ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರ ರಸ್ತೆ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಪಂತ್ ಅವರ ತಾಯಿಯೊಂದಿಗೆ ಮಾತನಾಡಿದ್ದಾರೆ. ಅವರು ಪಂತ್ (Rishabh Pant) ಅವರ ಸ್ಥಿತಿಯ ಬಗ್ಗೆ ತಾಯಿಯನ್ನು ಕೇಳಿದ್ದಾರೆ ಮತ್ತು ಪಂತ್ ಅವರ ತಾಯಿಗೆ (Mother) ಧೈರ್ಯದ ಮಾತುಗಳನ್ನು ಆಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದಿನ ದಿನ, ರಿಷಭ್ ಪಂತ್ ಅವರ ಅಪಘಾತದ ಬಗ್ಗೆ ಪ್ರಧಾನಿ ದುಃಖ ವ್ಯಕ್ತಪಡಿಸಿದ್ದರು. ರಿಷಭ್ ಪಂತ್ ಅವರ ಕಾರು ಅಪಘಾತದಿಂದ ಮನನೊಂದ ಅವರು ಟ್ವೀಟ್ ಮಾಡಿದ್ದರು. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದರು. ಅಲ್ಲದೇ ನಿನ್ನೆಯೇ ಮೋದಿ ಅವರ ತಾಯಿಯೂ ಸಹ ನಿಧನರಾಗಿದ್ದರು.
ಪವಾಡ ರೀತಿಯಲ್ಲಿ ಬದುಕಉಳಿದ ಪಂತ್:
ಮಹತ್ವದ ಸಂಗತಿಯೆಂದರೆ, ಶುಕ್ರವಾರ ಮುಂಜಾನೆ 5:30ರ ಸುಮಾರಿಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಪವಾಡ ರೀತಿಯಲ್ಲಿ ಪಂತ್ ಅಪಘಾತದಿಂದ ಬದುಕುಳಿದರು, ಆದರೆ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಹರಿದ್ವಾರದ ಎಸ್ಎಸ್ಪಿ ಅಜಯ್ ಸಿಂಗ್ ಪಂತ್ ಅವರ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಹರಿದ್ವಾರ ಜಿಲ್ಲೆಯ ಮಂಗಳೂರಿನಲ್ಲಿ ಪಂತ್ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಆತ ನಿದ್ರಿಸಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ಸಮಯದಲ್ಲಿ ಹರಿಯಾಣ ರೋಡ್ವೇಸ್ ಬಸ್ ಅಲ್ಲಿಂದ ಹಾದು ಹೋಗುತ್ತಿತ್ತು. ಅದರ ಚಾಲಕ ತಕ್ಷಣ ಬಸ್ ನಿಲ್ಲಿಸಿ ರಿಷಭ್ ಪಂತ್ ಅವರನ್ನು ರಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Distressed by the accident of noted cricketer Rishabh Pant. I pray for his good health and well-being. @RishabhPant17
— Narendra Modi (@narendramodi) December 30, 2022
ಪಂತ್ ತಲೆ, ಬೆನ್ನು ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಮೆದುಳಿಗೆ ಯಾವುದೇ ರೀತಿಯ ಹಾನಿ ಆಗಿಲ್ಲ ಎಂದು ಸ್ಕ್ಯಾನ್ ವರದಿಯಲ್ಲಿ ಬಂದಿದೆ. ಇದರಿಂದಾಗಿ ಪಂತ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ. ಇನ್ನು, ಅಪಘಾತದ ನಂತರ ಪಂತ್ ಅವರನ್ನು ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿ ಪ್ರಥಮ ಚಿಕಿತ್ಸೆಯ ನಂತರ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಎಸ್ಎಸ್ಪಿ ಪ್ರಕಾರ, ಪಂತ್ ಅವರ ತಲೆ, ಬೆನ್ನು ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಅವರ ಸ್ಥಿತಿ ಸ್ಥಿರವಾಗಿದೆ.
ಇದನ್ನೂ ಓದಿ: Rishabh Pant: ನಿಧಾನವಾಗಿ ಕಾರು ಓಡಿಸು, 3 ವರ್ಷಗಳ ಹಿಂದೆಯೇ ಪಂತ್ಗೆ ಸಲಹೆ ನೀಡಿದ್ದ ಟೀಂ ಇಂಡಿಯಾ ಆಟಗಾರ
ಈ ಅಪಘಾತದ ಬಗ್ಗೆ ರಿಷಭ್ ಪಂತ್ ಅವರ ತಾಯಿಗೆ ಮಾಹಿತಿ ನೀಡಲಾಗಿದೆ. ಏತನ್ಮಧ್ಯೆ, ಐಸಿಯುನಲ್ಲಿ ಪಂತ್ಗೆ ಚಿಕಿತ್ಸೆ ನೀಡುತ್ತಿರುವ ಡಾ. ಸುಶೀಲ್ ನಗರ್, ಪಂತ್ಗೆ ತಲೆ ಮತ್ತು ಮೊಣಕಾಲು ಗಾಯಗಳಾಗಿವೆ ಎಂದು ಹೇಳಿದರು. ಆಸ್ಪತ್ರೆಗೆ ಕರೆತಂದಾಗ ಸಂಪೂರ್ಣ ಪ್ರಜ್ಞೆ ಬಂದಿತ್ತು. ಮನೆಗೆ ಹೋಗುವ ಮೂಲಕ ತನ್ನ ತಾಯಿಯನ್ನು ಆಶ್ಚರ್ಯಗೊಳಿಸಬೇಕೆಂದು ಪಂತ್ ವೈದ್ಯರಿಗೆ ಹೇಳಿದ್ದರಂತೆ.
ಶುಕ್ರವಾರ ಮೋದಿ ತಾಯಿ ವಿಧಿವಶ:
ಇನ್ನು, ಪಂತ್ಗೆ ಅಪಘಾತ ಆಗುವ ಕೆಲ ಗಂಟೆಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಇಹಲೋಕ ತ್ಯಜಿಸಿದ್ದಾರೆ. ಶತಾಯುಶಿಯಾಗಿದ್ದ ಅವರನ್ನು ಅಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ. ಇತ್ತೀಚಿಗಷ್ಟೇ ಮುಕ್ತಾಯವಾಗಿದ್ದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೇ ಹೀರಾಬೆನ್ ಮೋದಿ ಅವರ ಪಾದಸ್ಪರ್ಶಿಸಿ ಆಶೀರ್ವಾದವನ್ನೂ ಪಡೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ