Pro Kabaddi ಗೆ ಇನ್ನೊಂದೇ ತಿಂಗಳು; ಬೆಂಗಳೂರಲ್ಲೇ ಏಕೆ ಪಂದ್ಯಗಳು? Live Streaming ಇತ್ಯಾದಿ ವಿವರ

Indian Kabaddi Carnival Start from December 22nd: ಒಟ್ಟು 12 ತಂಡಗಳಿರುವ ಪ್ರೋಕಬಡ್ಡಿ ಲೀಗ್​ನ ಎಂಟನೇ ಸೀಸನ್ ಪಂದ್ಯಾವಳಿ ಡಿಸೆಂಬರ್ 22ರಂದು ಆರಂಭವಾಗಲಿದೆ. ಬೆಂಗಳೂರಿನಲ್ಲೇ ಎಲ್ಲಾ ಪಂದ್ಯಗಳು ನಡೆಯುತ್ತಿರುವುದು ವಿಶೇಷ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ಬೆಂಗಳೂರು, ನ. 22: ದೇಶದಲ್ಲಿ ಕ್ರೀಡಾಪ್ರೇಮಿಗಳಿಗೆ ರಸಗವಳ. ಐಪಿಎಲ್ ಆಯ್ತು, ಟಿ20 ವಿಶ್ವಕಪ್ ಆಯ್ತು, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆಯ್ತು, ಐ ಲೀಗ್, ಐಎಸ್​ಎಲ್ ಫುಟ್ಬಾಲ್ ಲೀಗ್ ಚಾಲ್ತಿಯಲ್ಲಿವೆ. ಇದರ ಜೊತೆಗೆ ಇದೀಗ ಪ್ರೋ ಕಬಡ್ಡಿಗೆ (Pro Kabaddi-8) ದಿನಗಣನೆ ಆರಂಭವಾಗಿದೆ. ಇವತ್ತಿಗೆ ಸರಿಯಾಗಿ ಒಂದು ತಿಂಗಳಿಗೆ VIVO ಪ್ರೋಕಬಡ್ಡಿ ಸೀಸನ್ 8 ಆರಂಭವಾಗಲಿದೆ. ಡಿಸೆಂಬರ್ 22ರಿಂದ ಪಂದ್ಯಾವಳಿ ನಡೆಯಲಿದೆ. ಆದರೆ, ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.

    ಬೆಂಗಳೂರಿನಲ್ಲಿ ಮಾತ್ರ ಪಂದ್ಯಗಳು: ಕೋವಿಡ್ ಕಾರಣಕ್ಕೆ ಈ ಬಾರಿಯ ಪ್ರೋಕಬಡ್ಡಿ ಪಂದ್ಯಾವಳಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹಿಂದಿನ ಋತುಗಳಲ್ಲಿ ನಾಲ್ಕೈದು ಸ್ಥಳಗಳಲ್ಲಿ ಪಂದ್ಯಗಳನ್ನ ಆಡಿಸಲಾಗುತ್ತಿತ್ತು. ಈಗ ಒಂದೇ ನಗರದಲ್ಲಿ ಪಂದ್ಯಗಳನ್ನ ಆಡಿಸಲು ನಿರ್ಧರಿಸಲಾಗಿದೆ. ಅದಕ್ಕೆ ಬೆಂಗಳೂರು ನಗರ ಆಯ್ಕೆ ಆಗಿದೆ.

    ಬೆಂಗಳೂರಿನ ಹೃದಯಭಾಗ ಕಬ್ಬನ್ ಪಾರ್ಕ್ ಎದುರು ಇರುವ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ (Sri Kantheerava Stadium in Bangalore) ಈ ಸೀಸನ್​ನ ಎಲ್ಲಾ ಪಂದ್ಯಗಳು ನಡೆಯಲಿವೆ.

    ಕಟ್ಟುನಿಟ್ಟಿನ ಬಯೋಬಬಲ್ ವ್ಯವಸ್ಥೆ ಇರಲಿದೆ. ಬೇರೆ ಬೇರೆ ಸ್ಥಳಗಳಲ್ಲಿ ಪಂದ್ಯಗಳನ್ನ ನಡೆಸಿದರೆ ಆಟಗಾರರಿಗೆ ಹೊರಗಿನ ಸಂಪರ್ಕ ತಾಗಿ ಸೋಂಕು ತಗುಲುವ ಅಪಾಯ ಇರುವ ಹಿನ್ನೆಲೆಯಲ್ಲಿ ಒಂದೇ ಸ್ಥಳದಲ್ಲಿ ಪಂದ್ಯ ನಡೆಸುವುದೆಂದು ತೀರ್ಮಾನಿಸಲಾಗಿದೆ. ಮೇಲಾಗಿ ಕಬಡ್ಡಿ ದೈಹಿಕ ಸ್ಪರ್ಶ ಇರುವ ಕ್ರೀಡೆಯಾದ್ದರಿಂದ ಒಬ್ಬರಿಗೆ ಸೋಂಕು ತಗುಲಿದರೆ ಬಹಳ ಬೇಗ ಹರಡುವ ಅಪಾಯವೂ ಇರುವುದರಿಂದ ಈ ತೀರ್ಮಾನ. ಜೊತೆಗೆ, ಆಟಗಾರರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಬೆಳೆಸಿ ಆಯಾಸಗೊಳ್ಳುವುದನ್ನೂ ಇದರಿಂದ ತಪ್ಪಿಸಬಹುದಾಗಿದೆ.

    ಬೆಂಗಳೂರಿನಲ್ಲಿ ಅತ್ಯುನ್ನತ ಪಂದ್ಯಾವಳಿಗಳನ್ನ ಆಯೋಜಿಸಲು ಬೇಕಾದ ಎಲ್ಲಾ ರೀತಿಯ ಸೌಲಭ್ಯ, ಸವಲತ್ತುಗಳು ಇವೆ. ಬೆಂಗಳೂರನ್ನ ಆಯ್ದುಕೊಳ್ಳಲು ಇದೂ ಒಂದು ಪ್ರಮುಖ ಕಾರಣ.

    ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ಅವಕಾಶ ಇಲ್ಲ:

    ಕೋವಿಡ್ ಹಿನ್ನೆಲೆಯಲ್ಲಿ ಆಟಗಾರರ ಸುರಕ್ಷತೆ ದೃಷ್ಟಿಯಿಂದ, ಹಾಗೂ ವಿಶ್ವಾದ್ಯಂತ ಇರುವ ಮಾರ್ಗಸೂಚಿ ಅನ್ವಯ ಸ್ಟೇಡಿಯಂನದಲ್ಲಿ ಪಂದ್ಯಗಳನ್ನ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಕಬಡ್ಡಿ ಪ್ರಿಯರು ಮನೆಯಲ್ಲೇ ಟಿವಿಯಲ್ಲಿ ನೇರ ಪ್ರಸಾರ ವೀಕ್ಷಿಸಿ ಆನಂದಿಸಬಹುದಾಗಿದೆ.

    ಇದನ್ನೂ ಓದಿ: SMA T20- ಶಾರುಕ್ ಭರ್ಜರಿ ಆಟ; ತಮಿಳುನಾಡು ಟಿ20 ಚಾಂಪಿಯನ್; ಕರ್ನಾಟಕಕ್ಕೆ ವೀರೋಚಿತ ಸೋಲು

    ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ಪ್ರಸಾರ:

    ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನ ವಾಹಿನಿಗಳಲ್ಲಿ ಪ್ರೋ ಕಬಡ್ಡಿಯ ಪಂದ್ಯಗಳು ನೇರ ಪ್ರಸಾರ ಇರಲಿವೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗಳಲ್ಲಿ ಕನ್ನಡ ವೀಕ್ಷಕವಿವರಣೆಯೊಂದಿಗೆ ಕಬಡ್ಡಿ ಪಂದ್ಯಗಳನ್ನ ಆನಂದಿಸಬಹುದು. ಡಿಸ್ನಿ – ಹಾಟ್ ಸ್ಟಾರ್ ಮೊಬೈಲ್ ಆ್ಯಪ್ ಮತ್ತು ವೆಬ್ ಸೈಟ್​ಗಳಲ್ಲೂ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಇದೆ.

    12 ತಂಡಗಳು: ಈ ಬಾರಿಯ ಎಂಟನೇ ಸೀಸನ್​ನಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳುತ್ತಿವೆ.

    ತಂಡಗಳು: ಬಂಗಾಳ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಬ್ ಡೆಲ್ಲಿ, ಗುಜರಾತ್ ಫಾರ್ಚೂನ್ ಜೈಂಟ್ಸ್, ಹರ್ಯಾಣ ಸ್ಟೀಲರ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುನೇರಿ ಪಲ್ಟಾನ್, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಯುಪಿ ಯೋದ್ಧಾ, ಯು ಮುಂಬಾ.

    ಇದನ್ನೂ ಓದಿ: IPL 2022- ಐಪಿಎಲ್ ಆಕ್ಷನ್​ನಲ್ಲಿ ಈ ಆಟಗಾರನಿಗೆ ಹೊಸ ದಾಖಲೆ ಬೆಲೆ: ಮಾಜಿ ಕ್ರಿಕೆಟಿಗ ಭವಿಷ್ಯ

    ಕರ್ನಾಟಕದ ಬಿ ಸಿ ರಮೇಶ್ ಕೋಚ್:

    ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಹಾಗೂ ಕರ್ನಾಟಕದ ಮಾಜಿ ಕಬಡ್ಡಿ ಆಟಗಾರ ಬಿ ಸಿ ರಮೇಶ್ ಅವರು ಬಂಗಾಳ್ ವಾರಿಯರ್ಸ್ ತಂಡದ ಕೋಚ್ ಆಗಿದ್ದಾರೆ. ಬೆಂಗಳೂರು ಬುಲ್ಸ್ ತಂಡಕ್ಕೆ ಮಾಜಿ ಟೀಮ್ ಇಂಡಿಯಾ ಆಟಗಾರ ರಣಧೀರ್ ಸಿಂಗ್ ಶೆರಹಾವತ್ ಅವರು ಕೋಚ್ ಆಗಿದ್ದಾರೆ. ಪವನ್ ಕುಮಾರ್ ಶೆಹ್ರಾವತ್ ಅವರು ಬುಲ್ಸ್ ಕ್ಯಾಪ್ಟನ್ ಆಗಿದ್ದಾರೆ.

    ಸಿನಿಮಾ ನಂಟು: ಅಭಿಷೇಕ್ ಬಚ್ಚನ್ ಅವರು ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕರಾಗಿದ್ದಾರೆ. ಟಾಲಿವುಡ್ ಚಿತ್ರರಂಗದ ದಿಗ್ಗಜರಾದ ಅಲ್ಲು ಅರ್ಜುನ್, ರಾಮ್ ಚರಣ್ ಅವರು ತಮಿಳ್ ತಲೈವಾಸ್ ತಂಡದ ಮಾಲೀಕರಾಗಿದ್ಧಾರೆ. ಸಚಿನ್ ತೆಂಡೂಲ್ಕರ್ ಕೂಡ ಇದೇ ತಂಡದ ಸಹ-ಮಾಲಿಕರೆನಿಸಿದ್ದಾರೆ. ರೋನೀ ಸ್ಕ್ರೂವಾಲ ಅವರು ಯು ಮುಂಬಾದ ಓನರ್.
    Published by:Vijayasarthy SN
    First published: