PKL 8: ನಾಳೆಯಿಂದ ಪ್ರೋಕಬಡ್ಡಿ ಕಲರವ; ಹಿಂದಿನ ಸೀಸನ್​ಗಳಲ್ಲಿ ಗೆದ್ದವರು ಇವರು

Pro Kabaddi League 2021: ಕೋವಿಡ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಪಿಕೆಎಲ್ನ ಎಂಟನೇ ಸೀಸನ್ ಡಿ. 22ರಂದು (ನಾಳೆಯಿಂದ) ಆರಂಭವಾಗುತ್ತಿದೆ. ಈಗ ಸ್ಪರ್ಧಿಸಿರುವ ಹನ್ನೆರಡು ತಂಡಗಳ ಪೈಕಿ ಐದು ತಂಡಗಳು ಮಾತ್ರ ಈವರೆಗೆ ಟ್ರೋಫಿ ಎತ್ತಿಹಿಡಿದಿವೆ.

ಪ್ರೋಕಬಡ್ಡಿ ಟ್ರೋಫಿ

ಪ್ರೋಕಬಡ್ಡಿ ಟ್ರೋಫಿ

  • News18
  • Last Updated :
  • Share this:
    ಬೆಂಗಳೂರು, ಡಿ. 21: ಪ್ರೋಕಬಡ್ಡಿ ಲೀಗ್ ಪಂದ್ಯಾವಳಿ ಈಗ ಎಂಟನೇ ಸೀಸನ್​ಗೆ ಕಾಲಿಟ್ಟಿದೆ. ನಾಳೆಯಿಂದ ಮೊದಲ ಲೆಗ್ ಪಂದ್ಯಾವಳಿ ನಡೆಯಲಿದೆ. ನಾಳೆ ಬುಧನವಾರ ಸಂಜೆ 7:30ಕ್ಕೆ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ನಡುವಿನ ಪಂದ್ಯದ ಮೂಲಕ ಪಿಕೆಎಲ್-8 ಆರಂಭ ಆಗಲಿದೆ. ಈವರೆಗೆ ಏಳು ಬಾರಿ ಪ್ರೋಕಬಡ್ಡಿ ಲೀಗ್ ನಡೆದಿದೆ. ಬಂಗಾಳ್ ವಾರಿಯರ್ಸ್ ತಂಡ ಹಾಲಿ ಚಾಂಪಿಯನ್ ಎನಿಸಿದೆ.

    ಒಟ್ಟು 12 ತಂಡಗಳು ಅಂಗಳಕ್ಕೆ ಧುಮುಕಲಿವೆ. ಕಳೆದ ಏಳು ಸೀಸನ್​ನಲ್ಲಿ ಐದು ತಂಡಗಳು ಐಪಿಎಲ್ ಟ್ರೋಫಿ ಗೆದ್ದು ಬೀಗಿವೆ. ಬೆಂಗಳೂರು ಬುಲ್ಸ್ ತಂಡ ಒಮ್ಮೆ ಗೆದ್ದಿದೆ. ಪಾಟ್ನಾ ಪೈರೇಟ್ಸ್ ಮೂರು ಬಾರಿ ಗೆದ್ದು ದಾಖಲೆ ಸ್ಥಾಪಿಸಿದೆ.

    ಉದ್ಘಾಟನಾ ಸೀಸನ್​ನಲ್ಲಿ ಪಿಕೆಎಲ್ ಗೆದ್ದ ಭಾಗ್ಯ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ್ದಾಗಿದೆ. ಮಾಲೀಕರಲ್ಲೊಬ್ಬರಾದ ಅಭಿಷೇಕ್ ಬಚ್ಚನ್ ಅವರ ಪ್ರಚಂಡ ಉತ್ಸಾಹಭರಿತ ಬೆಂಬಲ ಜೈಪುರದ ಪ್ಲಸ್ ಪಾಯಿಂಟ್​ಗಳಲ್ಲೊಂದಾಗಿತ್ತು.

    ಸೀಸನ್​ವಾರು ಪಿಕೆಎಲ್ ಗೆದ್ದ ತಂಡಗಳು:

    1) ಮೊದಲ ಸೀಸನ್ (2014): ಜೈಪುರ್ ಪಿಂಕ್ ಪ್ಯಾಂಥರ್ಸ್
    2) ಎರಡನೇ ಸೀಸನ್ (2015): ಯು ಮುಂಬಾ
    3) ಮೂರನೇ ಸೀಸನ್ (2016: ಪಾಟ್ನಾ ಪೈರೇಟ್ಸ್
    4) ನಾಲ್ಕನೇ ಸೀಸನ್ (2016): ಪಾಟ್ನಾ ಪೈರೇಟ್ಸ್
    5) ಐದನೇ ಸೀಸನ್ (2017): ಪಾಟ್ನಾ ಪೈರೇಟ್ಸ್
    6) ಆರನೇ ಸೀಸನ್ (2018): ಬೆಂಗಳೂರು ಬುಲ್ಸ್
    7) ಏಳನೇ ಸೀಸನ್ (2019): ಬಂಗಾಲ್ ವಾರಿಯರ್ಸ್

    ಇದನ್ನೂ ಓದಿ: Video: ಬೆಂಗಳೂರು ಬುಲ್ಸ್ ಪ್ರೋಕಬಡ್ಡಿ ಚಾಂಪಿಯನ್ ಆಗಿದ್ದು ಹೀಗೆ, ರೋಚಕ ಫೈನಲ್ ವಿಡಿಯೋ

    ಜನಪ್ರಿಯ ಕ್ರೀಡೆಗೆ ಜನಬೆಂಬಲ:

    ಐಪಿಎಲ್​ನ ಫ್ರಾಂಚೈಸಿ ಮಾದರಿಯಂತೆ ಪ್ರೋ ಕಬಡ್ಡಿ ರೂಪಿಸಲಾಯಿತು. ಕ್ರಿಕೆಟ್ ನಂತರ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಕಬಡ್ಡಿಗೆ ಆಧುನಿಕ ಸ್ಪರ್ಶದಿಂದ ಇನ್ನಷ್ಟು ಕಳೆಗಟ್ಟಿತು. ಸಿನಿಮಾ ನಟರು, ಕ್ರಿಕೆಟ್ ಸ್ಟಾರ್​ಗಳು ಮೊದಲಾದ ಸೆಲಬ್ರಿಟಿಗಳು ಪಿಕೆಎಲ್​ನ ಕಲರವದಲ್ಲಿ ಭಾಗಿಯಾದರು. ಸ್ಟೇಡಿಯಂನಲ್ಲಿ ಪ್ರೇಕ್ಷಕರು ಭರ್ತಿಯಾದರು. ಟಿವಿ ವೀಕ್ಷಣೆಯಲ್ಲಿ ಕ್ರಿಕೆಟ್​ಗೆ ಪೈಪೋಟಿ ನೀಡುವಷ್ಟು ಪಿಕೆಎಲ್ ಜನಪ್ರಿಯವಾಯಿತು.

    ಪ್ರೋಕಬಡ್ಡಿ ಲೀಗ್​ನ ಆರಂಭಿಕ ವರ್ಷಗಳಲ್ಲಿ ಗಮನ ಸೆಳೆದ ತಂಡಗಳು:

    2014ರಲ್ಲಿ ಪ್ರೋಕಬಡ್ಡಿ ಲೀಗ್ ಪ್ರಾರಂಭವಾದಾಗ ಎಂಟು ತಂಡಗಳನ್ನ ಒಳಗೊಳ್ಳಲಾಗಿತ್ತು. ಬೆಂಗಳೂರು ಬುಲ್ಸ್, ಬಂಗಾಲ್ ವಾರಿಯರ್ಸ್, ದಬಾಂಬ್ ಡೆಲ್ಲಿ, ಜೈಪುರ್ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟಾನ್, ತೆಲುಗು ಟೈಟಾನ್ಸ್ ಮತ್ತು ಯು ಮಂಬಾ ತಂಡಗಳು ಕಣದಲ್ಲಿದ್ದವು.

    ಈ ಎಂಟು ತಂಡಗಳ ಪೈಕಿ ಶಕ್ತಿಶಾಲಿಯಂತೆ ತೋರಿದ್ದು ಯು ಮುಂಬಾ, ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಬೆಂಗಳೂರು ಬುಲ್ಸ್ ತಂಡಗಳು. ಇದರ ಜೊತೆಗೆ ಪಾಟ್ನಾ ಪೈರೇಟ್ಸ್, ತೆಲುಗು ಟೈಟಾನ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳೂ ಉತ್ತಮ ಪ್ರದರ್ಶನದಿಂದ ಗಮನ ಸೆಳೆದವು.

    ಇದನ್ನೂ ಓದಿ: Pro Kabaddi- ಡ್ಯಾಶ್, ಬ್ಲಾಕ್… ಕಬಡ್ಡಿಯ 5 ರಕ್ಷಣಾ ತಂತ್ರಗಳು ಬಲು ರೋಚಕ

    ಗಮನ ಸೆಳೆದ ಆಟಗಾರರು:

    ಬೆಂಗಳೂರು ಬುಲ್ಸ್ ತಂಡದ ಮೊದಲೆರಡು ಸೀಸನ್​ನಲ್ಲಿ ಸೂಪರ್ ಸ್ಟಾರ್ ಪ್ಲೇಯರ್ಸ್ ಇದ್ದರು. ಡಿಫೆನ್ಸ್​ನಲ್ಲಿ ಮಂಜೀತ್ ಚಿಲ್ಲರ್ ಮತ್ತು ರೇಡಿಂಗ್​ನಲ್ಲಿ ಅಜಯ್ ಠಾಕೂರ್ ಅದ್ಭುತ ಎನಿಸಿದ್ದರು. ಮುಂಬೈನ ಅನೂಪ್ ಕುಮಾರ್ ರೇಡಿಂಗ್ ಬಂದರೆ ತಡೆಯುವವರು ಇಲ್ಲದಂತಾಗಿತ್ತು.  ಹಾಗೆಯೇ ದಬಾಂಗ್ ಡೆಲ್ಲಿಯಲ್ಲಿ ಕಾಶಿಲಿಂಗ್ ಅಡಕೆ, ತೆಲುಗು ಟೈಟಾನ್ಸ್​ನಲ್ಲಿ ಕನ್ನಡಿಗ ಸುಖೇಶ್ ಹೆಗಡೆ, ಬೆಂಗಳೂರು ತಂಡದಲ್ಲಿ ಧರ್ಮರಾಜ್ ಚೇರ್ಲನಾದನ್, ಯು ಮುಂಬಾದಲ್ಲಿ ಮತ್ತೊಬ್ಬ ಕನ್ನಡಿಗ ರಿಷಾಂಕ್ ದೇವಾಡಿಗ ಮೊದಲಾದವರು ಮಿಂಚಿದ್ದರು.

    ಟ್ರೋಫಿ ಇನ್ನೂ ಗೆದ್ದಿಲ್ಲದ ತಂಡಗಳು:

    ಹನ್ನೆರಡು ತಂಡಗಳ ಪೈಕಿ ಐದು ತಂಡಗಳಿಗೆ ಮಾತ್ರ ಟ್ರೋಫಿ ಗೆಲುವು ಸಿಕ್ಕಿದೆ. ದಬಾಂಗ್ ಡೆಲ್ಲಿ, ಗುಜರಾತ್ ಫಾರ್ಚೂನ್ ಜೈಂಟ್ಸ್, ಹರ್ಯಾಣ ಸ್ಟೀಲರ್ಸ್, ಪುಣೇರಿ ಪಲ್ಟಾನ್, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್ ತಂಡಗಳು ಒಮ್ಮೆಯೂ ಪಿಕೆಎಲ್ ಚಾಂಪಿಯನ್ ಆಗಿಲ್ಲ.
    Published by:Vijayasarthy SN
    First published: