ಏಷ್ಯಾಡ್ 2018: ರಾಹಿ ಸರ್ನೋಬತ್​ಗೆ ಚಿನ್ನ; ಭಾರತಕ್ಕೆ 4ನೇ ಬಂಗಾರ


Updated:August 22, 2018, 3:51 PM IST
ಏಷ್ಯಾಡ್ 2018: ರಾಹಿ ಸರ್ನೋಬತ್​ಗೆ ಚಿನ್ನ; ಭಾರತಕ್ಕೆ 4ನೇ ಬಂಗಾರ
ರಾಹಿ ಸರ್ನೋಬತ್

Updated: August 22, 2018, 3:51 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 22): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಪ್ರಾಪ್ತವಾಗಿದೆ. ಇಂದು ನಡೆದ ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಎಲ್ಲರ ಕಣ್ಣು ಇದ್ದದ್ದು ಹದಿಹರೆಯದ ಮನು ಭಾಕರ್ ಅವರ ಮೇಲೆಯೇ. ಆದರೆ, ವಿಜಯಶಾಲಿಯಾಗಿ ಹೊರಹೊಮ್ಮಿದ್ದು ರಾಹಿ ಸರನೋಬತ್. ಮಹಾರಾಷ್ಟ್ರದ ಶೂಟರ್ ರಾಹಿ ಅವರು ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ. ಮೊನ್ನೆಯಷ್ಟೇ 16 ವರ್ಷದ ಸೌರಭ್ ಚೌಧರಿ ಚಿನ್ನ ಗೆದ್ದು ದೇಶದ ಕ್ರೀಡಾಪ್ರೇಮಿಗಳಲ್ಲಿ ಸಂಚಲನ ಸೃಷ್ಟಿಸಿದ್ದರು.

ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತುಗಳಲ್ಲಿ 16 ವರ್ಷದ ಮನು ಭಾಕರ್ ಅವರು ಅದ್ಭುತ ಪ್ರದರ್ಶನ ನೀಡಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ, ಫೈನಲ್​ನಲ್ಲಿ ಬಂಗಾರದ ಪದಕ ಒಲಿದದ್ದು ರಾಹಿ ಸರನೋಬತ್ ಅವರಿಗೆ. ಮನು ಭಾಕರ್ ಅವರು 6ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ರಾಹಿ ಸರ್ನೋಬತ್ ಅವರ ಈ ಚಿನ್ನದ ಸಾಧನೆ ಅನಿರೀಕ್ಷಿತವೇನಲ್ಲ. 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಹಿಯೇ ರಾಣಿ. 2010 ಮತ್ತು 2014 ಕಾಮನ್ವೆಲ್ತ್ ಗೇಮ್ಸ್​ಗಳಲ್ಲಿ ಹಾಗೂ ಐಎಸ್​ಎಸ್​ಎಫ್ ವಿಶ್ವಕಪ್​ನಲ್ಲಿ ಚಿನ್ನದ ಪದಕಗಳನ್ನ ಜಯಿಸಿದ್ದರು. ಆದರೆ, ಈ ಬಾರಿಯ ಏಷ್ಯಾಡ್​ನಲ್ಲಿ ಎಲ್ಲರ ಗಮನವು ಮನು ಭಾಕೆರ್ ಅವರ ಮೇಲೆಯೇ ಇದ್ದದ್ದರಿಂದ ರಾಹಿ ಅವರನ್ನ ಯಾರೂ ಗಮನಿರಲಿಲ್ಲ. ಆದರೆ, ರಾಹಿ ಅವರು ಈ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆಲ್ಲುವ ಮುನ್ನ ಸಾಕಷ್ಟು ಕಠಿಣ ಸ್ಪರ್ಧೆ ಎದುರಿಸಬೇಕಾಯಿತು. ಥಾಯ್ಲೆಂಡ್​ನ ನಫಸ್ವಾನ್ ಯಾಂಗ್​ಪೈಬೂನ್ ಮತ್ತು ರಾಹಿ ಸರನೋಬತ್ ನಡುವೆ ವಿಜೇತರನ್ನ ನಿರ್ಣಯಿಸಲು ಎರಡು ಶೂಟೌಟ್ ನಡೆಯಬೇಕಾಯಿತು. ಎರಡನೇ ಶೂಟೌಟ್​ನಲ್ಲಿ ಥಾಯ್ಲೆಂಡ್ ಸ್ಪರ್ಧಿ ತಮ್ಮೆಲ್ಲಾ ಗುರಿಗಳನ್ನ ಹೊಡೆಯಲು ವಿಫಲರಾಗುವ ಮೂಲಕ ಸೋಲಪ್ಪಿದರು.

ಭಾರತಕ್ಕೆ ಈವರೆಗೆ ಸಿಕ್ಕಿರುವ 4 ಸ್ವರ್ಣ ಪದಕಗಳ ಪೈಕಿ ಎರಡನ್ನು ಶೂಟರ್​ಗಳು ತಂದುಕೊಟ್ಟಿದ್ದಾರೆ. ಇನ್ನೆರಡು ಪದಕಗಳು ಫ್ರೀಸ್ಟೈಲ್ ಕುಸ್ತಿ ಸ್ಪರ್ಧಿಗಳಿಂದ ಬಂದಿವೆ. ಶೂಟಿಂಗ್​ನಲ್ಲಿ ಭಾರತಕ್ಕೆ 2 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಸಿಕ್ಕಿವೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ