ಕೆಲವೊಮ್ಮೆ ಈ ಕ್ರಿಕೆಟ್‌ನಲ್ಲಿ (Cricket) ಆಟಗಾರರು ಪಂದ್ಯದಿಂದ ಪಂದ್ಯಕ್ಕೆ ಶತಕ, ಅರ್ಧಶತಕ ಬಾರಿಸುತ್ತಾ ಮತ್ತು ವಿಕೆಟ್ ಗಳನ್ನು (Vicket) ಕಬಳಿಸುತ್ತಾ ಎದುರಾಳಿ ತಂಡದಲ್ಲಿರುವ ಬ್ಯಾಟರ್ ಗಳನ್ನು ಹೆಚ್ಚು ರನ್ ಹೊಡೆಯದಂತೆ ಕಟ್ಟಿಹಾಕುವುದನ್ನು ನಾವು ನೋಡಿರುತ್ತೇವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಎಷ್ಟೇ ಕಷ್ಟಪಟ್ಟು ತಾಳ್ಮೆಯಿಂದ ಆಟವಾಡಿದರೂ ಸಹ ಬ್ಯಾಟ್ (Bat) ನಿಂದ ದೊಡ್ಡ ಮೊತ್ತದ ಸ್ಕೋರ್ ಬರುವುದೇ ಇಲ್ಲ, ಇದಕ್ಕೆ ಕಳಪೆ ಫಾರ್ಮ್ ಅಂತ ಹೇಳೋದು. ಇದೇ ಪರಿಸ್ಥಿತಿಯಲ್ಲಿದ್ದಾರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ.
ವಿರಾಟ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಬಾರಿಸದೇ ನಾಲ್ಕು ವರ್ಷ ಆಯ್ತು
ಹೌದು ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಗಳಿಸಿದ್ದು 2019 ರ ನವೆಂಬರ್ ನಲ್ಲಿ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಆಡಿದ ಟೆಸ್ಟ್ ಪಂದ್ಯದಲ್ಲಿ.
ಭಾರತದ ಮಾಜಿ ನಾಯಕ ಕಳೆದ ವರ್ಷ ಏಷ್ಯಾ ಕಪ್ ಮುಖಾಮುಖಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ ಮೊದಲ ಟ್ವೆಂಟಿ20 ಶತಕವನ್ನು ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಶತಕದ ಬರಕ್ಕೆ ಮುಕ್ತಾಯ ಹೇಳಿದರು. ನಂತರ ಅವರು ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಗಳಲ್ಲಿಯೂ ಸಹ ಮೂರು ಶತಕಗಳನ್ನು ಗಳಿಸಿದರು.
ಇದನ್ನೂ ಓದಿ: ICC ODI World Cup 2023: ನಾವು ಭಾರತದಲ್ಲಿ ವಿಶ್ವಕಪ್ ಆಡಲು ರೆಡಿ, ಬಾಬರ್ ಅಜಮ್ ಶಾಕಿಂಗ್ ಹೇಳಿಕೆ
ಈಗ ಪ್ರಸ್ತುತವಾಗಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊಹ್ಲಿ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೇವಲ 111 ರನ್ ಗಳಿಸಿದ್ದು, ಚಿಕ್ಕ ಸ್ಕೋರ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ರಿಕಿ ಪಾಂಟಿಂಗ್ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿದ್ದರೂ ರಿಕಿ ಪಾಂಟಿಂಗ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ವಿರಾಟ್ ಕಳಪೆ ಟೆಸ್ಟ್ ಫಾರ್ಮ್ ಬಗ್ಗೆ ರಿಕಿ ಪಾಂಟಿಂಗ್ ಹೇಳಿದ್ದೇನು?
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ವಿರಾಟ್ ಕೊಹ್ಲಿಯ ಫಾರ್ಮ್ ನಿಂದ ವಿಚಲಿತರಾದಂತೆ ಕಾಣುತ್ತಿಲ್ಲ ಮತ್ತು 'ಚಾಂಪಿಯನ್ ಆಟಗಾರರು ಯಾವಾಗಲೂ ಪುಟಿದೇಳಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ' ಎಂದು ಹೇಳಿದರು.
"ಚಾಂಪಿಯನ್ ಆಟಗಾರರು ಯಾವಾಗಲೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಕೊಹ್ಲಿಗೆ ನಾನು ಮತ್ತೆ ಮತ್ತೆ ಹೇಳಿದ್ದೇನೆ. ಅವರು ಈ ಸಮಯದಲ್ಲಿ ಸ್ವಲ್ಪ ದೊಡ್ಡ ಸ್ಕೋರ್ ಮಾಡಲು ಹೆಣಗಾಡುತ್ತಿರಬಹುದು, ಅವರು ಸ್ಕೋರ್ ಮಾಡಬೇಕೆಂದು ನಾವೆಲ್ಲರೂ ನಿರೀಕ್ಷಿಸುವ ರನ್ ಗಳನ್ನು ಅವರು ಗಳಿಸದಿರಬಹುದು. ನೀವು ಒಬ್ಬ ಬ್ಯಾಟರ್ ಆಗಿದ್ದಾಗ ಮತ್ತು ನೀವು ರನ್ ಗಳಿಸಲು ಕಷ್ಟಪಡುತ್ತಿರುವಾಗ ನಿಮಗೆ ಅದು ಏಕೆ ಆಗುತ್ತಿದೆ ಅಂತ ತಿಳಿದಿರುತ್ತದೆ” ಎಂದು ರಿಕಿ ಹೇಳಿದರು.
“ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ ಅವರು ಮತ್ತೆ ಪುಟಿದೇಳುತ್ತಾರೆ ಎಂದು ನನಗೆ ವಿಶ್ವಾಸವಿದೆ" ಎಂದು ಪಾಂಟಿಂಗ್ ಐಸಿಸಿ ರಿವ್ಯೂನಲ್ಲಿ ಹೇಳಿದರು.
ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಬ್ಯಾಟರ್ ಫಾರ್ಮ್ ಬಗ್ಗೆ ನಿರ್ಣಯಿಸಲ್ವಂತೆ ರಿಕಿ
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಬ್ಯಾಟರ್ ಗಳು ಸ್ಪಿನ್ ಬೌಲಿಂಗ್ ಅನ್ನು ನಿಭಾಯಿಸಲು ತುಂಬಾನೇ ಹೆಣಗಾಡಿದರು ಮತ್ತು ಈ ಕಾರಣಕ್ಕಾಗಿಯೇ ಪಾಂಟಿಂಗ್ ಈ ಸರಣಿಯಲ್ಲಿ ಯಾವುದೇ ಬ್ಯಾಟರ್ ಫಾರ್ಮ್ ಅನ್ನು ನಿರ್ಣಯಿಸಲು ನಿರಾಕರಿಸಿದರು.
"ಸರಣಿಯಲ್ಲಿ ನಾನು ಯಾರ ಫಾರ್ಮ್ ಅನ್ನು ನೋಡುತ್ತಿಲ್ಲ, ಏಕೆಂದರೆ ಬ್ಯಾಟರ್ ಗಳಿಗೆ ಇದೊಂದು ದುಃಸ್ವಪ್ನವಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಸೋತರೂ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಆಟಕ್ಕೆ ಮರಳಿದೆ ಅಂತ ಹೇಳಬಹುದು. ಈ ಪಿಚ್ ಗಳ ಮೇಲೆ ಬ್ಯಾಟಿಂಗ್ ಆಡುವುದು ನಂಬಲಾಗದಷ್ಟು ಕಷ್ಟಕರವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ