ಬೆಂಗಳೂರು, ಜ. 5: ಇಂದು ದಬಂಗ್ ಡೆಲ್ಲಿ ಮತ್ತು ತೆಲುಗು ಟೈಟಾನ್ಸ್ ನಡುವಿನ ಪ್ರೋಕಬಡ್ಡಿ ಪಂದ್ಯ ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಾ ಸಾಗಿತು. ಅಂತಿಮವಾಗಿ ದಬಂಗ್ ಡೆಲ್ಲಿ 36-35 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ನವೀನ್ ‘ಎಕ್ಸ್ಪ್ರೆಸ್’ ಕುಮಾರ್ ಮಾಮೂಲಿಯಂತೆ ಡೆಲ್ಲಿ ಗೆಲುವಿನ ರೂವಾರಿ ಆದರು. ಸತತ ಮೂರನೇ ಪಂದ್ಯದಲ್ಲಿ ಸೂಪರ್20 ಅಂಕಗಳನ್ನ ಗಳಿಸಿದರು. ಅಂದರೆ ಕಳೆದ ಮೂರು ಪಂದ್ಯಗಳಲ್ಲಿ ನವೀನ್ ಕುಮಾರ್ 20ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಇವತ್ತು ಡೆಲ್ಲಿ ಗಳಿಸಿದ 36 ಅಂಕಗಳಲ್ಲಿ ನವೀನ್ ಅವರೊಬ್ಬರೇ 25 ಅಂಕ ಗಳಿಸಿದರು.
ನವೀನ್ಗೆ ಸರಿಸಾಟಿ ಎನ್ನುವಂತ ಪ್ರದರ್ಶನವನ್ನ ತೆಲುಗು ಟೈಟಾನ್ಸ್ ತಂಡದ ರೇಡರ್ ರಜನೀಶ್ ನೀಡಿದರು. ಗಾಯಾಳು ಬಾಹುಬಲಿ ಸಿದ್ಧಾರ್ಥ್ ದೇಸಾಯಿ ಅನುಪಸ್ಥಿತಿಯಲ್ಲಿ ಆಡುತ್ತಿರುವ ತೆಲುಗು ಟೈಟಾನ್ಸ್ ತಂಡ ಈ ಪಂದ್ಯದಲ್ಲಿ ವೀರೋಚಿತ ಹೋರಾಟ ತೋರಿದರೂ ಗೆಲುವು ದಕ್ಕಲಿಲ್ಲ. ಈ ಸೀಸನ್ನಲ್ಲಿ ಟೈಟಾನ್ಸ್ ಒಂದೂ ಗೆಲುವು ಪಡೆದಿಲ್ಲ ಎಂಬುದು ಅಚ್ಚರಿ. ಆದರೆ, ಬಾಹುಬಲಿ ದೇಸಾಯಿ ಅನುಪಸ್ಥಿತಿ ಕಾಣದ ರೀತಿಯಲ್ಲಿ ರಜನೀಶ್ ರೇಡ್ ಮಾಡಿದರು. ಪಂದ್ಯದ ಎರಡನೇ ಅವಧಿಯಲ್ಲಿ ಇವರು ಇಬ್ಬರು ಡಿಫೆಂಡರ್ಗಳ ಹಿಡಿತದ ಮಧ್ಯೆಯೂ ಮಧ್ಯದ ಗೆರೆ ಮುಟ್ಟಿದ ರೀತಿ ಅವರ ಬಾಹುಬಲಕ್ಕೆ ದ್ಯೋತಕವಾಗಿತ್ತು. ನವೀನ್ಗೆ ಪ್ರತೀ ರೇಡ್ನಲ್ಲೂ ಸರಿಸಾಟಿ ಎನ್ನುವಂತೆ ರಜನೀಶ್ ಆಡಿದರು.
ಈ ಪಂದ್ಯದಲ್ಲಿ ದಬಂಗ್ ಡೆಲ್ಲಿಗಿಂತ ತೆಲುಗು ಟೈಟಾನ್ಸ್ ತಂಡದ ಡಿಫೆನ್ಸ್ ಬಲಿಷ್ಠವಾಗಿತ್ತು. ನವೀನ್ ಅವರನ್ನ ಮೂರು ಬಾರಿ ಅವರು ಕೆಡವಿದ್ದು ಗಮನಾರ್ಹ. ಅದರಲ್ಲೂ ಸುರೀಂದರ್ ಸಿಂಗ್ vs ನವೀನ್ ಕುಮಾರ್ ನಡುವಿನ ಹಾವು ಏಣಿ ಆಟ ಅದ್ಭುತವಾಗಿತ್ತು.
ಇದನ್ನೂ ಓದಿ: PKL 8: ಯೋದ್ಧಾಗೆ ಸೋಲುಣಿಸಿದ ತಲೈವಾಸ್; ಅಂಕ ಹಂಚಿಕೊಂಡ ಸ್ಟೀಲರ್ಸ್, ಮುಂಬಾ
ಗುಜರಾತ್ ವಿರುದ್ಧ ಪುಣೇರಿಗೆ ಸುಲಭ ಗೆಲುವು:
ಇಂದು ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಪುಣೇರಿ ಪಲ್ಟನ್ 33-26 ಅಂಕಗಳಿಂದ ಜಯ ಸಾಧಿಸಿತು. ಇದು ಈ ಸೀಸನ್ನಲ್ಲಿ ಪುಣೇರಿಗೆ ಸಿಕ್ಕ ಎರಡನೇ ಗೆಲುವಾಗಿದೆ. ಆದರೂ ಪುಣೇರಿ ತಂಡ ಅಂಕಪಟ್ಟಿಯಲ್ಲಿ ತಳದಲ್ಲೇ ಇದೆ. ಒಂದೂ ಗೆಲುವು ಕಾಣದ ತೆಲುಗು ಟೈಟಾನ್ಸ್ ಪುಣೇರಿಗಿಂತ ಒಂದು ಸ್ಥಾನ ಮೇಲಿದೆ.
ಇಂದು ಪುಣೇರಿ ತಂಡದ ಗೆಲುವಿನಲ್ಲಿ ರೇಡರ್ಸ್ ಮೋಹಿತ್ ಗೋಯತ್ (10 ಅಂಕ) ಮತ್ತು ಅಸ್ಲಮ್ ಇನಾಮ್ದಾರ್ (8 ಅಂಕ) ಪ್ರಮುಖ ಪಾ್ರ ವಹಿಸಿದರು. ಗುಜರಾತ್ ತಂಡದ ಪರ ಅಜಯ್ ಕುಮಾರ್ ಮತ್ತು ರಾಕೇಶ್ ಉತ್ತಮ ಪ್ರದರ್ಶನ ನೀಡಿದರು.
ಗುರುವಾರದ ಪಂದ್ಯಗಳು:
1) ಪಟ್ನಾ ಪೈರೇಟ್ಸ್ vs ತಮಿಳ್ ತಲೈವಾಸ್, ಸಮಯ ಸಂಜೆ 7:30ಕ್ಕೆ
2) ಬೆಂಗಳೂರು ಬುಲ್ಸ್ vs ಜೈಪುರ್ ಪಿಂಕ್ ಪ್ಯಾಂಥರ್ಸ್, ಸಮಯ ರಾತ್ರಿ 8:30ಕ್ಕೆ
ಬೆಂಗಳೂರು ಬುಲ್ಸ್ ಮತ್ತು ಪಟ್ನಾ ಪೈರೇಟ್ಸ್ ತಂಡಗಳಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಅವಕಾಶ ನಾಳೆಯ ಪಂದ್ಯಗಳು ಒದಗಿಸಿವೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆದ್ದರೆ 10ನೇ ಸ್ಥಾನದಿಂದ ಐದು ಅಥವಾ ಆರನೇ ಸ್ಥಾನಕ್ಕೆ ಜಿಗಿಯುವ ಅವಕಾಶ ಇದೆ. ತಮಿಳ್ ತಲೈವಾಸ್ ತಂಡಕೂಡ ಟಾಪ್ 3 ಸ್ಥಾನಕ್ಕೆ ಏರುವ ಅವಕಾಶ ಹೊಂದಿದೆ.
ಇದನ್ನೂ ಓದಿ: PKL 8: ಅಂಕಪಟ್ಟಿ, ಅತಿಹೆಚ್ಚು ಯಶಸ್ವಿ ರೇಡ್, ಟ್ಯಾಕಲ್ನಲ್ಲಿ ಬಂಗಳೂರು ಬುಲ್ಸ್ ಮುಂದು
ಅಂಕಪಟ್ಟಿ:
1) ದಬಂಗ್ ಡೆಲ್ಲಿ: 26 ಅಂಕ
2) ಬೆಂಗಳೂರು ಬುಲ್ಸ್: 23 ಅಂಕ
3) ಪಟ್ನಾ ಪೈರೇಟ್ಸ್: 21 ಅಂಕ
4) ಯು ಮುಂಬಾ: 20 ಅಂಕ
5) ತಮಿಳ್ ತಲೈವಾಸ್: 19 ಅಂಕ
6) ಬೆಂಗಾಲ್ ವಾರಿಯರ್ಸ್: 16 ಅಂಕ
7) ಹರಿಯಾಣ ಸ್ಟೀಲರ್ಸ್: 15 ಅಂಕ
8) ಗುಜರಾತ್ ಜೈಂಟ್ಸ್: 14 ಅಂಕ
9) ಯು ಪಿ ಯೋದ್ಧಾ: 14 ಅಂಕ
10) ಜೈಪುರ್ ಪಿಂಕ್ ಪ್ಯಾಂಥರ್ಸ್: 12 ಅಂಕ
11) ತೆಲುಗು ಟೈಟಾನ್ಸ್: 10 ಅಂಕ
12) ಪುಣೇರಿ ಪಲ್ಟಾನ್: 10 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ