ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಅವರ ಮೊಣಕಾಲು ಮತ್ತು ಪಾದದ MRI ಸ್ಕ್ಯಾನ್ ಇಂದು ನಡೆಯಲಿದೆ. ನಿನ್ನೆ ಮೊಣಕಾಲು ಮತ್ತು ಪಾದ ಅತಿಯಾದ ಊತ ಮತ್ತು ನೋವಿನಿಂದ ಕೂಡಿದ್ದರಿಂದ MRI ಸ್ಕ್ಯಾನ್ ಮಾಡಿರಲಿಲ್ಲ. ಡಿಸೆಂಬರ್ 30ರಂದು ಬೆಳಿಗ್ಗೆ ರೂರ್ಕಿಯ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಪಂತ್ ಅವರ ಕಾರು ಅಪಘಾತಕ್ಕೀಡಾಯಿತು. ಆತ ತನ್ನ ತಾಯಿಯನ್ನು ಭೇಟಿಯಾಗಲು ದೆಹಲಿಯಿಂದ ತನ್ನ ಹುಟ್ಟೂರಾದ ರೂರ್ಕಿಗೆ ಹೋಗುತ್ತಿದ್ದರು. ಆದರೆ ಪಂತ್ ನಿದ್ರಿಸಿದ ಕಾರಣ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ಗೆ ಡಿಕ್ಕಿ ಹೊಡೆದ ನಂತರ ಅವರ ಕಾರು ಪಲ್ಟಿಯಾಗಿದೆ. ಅಪಘಾತವಾದ ಕೆಲವೇ ನಿಮಿಷಗಳಲ್ಲಿ ಕಾರಿಗೆ (Car) ಬೆಂಕಿ ಹೊತ್ತಿಕೊಂಡಿದೆ. ಹರಿಯಾಣ (Haryana) ರೋಡ್ವೇಸ್ನ ಬಸ್ ಚಾಲಕ ಮತ್ತು ಕಂಡಕ್ಟರ್ ರಿಷಬ್ ಪಂತ್ ಅವರನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಅದು ಅವರ ಜೀವಕ್ಕೆ ಯಾವುದೇ ಅಪಾಯವನ್ನುಂಟು ಮಾಡಲಿಲ್ಲ. ಇಲ್ಲದಿದ್ದರೆ, ಅಪಘಾತವು ತುಂಬಾ ಭಯಾನಕವಾಗಿರುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇಂದೇ ಪಂತ್ ಕ್ರಿಕೆಟ್ ವೃತ್ತಿಜೀವನ ನಿರ್ಧಾರ?:
ಇನ್ನು, ಅಪಘಾತದಿಂದ ಆಸ್ಪತ್ರೆ ಸೇರಿರುವ ಪಂತ್ ಅವರ ಮೆದುಳು ಮತ್ತು ಬೆನ್ನಿನ ಮೂಳೆಯ ಸ್ಕ್ಯಾನ್ ಅನ್ನು ನಿನ್ನೆ ರಾತ್ರಿ ಮಾಡಲಾಗಿದ್ದು, ವರದಿಯಲ್ಲಿ ಎಲ್ಲವೂ ಸರಿಯಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ತಿಳಿದುಬಂದಿದೆ. ಆದರೆ ನಿನ್ನೆ ಪಂತ್ ಮೊಣಕಾಲು ಹಾಗೂ ಪಾದದ ಸ್ಕ್ಯಾನ್ ಮಾಡಲಾಗದ ಕಾರಣ ಅದನ್ನು ಇಂದು ನಡೆಸುವ ಸಾಧ್ಯತೆ ಇದೆ. ಈ ಪರೀಕ್ಷೆಯಲ್ಲಿ ಏನಾದರೂ ತೊಂದರೆ ಹೆಚ್ಚಿನದಾಗಿ ಕಾಣಿಸಿಕೊಂಡಲ್ಲಿ ಪಂತ್ ಕ್ರಿಕೆಟ್ ವೃತ್ತಿ ಜೀವನದ ಮೇಲೆ ಕಷ್ಟ ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಅವರ ಅಭಿಮಾನಿಗಳು ಪಂತ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಪಂತ್ ತಾಯಿಗೆ ಧೈರ್ಯ ತುಂಬಿದ ಮೋದಿ:
ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಿಷಬ್ ಪಂತ್ ಅವರ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕ್ರಿಕೆಟಿಗನ ಆರೋಗ್ಯವನ್ನು ವಿಚಾರಿಸಿದ್ದಾರೆ. ಈಗ ಅವರು ಮೊದಲಿಗಿಂತ ಉತ್ತಮವಾಗಿದ್ದಾರೆ. ಪಂತ್ ಅವರ ಮೆದುಳು ಮತ್ತು ಬೆನ್ನುಮೂಳೆಯ ಎಂಆರ್ಐ ಸ್ಕ್ಯಾನ್ ವರದಿ ಸಾಮಾನ್ಯವಾಗಿದೆ ಎಂದು ಮ್ಯಾಕ್ಸ್ ಆಸ್ಪತ್ರೆ ವೈದ್ಯಕೀಯ ಬುಲೆಟಿನ್ನಲ್ಲಿ ತಿಳಿಸಿದೆ. ಅವರ ಹಣೆ ಮತ್ತು ಮುಖದ ಮೇಲೆ ಕೆಲವು ಗಾಯಗಳಾಗಿವೆ. ಮುಖದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Rishabh Pant: ಮುಂಬೈಗೆ ಶಿಫ್ಟ್ ಆಗ್ತಾರಾ ರಿಷಭ್ ಪಂತ್? ಹೆಚ್ಚಿನ ಚಿಕಿತ್ಸೆಗೆ ಮುಂದಾದ BCCI
ಸದ್ಯಕ್ಕೆ ಅವರನ್ನು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉತ್ತರಾಖಂಡದಲ್ಲಿ ತಮ್ಮ ಚಿತ್ರದ ಚಿತ್ರೀಕರಣದಲ್ಲಿದ್ದ ನಟರಾದ ಅನುಪಮ್ ಖೇರ್ ಮತ್ತು ಅನಿಲ್ ಕಪೂರ್ ಇಂದು ಆಸ್ಪತ್ರೆಗೆ ರಿಷಬ್ ಪಂತ್ ಅವರನ್ನು ಭೇಟಿ ಮಾಡಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂತ್ ಗಾಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಅಗತ್ಯವಿದ್ದರೆ, ಉತ್ತಮ ಚಿಕಿತ್ಸೆಗಾಗಿ ಪಂತ್ ಅವರನ್ನು ಮುಂಬೈ ಅಥವಾ ವಿದೇಶಕ್ಕೆ ಕಳುಹಿಸಬಹುದು.
ಪಂತ್ ಮೇಲೆ ಹೆಚ್ಚಿನ ನಿಗಾ ಇಟ್ಟಿರುವ ಬಿಸಿಸಿಐ:
ಬಿಸಿಸಿಐ ನಿನ್ನೆ ರಿಷಭ್ ಪಂತ್ ಅವರ ಗಾಯದ ಬಗ್ಗೆ ಅಪ್ಡೇಟ್ ನೀಡಿದ್ದು, ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಗಾಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. ಕ್ರಿಕೆಟಿಗನ ಬಲ ಮಣಿಕಟ್ಟು, ಪಾದದ ಬೆರಳಿಗೆ ಗಾಯಗಳಾಗಿವೆ. ಅಸ್ಥಿರಜ್ಜು ಗಾಯವು ಕ್ರೀಡಾಪಟುವಿಗೆ ತುಂಬಾ ಅಪಾಯಕಾರಿ. ಹೀಗಾಗಿ ಬಿಸಿಸಿಐನ ವೈದ್ಯಕೀಯ ತಂಡ ಪಂತ್ಗೆ ಚಿಕಿತ್ಸೆ ನೀಡಲಿದೆ. ಬಿಸಿಸಿಐ ವೈದ್ಯರು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ.
ರಿಷಭ್ ಅವರ ಅಸ್ಥಿರಜ್ಜು ಗಾಯಕ್ಕೆ ಚಿಕಿತ್ಸೆ ನೀಡುವ ಸಂಪೂರ್ಣ ಜವಾಬ್ದಾರಿ ಅವರ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಮ್ಯಾಕ್ಸ್ ಆಸ್ಪತ್ರೆಗೆ ತಿಳಿಸಿದೆ. ಕೆಲವು ದಿನಗಳ ನಂತರ, ಅವರು ಮ್ಯಾಕ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ಇದರ ನಂತರ, ಮುಂಬೈನಲ್ಲಿರುವ ಬಿಸಿಸಿಐ ವೈದ್ಯರು ಪಂತ್ ಅವರ ಮೊಣಕಾಲಿನ ಸ್ಥಿತಿಯನ್ನು ಪರೀಕ್ಷಿಸುತ್ತಾರೆ. ಇದಾದ ನಂತರ ಅವರನ್ನು ವಿದೇಶಕ್ಕೆ ಕಳುಹಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ