ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌: ಕಿರೀಟದೊಂದಿಗೆ ಹೊಸ ಇತಿಹಾಸ ನಿರ್ಮಿಸಿದ ಪಿವಿ ಸಿಂಧೂ

BWF World Championships: ಐದು ಬಾರಿ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ ಪ್ರತಿನಿಧಿಸಿದ್ದ ಸಿಂಧೂ 2013, 2014 ಆವೃತ್ತಿಗಳಲ್ಲಿ ಕಂಚಿನ ಪದಕ ಗೆದ್ದಿದ್ದರು. ಹಾಗೆಯೇ 2017 ಹಾಗೂ 2018ರಲ್ಲಿ ಬೆಳ್ಳಿ ಪದಕದೊಂದಿಗೆ ಮರಳಿದ್ದರು.

ಪಿ.ವಿ.ಸಿಂಧು

ಪಿ.ವಿ.ಸಿಂಧು

  • Share this:
ಭಾರತದ ಯುವ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ಸ್ವಿಜರ್ಲೆಂಡ್​ನಲ್ಲಿ ನಡೆದ ಮಹಿಳಾ ಫೈನಲ್​ ಪಂದ್ಯದಲ್ಲಿ ಅದ್ಭುತ ಆಟವಾಡಿದ ಭಾರತೀಯ ಆಟಗಾರ್ತಿ ಜಪಾನ್​ನ ನಜೊಮಿ ಒಕುಹರಾ ಅವರನ್ನು ಮಣಿಸುವ ಮೂಲಕ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದರು.

ಭಾರೀ ನಿರೀಕ್ಷೆ ಮೂಡಿಸಿದ್ದ ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಸಿಂಧೂ, ನಜೊಮಿ ಒಕುಹರಾ ಅವರನ್ನು 21-7, 21-7 ನೇರ ಸೆಟ್​ಗಳಿಂದ ಮಣಿಸಿದರು. ಈ ಮೂಲಕ ಬಿಡಬ್ಲ್ಯುಎಫ್ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಮೊದಲ ತಾರೆ ಎಂಬ ಇತಿಹಾಸ ನಿರ್ಮಿಸಿದರು.

24ರ ಹರೆಯದ ಸಿಂಧೂ ಈ ಹಿಂದೆ 2 ಬಾರಿ ಫೈನಲ್ ಪ್ರವೇಶಿಸಿದ್ದರು. 2017 ಮತ್ತು 2018ರ ಟೂರ್ನಿಯ ಫೈನಲ್‌ ಕಾದಾಟದಲ್ಲಿ ಸೋತಿದ್ದ ಭಾರತೀಯ ಆಟಗಾರ್ತಿ ಈ ಬಾರಿ ಮಾತ್ರ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾದರು. ಅದರಲ್ಲೂ 2017 ಫೈನಲ್‌ನಲ್ಲಿ ಪ್ರಶಸ್ತಿ ಅಂಚಿನಲ್ಲಿ ಸಿಂಧೂ ಎಡವಿದ್ದರು. ಅದು ಕೂಡ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳೊಂದಿಗೆ ಎಂಬುದು ವಿಶೇಷ.

ಪಿವಿ ಸಿಂಧೂ


ಇದೀಗ ಎರಡು ವರ್ಷಗಳ ಹಿಂದಿನ ಸೋಲಿನ ಸೇಡನ್ನು ತೀರಿಸಿದ ಸಿಂಧೂ ಒಕುಹರಾ ವಿರುದ್ಧ ಅಕ್ಷರಶಃ ಘರ್ಜಿಸಿದರು. ತಮ್ಮ ಆಕ್ರಮಣಕಾರಿ ಆಟ ಹಾಗೂ ಚಾಣಾಕ್ಷ ಹೊಡೆತಗಳ ಮೂಲಕ ಜಪಾನ್ ಆಟಗಾರ್ತಿಯನ್ನು ಇಕ್ಕಟಿಗೆ ಸಿಲುಕಿಸಿದ ಹೈದರಾಬಾದ್ ಆಟಗಾರ್ತಿ ಮೊದಲ ಸುತ್ತನ್ನು 21-7 ಅಂತರದಲ್ಲಿ ವಶಪಡಿಸಿಕೊಂಡಿದ್ದರು.

ದ್ವಿತೀಯ ಸುತ್ತಿನಲ್ಲಿ ಯಾವುದೇ ಹಂತದಲ್ಲೂ ಮುನ್ನಡೆ ಬಿಟ್ಟುಕೊಡದ ಸಿಂಧೂ ಜಪಾನ್ ಆಟಗಾರ್ತಿ ಮೇಲೆ ಒತ್ತಡ ಹೇರುವಲ್ಲಿ ಯಶಕಂಡರು. ಪರಿಣಾಮ ಅನಗತ್ಯ ತಪ್ಪುಗಳನ್ನು ಮಾಡಿದ ಒಕುಹರಾ 21-7 ಅಂತರದಿಂದ ಸಿಂಧೂ ಆಟಕ್ಕೆ ಶರಣಾದರು.ಐದು ಬಾರಿ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ ಪ್ರತಿನಿಧಿಸಿದ್ದ ಸಿಂಧೂ 2013, 2014 ಆವೃತ್ತಿಗಳಲ್ಲಿ ಕಂಚಿನ ಪದಕ ಗೆದ್ದಿದ್ದರು. ಹಾಗೆಯೇ 2017 ಹಾಗೂ 2018ರಲ್ಲಿ ಬೆಳ್ಳಿ ಪದಕದೊಂದಿಗೆ ಮರಳಿದ್ದರು. ಆದರೆ ಐದನೇ ಬಾರಿ ಮಾತ್ರ ತಮ್ಮ ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡ ಸಿಂಧೂ ಚಿನ್ನದ ಪದಕದೊಂದಿಗೆ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌​ ಆಗಿ ಹೊರಹೊಮ್ಮಿದ್ದಾರೆ.

First published: