ಅವಮಾನಗಳ ನಡುವೆ ಕತಾರ್​ ಈ ಬಾರಿಯ ಏಷ್ಯಾ ​ಫುಟ್​ಬಾಲ್ ಚಾಂಪಿಯನ್

@[Thaier Al-Sudan/Reuters]

@[Thaier Al-Sudan/Reuters]

ಅರಬ್​ ರಾಷ್ಟ್ರಗಳಲ್ಲಿ ರಾಜಕೀಯ ಬಿಕ್ಕಟ್ಟಿನಿಂದ ಕತಾರ್​ ದೇಶದೊಂದಿಗೆ ಹಲವು ದೇಶಗಳು ಸಾರಿಗೆ ಸಂಬಂಧಗಳನ್ನು ಕಡಿದುಕೊಂಡಿದೆ. ಈ ಹಿನ್ನೆಯಲ್ಲಿ ಈ ಬಾರಿ ಏಷ್ಯಾ ಕಪ್​ ಫುಟ್​ಬಾಲ್ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.

  • News18
  • 3-MIN READ
  • Last Updated :
  • Share this:

ದುಬೈ: ಏಷ್ಯಾಕಪ್​ ಟೂರ್ನಿಗೆ ಶುಕ್ರವಾರ ತೆರೆಬಿದ್ದಿದ್ದು, ಫುಟ್​ಬಾಲ್ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಇದೇ ಮೊದಲ ಬಾರಿಗೆ ಕತಾರ್​ ಟ್ರೋಫಿ ಮುಡಿಗೇರಿಸಿಕೊಂಡಿದೆ. ಶೇಖ್ ಝಾಯದ್​ ಕ್ರೀಡಾಂಗಣದಲ್ಲಿ ನಡೆದ ಜಪಾನ್ ವಿರುದ್ಧದ  ಫೈನಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕತಾರ್ 3-1 ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಮೊದಲಾರ್ಧದಲ್ಲೇ ಎರಡು ಗೋಲು ದಾಖಲಿಸಿ ಪಂದ್ಯವನ್ನು ಹಿಡಿತದಲ್ಲಿಕೊಳ್ಳುವಲ್ಲಿ ಕತಾರ್ ಆಟಗಾರರು ಯಶಸ್ವಿಯಾಗಿದ್ದರು. ಆರಂಭದಲ್ಲೇ ಕತಾರ್​ ಆಟಗಾರರು ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ್ದರು. ಇದರ ಫಲವಾಗಿ 12ನೇ ನಿಮಿಷದಲ್ಲಿ ಸ್ಟ್ರೈಕರ್ ಅಲ್ಮೋಝ್ ಅಲಿ ಅದ್ಭುತ ಕಾಲ್ಚಳಕದಿಂದ ಮೊದಲು ಗೋಲು ದಾಖಲಿಸಿದರು.

ಈ ವೇಳೆ ಜಪಾನ್​ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರೂ, ಕತಾರ್​ ರಕ್ಷಣಾ ಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಕೆಲ ಹೊತ್ತು ರಕ್ಷಣಾತ್ಮಕವಾಗಿ ಆಡಿದ ಕತಾರ್​ ಪರವಾಗಿ 2ನೇ ಗೋಲನ್ನು ಅಬ್ದುಲ್ ಅಜೀಜ್ ಹತೀಮ್ ಸಿಡಿಸಿದರು. 27ನೇ ನಿಮಿಷದಲ್ಲಿ ರಿಂಗ್​ ಹೊರಗಿನಿಂದಲೇ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಅಜೀಜ್​ ಯಶಸ್ವಿಯಾದರು.

ಫಸ್ಟ್​ ಹಾಫ್​ನಲ್ಲಿ ಜಪಾನ್​ ತಂಡವು ಶೇ.55 ರಷ್ಟು ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರೂ, ಗೋಲುಗಳಿಸುವ ಅವಕಾಶವನ್ನು ಕತಾರ್​ ರಕ್ಷಣಾ ಆಟಗಾರರು ಒದಗಿಸಿರಲಿಲ್ಲ. ದ್ವಿಯಾರ್ಧದಲ್ಲಿ ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿದ ಜಪಾನ್ ತಂಡ ಆಕ್ರಮಣಕಾರಿ ಆಟದ ಮೂಲಕ ಕತಾರ್​ ಪೋಸ್ಟ್​ನತ್ತ ನಿರಂತರ ದಾಳಿ ನಡೆಸಿತು. ಇದೇ ವೇಳೆ ಗೋಲಿನ ಅಂತರವನ್ನು ಕಾಪಾಡಿಕೊಳ್ಳಲು ಕತಾರ್​ ಆಟಗಾರರಿಗೆ ಕೋಚ್​ ನಿರ್ದೇಶಿಸಿದ್ದರು. ಇದಕ್ಕನುಗುಣವಾಗಿ ಆಡಿದ ಕತಾರ್ ತಂಡ ಬಾಲನ್ನು ಗೋಲು ಬಲೆಯೊಳಗೆ ಸೇರದಂತೆ ನೋಡಿಕೊಂಡರು.



ಆದರೆ 69ನೇ ನಿಮಿಷದಲ್ಲಿ ಜಪಾನ್​ನ ಮುನ್ಪಡೆ ಆಟಗಾರ ಟಕುಮಿ ಮಿನಾಮಿನೊ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ 1-2 ಅಂತರದಿಂದ ಪಂದ್ಯವು ರೋಚಕ ಘಟ್ಟದತ್ತ ಸಾಗಿತು. ಇದೇ ವೇಳೆ ಕತಾರ್ ಕೂಡ ಆಟದ ವೇಗವನ್ನು ಹೆಚ್ಚಿಸಿದರು. ಪಂದ್ಯದ 83ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್​ ಅನ್ನು ಸದುಪಯೋಗಪಡಿಸಿಕೊಂಡ ಕತಾರ್ ಆಟಗಾರ ಅಕ್ರಂ ಆರಿಫ್​ ತಂಡಕ್ಕೆ ಮತ್ತೊಂದು ಗೋಲು ತಂದಿತ್ತರು. ಇನ್ನೇನು ಪಂದ್ಯ ಮುಗಿಯಲಿದೆ ಎನ್ನುವಾಗ ಸಿಕ್ಕಿದ ಈ ಗೋಲು ಜಪಾನ್​ನ ಕೈಯಿಂದ ಫೈನಲ್​ ಪಂದ್ಯವನ್ನೇ ಕಿತ್ತುಕೊಂಡಿತು.

ದ್ವಿತೀಯಾರ್ಧವು ಸಮಬಲದಿಂದ ಕೂಡಿದ್ದರೂ, ಸಿಕ್ಕಿದ ಮೂರು ಕಾರ್ನರ್​ ಅವಕಾಶವನ್ನು ಜಪಾನ್ ಗೋಲಾಗಿಸುವಲ್ಲಿ ಎಡವಿದರು. ಇನ್ನು ಉತ್ತಮ ಶಾಟ್​ಗಳ ಮೂಲಕ ಮಿಂಚಿದ 22ರ ಹರೆಯದ ಅಲ್ಮೋಝ್ ಅಲಿ ಈ ಪಂದ್ಯಾವಳಿಯಲ್ಲಿ ಒಟ್ಟು 13 ಗೋಲು ದಾಖಲಿಸಿ ಮಿಂಚಿದರು.

ಫೈನಲ್​ ಪಂದ್ಯವನ್ನು 3-1 ಅಂತರದೊಂದಿಗೆ ತನ್ನದಾಗಿಸಿಕೊಂಡ ಕತಾರ್​ ಏಷ್ಯನ್ ಫುಟ್​ಬಾಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಇದೇ ಮೊದಲ ಬಾರಿ ಫೈನಲ್​ ಪ್ರವೇಶಿಸಿ​ ಚಾಂಪಿಯನ್​ ಆಗಿ ಹೊರ ಹೊಮ್ಮುವ ಮೂಲಕ ಏಷ್ಯನ್ ಫುಟ್​ಬಾಲ್​ನಲ್ಲಿ ಹೊಸ ಶಕೆ ಆರಂಭಿಸಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಫೈನಲ್ ಪಂದ್ಯ ಹೊರತು ಪಡಿಸಿ ಕತಾರ್​ ಇನ್ಯಾವುದೇ  ಮ್ಯಾಚ್​ನಲ್ಲಿ ​ಗೋಲು ಹೊಡೆಸಿಕೊಂಡಿರಲಿಲ್ಲ. ಇದು ಈ ತಂಡದ ಅದ್ಭುತ ಆಟಕ್ಕೆ ಸಾಕ್ಷಿಯಾಯಿತು. 2022 ರ ವಿಶ್ವಕಪ್​ ಆತಿಥ್ಯ ವಹಿಸಲಿರುವ ಕತಾರ್ ವರ್ಲ್ಡ್​ ಕಪ್​ಗೆ ಭರ್ಜರಿ ತಯಾರಿಯಲ್ಲಿರುವುದಾಗಿ ಈ ಮೂಲಕ ವಿಶ್ವಕ್ಕೆ ಸಾರಿ ಹೇಳಿದೆ. ಏಷ್ಯಾದ ಅತಿರಥ ತಂಡಗಳನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದ ಕತಾರ್​ ಈಗ ತಾನು ಏಷ್ಯಾದ ಬಲಿಷ್ಠ ತಂಡವೆಂದು ನಿರೂಪಿಸಿದೆ.


ರಾಜಕೀಯ ಬಿಕ್ಕಟ್ಟು ಮತ್ತು ಚಾಂಪಿಯನ್ ಪಟ್ಟ:

ಅರಬ್​ ರಾಷ್ಟ್ರಗಳಲ್ಲಿನ ರಾಜಕೀಯ ಬಿಕ್ಕಟ್ಟಿನಿಂದ ಕತಾರ್​ ದೇಶದೊಂದಿಗೆ ಹಲವು ದೇಶಗಳು ಸಾರಿಗೆ ಸಂಬಂಧಗಳನ್ನು ಕಡಿದುಕೊಂಡಿದೆ. ಈ ಹಿನ್ನೆಯಲ್ಲಿ ಈ ಬಾರಿ ಏಷ್ಯಾ ಕಪ್​ ಫುಟ್​ಬಾಲ್ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಮೊದಲಿಗೆ ಸೌದಿ ಅರೇಬಿಯಾವನ್ನು ಸೋಲಿಸಿ ಕತಾರ್​ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದ್ದರು.

ಇನ್ನು ಸೆಮಿ ಫೈನಲ್​ನಲ್ಲಿ ಮುಖಾಮುಖಿಯಾದ ಕತಾರ್​ ಮತ್ತು ಯುಎಇ ನಡುವೆ ರೋಚಕ ಹೋರಾಟ ನಡೆಯಲಿದೆ ಎಂಬುದನ್ನು ಮೊದಲೇ ಊಹಿಸಲಾಗಿತ್ತು. ಹೀಗಾಗಿಯೇ ಈ ಪಂದ್ಯದ ಟಿಕೆಟ್​ಗಳು ನಿಮಿಷಗಳಲ್ಲಿ ಬಿಕರಿಯಾಗಿದ್ದವು. ಯುಎಇ ಫುಟ್​ಬಾಲ್ ಅಭಿಮಾನಿಗಳೇ ತುಂಬಿದ್ದ ಕ್ರೀಡಾಂಗಣದಲ್ಲಿ ಕತಾರ್ ಆಟಗಾರರು ರಾಜಕೀಯ ಬಿಕ್ಕಟಿಗೆ ಆಟದ ಮೂಲಕ ಮರುತ್ತರ ನೀಡಿದ್ದರು. ಈ ಸೋಲನ್ನು ಅರಗಿಸಿಕೊಳ್ಳಲಾಗದೇ ಯುಎಇ ಅಭಿಮಾನಿಗಳು ಕತಾರ್ ಆಟಗಾರರ ಮೇಲೆ ಶೂ ಮತ್ತು ಬಾಟಲಿಗಳನ್ನು ಎಸೆದಿದ್ದರು.


ಅಭಿಮಾನಿಗಳ ಇಂತಹ ವರ್ತನೆ ಫೈನಲ್​ ಪಂದ್ಯದಲ್ಲಿ ಕತಾರ್ ಆಟಗಾರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿತ್ತು. ಆದರೆ ಇದೆಲ್ಲವನ್ನು ಮೀರಿ ಕತಾರ್​ ಅದ್ಭುತ ಪ್ರದರ್ಶನ ನೀಡಿ ಮೊದಲ ಬಾರಿ ಏಷ್ಯನ್ ಕಪ್​ಗೆ ಮುತ್ತಿಕ್ಕಿದ್ದು ಈ ಬಾರಿಯ ವಿಶೇಷ.


 

First published: