China Winter Olympics: ಸರಿಯಾದ ಊಟ ಕೊಡ್ತಿಲ್ಲ, ಮೂಳೆ ಎಲ್ಲ ಸವೆದು ಹೋಗ್ತಿದೆ.. ರಷ್ಯಾ ಆಟಗಾರ್ತಿಯಿಂದ ಒಲಂಪಿಕ್ಸ್ ವಿರುದ್ಧ ಆರೋಪ!

ಚೀನಾವು ಈ ಪಂದ್ಯಾವಳಿಗಳಲ್ಲಿ ಭಾಗಿಯಾಗಿರುವ ಕೋವಿಡ್ ಧನಾತ್ಮಕತೆ ಹೊಂದಿರುವ ಅಥ್ಲೀಟ್‌(Athletics)ಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹೊರ ಬಿದ್ದಿದೆ.

ರಷ್ಯಾ ಆಟಗಾರ್ತಿ ಪೋಸ್ಟ್​ ಮಾಡಿರುವ ಫೋಟೋ

ರಷ್ಯಾ ಆಟಗಾರ್ತಿ ಪೋಸ್ಟ್​ ಮಾಡಿರುವ ಫೋಟೋ

  • Share this:
ಇತ್ತೀಚಿನ ಕೆಲ ವರ್ಷಗಳಲ್ಲಿ ಚೀನಾ(China) ಜಗತ್ತಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಬಹಳಷ್ಟು ರಾಷ್ಟ್ರಗಳು ಚೀನಾದಿಂದ ಒಂದಿಲ್ಲ ಒಂದು ರೀತಿಯಲ್ಲಿ ಕಿರಿಕಿರಿ ಅನುಭವಿಸುತ್ತಲೇ ಇವೆ. ಈ ನಡುವೆ ಚೀನಾ ದೇಶವು ವಿಂಟರ್ ಒಲಿಂಪಿಕ್ಸ್(Winter Olympics) ಆಟಗಳಿಗೆ ತಾನು ಸಾರಥ್ಯವಹಿಸಲು ಸಜ್ಜಾದಾಗ ಅದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಕೋವಿಡ್(Covid) ಕಾಲದ ಈ ಸಂದರ್ಭದಲ್ಲಿ ಚೀನಾ ಒಲಿಂಪಿಕ್ಸ್ ಪಂದ್ಯಾವಳಿಗಳನ್ನು ನಡೆಸಲು ಮುಂದೆ ಬಂದಿದ್ದಕ್ಕೆ ಜಗತ್ತಿನ ಹಲವು ಇತರೆ ರಾಷ್ಟ್ರಗಳಿಂದ ವಿರೋಧ ಎದುರುಸಿತ್ತಾದರೂ ಅದಕ್ಕೆ ಕ್ಯಾರೆ ನೀಡದೆ ಈಗ ಚೀನಾ ದೇಶದಲ್ಲಿ ಒಲಿಂಪಿಕ್ಸ್‌ ಪಂದ್ಯಾವಳಿ ನಡೆಯುತ್ತಿದೆ. ಈ ಮಧ್ಯೆ ಚೀನಾವು ಈ ಪಂದ್ಯಾವಳಿಗಳಲ್ಲಿ ಭಾಗಿಯಾಗಿರುವ ಕೋವಿಡ್ ಧನಾತ್ಮಕತೆ ಹೊಂದಿರುವ ಅಥ್ಲೀಟ್‌(Athletics)ಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹೊರ ಬಿದ್ದಿದೆ.

ಆಟಗಾರರಿಗೆ ಸರಿಯಾದ ಊಟ ನೀಡದ ಆರೋಪ!

ರಷ್ಯಾ ದೇಶದ ಅಥ್ಲೀಟ್‌ ಒಬ್ಬರು, ಸದ್ಯ ಚೀನಾದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾಗವಹಿಸಿರುವ ಆಟಗಾರರಿಗೆ ಸಾಕಷ್ಟು ಪ್ರಮಾಣದ ಹಾಗೂ ಸೇವಿಸಲು ಯೋಗ್ಯವಾದಂತಹ ಆಹಾರ ನೀಡಲಾಗುತ್ತಿಲ್ಲ ಎಂಬ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ಮೂಲಕ ಹೊರ ಹಾಕಿದ್ದು ಈಗ ಎಲ್ಲರ ಕಿವಿ ಚುರುಕಾಗುವಂತೆ ಮಾಡಿದೆ. ಇಷ್ಟಲ್ಲದೆ ಕೋವಿಡ್‌ನಿಂದಾಗಿ ಕ್ವಾರಂಟೈನ್ ಆಗಿರುವ ಆಟಗಾರರು ನಿತ್ಯ ತರಬೇತಿ ಪಡೆಯಲು ಬೇಕಾದ ಪರಿಕರಗಳಿಲ್ಲ, ಅವರನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿರುವ ಬಗ್ಗೆಯೂ ವರದಿಯಾಗುತ್ತಿದೆ.

ಊಟದ  ಬಗ್ಗೆ ರಷ್ಯಾ ಮೂಲದ ಆಟಗಾರ್ತಿಯಿಂದ ಆರೋಪ

ರಷ್ಯಾ ಮೂಲದ ಬಯಥ್ಲಾನ್ ಆಟಗಾರರಾದ ವ್ಯಾಲೆರಿಯಾ ವಸ್ನೆತ್ಸೋವಾ ಎಂಬುವವರು ಕೋವಿಡ್ ಸೋಂಕಿಗೆ ತುತ್ತಾಗಿದ್ದು ಸದ್ಯ ಬೀಜಿಂಗ್‌ನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದ್ದಾರೆ. ಕಳೆದ ಐದು ದಿನಗಳಿಂದ ಅವರಿಗೆ ಸರ್ವ್ ಮಾಡಲಾಗುತ್ತಿರುವ ಊಟದ ಬಗ್ಗೆ ಅವರು ಖೇದ ವ್ಯಕ್ತಪಡಿಸುತ್ತ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯ ಮೂಲಕ ತಾವು ಪಡುತ್ತಿರುವ ಗೋಳಿನ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: KKR ಪರ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡ ಶಾರುಖ್, ಜೂಹಿ ಚಾವ್ಲಾ ಮಕ್ಕಳು

ಮೂರು ಹೊತ್ತಿಗೂ ಒಂದೇ ರೀತಿಯ ಊಟವಂತೆ!

ಅವರು ಹಂಚಿಕೊಂಡಿರುವ ಚಿತ್ರದ ಪ್ರಕಾರ, ಅವರಿಗೆ ನಿತ್ಯವು ಪ್ಲೈನ್ ಪಾಸ್ತಾ, ಸ್ವಲ್ಪ ಆಲೂಗೆಡ್ಡೆ, ಸುಟ್ಟ ಮಾಂಸ ಹಾಗೂ ಆರೆಂಜ್ ಸಾಸ್ ಅನ್ನು ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ನೀಡಲಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ರೀತಿಯ ಊಟ ಕಳೆದ ಐದು ದಿನಗಳಿಂದ ಅವರಿಗೆ ನೀಡಲಾಗುತ್ತಿದ್ದು ಇದರಿಂದಾಗಿ ಅವರ ಆರೋಗ್ಯದ ಹದಗೆಡುತ್ತಿದ್ದು ಮೂಳೆಗಳು ಅಂಟಿಕೊಂಡಂತಾಗುತ್ತಿವೆ. ಪ್ರತಿದಿನ ಗೋಳಾಡುತ್ತಿರುವುದಾಗಿ ಅವರು ನೋವು ತೋಡಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿನ ಅಳಲು ತೋಡಿಕೊಂಡ ಆಟಗಾರ!

ತಾವು ನಿತ್ಯ ಪಡುತ್ತಿರುವ ಸಂಕಟದ ಬಗ್ಗೆ ಅವರು ಹೀಗೆ ಪ್ರತಿಕ್ರಯಿಸಿದ್ದಾರೆ, "ನನಗೆ ಹೊಟ್ಟೆಯಲ್ಲಿ ನೋವಾಗುತ್ತದೆ, ನಾನು ಈಗಾಗಲೇ ಸೊರಗಿದ್ದು ನನ್ನ ಕಣ್ಣಿನ ಸುತ್ತಲೂ ಬ್ಲ್ಯಾಕ್ ಸರ್ಕಲ್ ಕಾಣಿಸಿಕೊಳ್ಳುತ್ತಿವೆ. ಇದೆಲ್ಲವೂ ಬೇಗನೆ ಮುಗಿಯುವಂತೆ ನಾನು ಬಯಸುತ್ತಿದ್ದೇನೆ. ನನಗೆ ತುಂಬ ದಣಿವಾಗಿದೆ. ನಾನು ನಿತ್ಯ ಅಳುತ್ತಿರುವೆ" ಎಂದು ತಮ್ಮ ವ್ಯಥೆಯನ್ನು ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕೋಟ್ಯಾಧಿಪತಿಯಾದ ಇಶಾನ್​​.. ಬರೋಬ್ಬರಿ 15.25 ಕೋಟಿಗೆ ಕಿಶನ್​ ಮುಂಬೈ ಪಾಲು!

 ಕೋವಿಡ್ ಪಾಸಿಟಿವ್ ಅಥ್ಲೀಟ್‌ಗಳು ಹಸಿವಿನಿಂದ ಬಳಲುತ್ತಿದ್ದಾರೆಯೇ?

ವಾಸ್ನೆತ್ಸೋವಾ ಅವರು ತಮ್ಮ ಪೋಸ್ಟ್‌ ಮೂಲಕ ಹೇಳಿರುವ ಈ ವಿಚಾರವು ಸಾಕಷ್ಟು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಅವರು ಮಾಡಿದ ಕ್ಲೈಮ್ ಪ್ರಕಾರ, ಬೀಜಿಂಗ್‌ನ ಕ್ವಾರಂಟೈನ್ ಹೋಟೆಲ್‌ಗಳಲ್ಲಿ ಇರುವ ಸಾಮಾನ್ಯ ಆಟಕ್ಕೆ ಸಂಬಂಧಿಸಿದ ಸಿಬ್ಬಂದಿಗಳಿಗೆ ಹೋಲಿಸಿದರೆ COVID-19 ಸೋಂಕು ದೃಢಪಟ್ಟ ಕ್ರೀಡಾಪಟುಗಳಿಗೆ ಕಡಿಮೆ ಮತ್ತು ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆಯಂತೆ. ವಾಸ್ನೆತ್ಸೋವಾ ಅವರು ತಮಗೆ ನೀಡಿದ್ದ ಊಟದ ಬಾಕ್ಸ್ ಅನ್ನು ತಮ್ಮ ಕೊಣೆಯ ಬಾಗಿಲಿನಾಚೆಯಿಂದ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಇತರೆ ಸಿಬ್ಬಂದಿಗಳ ಬಾಗಿಲುಗಳ ಮುಂದೆ ವಿಭಿನ್ನವಾದ ಊಟದ ಬಾಕ್ಸ್ ಇಡಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
Published by:Vasudeva M
First published: