Bengaluru Bulls- ನಾನೇ ಸ್ಟಾರ್ಸ್ ಹುಟ್ಟುಹಾಕ್ತೀನಿ ಎಂದ ಬೆಂಗಳೂರು ಬುಲ್ಸ್ ಕೋಚ್ ರಣಧೀರ್ ಶೆರಾವತ್

Pro Kabaddi League 2021: ಬೆಂಗಳೂರು ಬುಲ್ಸ್ ತಂಡದ ಕೋಚ್ ರಣಧೀರ್ ಅವರು ಹೆಚ್ಚಾಗಿ ಯುವ ಪ್ರತಿಭೆಗಳಿಗೆ ಅವಕಾಶ ಕೊಡುವ ವಿಶಿಷ್ಟ ದೃಷ್ಟಿಕೋನದ ವ್ಯಕ್ತಿತ್ವದವರು. ಬುಲ್ಸ್ ಹಾಗೂ ತಮ್ಮ ರಣತಂತ್ರದ ಬಗ್ಗೆ ಅವರು ಹೇಳಿದ್ದಿದು…

ಬೆಂಗಳೂರು ಬುಲ್ಸ್ ತಂಡದ ಕೋಚ್ ರಣಧೀರ್ ಸಿಂಗ್ ಮತ್ತು ಆಟಗಾರ ಪವನ್ ಶೆಹ್ರಾವತ್

ಬೆಂಗಳೂರು ಬುಲ್ಸ್ ತಂಡದ ಕೋಚ್ ರಣಧೀರ್ ಸಿಂಗ್ ಮತ್ತು ಆಟಗಾರ ಪವನ್ ಶೆಹ್ರಾವತ್

 • Share this:
  ಬೆಂಗಳೂರು, ಡಿ. 21: ಪ್ರೋಕಬಡ್ಡಿ ಲೀಗ್ (Pro Kabaddi League) ಇದೀಗ ಎಂಟನೇ ಸೀಸನ್​ಗೆ ಕಾಲಿಟ್ಟಿದೆ. ಅತಿ ಹೆಚ್ಚು ಗಮನ ಸೆಳೆದ ತಂಡಗಳಲ್ಲಿ ಬೆಂಗಳೂರು ಬುಲ್ಸ್ ತಂಡವೂ (Bengaluru Bulls) ಒಂದು. ಅಜಯ್ ಠಾಕೂರ್, ಮಂಜಿತ್ ಚಿಲ್ಲರ್, ಚೇರ್ಲದನ್ ಅವರಂಥ ಮಹಾನ್ ಕಬಡ್ಡಿ ಆಟಗಾರರು ಬುಲ್ಸ್ ಪ್ರವೇಶ ಮಾಡಿ ಹೋಗಿದ್ದಾರೆ. ಪವನ್ ಶೆರಾವತ್ (Pavan Sehrawat) ಅವರಂಥ ನವೀನ ಸ್ಟಾರ್​ಗಳು ಬುಲ್ಸ್ ತಂಡದ ಪರ ಗುಮ್ಮಲು ಅಣಿಗೊಂಡಿದ್ಧಾರೆ. ಇವೆಲ್ಲದರ ಮಧ್ಯೆ ಬೆಂಗಳೂರು ತಂಡದ ಕಬಡ್ಡಿ ಕೋಚ್ ಬಗ್ಗೆ ಹೇಳದೇ ಹೋದರೆ ಬುಲ್ಸ್ ಇತಿಹಾಸ ಪೂರ್ಣಗೊಳ್ಳುವುದಿಲ್ಲ. ಕೋಚ್ ರಣಧೀರ್ ಸೆಹ್ರಾವತ್ (Randhir Sehrawat) ಅವರು ಬುಲ್ಸ್ ತಂಡದ ಆಧಾರ ಸ್ತಂಬವಾಗಿದ್ದಾರೆ. ಇದೂವರೆಗೆ ಒಂದು ತಂಡಕ್ಕೆ ಒಬ್ಬರೇ ಕೋಚ್ ಆಗಿರುವುದು ಬೆಂಗಳೂರು ಬುಲ್ಸ್​ನಲ್ಲಿ ಮಾತ್ರವೇ.

  ಭಾರತ ತಂಡದ ಮಾಜಿ ಆಟಗಾರರೂ ಆಗಿರುವ ರಣಧೀರ್ ಸಿಂಗ್ ಶೆರಾವತ್ ಅವರು ದೇಶಾದ್ಯಂತ ಅನೇಕ ಕಬಡ್ಡಿ ಪ್ರತಿಭೆಗಳನ್ನ ಬೆಳೆಸಿದ ಶ್ರೇಯಸ್ಸು ಹೊಂದಿದ್ದಾರೆ. ಬೆಂಗಳೂರು ಬುಲ್ಸ್ ತಂಡ ಎಲ್ಲಾ ಸೀಸನ್​ನಲ್ಲೂ ಬಲಿಷ್ಠವಾಗಿರುವಂತೆ ಕೋಚ್ ಎಚ್ಚರ ವಹಿಸಿದ್ದಾರೆ.

  ಸ್ಟಾರ್​ಗಳನ್ನ ಯಾರು ಬೇಕಾದರೂ ಖರೀದಿಸಬಹುದು, ಆದರೆ…

  ಬೆಂಗಳೂರು ತಂಡದಲ್ಲಿ ರೋಹಿತ್ ಕುಮಾರ್ ಎನ್ನುವ ಪ್ರತಿಭೆ ಕೆಲ ಸೀಸನ್​ಗಳವರೆಗೆ ಕ್ಯಾಪ್ಟರ್ ಆಗಿದ್ದರು. ಆದರೆ, ಅವರನ್ನ ರಿಲೀಸ್ ಮಾಡಿದ್ದು ಅಚ್ಚರಿ ತಂದಿತ್ತಾದರೂ ಕೋಚ್ ದೃಷ್ಟಿಕೋನ ವಿಭಿನ್ನವಾಗಿದೆ. ರೋಹಿತ್ ಕುಮಾರ್ ಸ್ಟಾರ್ ಆಟಗಾರನಾದರೂ ಅವರಿಂದ ಒಳ್ಳೆಯ ಆಟ ಬಂದಿಲ್ಲ. ಅವರಿಗೆ ನೀಡುವ ಹಣಕ್ಕೆ ನಾಲ್ಕೈದು ಒಳ್ಳೆಯ ರೇಡರ್​ಗಳನ್ನ ಈ ಬಾರಿ ಖರೀದಿಸಿದ್ದೇನೆ ಎಂದಿದ್ಧಾರೆ.

  ಇದನ್ನೂ ಓದಿ: Pro Kabaddi 2021: ಮತ್ತೆ ಬಂತು ಪ್ರೊ ಕಬಡ್ಡಿ.. ತೊಡೆ ತಟ್ಟಿ ಗುಮ್ಮೋಕೆ ರೆಡಿಯಾದ ಬೆಂಗಳೂರು ಬುಲ್ಸ್​!

  ಪುಣೇರಿ ಪಲ್ಟಾನ್ ತಂಡದಲ್ಲಿ ಮಂಜೀತ್ ಚಿಲ್ಲರ್, ಅಜಯ್ ಠಾಕೂರ್, ರವೀಂದರ್ ಪಹಲ್, ಸುರ್ಜೀತ್ ನರ್ವಾಲ್ ಸೇರಿದಂತೆ ಏಳು ಮಂದಿ ಭಾರತ ತಂಡದಲ್ಲಿ ಆಡಿರುವವರೇ. ಬರೀ ಸ್ಟಾರ್​ಗಳಿಂದಲೇ ತುಂಬಿದ್ದ ಪುಣೆ ತಂಡ ಸೆಮಿಫೈನಲ್ ಕೂಡ ಮುಟ್ಟಲಿಲ್ಲ. ತಮಿಳ್ ತಲೈವಾಸ್ ತಂಡದಲ್ಲಿ ರಾಹುಲ್ ಚೌಧರಿ, ಅಜಯ್ ಠಾಕೂರ್, ಮಂಜೀತ್ ಇದ್ದರೂ ಟ್ರೋಫಿ ಗೆಲ್ಲಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ಅದೇ ಬೆಂಗಳೂರು ತಂಡದಲ್ಲಿ ಯುವ ಪ್ರತಿಭೆಗಳನ್ನ ಇಟ್ಟುಕೊಂಡೇ ಎರಡು ಬಾರಿ ಸೆಮಿಫೈನಲ್ ಮತ್ತು ಎರಡು ಬಾರಿ ಫೈನಲ್ ತಲುಪಿದ್ದೇವೆ. ಯುವ ಪ್ರತಿಭೆಗಳಿಗೆ ಅವಕಾಶ ಕೊಡದೇ ಇದ್ದರೆ ಕೋಚ್ ಆಗಿದ್ದಕ್ಕೆ ಏನು ಸಾರ್ಥಕ? ಸ್ಟಾರ್ ಆಟಗಾರರನ್ನ ಯಾರು ಬೇಕಾದರೂ ಖರೀದಿಸಬಹುದು, ಆದರೆ, ಸ್ಟಾರ್​ಗಿರಿ ಈಗಿನ ಕಾಲಕ್ಕೆ ಕೆಲಸಕ್ಕೆ ಬರೋದಿಲ್ಲ ಎಂದು ಬೆಂಗಳೂರು ಬುಲ್ಸ್ ತಂಡದ ಕೋಚ್ ರಣಧೀರ್ ಸಿಂಗ್ ಶೆಹ್ರಾವತ್ ಹೇಳಿದ್ಧಾರೆ.

  ನಾನೇ ಸ್ಟಾರ್ಸ್ ಬೆಳೆಸ್ತೀನಿ:

  ನನ್ನ ತಂಡಕ್ಕೆ ಆಟಗಾರರನ್ನ ನಾನೇ ಹುಡುಕಿ ಆಯ್ದುಕೊಳ್ಳುತ್ತೇನೆ. ಪಿಕೆಎಲ್​ನಲ್ಲಿ ನಮ್ಮ ತಂಡದಲ್ಲಿದ್ದವರು ಸ್ಟಾರ್​ಗಳಾಗಿದ್ದರೆ ಅದು ನನ್ನ ತರಬೇತಿಯಿಂದ ಆಗಿದ್ದು ಎಂಬ ಹೆಮ್ಮೆ ನನಗಿದೆ. ಧರ್ಮರಾಜ್ ಚೇರಲದನ್ ಮತ್ತು ರಾಕೇಶ್ ಕುಮಾರ್ ಅವರನ್ನ 17 ವರ್ಷ ವಯಸ್ಸಲ್ಲಿರುವಾಗ ಪರಿಚಯಿಸಿದೆ. ಈಗ ಪ್ರೋಕಬಡ್ಡಿಯಲ್ಲಿ ದೊಡ್ಡ ಸ್ಟಾರ್​ಗಳಾಗಿರುವ ಅಜಯ್ ಠಾಕೂರ್ ಮತ್ತು ಪರದೀಪ್ ನರವಾಲ್ ಅವರಿಗೆ ನಾನು ತರಬೇತಿ ಕೊಟ್ಟಿದ್ದೇನೆ. ಒಬ್ಬ ಸ್ಟಾರ್ ಆಟಗಾರ ಸರಿಯಾಗಿ ಆಡುತ್ತಾನೆ ಎಂದು ಖಾತ್ರಿ ಇಲ್ಲದಿರುವಾಗ ಆತನ ಜಾಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ 4-6 ಪ್ರತಿಭಾನ್ವಿತ ಆಟಗಾರರಿಗೆ ನಾನ್ಯಾಕೆ ಅವಕಾಶ ಕೊಡಬಾರದು? ನಾನು ಸ್ಟಾರ್​ಗಳನ್ನ ನಿರ್ಮಿಸುತ್ತೇನೆ, ಅವರನ್ನ ಹರಾಜಿನಲ್ಲಿ ಕೊಳ್ಳುವುದಿಲ್ಲ ಎಂದು ಬೆಂಗಳೂರು ಬುಲ್ಸ್ ತಂಡದ ಕೋಚ್ ರಣಧೀರ್ ಶೆಹ್ರಾವತ್ ಅವರು ಸ್ಪೋರ್ಟ್ಸ್ ಕೀಡಾ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: PKL 8: ನಾಳೆಯಿಂದ ಪ್ರೋಕಬಡ್ಡಿ ಕಲರವ; ಹಿಂದಿನ ಸೀಸನ್​ಗಳಲ್ಲಿ ಗೆದ್ದವರು ಇವರು

  ದೇಶಕ್ಕೋಸ್ಕರ ಪವನ್ ಬೇಕು:

  ಪವನ್ ಶೆಹ್ರಾವತ್ ಬಗ್ಗೆ ಕೋಚ್ ರಣಧೀರ್ ಶೆಹ್ರಾವತ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ಧಾರೆ. ಪವನ್ ಸದ್ಯ ದೇಶದ ಅತ್ಯುತ್ತಮ ರೇಡರ್​ಗಳಲ್ಲಿ ಒಬ್ಬರಾಗಿದ್ದಾರೆ. ಅವರು ರಾಷ್ಟ್ರೀಯ ತಂಡಕ್ಕೆ ಬಲ ಒದಗಿಸುವ ರೀತಿಯಲ್ಲಿ ಅವರನ್ನ ಬೆಳೆಸುತ್ತೇನೆ ಎಂದು ರಣಧೀರ್ ಹೇಳುತ್ತಾರೆ.

  ಕೆಲ ವರ್ಷಗಳ ಹಿಂದೆ ಭಾರತ ತಂಡ ಕಬಡ್ಡಿಯಲ್ಲಿ ಮೂರನೇ ಸ್ಥಾನಕ್ಕೆ ಇಳಿದುಬಿಟ್ಟಿತು. ನನಗೆ ನಿದ್ರೆ ಹತ್ತಲಿಲ್ಲ. ಹೀಗಾಗಿ, ಟೀಮ್ ಇಂಡಿಯಾಗೆ ಆಡುವ ಆಟಗಾರನಾಗಿ ಪವನ್​ನನ್ನು ಅಣಿಗೊಳಿಸುತ್ತಿದ್ದೇನೆ ಎಂದು ಅವರು ಸಂಕಲ್ಪ ತೊಡುತ್ತಾರೆ.

  ಮಾಹಿತಿ ಕೃಪೆ: Prasen Moudgal, Sportskeeda
  Published by:Vijayasarthy SN
  First published: