ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ (Border–Gavaskar Trophy) ಸರಣಿಯ ಮೂರನೇ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತ ತಂಡ ಸೋಲನ್ನಪ್ಪಿದೆ. ಎರಡು ಪಂದ್ಯಗಳನ್ನು ಲೀಲಾಜಾಲವಾಗಿ ಗೆದ್ದಿರುವ ಭಾರತ ಮೂರನೇ ಪಂದ್ಯದಲ್ಲಿ ಎಡವಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯುತ್ತಿತ್ತು. ಆದರೆ ಇದೀಗ ಭಾರತಕ್ಕೆ ಈ ಹಾದಿ ಕಷ್ಟಕರವಾಗಿದ್ದು, ಮುಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ರಾಹುಲ್‌ಗೆ ಶಾಕ್ ನೀಡಿದ ಬಿಸಿಸಿಐ:
ಮೂರನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್‌ಗೆ ಬಿಸಿಸಿಐ ದೊಡ್ಡ ಆಘಾತ ನೀಡಿದ್ದು, ಮೊದಲಿಗೆ ವೈಸ್ ಕ್ಯಾಪ್ಟೆನ್ಸಿಯಿಂದ ತೆಗೆದು ಹಾಕಿತ್ತು. ಆದಾದ ನಂತರ ಇದನ್ನು ತಂಡದಿಂದ ರಾಹುಲ್ ಅವರನ್ನು ತೆಗೆದುಹಾಕುವ ಮುನ್ಸೂಚನೆ ಅಂತಾನೂ ಹಲವರು ಭಾವಿಸಿದ್ದರು. ಈಗ ಆ ಊಹೆ ಕೂಡ ನಿಜವಾಗಿದ್ದು ಭಾರತ ತಂಡ ರಾಹುಲ್ ಅವರನ್ನು ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಟ್ಟಿತ್ತು.
ಕೊನೆಗೂ ಮೌನ ಮುರಿದ ರೋಹಿತ್:
ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅವರ ಉಪನಾಯಕತ್ವವನ್ನು ತೆಗೆದುಹಾಕಿರುವುದರ ಬಗ್ಗೆ ಮೊದಲ ಬಾರಿಗೆ ಭಾರತದ ನಾಯಕ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: WTC 2023 ಫೈನಲ್‌ಗೆ ಆಸೀಸ್ ಎಂಟ್ರಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದ ಟೀಂ ಇಂಡಿಯಾ ಔಟ್?
ರೋಹಿತ್ ಶರ್ಮಾ ಹೇಳಿದ್ದೇನು?:
ಕೆಲ ದಿನಗಳ ಹಿಂದೆ ಕೆಎಲ್ ರಾಹುಲ್‌ರನ್ನು ಉಪನಾಯಕನ ಸ್ಥಾನದಿಂದ ವಜಾ ಮಾಡಿದ್ದರ ಬಗ್ಗೆ ನಾಯಕ ರೋಹಿತ್ ಶರ್ಮಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಕೆಎಲ್ ರಾಹುಲ್‌ರನ್ನು ಉಪನಾಯಕನ ಸ್ಥಾನದಿಂದ ತೆಗೆದುಹಾಕಿರುವುದು ಯಾವುದೇ ಗಮನಾರ್ಹ ಅರ್ಥವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ನಂತರವೂ ನಾನು ಹೇಳಿದ್ದೆ. ಕಠಿಣ ಸಮಯವನ್ನು ಎದುರಿಸುತ್ತಿರುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಾಕಷ್ಟು ಸಮಯ ನೀಡಲಾಗುತ್ತದೆ. ಉಪನಾಯಕಾನಾಗುವುದು ಅಥವಾ ಉಪನಾಯಕನಾಗದಿರುವುದು ಯಾವುದರ ಮುನ್ಸೂಚನೆಯೂ ಅಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಬಳಿಕವೂ ನಾನು ಈ ಬಗ್ಗೆ ಮಾತನಾಡಿದ್ದೆ. ಆಟಗಾರರ ಸಾಮರ್ಥ್ಯ ಹಾಗೂ ಪ್ರತಿಭೆಯ ಆಧಾರದ ಮೇಲೆ ಅಂತಹ ಆಟಗಾರರನ್ನು ಕಠಿಣ ಸನ್ನಿವೇಶಗಳಲ್ಲಿ ಬೆಂಬಲಿಸುತ್ತೇವೆ. ಆ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ನಾವು ಅವಕಾಶ ಮತ್ತು ಸಮಯವನ್ನು ನೀಡುತ್ತೇವೆ, ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಎಲ್ಲರಿಗೂ ಅವಕಾಶ ಸಿಗಬೇಕು:
ತಂಡದಲ್ಲಿರುವ ಎಲ್ಲಾ 17 ಆಟಗಾರರಿಗೆ ಅವಕಾಶವಿದೆ. ಟೀಂ ಇಂಡಿಯಾ ತಂಡವು ಪ್ರತಿಭಾವಂತ ಆಟಗಾರರಿಗೆ ಬೆಂಬಲ ನೀಡುತ್ತದೆ. ಉಪನಾಯಕತ್ವವನ್ನು ಕಿತ್ತೊಗೆಯುವುದು ದೊಡ್ಡ ವಿಷಯವಲ್ಲ. ಆ ಸಮಯದಲ್ಲಿ ಹೆಚ್ಚು ಅನುಭವಿ ಆಟಗಾರರು ಇಲ್ಲದ ಕಾರಣ ಅವರನ್ನು ಉಪನಾಯಕರನ್ನಾಗಿ ಮಾಡಲಾಯಿತು. ಇದು ದೊಡ್ಡ ವಿಷಯವಲ್ಲ ಎಂದು ರೋಹಿತ್ ಟೀಂ ಇಂಡಿಯಾದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಯಾರೆಲ್ಲಾ ಆಡುತ್ತಾರೆ, ಅವರ ಬಗ್ಗೆ ಟಾಸ್ ವೇಳೆ ಮಾಹಿತಿ ನೀಡುತ್ತೇನೆ ಅಂತಾನೂ ಅವರು ಕೆಲ ದಿನಗಳ ಹಿಂದ ಹೇಳಿದ್ದರು. ಗಾಯಗಳನ್ನು ಹಾಗು ಈಗಷ್ಟೇ ಮದುವೆಯಾದ ಶಾರ್ದುಲ್ ಠಾಕೂರ್‌ನನ್ನು ಗಮನದಲ್ಲಿಟ್ಟುಕೊಂಡು ಮೂರನೇ ಪಂದ್ಯಕ್ಕೆ ಆಟಗಾರರನ್ನು ಆಯ್ಕೆ ಮಾಡುವುದಾಗಿ ರೋಹಿತ್ ಶರ್ಮಾ ಹೇಳಿದ್ದರು.
ರಾಹುಲ್ ತಂಡದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಅಸಮರ್ಥರಾಗಿದ್ದು, ಅವರು ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 38 ರನ್ ಗಳಿಸಿದ್ದಾರೆ. ಇತ್ತ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಒಳ್ಳೆಯ ಫಾರ್ಮ್‌ನಲ್ಲಿದ್ದು, ಅವರು ಸೀಮಿತ ಓವರ್‌ಗಳ ಸರಣಿಯಲ್ಲಿ ಒಂದು ದ್ವಿಶತಕ ಸೇರಿದಂತೆ ಹಲವು ಶತಕಗಳನ್ನು ಸಿಡಿಸಿದ್ದಾರೆ. ಹೀಗಾಗಿ ಇದು ರಾಹುಲ್ ಪಂದ್ಯದಿಂದ ಹೊರಗುಳಿಯಲು ನೇರ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ