ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಕದನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಕೆಕೆಆರ್ ಬ್ಯಾಟ್ಸ್ ಮನ್ ಗಳಲ್ಲಿ ಜೇಸನ್ ರಾಯ್ 56 ರನ್ ಗಳಿಸುವ ಮೂಲಕ ಅಬ್ಬರಿಸಿದರು. ಬಳಿಕ ಕೋಲ್ಕತ್ತಾ ನೀಡಿದ ಬಿಗ್ ಟಾರ್ಗೆಟ್ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸುವ ಮೂಲಕ 21 ರನ್ ಗಳಿಂದ ಸೋಲನ್ನಪ್ಪಿತು.
ಬ್ಯಾಟಿಂಗ್ನಲ್ಲಿ ಎಡವಿದ ಕೊಹ್ಲಿ ಬಾಯ್ಸ್:
ಟಾಸ್ ಗೆದ್ದು ಚೇಸಿಂಗ್ ಮಾಡಿದ ಆರ್‌ಸಿಬಿ ಬ್ಯಾಟಿಂಗ್ನಲ್ಲಿ ಎಡವಿತು. ಬೆಂಗಳೂರು ತಂಡವು, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಇಂದು ಉತ್ತಮವಾಗಿ ಆಡಿದರು. ಅವರನ್ನು ಹೊರತುಪಡಿಸಿ ಯಾರೂ ಸಹ ಮಿಂಚಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ 37 ಎಸೆತದಲ್ಲಿ 6 ಫೋರ್ ಮೂಲಕ 54 ರನ್ ಗಳಿಸಿದರು. ಉಳಿದಂತೆ ಫಾಫ್ ಡು ಪ್ಲೇಸಿಸ್ 17 ರನ್, ಶಾಬ್ಬಾಜ್ ಅಹ್ಮದ್ 2 ರನ್, ಗ್ಲೇನ್ ಮ್ಯಾಕ್ಸ್ವೆಲ್ 5 ರನ್, ಮಹಿಪಾಲ್ ಲೊಮ್ರೋರ್ 34 ರನ್, ಸುಯಾಶ್ ಪ್ರಭುದೇಸಾಯಿ 10 ರನ್, ವನಿಂದು ಹಸರಂಗ 5 ರನ್, ದಿನೇಶ್ ಕಾರ್ತಿಕ್ 22 ರನ್,
ಕೋಲ್ಕತ್ತಾ ಉತ್ತಮ ಬೌಲಿಂಗ್:
ಇನ್ನು, ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದರು. ಕೆಕೆಆರ್ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಗಮಿಸಿದ ಸುಯಾಶ್ ಶರ್ಮಾ 2 ವಿಕೆಟ್, ವರುಣ್ ಚರ್ಕವರ್ತಿ 3 ವಿಕೆಟ್, ಆ್ಯಂಡ್ರೂ ರಸೆಲ್ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ: IPL 2023: ಈ 2 ತಂಡಗಳು ಐಪಿಎಲ್ ಫೈನಲ್ಗೆ ಹೋಗೋದು ಫಿಕ್ಸ್ ಅಂತೆ! ಹಾಗಿದ್ರೆ ಕಪ್ ಗೆಲ್ಲೋದು ಯಾರು?
ಭರ್ಜರಿ ಬ್ಯಾಟಿಂಗ್ ಮಾಡಿದ ಕೆಕೆಆರ್:
ಕೆಕೆಆರ್ ಬ್ಯಾಟ್ಸ್ ಮನ್ ಗಳಲ್ಲಿ ಜೇಸನ್ ರಾಯ್ 56 ರನ್ ಗಳಿಸುವ ಮೂಲಕ ಉತ್ತಮವಾಗಿ ಆಡಿದರು. ನಿತೀಶ್ ರಾಣಾ 48 ರನ್, ವೆಂಕಟೇಶ್ ಅಯ್ಯರ್ 31 ರನ್ ಸಿಡಿಸಿದರು. ಕೊನೆಯಲ್ಲಿ ರಿಂಕು ಸಿಂಗ್ 10 ಎಸೆತಗಳಲ್ಲಿ 18 ರನ್ ಮತ್ತು ಡೇವಿಡ್ ವೈಸ್ 3 ಎಸೆತಗಳಲ್ಲಿ 12 ರನ್ ಗಳಿಸಿದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ತಂಡ ಆರಂಭಿಕರಿಗೆ ಉತ್ತಮ ಆರಂಭ ನೀಡಿದರು. ಇದರ ನಡುವೆ ಕೆಕೆಆರ್ ನಾಯಕ ನೀಡಿದ ಕ್ಯಾಚ್ ಅನ್ನು ಸಿರಾಜ್ ಕೈಚೆಲ್ಲಿದರು.
ಅದನ್ನು ಸದುಪಯೋಗ ಪಡಿಸಿಕೊಂಡ ನಿತೀಶ್ ರಾಣಾ, ಉತ್ತಮವಾಘಿ ಆಡಿದರು. ವೆಂಕಟೇಶ್ ಅಯ್ಯರ್ ಅವರಿಗೆ ಇನ್ನೊಂದು ತುದಿಯಲ್ಲಿ ಸಹಕರಿಸಿದರು. ನಿತೀಶ್ ರಾಣಾ ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 48 ರನ್ ಗಳಿಸಿದರು. ಈ ವೇಳೆ ಕೆಕೆಆರ್ 169 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಆದರೆ ಕೊನೆಯಲ್ಲಿ ರಿಂಕು ಸಿಂಗ್ ಬೌಂಡರಿ ಹಾಗೂ ಸಿಕ್ಸರ್ ಗಳಿಂದ ಮಿಂಚಿದರು.
ದುಬಾರಿಯಾದ ಆರ್‌ಸಿಬಿ ಬೌಲರ್ಸ್:
ಇತ್ತ ಟಾಸ್ ಗೆದ್ದರೂ ಸಹ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಲ್ಲದೇ, ಬೌಲರ್ಗಳೂ ಸಹ ನಾಯಕನಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಆರ್‌ಸಿಬಿ ಬೌಲರ್ಸ್ಗಳು ಕೆಕೆಆರ್ ವಿರುದ್ಧ ಅಂತಿಮ ಓವರ್ಗಳಲ್ಲಿ ದುಬಾರಿಯಾದರು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 4 ಓವರ್ಗೆ 33 ರನ್ ನೀಡಿದ 1 ವಿಕೆಟ್ ಪಡೆದರು. ಆದರೆ ಇವರು ಬಿಟ್ಟ ಕ್ಯಾಚ್ ತಂಡಕ್ಕೆ ಹಿನ್ನಡೆಯಾಯಿತು. ಇನ್ನು, ವನಿಂದು ಹಸರಂಗ 4 ಓವರ್ಗೆ 22 ರನ್ ನೀಡಿ 2 ವಿಕೆಟ್, ಕನ್ನಡಿಗ ವೈಶಾಕ್ ವಿಜಯ್ಕುಮಾರ್ 4 ಓವರ್ಗೆ 41 ರನ್ ನೀಡಿ 2 ವಿಕೆಟ್ ಪಡೆದರು. ಆದರೆ ಹರ್ಷಲ್ ಪಟೇಲ್ 4 ಓವರ್ ಮಾಡಿ 44 ರನ್ ಬಿಟ್ಟುಕೊಟ್ಟು ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ