PKL 8: ಡಿ. 22ರಿಂದ ಪ್ರೇಕ್ಷಕರ ಸದ್ದಿಲ್ಲದೆ ಪ್ರೋಕಬಡ್ಡಿ ಹಬ್ಬ; ಬೆಂಗಳೂರಲ್ಲೇ ಎಲ್ಲಾ ಪಂದ್ಯ

Pro Kabaddi League 2021- ಎಂಟನೇ ಸೀಸನ್​ನ ಪ್ರೋಕಬಡ್ಡಿ ಲೀಗ್ ಡಿಸೆಂಬರ್ 22ರಂದು ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ. ಕೋವಿಡ್ ಕಾರಣಕ್ಕೆ ಎಲ್ಲಾ ಪಂದ್ಯಗಳು ಒಂದೇ ಕಡೆ ನಡೆಯಲಿವೆ.

ಪಿಕೆಎಲ್ ರೇಡರ್

ಪಿಕೆಎಲ್ ರೇಡರ್

  • Share this:
ಈ ಐಪಿಎಲ್ ಕ್ರಿಕೆಟ್ ಟೂರ್ನಿಯ ನಂತರ ಅನೇಕ ಕ್ರೀಡಾ ಅಭಿಮಾನಿಗಳನ್ನು ತುಂಬಾನೇ ರಂಜಿಸಿದ್ದು ಎಂದರೆ ಅದು ಪ್ರೊ ಕಬಡ್ಡಿ ಲೀಗ್ (PKL - ಪಿಕೆಎಲ್ 2021) ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಈ ಕಬ್ಬಡ್ಡಿಯ ಲೀಗ್ ಅನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ ಎಂದು ಹೇಳಬಹುದು. ಕ್ರಿಕೆಟ್ ನಲ್ಲಿರುವಂತೆಯೇ ಕೊನೆಯ ಕ್ಷಣದ ರೋಚಕತೆ ಮತ್ತು ಎದುರಾಳಿ ತಂಡಗಳ ಹಣಾಹಣಿ ಮತ್ತು ಆಟಗಾರರ ಗೆಲ್ಲಬೇಕೆಂಬ ಛಲ ಇವೆಲ್ಲವೂ ನೋಡಲು ಸಿಗುವುದು ಇವೆಲ್ಲವೂ ಪಿಕೆಎಲ್​ನಲ್ಲಿ ಲಭ್ಯ.

ಈ ಬಾರಿಯ ಎಂಟನೇ ಸೀಸನ್​ನ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೇ ಡಿಸೆಂಬರ್ 22 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಕೋವಿಡ್-19 ವೈರಸ್ ಸಾಂಕ್ರಾಮಿಕದಿಂದಾಗಿ ಪ್ರೇಕ್ಷಕರಿಲ್ಲದೆ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ಎಂಟನೇ ಸೀಸನ್​ನ ಪ್ರೊ ಕಬಡ್ಡಿ ಲೀಗ್​ನ ಟೂರ್ನಿಗಾಗಿ ಆಟಗಾರರ ಹರಾಜುಗಳನ್ನು ಆಗಸ್ಟ್ 29 ರಿಂದ 31 ರವರೆಗೆ ಮುಂಬೈನಲ್ಲಿ ನಡೆಸಲಾಯಿತು.

ಆಟಗಾರರು ಮತ್ತು ಎಲ್ಲಾ ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷ ಬೆಂಗಳೂರಿನ ಒಂದೇ ಸ್ಥಳದಲ್ಲಿ ಪ್ರೇಕ್ಷಕರಿಲ್ಲದೆ ಲೀಗ್ ನಡೆಯಲಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಆಯೋಜಿಸಲಾಗುತ್ತಿದ್ದ ಟೂರ್ನಿಯ ಸ್ವರೂಪಕ್ಕೆ ಭಿನ್ನವಾಗಿ ಈ ವರ್ಷದ ಟೂರ್ನಿಯನ್ನು ಬೇರೆ ತರಹದಲ್ಲಿ ನಡೆಸಲಾಗುತ್ತದೆ ಎಂದು ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಆಯೋಜಕರಾದ ಮಾಶಾಲ್ ಸ್ಪೋರ್ಟ್ಸ್ (Mashal Sports) ಹೇಳಿದೆ.

ಪಿಕೆಎಲ್ 2021 ರ ಮರಳುವಿಕೆಯ ಬಗ್ಗೆ ಮಾತನಾಡಿದ ಮಶಾಲ್ ಸ್ಪೋರ್ಟ್ಸ್ ಸಿಇಓ ಮತ್ತು ಪ್ರೊ ಕಬಡ್ಡಿ ಲೀಗ್ ನ ಆಯುಕ್ತರಾದ ಅನುಪಮ್ ಗೋಸ್ವಾಮಿ ಅವರು, "ಉತ್ತಮ ಸುರಕ್ಷತಾ ಅಭ್ಯಾಸಗಳೊಂದಿಗೆ ದೊಡ್ಡ ಸ್ಪರ್ಧಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ಬೆಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳಿವೆ. ಪಿಕೆಎಲ್ ಸೀಸನ್ 8 ಅನ್ನು ಯಶಸ್ವಿಯಾಗಿ ಪ್ರದರ್ಶಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಈ ಪ್ರೊ ಕಬಡ್ಡಿ ಲೀಗ್ ಟೂರ್ನಿಯನ್ನು ರಾಜ್ಯಕ್ಕೆ ಸ್ವಾಗತಿಸಿದರು.

"ಕಬಡ್ಡಿ ಆಟವು ಭಾರತದ ನಿಜವಾದ ದೇಶಿಯ ಕ್ರೀಡೆಯಾಗಿದೆ ಮತ್ತು ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಸೀಸನ್ 8 ರ ಟೂರ್ನಿಯನ್ನು ನಾವು ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ" ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Bulls Koo: ಧೂಳ್ ಧೂಳ್… ಗೆಲ್ಲಕ್ಕೆ ಬಿಡಲ್ಲ…! ಬೆಂಗಳೂರು ಬುಲ್ಸ್ ಕಬಡ್ಡಿ ಕಹಳೆಯ ಕೂ

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಸರ್ಕಾರದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ಲೀಗ್ ಶಿಷ್ಟಾಚಾರಗಳನ್ನು ಜಾರಿಗೆ ತರುತ್ತದೆ ಮತ್ತು ಕಠಿಣ ಸುರಕ್ಷತಾ ಅಭ್ಯಾಸಗಳನ್ನು ಜಾರಿಗೆ ತರಲು ಮತ್ತು ಆಟಗಾರರಿಗೆ ಸುರಕ್ಷಿತವಾಗಿರಿಸಲು ವಿಶೇಷ ಸುರಕ್ಷತಾ ಏಜೆನ್ಸಿಗಳೊಂದಿಗೆ ಚರ್ಚಿಸಿ ಕೆಲಸ ಮಾಡುತ್ತದೆ ಎಂದು ಟೂರ್ನಿಯ ಆಯೋಜಕರು ಳು ಹೇಳಿದರು.

ದುಬಾರಿ ಬೆಲೆ ಪಡೆದ ಭಾರತೀಯ ಆಟಗಾರರು:

ರೈಡರ್ ಪ್ರದೀಪ್ ನರ್ವಾಲ್ ಮತ್ತು ಸಿದ್ದಾರ್ಥ್ ದೇಸಾಯಿ ಅವರಿಬ್ಬರು ಆಟಗಾರರು ಎಂಟನೇ ಸೀಸನ್ ನ ಹರಾಜಿನಲ್ಲಿ ಗರಿಷ್ಠ ಬೆಲೆಯನ್ನು ಪಡೆದುಕೊಂಡಿದ್ದಾರೆ. ಯುಪಿ ಯೋಧಾ ತಂಡವು ಪ್ರದೀಪ್ ಅವರನ್ನು 1 ಕೋಟಿ 65 ಲಕ್ಷ ನೀಡಿ ಪಡೆದುಕೊಂಡರೆ, ಸಿದ್ಧಾರ್ಥ್ ಅವರನ್ನು ತೆಲುಗು ಟೈಟನ್ಸ್ ತಂಡವು 1 ಕೋಟಿ 30 ಲಕ್ಷ ರೂಪಾಯಿಗೆ ಪಡೆದುಕೊಂಡಿದ್ದಾರೆ.

ಇದಲ್ಲದೆ ರೈಡರ್ ಮಂಜಿತ್ ಅವರು 92 ಲಕ್ಷ ರೂಪಾಯಿಗೆ ತಮಿಳ್ ತಲೈವಾಸ್ ತಂಡದ ಪಾಲಾದರೆ, ರೋಹಿತ್ ಅವರು 83 ಲಕ್ಷ ರೂಪಾಯಿಗೆ ಹರಿಯಾಣ ಸ್ಟೀಲರ್ಸ್ ತಂಡದ ಪಾಲಾಗಿದ್ದಾರೆ.

ಇದನ್ನೂ ಓದಿ: Kabaddi Moves- ಡುಬ್ಕಿ, ಫ್ರಾಗ್ ಜಂಪ್, ಸ್ಕಾರ್ಪಿಯನ್ ಕಿಕ್… 6 ಸಖತ್ ಕಬಡ್ಡಿ ರೇಡಿಂಗ್ ಕಲೆಗಳು

ಹರಾಜಿನಲ್ಲಿ ಹೆಚ್ಚು ಬೆಲೆ ಪಡೆದ ವಿದೇಶಿ ಆಟಗಾರರು: 

ವಿದೇಶಿ ಆಟಗಾರರ ಪೈಕಿ ಇರಾನ್ ನ ಆಟಗಾರ ಮೊಹಮ್ಮದ್ ರೇಜಾ ಚಿಹಾನೆಹ್ ಅವರು 31 ಲಕ್ಷ ರೂಪಾಯಿ ಪಡೆದು ಪಟ್ನಾ ಪೈರೇಟ್ಸ್ ತಂಡದ ಪಾಲಾದರೆ, ಅಬೋಜರ್ ಮಿಘಾನಿ ಅವರು 30.5 ಲಕ್ಷ ರೂಪಾಯಿಗೆ ಬೆಂಗಾಲ್ ವಾರಿಯರ್ಸ್ ತಂಡದ ಪಾಲಾಗಿದ್ದಾರೆ ಎಂದು ಹೇಳಬಹುದು.

ಕೊರಿಯಾದ ಜಂಗ್‌ಕುನ್ ಲೀ ಅವರು 20.5 ಲಕ್ಷ ರೂಪಾಯಿ ಪಡೆದು ಪಟ್ನಾ ಪೈರೇಟ್ಸ್ ತಂಡದ ಪಾಲಾಗಿದ್ದಾರೆ ಮತ್ತು ಇನ್ನೊಬ್ಬ ಇರಾನ್ ನ ಆಟಗಾರ ಹಾದಿ ಒಸ್ಟರಕ್ ಅವರು 20 ಲಕ್ಷ ರೂಪಾಯಿ ಪಡೆದು ಗುಜರಾತ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: