PKL 8: ಸಚಿನ್ ವಿಟ್ಲ, ವೇಗದ ಬೌಲರ್ ಆಗಿದ್ದವ ತೊಡೆ ತಟ್ಟಿ ಕಬಡ್ಡಿ ಆಟಗಾರನಾದ ಕಥೆ

Sachin Vitala: ಈ ಬಾರಿಯ ಪ್ರೋಕಬಡ್ಡಿ ಲೀಗ್​ನಲ್ಲಿ ಬೆಂಗಾಲ್ ವಾರಿಯರ್ಸ್ ತಂಡದಲ್ಲಿರುವ ಸಚಿನ್ ಅವರು ಮಂಗಳೂರಿನವರು. ವೇಗದ ಬೌಲರ್ ಆಗಿದ್ದ ಅವರು ಹೈಸ್ಕೂಲ್ ಓದುವಾಗ ಕಬಡ್ಡಿ ಕ್ರೀಡೆಯತ್ತ ವಾಲಿ ಇದೀಗ ಸ್ಟಾರ್ ಆಟಗಾರ ಎನಿಸಿದ್ದಾರೆ.

ಸಚಿನ್ ವಿಟಲ

ಸಚಿನ್ ವಿಟಲ

 • News18
 • Last Updated :
 • Share this:
  ಬೆಂಗಳೂರು: ಈ ವಾರದಿಂದ ಪ್ರೋ ಕಬಡ್ಡಿ (Pro Kabaddi League) ಕಲರವ ನಡೆಯುತ್ತಿದೆ. 12 ತಂಡಗಳು ಕಬಡ್ಡಿ ರಸಿಕರಿಗೆ ಭರಪೂರ ಮನರಂಜನೆ ಒದಗಿಸುತ್ತಿದ್ದಾರೆ. ದೇಶದ ಕಬಡ್ಡಿ ರಂಗದಲ್ಲಿ ಪ್ರಮುಖ ಶಕ್ತಿಯಾಗಿರುವ ಕರ್ನಾಟಕ ರಾಜ್ಯದ 15ಕ್ಕೂ ಹೆಚ್ಚು ಆಟಗಾರರು ಪ್ರೋಕಬಡ್ಡಿಯಲ್ಲಿ ತೊಡೆ ತಟ್ಟಿದ್ದಾರೆ. ಇವರಲ್ಲಿ 6 ಮಂದಿ ಬೆಂಗಾಲ್ ವಾರಿಯರ್ಸ್ (Bengal Warriors) ತಂಡದಲ್ಲೇ ಇದ್ದಾರೆ. ಅವರ ಪೈಕಿ ಸಚಿನ್ ವಿಟಲ ಅವರೂ ಒಬ್ಬರು. ಬಾಲ್ಯದಲ್ಲಿ ವೇಗದ ಬೌಲರ್ ಆಗಿ ಗಮನ ಸೆಳೆದವರು ಸಚಿನ್ (Sachin Vitala). ಇವರ ಸುತ್ತಮುತ್ತಲಿನ ಊರಿನವರು, ಇವರ ಕುಟುಂಬವರ್ಗದವರಲ್ಲಿ ಅನೇಕರು ಕ್ರಿಕೆಟ್ ಆಟಗಾರರಾಗಿದ್ದವರೆ. ಆದರೆ, ಸಚಿನ್ ಮಾತ್ರ ಕ್ರಿಕೆಟ್ ಬಿಟ್ಟು ಕಬಡ್ಡಿ ಅಂಗಳಕ್ಕೆ ಕಾಲಿಟ್ಟಿದ್ದು ಅಚ್ಚರಿಯೇ.

  ಸಚಿನ್ ವಿಟಲ ಅವರು ಓದಿದ್ದು ಮೂಡಬಿದ್ರಿಯ ಆಳ್ವಾಸ್ ಕಾಲೇಜಿನಲ್ಲಿ. ಅಲ್ಲಿ ಇವರು ಕ್ರಿಕೆಟ್ ಆಟಗಾರರಾಗಿದ್ದರು. ವೇಗವಾಗಿ ಓಡುವ ಅಭ್ಯಾಸ ಅಲ್ಲಿಂದಲೇ ಶುರುವಾಯಿತು. ಹೈಸ್ಕೂಲಿಗೆ ಹೋದಾಗ ಕಬಡ್ಡಿಯತ್ತ ಇವರ ಮನಸು ವಾಲಿತು. ಕಬಡ್ಡಿಗೆ ಬದಲಾದ ಬಳಿಕ ತಮಗೆ ಆ ವೇಗದ ಓಟ ಬಹಳ ನೆರವಿಗೆ ಬಂತು ಎನ್ನುತ್ತಾರೆ ಸಚಿನ್. ಅಖಿಲ ಭಾರತ ವಿವಿ ಕ್ರೀಡಾಕೂಟದಲ್ಲಿ ಆಳ್ವಾಸ್ ಕಬಡ್ಡಿ ತಂಡದ ಪರ ಸಚಿನ್ ವಿಟಲ ಅವರು ಸಖತ್ತಾಗಿ ಮಿಂಚಿದ್ದರು. ಇವರ ವೇಗದ ಆಟದ ನೆರವಿನಿಂದ ಆಳ್ವಾಸ್ ಟೀಮ್ ಚಿನ್ನದ ಪದಕ ಗೆದ್ದಿತು. ಅದು ಇವರಿಗೆ ಕರ್ನಾಟಕ ರಾಜ್ಯ ಕಬಡ್ಡಿ ತಂಡದ ಪ್ರವೇಶಕ್ಕೂ ಎಡೆ ಮಾಡಿಕೊಟ್ಟಿತು. ಅಲ್ಲಿಂದ ಇವರ ಪಯಣ ಪ್ರೋಕಬಡ್ಡಿಗೆ ಸಾಗಿತು.

  ಕ್ರಿಕೆಟ್ ಅಟದಲ್ಲಿ ಹೆಚ್ಚು ಮಾನ್ಯತೆ ಇರಲಿಲ್ಲವೇ?

  ಕ್ರಿಕೆಟ್​ನಲ್ಲಿ ಕ್ರೀಡಾಪಟುವಿಗೆ ಹೆಚ್ಚು ಹಣ ಮತ್ತು ಹೆಸರು ಸಿಗುತ್ತದೆ ಎಂಬುದು ನಿಜ ಇರಬಹುದು. ಆದರೆ, ಇಲ್ಲಿ ಸಚಿನ್ ವಿಟಲ ಅವರು ಕುತೂಹಲಕಾರಿ ಸಂಗತಿಯೊಂದನ್ನ ಹೇಳುತ್ತಾರೆ. ಇವರ ಕುಟುಂಬದ ಸಂಬಂಧಿಕರಲ್ಲಿ ಅನೇಕರು ಕ್ರಿಕೆಟ್ ಆಟಗಾರರಾಗಿದ್ದಾರಂತೆ. ಆದರೆ, ತಾನು ಪ್ರೋಕಬಡ್ಡಿಯಲ್ಲಿ ಹೆಸರು ಮಾಡಿದ ಬಳಿಕ ಸಂಬಂಧಿಕರ ವಲಯದಲ್ಲಿ ತನಗೆ ರಾಜಮರ್ಯಾದೆ ಸಿಗುತ್ತಿದೆ ಎಂದು ಸಚಿನ್ ಹೇಳಿಕೊಳ್ಳುತ್ತಾರೆ.

  ಇದನ್ನೂ ಓದಿ: PKL 8: ಜೈಪುರ್, ಪುಣೆ, ಯುಪಿ ತಂಡಗಳಿಗೆ ಚೊಚ್ಚಲ ಗೆಲುವು; ನಾಳೆ ಬುಲ್ಸ್ ಫೈಟ್

  2019ರ ಸೀಸನ್​ನಲ್ಲಿ ಸಚಿನ್ ವಿಟಲ ಅವರು ಗುಜರಾತ್ ಜೇಂಟ್ಸ್ ತಂಡದ ಪರ ಆಡಿದ್ದರು. ವಿಜಯ ಬ್ಯಾಂಕ್ ತಂಡದಲ್ಲಿ ಆಡುವಾಗ ಎಡಮೂಲೆಯ ಡಿಫೆಂಡರ್ (Left Corner Defender) ಆಗಿರುವ ಸಚಿನ್ ಅವರು ಪಿಕೆಎಲ್​ನಲ್ಲಿ ರೇಡರ್ ಆಗಿ ಮಿಂಚಿದರು.

  ಮತ್ತೆ ಗುರು ಜೊತೆಗೂಡಿದ ಶಿಷ್ಯ:

  ಸಚಿನ್ ವಿಟಲ ಅವರು ವಿಜಯ ಬ್ಯಾಂಕ್ ತಂಡದಲ್ಲಿ ಆಡುವಾಗ ಅವರಿಗೆ ಕೋಚ್ ಆಗಿರುವುದು ಬಿ.ಸಿ. ರಮೇಶ್. ಇವರ ಕೋಚಿಂಗ್ ಗರಡಿಯಲ್ಲೇ ಸಚಿನ್ ಸಾಕಷ್ಟು ಪಳಗಿದ್ಧಾರೆ. ಪ್ರೋಕಬಡ್ಡಿಯಲ್ಲಿ ಸಚಿನ್ ಅವರು 2019ರ ಸೀಸನ್​ನಲ್ಲಿ ಗುಜರಾತ್ ಜೈಂಟ್ಸ್ ತಂಡದಲ್ಲಿ ಆಡಿದ್ದರು. ಅಲ್ಲಿ ಸಚಿನ್ ಅವರ ಕಬಡ್ಡಿ ಕಲೆಗೆ ಇನ್ನಷ್ಟು ಸಾಣೆ ಹಿಡಿದವರು ಮಾಜಿ ಆಟಗಾರ ಹಾಗೂ ಕೋಚ್ ಮನಪ್ರೀತ್ ಸಿಂಗ್.

  ಇದನ್ನೂ ಓದಿ: Bengaluru Bulls Victory: ತಮಿಳ್ ತಲೈವಾಸ್ ವಿರುದ್ಧ ಗೆದ್ದುಬೀಗಿದ ಬೆಂಗಳೂರು ಬುಲ್ಸ್

  ಈ ಸೀಸನ್​ನಲ್ಲಿ ಸಚಿನ್ ವಿಟ್ಲ ಅವರನ್ನ ಬೆಂಗಾಲ್ ವಾರಿಯರ್ಸ್ ತಂಡ ಸೆಳೆದುಕೊಂಡಿದೆ. ರಮೇಶ್ ಬಿ.ಸಿ. ಅವರೇ ವಾರಿಯರ್ಸ್ ತಂಡದ ಕೋಚ್. ಸಚಿನ್ ಅವರನ್ನ ಸೇರಿಸಿಕೊಳ್ಳಲು ರಮೇಶ್ ಅವರ ಆಸಕ್ತಿಯೇ ಕಾರಣ.

  ಕಳೆದ ಬಾರಿ ಚಾಂಪಿಯನ್ ಎನಿಸಿದ್ದ ಬೆಂಗಾಲ್ ವಾರಿಯರ್ಸ್ ತಂಡ ಈ ಬಾರಿ ಸತತ ಎರಡು ಗೆಲುವುಗಳ ಮೂಲಕ ಭರ್ಜರಿ ಆರಂಭ ಪಡೆದಿದೆ.  ಇಂದು ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಮಧ್ಯೆ ಹಣಾಹಣಿ ಇದೆ.
  Published by:Vijayasarthy SN
  First published: