ಮಳೆಯಿಂದಾಗಿ ಪಂದ್ಯ ನಡೆಯಲಿದೆಯೇ ಎಂಬ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಕೊನೆಗೂ ನೆಮ್ಮದಿಯಿಂದ ಸಂಪೂರ್ಣ ಪಂದ್ಯವನ್ನು ನೋಡಲು ಸಿಕ್ಕಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ (RCB) ಪ್ಲೇ ಆಫ್ ಹಣೆಬರಹವನ್ನು ನಿರ್ಧರಿಸುವ ಪಂದ್ಯಕ್ಕೆ ವರುಣನ ಅಡ್ಡಿಪಡಿಸಿತ್ತು. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ (GT) ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್ ಟೈಟಾನ್ಸ್ ಯಾವುದೇ ಬದಲಾವಣೆ ಮಾಡಲಿಲ್ಲ. ಇನ್ನು, ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ಬೃಹತ್ ಮೊತ್ತ ಕಲೆಹಾಕಿತು. ಆರ್ಸಿಬಿ ಪರ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಕಿಂಗ್ ಆಗಿ ಮಿಂಚಿದರು. ಈ ಮೂಲಕ ಆರ್ಸಿಬಿ ನಿಗದಿತ 20 ಓವರ್ಗೆ 2 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವು ನಿಗದಿತ 19.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ198 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ ಆರ್ಸಿಬಿ ಪ್ಲೇಆಫ್ನಿಂದ ಹೊರಬಿದ್ದಿದ್ದು, ಮುಂಬೈ ಇಂಡಿಯನ್ಸ್ ಪ್ಲೇಆಫ್ಗೆ ಎಂಟ್ರಿ ನೀಡಿದೆ.
ಐಪಿಎಲ್ 2023 ಪ್ಲೇಆಫ್:
ಇನ್ನು, ಲೀಗ್ ಹಂತದ ಎಲ್ಲಾ ಪಂದ್ಯಗಳು ಅಂತ್ಯಗೊಂಡಿದ್ದು, ಮೇ 23ರಿಂದ ಐಪಿಎಲ್ 2023 ಪ್ಲೇಆಫ್ ಪಂದ್ಯಗಳು ಆರಂಭವಾಗಲಿದೆ. ಇದರಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಪ್ಲೇಆಫ್ ಪಂದ್ಯದಲ್ಲಿ ಸೆಣಸಾಡಲಿದೆ. ಬಳಿಕ 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿದ್ದು, ಮೊದಲ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಲಗ್ಗೆಯಿಡಲಿದೆ. ಇತ್ತ 2ನೇ ಪಂದ್ಯದಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ ಸುತ್ತಿನಲ್ಲಿ ಮೊದಲ ಪಂದ್ಯದಲ್ಲಿ ಸೋತ ತಂಡದೊಂದಿಗೆ ಸೆಣಸಾಡಬೇಕಾಗುತ್ತದೆ.
ಶತಕ ಸಿಡಿಸಿ ಮಿಂಚಿದ ಕಿಂಗ್ ಕೊಹ್ಲಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪ್ಲೇ-ಆಫ್ ಮಹತ್ವದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು ಗುಜರಾತ್ ವಿರುದ್ಧ ನಡೆಯುತ್ತಿರುವ ಕದನದಲ್ಲೂ ಶತಕ ಬಾರಿಸಿದರು. ವಿರಾಟ್ ಕೊಹ್ಲಿ (61 ಎಸೆತಗಳಲ್ಲಿ ಔಟಾಗದೆ 101; 13 ಬೌಂಡರಿ, 1 ಸಿಕ್ಸರ್) ಶತಕ ಸಿಡಿಸಿ ಮಿಂಚಿದರು. ಫಾಫ್ ಡು ಪ್ಲೆಸಿಸ್ (28) ಮತ್ತು ಬ್ರೇಸ್ ವೆಲ್ (26) ರನ್ ಗಳಿಸಿದರು.
ಇದನ್ನೂ ಓದಿ: RCB vs GT: ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್ ಕೊಹ್ಲಿ, ಬ್ಯಾಕ್ ಟು ಬ್ಯಾಕ್ 'ವಿರಾಟ' ಶತಕ!
ಮಳೆಯಿಂದಾಗಿ ಪಂದ್ಯ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ಆದರೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಡು ಪ್ಲೆಸಿಸ್ ಮತ್ತು ಕೊಹ್ಲಿ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 67 ರನ್ ಸೇರಿಸಿದರು. ನಂತರ ಡು ಪ್ಲೆಸಿಸ್ ಔಟಾದರು. ಒನ್ ಡೌನ್ ನಲ್ಲಿ ಬ್ಯಾಟಿಂಗ್ ಗೆ ಬಂದ ಮ್ಯಾಕ್ಸ್ ವೆಲ್ (11) ರನ್ ಗಳಿಸಿ ಔಟಾದರು. ಲೊಮ್ರೋರ್ (1), ಕಾರ್ತಿಕ್ (0) ವಿಫಲರಾದರು.
ಆದರೆ ಇನ್ನೊಂದು ತುದಿಯಲ್ಲಿ ಕೊಹ್ಲಿ ತಮ್ಮ ಫಾರ್ಮ್ ಅನ್ನು ಮುಂದುವರೆಸಿದರು. ಸತತ ವಿಕೆಟ್ ಕಳೆದುಕೊಂಡ ಬಳಿಕ ನಿಧಾನವಾಗಿ ಆಡಿದರು. ಬ್ರೇಸ್ ವೆಲ್ ಮತ್ತು ಅನುಜ್ ರಾವತ್ ಜತೆಗೂಡಿ ಆರ್ ಸಿಬಿ ಇನ್ನಿಂಗ್ಸ್ ಕಟ್ಟಿದರು. ಈ ಅನುಕ್ರಮದಲ್ಲಿ ಕೊಹ್ಲಿ ಶತಕ ಗಳಿಸಿದರು. ಇದು ಈ ಋತುವಿನಲ್ಲಿ ಕೊಹ್ಲಿ ಅವರ ಎರಡನೇ ಮತ್ತು ಒಟ್ಟಾರೆ 7ನೇ ಶತಕವಾಗಿದೆ. ಕೊನೆಗೆ ಅನುಜ್ ರಾವತ್ ಕೂಡ ವೇಗವಾಗಿ ಆಡುವ ಮೂಲಕ ಆರ್ ಸಿಬಿ ಬೃಹತ್ ಮೊತ್ತ ಗಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ