಳ್ಳಿ ಎರಡನ್ನೂ ದಕ್ಕಿಸಿಕೊಳ್ಳಲು ಭಾರತೀಯರಿಗೆ ಸಾಧ್ಯವಾಗಿರಲಿಲ್ಲ. ಈಗ ಪಿ.ವಿ. ಸಿಂಧು ಅವರ ಮೇಲೆ ಇಡೀ ಭಾರತೀಯ ಕ್ರೀಡಾಪ್ರೇಮಿಗಳ ನಿರೀಕ್ಷೆ ನೆಟ್ಟಿದೆ.
First published:August 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ