ಏಷ್ಯನ್ ಗೇಮ್ಸ್: ಬಿಲ್ಲುಗಾರಿಕೆ ತಂಡಗಳಿಗೆ ಮತ್ತು ಪಿವಿ ಸಿಂಧುಗೆ ಬೆಳ್ಳಿ


Updated:August 28, 2018, 2:12 PM IST
ಏಷ್ಯನ್ ಗೇಮ್ಸ್: ಬಿಲ್ಲುಗಾರಿಕೆ ತಂಡಗಳಿಗೆ ಮತ್ತು ಪಿವಿ ಸಿಂಧುಗೆ ಬೆಳ್ಳಿ
ಪಿವಿ ಸಿಂಧು

Updated: August 28, 2018, 2:12 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 28): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 10ನೇ ದಿನದಂದು ಭಾರತದ ಚಿನ್ನದ ನಿರೀಕ್ಷೆ ಈಡೇರಿಲ್ಲ. ಆರ್ಚರಿ ಕ್ರೀಡೆಯ ಪುರುಷರು ಮತ್ತು ಮಹಿಳೆಯರ ಟೀಮ್ ಫೈನಲ್​ನಲ್ಲಿ ಭಾರತದ ಎರಡೂ ತಂಡಗಳು ಕೊರಿಯನ್ನರಿಗೆ ಶರಣಾಗಿ ಬೆಳ್ಳಿ ಪಡೆದರು. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಪಿವಿ ಸಿಂಧು ಸೋಲಪ್ಪಿದರು. ಆದರೆ, ಏಷ್ಯಾಡ್ ಇತಿಹಾದಲ್ಲೇ ಬೆಳ್ಳಿ ಪದಕ ಗೆದ್ದ ಪ್ರಥಮ ಭಾರತೀಯ ಎಂಬ ದಾಖಲೆ ಪಿವಿ ಸಿಂಧುಗೆ ಲಭಿಸಿತು. ಟೇಬಲ್ ಟೆನಿಸ್​ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಪದಕ ಭಾಗ್ಯ ಸಿಕ್ಕಿತು.

ಸಿಂಧುಗೆ ನಿರಾಸೆ:
ಚೀನೀ ಥೈಪೆ ದೇಶದ ವಿಶ್ವದ ನಂಬರ್ ಒನ್ ಆಟಗಾರ್ತಿ ಟಾಯ್ ಸು ಯಿಂಗ್ ಅವರು ಭಾರತೀಯ ಕ್ರೀಡಾಪ್ರೇಮಿಗಳ ಆಸೆಗೆ ತಣ್ಣೀರೆರಚಿದರು. 13-21, 16-21 ನೇರ ಗೇಮ್​ಗಳಿಂದ ಪಿವಿ ಸಿಂಧು ಸುಲಭವಾಗಿಯೇ ಸೋಲಪ್ಪಿದರು. ಇದರೊಂದಿಗೆ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿತು. ಆದರೂ ಏಷ್ಯಾಡ್​ನಲ್ಲಿ ಪ್ರಪ್ರಥಮ ಬಾರಿಗೆ ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿ ಪದಕ ದಕ್ಕಿದೆ. ನಿನ್ನೆ ಸೈನಾ ನೆಹ್ವಾಲ್ ಅವರು ಇದೇ ಥೈಪೆ ಆಟಗಾರ್ತಿ ಎದುರು ಸೆಮಿಫೈನಲ್​ನಲ್ಲಿ ಸೋಲಪ್ಪಿ ಕಂಚಿಗೆ ತೃಪ್ತಿಪಟ್ಟಿದ್ದರು. ಬ್ಯಾಡ್ಮಿಂಟನ್​ನಲ್ಲಿ ಕಂಚಿನ ಪದಕ ಬಂದಿದ್ದೂ ಅದೇ ಮೊದಲು.

ಬಿಲ್ಲುಗಾರಿಕೆಯಲ್ಲಿ 2 ಬೆಳ್ಳಿ:
ಆರ್ಚರಿ ಕ್ರೀಡೆಯಲ್ಲಿ ಕೊರಿಯನ್ನರು ತಮಗೆ ಯಾರೂ ಸರಿಸಾಟಿ ಇಲ್ಲ ಎಂಬುದನ್ನು ರುಜುವಾತು ಮಾಡಿದರು. ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳೆರಡೂ ಇಂದು ಬಿಲ್ಲುಗಾರಿಕೆ ಫೈನಲ್​ಗಳಲ್ಲಿ ಮುಗ್ಗುರಿಸಿ ಬೆಳ್ಳಿಗೆ ತೃಪ್ತಿಪಟ್ಟವು. ಎರಡಕ್ಕೂ ಸೋಲುಣಿಸಿದ್ದು ಕೊರಿಯನ್ ತಂಡಗಳೇ. ಕಳೆದ ಬಾರಿಯ ಚಿನ್ನದ ಪದಕ ವಿಜೇತ ಭಾರತೀಯ ಪುರುಷರ ತಂಡ ಕೂಡ ಗೆಲುವಿನ ನಗೆ ಬೀರಲಿಲ್ಲ.

ಟೇಬಲ್ ಟೆನಿಸ್​ನಲ್ಲಿ ಕಂಚು: 
Loading...

ಟೇಬಲ್ ಟೆನಿಸ್​ನಲ್ಲೂ ಟೀಮ್ ಇವೆಂಟ್​ನಲ್ಲಿ ಕೊರಿಯಾ ವಿರುದ್ಧ ಭಾರತೀಯರು ಸೋಲಪ್ಪಿ ಫೈನಲ್​ಗೇರಲು ವಿಫಲರಾದರು. ಸೆಮಿಫೈನಲ್ ಹಂತಕ್ಕೇರಿದ ಕಾರಣಕ್ಕೆ ಭಾರತಕ್ಕೆ ಕಂಚು ಸಿಕ್ಕಿದೆ. ಆದರೆ, ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಟೇಬಲ್ ಟೆನಿಸ್​ನಲ್ಲಿ ಭಾರತಕ್ಕೆ ಪದಕ ಸಿಕ್ಕಿದ್ದು ಇದೇ ಮೊದಲು. ಹೀಗಾಗಿ, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್​ನಲ್ಲಿ ಭಾರತೀಯರು ಹೊಸ ಇತಿಹಾಸ ಸೃಷ್ಟಿಸಿರುವುದು ಪ್ರಶಂಸಾರ್ಹ.

ಮಹಿಳೆಯರ 200 ಮೀಟರ್ ಓಟದಲ್ಲಿ ಭಾರತದ ಹಿಮಾ ದಾಸ್ ಮತ್ತು ದುತಿ ಚಂದ್ ಇಬ್ಬರೂ ಸೆಮಿಫೈನಲ್ ಪ್ರವೇಶಿಸಿದ್ದಾರೆ. 100 ಮೀಟರ್ ಮತ್ತು 400 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ದುತಿ ಚಂದ್ ಮತ್ತು ಹಿಮಾ ದಾಸ್ ಅವರಿಬ್ಬರೂ 200 ಮೀಟರ್ ರೇಸ್​ನಲ್ಲಿ ಪದಕ ಗೆಲ್ಲುವ ನಿರೀಕ್ಷೆಗಳಿಲ್ಲ.

ವಾಲಿಬಾಲ್​ನಲ್ಲಿ ಭಾರತೀಯರ ಅಭಿಯಾನ ಅಂತ್ಯಗೊಂಡಿದೆ. ಕ್ವಾರ್ಟರ್​ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 25-21, 21-25, 21-25, 23-25ರಿಂದ ಸೋತು ನಿರ್ಗಮಿಸಿತು. ಸೈಕ್ಲಿಂಗ್​ನಲ್ಲಿ ಯಾವ ಭಾರತೀಯರೂ ಮುಂದಿನ ಹಂತಕ್ಕೆ ಹೋಗಲಿಲ್ಲ. ಬಾಕ್ಸಿಂಗ್​ನಲ್ಲಿ ಇಂದು ಕಣದಲ್ಲಿದ್ದ ಇಬ್ಬರೂ ಭಾರತೀಯರು ಕ್ವಾರ್ಟರ್​ಫೈನಲ್​ನಲ್ಲಿ ಸೋತು ಹೊರಬಿದ್ದಿದ್ದಾರೆ. ಮಹಿಳೆಯರ 57 ಕಿಲೋ ಮತ್ತು 60 ಕಿಲೋ ವಿಭಾಗದಲ್ಲಿ ಸೋನಿಯಾ ಲಾಥರ್ ಮತ್ತು ಪವಿತ್ರಾ ಅವರು ಸೋಲನುಭವಿಸಿದರು.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ