PKL 8: ಒಂದೇ ರೇಡ್​ನಲ್ಲಿ ಎದುರಾಳಿ ಪಾಳಯ ಆಲೌಟ್ ಮಾಡಿದ ಮೋನು ಗೋಯಟ್; ಪಟ್ನಾ, ತಲೈವಾಸ್​ಗೆ ಜಯಭೇರಿ

Pro Kabaddi League 2021: ಇಂದು ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ತಮಿಳ್ ತಲೈವಾಸ್ 36-26 ಅಂಕಗಳಿಂದ ಸೋಲಿಸಿತು. ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಪಟ್ನಾ ಪೈರೇಟ್ಸ್ 44-30 ಅಂಕಗಳಿಂದ ಜಯಭೇರಿ ಭಾರಿಸಿತು.

ಪಟ್ನಾ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ

ಪಟ್ನಾ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ

  • News18
  • Last Updated :
  • Share this:
    ಬೆಂಗಳೂರು, ಡಿ. 31: ಪ್ರೋಕಬಡ್ಡಿ ಲೀಗ್ ಪಂದ್ಯಾವಳಿ ಕೊಡುವ ರೋಚಕತೆಗೆ ಸಾಟಿ ಇಲ್ಲ. ಪ್ರತಿಯೊಂದು ರೇಡ್ ಕೂಡ ಕ್ಷಣಕ್ಷಣವೂ ಕುತೂಹಲ ಮೂಡಿಸುತ್ತದೆ. ಈ ಸೀಸನ್​ನ ಪಿಕೆಎಲ್ ಟೂರ್ನಿಯ ಪ್ರತಿಯೊಂದು ಪಂದ್ಯವೂ ರೋಚಕತೆಯ ಆಗರವಾಗಿದೆ. ಇಂದು ನಡೆದ ಎರಡು ಪಂದ್ಯಗಳಲ್ಲಿ ಪಟ್ನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳು ಗೆಲುವು ಸಾಧಿಸಿದವು. ತಮಿಳ್ ತಲೈವಾಸ್ ತಂಡ ಈ ಸೀಸನ್​ನಲ್ಲಿ ಚೊಚ್ಚಲ ಗೆಲುವಿನ ಸಂಭ್ರಮ ಕಂಡರೆ, ಪಟ್ನಾ ಪೈರೇಟ್ಸ್ ತಂಡಕ್ಕೆ ರೇಡರ್ ಮೋನು ಗೋಯಟ್ ಅವರ ಆಲ್​ಔಟ್ ರೇಡ್ ಮಿಂಚಿನ ಸಂಚಾರ ಕೊಟ್ಟಿತ್ತು.

    ತಮಿಳ್ ತಲೈವಾಸ್​ಗೆ ಮೊದಲ ಗೆಲುವು:

    ಇಂದು ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ತಮಿಳ್ ತಲೈವಾಸ್ 36-26 ಅಂಕಗಳಿಂದ ಗೆಲುವು ಪಡೆಯಿತು. ತಮಿಳ್ ತಲೈವಾಸ್ ಪರ ಅಜಿಂಕ್ಯ ಪವಾರ್ ಸ್ಟಾರ್ ಎನಿಸಿದರು. ಸೂಪರ್ 10 ಗಳಿಸಿದರು. ಮಾಡಿದ 11 ರೇಡ್​ನಲ್ಲಿ ಬರೋಬ್ಬರಿ 11 ಅಂಕ ಗಳಿಸಿದರು. ಪವಾರ್ ಅವರು ಎದುರಾಳಿಗಳ ಕೈಗೆ ಸಿಕ್ಕಿಬಿದ್ದದ್ದು ಒಮ್ಮೆ ಮಾತ್ರ.

    ಇನ್ನು ತಮಿಳ್ ತಲೈವಾಸ್ ತಂಡದ ಸ್ಟಾರ್ ಆಟಗಾರ ಮಂಜೀತ್ ಈ ಪಂದ್ಯದಲ್ಲಿ ದೊಡ್ಡಮಟ್ಟದಲ್ಲಿ ಮಿಂಚಲು ಸಾಧ್ಯವಾಗದಿದ್ದರೂ 8 ಅಂಕಗಳನ್ನ ಗಿಟ್ಟಿಸಲು ಶಕ್ಯರಾದರು. 17 ರೇಡ್​ಗಳಿಂದ ಅವರು ಎಂಟು ಅಂಕ ಗಳಿಸಿದರು. ಬೆಂಗಳೂರು ಹುಡುಗ ಕೆ ಪ್ರಪಂಜನ್ ಅವರು 2 ಅಂಕಕ್ಕೆ ಮಾತ್ರ ತೃಪ್ತಿಪಡಬೇಕಾಯಿತು.

    ಅತ್ತ ಪುಣೇರಿ ಪಲ್ಟಾನ್ಸ್ ತಂಡದ ಸ್ಟಾರ್ ರೇಡರ್ ರಾಹುಲ್ ಚೌಧರಿ ಇಂದಿನ ಪಂದ್ಯದಲ್ಲಿ ಮಂಕಾಗಿ ಹೋಗಿದ್ದರು. ಪಂಕಜ್ ಮೋಹಿತೆ ಮತ್ತು ಅಸ್ಲಮ್ ಒಂದಷ್ಟು ರೇಡಿಂಗ್ ಪಾಯಿಂಟ್ಸ್ ಗಿಟ್ಟಿಸಿದರು. ಪುಣೆ ಡಿಫೆನ್ಸ್​​ನಲ್ಲಿ ಅಬಿನೇಶ್ ನಡರಾಜನ್ ಮತ್ತು ವಿಶಾಲ್ ಭಾರದ್ವಜ್ ಮಿಂಚಿದರು.

    ಇದನ್ನೂ ಓದಿ: PKL 8: ಹರ್ಯಾಣ ವಿರುದ್ಧ ಬೆಂಗಳೂರು ಬುಲ್ಸ್ ಜಯಭೇರಿ; ಪವನ್ ಸಖತ್ ಆಟ

    ಪಟ್ನಾ ಗೆಲುವಿನಲ್ಲಿ ಮೋನು ಗೋಯತ್ ಸೂಪರ್ ರೇಡ್:

    ಎರಡನೇ ಪಂದ್ಯದಲ್ಲಿ ಮೂರು ಬಾರಿ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ತಂಡ 44-30 ಅಂಕಗಳಿಂದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಮೋನು ಗೋಯಟ್ 16 ರೇಡ್​​ಗಳಿಂದ 15 ಅಂಕ ಗಳಿಸಿದರು. ಆದರೆ, ಅವರ ರೇಡ್​ಗಳಲ್ಲಿ ಬೆರಗಾಗಿಸಿದ್ದು ಅವರ ಕೊನೆಯ ರೇಡ್. ಪಟ್ನಾ ಗೆಲುವು ಬಹುತೇಕ ಖಚಿತವಾಗಿದ್ದ ಸಮಯದಲ್ಲಿ ರೇಡಿಂಗ್ ಮಾಡಿದ ಮೋನು ಗೋಯಟ್ ಎದುರಾಳಿ ಅಂಗಳದ ಎಲ್ಲಾ ಏಳು ಮಂದಿಯನ್ನ ಔಟ್ ಮಾಡಿ ಬಂದರು.

    ಒಂದೇ ರೇಡ್​ನಲ್ಲಿ 7 ಅಂಕ ಗಳಿಸುವುದೆಂದರೆ ಕ್ರಿಕೆಟ್ ಆಟದಲ್ಲಿ ಒಬ್ಬ ಬೌಲರ್ ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆಯುವುದಕ್ಕೆ ಸಮ ಎಂದರೆ ತಪ್ಪಾಗಲಾರದು. ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಈ ಹಿಂದೆ ಇಂಥದ್ದುದು ಆಲೌಟ್ ರೇಡ್ ಮಾಡಿದ್ದರು.

    ಪಟ್ನಾ ತಂಡದಲ್ಲಿ ಮತ್ತೊಬ್ಬ ರೇಡರ್ ಸಚಿನ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಅತ್ತ, ಬೆಂಗಾಲ್ ವಾರಿಯರ್ಸ್ ತಂಡ ತನ್ನ ನಾಯಕ ಮಣಿಂದರ್ ಸಿಂಗ್ ಅವರೊಬ್ಬರನ್ನೇ ನೆಚ್ಚಿಕೊಂಡಂತಿತ್ತು. ಮಣಿಂದರ್ ಅವರೊಬ್ಬರೇ 21 ರೇಡ್ ಮಾಡಿದರು. ಅದರಲ್ಲಿ ಅವರಿಗೆ ಗಳಿಸಲು ಸಾಧ್ಯವಾಗಿದ್ದು 12 ಅಂಕಗಳನ್ನ ಮಾತ್ರ.

    ಇದನ್ನೂ ಓದಿ: PKL 8: ನವೀನ್ ಎಕ್ಸ್​ಪ್ರೆಸ್ ನಿಲ್ಲಿಸೋರೇ ಇಲ್ವಾ? ಸೋತ ವಾರಿಯರ್ಸ್; ಯೋದ್ಧಾ-ಜೈಂಟ್ಸ್ ಡ್ರಾ

    ಕರ್ನಾಟಕದ ಸುಕೇಶ್ ಹೆಗ್ಡೆ ಮತ್ತು ರಿಶಾಂಕ್ ದೇವಾಡಿಗ ನಿರಾಸೆಗೊಳಿಸಿದರು. ಆದರೆ, ಅಮಿತ್ ನಿರ್ವಾಲ್ ಮತ್ತು ಇರಾನಿ ಆಟಗಾರ ಅಬೋಜರ್ ಮಿಘಾನಿ ಡಿಫೆನ್ಸ್​ನಲ್ಲಿ ಮಿಂಚಿದರು.

    ಶನಿವಾರದ ಪಂದ್ಯಗಳು:

    1) ಯು ಮುಂಬಾ vs ಯುಪಿ ಯೋದ್ಧಾ, ಸಮಯ 7:30ಕ್ಕೆ

    2) ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್, ಸಮಯ 8:30ಕ್ಕೆ

    3) ದಬಂಗ್ ಡೆಲ್ಲಿ vs ತಮಿಳ್ ತಲೈವಾಸ್, ಸಮಯ 9:30ಕ್ಕೆ
    Published by:Vijayasarthy SN
    First published: