Bengaluru Bulls Koo: ಧೂಳ್ ಧೂಳ್… ಗೆಲ್ಲಕ್ಕೆ ಬಿಡಲ್ಲ…! ಬೆಂಗಳೂರು ಬುಲ್ಸ್ ಕಬಡ್ಡಿ ಕಹಳೆಯ ಕೂ

Prokabaddi Season 8: ಬೆಂಗಳೂರು ಬುಲ್ಸ್ ತಂಡ ಪ್ರೋಕಬಡ್ಡಿಯ ಬಲಿಷ್ಠ ತಂಡಗಳಲ್ಲೊಂದೆನಿಸಿದೆ. ಆರನೇ ಸೀಸನ್​ನಲ್ಲಿ ಚಾಂಪಿಯನ್ ಆಗಿರುವ ಬುಲ್ಸ್ ಪಡೆ ಒಮ್ಮೆ ಫೈನಲ್ ಕೂಡ ತಲುಪಿದೆ. ಪವನ್ ಸೆಹ್ರಾವತ್ ನೇತೃತ್ವದಲ್ಲಿ ಬುಲ್ಸ್ ಎರಡನೇ ಬಾರಿ ಪ್ರಶಸ್ತಿಗೆ ಕಣ್ಣಿಟ್ಟಿದೆ.

ಬೆಂಗಳೂರು ಬುಲ್ಸ್ ತಂಡದ ಪವನ್

ಬೆಂಗಳೂರು ಬುಲ್ಸ್ ತಂಡದ ಪವನ್

  • Share this:
ಬೆಂಗಳೂರು: ಮುಂದಿನ ತಿಂಗಳು ಆರಂಭವಾಗಲಿರುವ ಪ್ರೋಕಬಡ್ಡಿ ಸೀಸನ್ 8 (PKL-8) ಕಬಡ್ಡಿ ಸಮರಕ್ಕೆ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂ ಅಣಿಗೊಂಡಿದೆ. ಆತಿಥೇಯ ತಂಡವಾಗಿ ಬೆಂಗಳೂರು ಬುಲ್ಸ್ (Bengaluru Bulls) ಸೂಪರ್ ಚಾರ್ಜ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಸಕ್ರಿಯವಾಗಿರುವ ಬೆಂಗಳೂರು ತಂಡ ಈಗ ಕೂ ವೇದಿಕೆಗೂ (Koo microblogging platform) ಲಗ್ಗೆ ಹಾಕಿದೆ. ಈ ಮೂಲಕ ಹೆಚ್ಚೆಚ್ಚು ಕನ್ನಡಿಗರನ್ನ ತಲುಪಿ ಅಭಿಮಾನಿಗಳ ಬಳಗ ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿ ಬುಲ್ಸ್ ಪಡೆ ಇದೆ.

ಬಹಳ ವೇಗವಾಗಿ ಬೆಳೆಯುತ್ತಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್​ಫಾರ್ಮ್ ಆಗಿರುವ ಕೂ ನಲ್ಲಿ ಬೆಂಗಳೂರು ಬುಲ್ಸ್ ಅಧಿಕೃತ ಹ್ಯಾಂಡಲ್ @bengalurubullsofficial ಆಗಿದೆ. ತಮ್ಮ ಮೊದಲ ಕೂ ನಲ್ಲಿ ತಂಡದ ಆಟಗಾರ ಕಸರತ್ತು ಮಾಡುತ್ತಿರುವ ವಿಡಿಯೋ ಇದೆ. “ನಾವು ನಿಂಗೆ ಗೆಲ್ಲೋಕೆ ಕೊಡಲ್ಲ” ಎಂದು ಕನ್ನಡದಲ್ಲೇ ಘರ್ಜಿಸಿ ಸಂದೇಶ ಹೊರಡಿಸಿದೆ. “ಇದು ನಿಜವಾದ ಯುದ್ಧ. ಆಕ್ರಮಣಕಾರಿ ಮೃಗಗಳ ರೀತಿ ಗೂಳಿಗಳು (Bulls) ಸಜ್ಜಾಗಿವೆ” ಎಂದೂ ಬೆಂಗಳೂರು ಬುಲ್ಸ್ ತನ್ನ ಮೊದಲ ಕೂ ನಲ್ಲಿ ಹೇಳಿದೆ.ನಿನ್ನೆ ಬೆಂಗಳೂರು ಬುಲ್ಸ್ ತಂಡ ತನ್ನ ನಾಯಕ ಪವನ್ ಸೆಹ್ರಾವತ್ ಅವರ ಅದ್ವಿತೀಯ ಸಾಧನೆಯ ಒಂದು ಪ್ರೊಫೈಲ್ ಅನ್ನು ವಿಡಿಯೋ ರೂಪದಲ್ಲಿ ಕೂನಲ್ಲಿ ಅಪ್​ಡೇಟ್ ಮಾಡಿದೆ. “ಫುಲ್ ಚಾರ್ಜ್ ಮಾಡಿದೆ… ಧೂಳ್ ಧೂಳ್ ಧೂಳ್.. ಬೆಂಗಳೂರು ಬುಲ್ಸ್… ಎದೆ ತಟ್ಟಿ ತೊಡೆ ತಟ್ಟಿ ಕಬಡ್ಡಿಗೆ…” ಅನ್ನೋ ಹಾಡು ಈ ವಿಡಿಯೋದ ಬ್ಯಾಕ್​ಗ್ರೌಂಡ್ ವಾಯ್ಸ್ ಆಗಿದೆ.ಬೆಂಗಳೂರು ಬುಲ್ಸ್ ತಂಡ ಈ ಬಾರಿ ಇರಾನ್ ಮತ್ತು ದಕ್ಷಿಣ ಕೊರಿಯಾದ ಆಟಗಾರರನ್ನೂ ಹರಾಜಿನಲ್ಲಿ ಖರೀದಿಸಿದೆ. ಒಮ್ಮೆ ಪ್ರಶಸ್ತಿ ಗೆದ್ದಿರುವ ಬುಲ್ಸ್ ಎರಡನೇ ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಲು ಬೇಕಾದ ಶಕ್ತಿ ವೃದ್ಧಿಸಿಕೊಂಡಂತಿದೆ.

ಬೆಂಗಳೂರು ಬುಲ್ಸ್ ಪ್ರೋಕಬಡ್ಡಿ ತಂಡ:
ಪವನ್ ಕುಮಾರ್ ಸೆಹ್ರಾವತ್, ರೇಡರ್,
ಬಂಟಿ, ರೇಡರ್,
ಡಾಂಗ್ ಗಿಯೋನ್ ಲೀ, ರೇಡರ್,
ಅಬುಲ್​ಫಜಲ್ ಮಗ್​ಸೋಡ್ಲೋ ಮಹಲಿ, ರೇಡರ್,
ಚಂದ್ರನ್ ರಂಜಿತ್, ರೇಡರ್,
ಜಿ ಬಿ ಮೋರೆ, ರೇಡರ್,
ದೀಪಕ್ ನರವಾಲ್, ರೇಡರ್,
ಅಮಿತ್ ಶೆರೋವನ್, ಡಿಫೆಂಡರ್,
ಸೌರಭ್ ನಂದಲ್, ಡಿಫೆಂಡರ್,
ಮೋಹಿತ್ ಸೆಹ್ರಾವತ್, ಡಿಫೆಂಡರ್,
ಜಿಯಾವುರ್ ರಹಮಾನ್, ಡಿಫೆಂಡರ್,
ಮಹೇಂದರ್ ಸಿಂಗ್, ಡಿಫೆಂಡರ್,
ಮಯೂರ್ ಜಗನ್ನಾಥ್ ಕದಂ, ಡಿಫೆಂಡರ್,
ವಿಕಾಸ್, ಡಿಫೆಂಡರ್,
ಅಂಕಿತ್, ಡಿಫೆಂಡರ್,

ಪ್ರೋಕಬಡ್ಡಿ ಪ್ರಾರಂಭ ಆಗೋದು:

ಐಪಿಎಲ್ ಕ್ರಿಕೆಟ್ ಮಾದರಿಯಲ್ಲಿ ಕಬಡ್ಡಿಯಲ್ಲೂ ಫ್ರಾಂಚೈಸಿಗಳನ್ನ ರಚಿಸಿ 2014ರಲ್ಲಿ ಪ್ರೋಕಬಡ್ಡಿ ಟೂರ್ನಿ ಆರಂಭಿಸಲಾಯಿತು. ಈವರೆಗೆ ಏಳು ಸೀಸನ್​ಗಳ ಪ್ರೋಕಬಡ್ಡಿ ನಡೆದಿದೆ. ಡಿಸೆಂಬರ್ 22ಕ್ಕೆ ಆರಂಭವಾಗಲಿರುವುದು ಎಂಟನೇ ಸೀಸನ್. ಆರಂಭದ ದಿನಾಂಕ ನಿಗದಿಯಾದರೂ ಪಂದ್ಯಗಳ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.

ಇದನ್ನೂ ಓದಿ: Pro Kabaddi ಗೆ ಇನ್ನೊಂದೇ ತಿಂಗಳು; ಬೆಂಗಳೂರಲ್ಲೇ ಏಕೆ ಪಂದ್ಯಗಳು? Live Streaming ಇತ್ಯಾದಿ ವಿವರ

ಬೆಂಗಳೂರು ಬುಲ್ಸ್ ಸೇರಿ ಹನ್ನೆರಡು ತಂಡಗಳು ಪ್ರೋಕಬಡ್ಡಿಯಲ್ಲಿ ಸ್ಪರ್ಧೆ ಮಾಡುತ್ತವೆ. ಈವರೆಗೆ ಐದು ತಂಡಗಳು ಚಾಂಪಿಯನ್ ಪಟ್ಟ ಪಡೆದಿವೆ. ಪಟ್ನಾ ಪೈರೇಟ್ಸ್ ತಂಡ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಜೈಪುರ್ ಪಿಂಕ್ ಪ್ಯಾಂಥರ್, ಯು ಮುಂಬಾ, ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡ ಒಮ್ಮೊಮ್ಮೆ ಚಾಂಪಿಯನ್ ಆಗಿವೆ.

ಪ್ರೋಕಬಡ್ಡಿಯ ಮೊದಲ ಸೀಸನ್​ನಲ್ಲಿ ಅಭಿಷೇಕ್ ಬಚ್ಚನ್ ಮಾಲಕತ್ವದ ಜೈಪುರ್ ಪಿಂಕ್ ಪ್ಯಾಂಥರ್ ಚಾಂಪಿಯನ್ ಆಗಿತ್ತು. ಬೆಂಗಳೂರು ಬುಲ್ಸ್ ಆರನೇ ಸೀಸನ್​ನಲ್ಲಿ ಚಾಂಪಿಯನ್ ಪಟ್ಟ ಪಡೆದಿತ್ತು. ಬೆಂಗಾಲ್ ವಾರಿಯರ್ಸ್ ತಂಡ ಸದ್ಯ ಡಿಫೆಂಡಿಂಗ್ ಚಾಂಪಿಯನ್ ಎನಿಸಿದೆ.

ಬೆಂಗಳೂರಿನಲ್ಲೇ ಎಲ್ಲಾ ಪಂದ್ಯಗಳು:

ಕೋವಿಡ್ ಕಾರಣಕ್ಕೆ ಈ ಸೀಸನ್​ನ ಎಲ್ಲಾ ಪಂದ್ಯಗಳೂ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲೇ ನಡೆಯಲಿದೆ. ಪಿಕೆಎಲ್ ಇತಿಹಾಸದಲ್ಲಿ ಒಂದು ಸೀಸನ್​ನ ಎಲ್ಲ ಪಂದ್ಯಗಳೂ ಒಂದೇ ಸ್ಥಳದಲ್ಲಿ ನಡೆಯಲಿರುವುದು ಇದೇ ಮೊದಲು. ಆಟಗಾರರು ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣ ಬೆಳೆಸುವುದರಿಂದ ಬಯೋಬಬಲ್ ಆಚೆ ಸಂಪರ್ಕ ಹೊಂದಿ ಕೋವಿಡ್ ಸೋಂಕು ತಗುಲುವ ಅಪಾಯ ಇರುತ್ತದೆ. ಜೊತೆಗೆ, ಆಟಗಾರರು ಬೇರೆ ನಗರಗಳಿಗೆ ಪ್ರಯಾಣ ಮಾಡುವುದರಿಂದ ಆಯಾಸಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ಒಂದೇ ಸ್ಥಳದಲ್ಲಿ ಪಂದ್ಯಗಳನ್ನ ಆಯೋಜಿಸಲು ನಿರ್ಧರಿಸಲಾಗಿದೆ.

ಆದರೆ, ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಟಿವಿಯಲ್ಲಿ ಲೈವ್ ಪ್ರಸಾರ ಇರಲಿದೆ.
Published by:Vijayasarthy SN
First published: