Bengaluru Bulls Victory: ತಮಿಳ್ ತಲೈವಾಸ್ ವಿರುದ್ಧ ಗೆದ್ದುಬೀಗಿದ ಬೆಂಗಳೂರು ಬುಲ್ಸ್

Pro Kabaddi League 2021: ಪವನ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡ ಪ್ರೋಕಬಡ್ಡಿ ಲೀಗ್​ನಲ್ಲಿ ಗೆಲುವಿನ ಹಾದಿಗೆ ಬಂದಿದೆ. ಇಂದು ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬುಲ್ಸ್ 38-30 ಅಂಕಗಳಿಂದ ಸೋಲಿಸಿತು.

ಬೆಂಗಳೂರು ಬುಲ್ಸ್ ಮತ್ತು ತಮಿಳ್ ತಲೈವಾಸ್

ಬೆಂಗಳೂರು ಬುಲ್ಸ್ ಮತ್ತು ತಮಿಳ್ ತಲೈವಾಸ್

 • News18
 • Last Updated :
 • Share this:
  ಬೆಂಗಳೂರು, ಡಿ. 24: ಪ್ರೋಕಬಡ್ಡಿ ಪಂದ್ಯಾವಳಿಯಲ್ಲಿ (Pro Kabaddi League 2021) ತನ್ನ ಮೊದಲ ಪಂದ್ಯದಲ್ಲಿ ಯು ಮುಂಬಾ (U Mumba) ವಿರುದ್ಧ 16 ಅಂಕಗಳ ದೊಡ್ಡ ಅಂತರದಿಂದ ಸೋಲನುಭವಿಸಿ ನಿರಾಸೆಯಾಗಿದ್ದ ಬೆಂಗಳೂರು ಬುಲ್ಸ್ (Bengaluru Bulls) ಇಂದು ಎರಡನೇ ಪಂದ್ಯದಲ್ಲಿ ಗೆಲುವಿನ ನಗೆಬೀರಿದೆ. ಇಂದು ಶುಕ್ರವಾರ ವೈಟ್​​ಫೀಲ್ಡ್​ನ ಶೆರಟಾನ್ ಗ್ರ್ಯಾಂಡ್ ಹೋಟೆಲ್​ನ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas) ವಿರುದ್ಧ ಬೆಂಗಳೂರು ಬುಲ್ಸ್ 38-30 ಅಂಕಗಳಿಂದ ಮಣಿಸಿತು. ಬುಲ್ಸ್ ನಾಯಕ ಪವನ್ ಶೆರಾವತ್ (Pavan Sehrawat) 9 ಅಂಕ ಗಳಿಸಿ ಫಾರ್ಮ್​ಗೆ ಮರಳಿದ್ದ ಬುಲ್ಸ್ ತಂಡಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್ ಆಯಿತು.

  ಇನ್ನು, ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಟೈ ಮಾಡಿಕೊಂಡಿದ್ದ ತಮಿಳ್ ತಲೈವಾಸ್ ಇಂದು ನಿರಾಸೆ ಅನುಭವಿಸಿತು. ನಾಯಕ ಕೆ ಪ್ರಪಂಜನ್ 12 ರೇಡ್​ಗಳಿಂದ ಗಳಿಸಿದ್ದ ಕೇವಲ 3 ಅಂಕ ಮಾತ್ರ. ಬೆಂಗಳೂರು ಬುಲ್ಸ್ ನಾಯಕ ಪವನ್ ಶೆರಾವತ್ 16 ರೇಡ್​ಗಳಲ್ಲಿ 9 ಅಂಕ ಗಳಿಸಿದರು. ಬುಲ್ಸ್​ನ ಮತ್ತೊಬ್ಬ ಪ್ರತಿಭಾನ್ವಿತ ರೇಡರ್ ಚಂದ್ರನ್ ರಂಜಿತ್ 7 ಪಾಯಿಂಟ್ ಸಂಪಾದಿಸಿದರು. ಬೆಂಗಳೂರು ಬುಲ್ಸ್​ನ ಡಿಫೆಂಡರ್ ಸೌರಭ್ ನಂದಾಲ್ ಇಂದು ಅಮೋಘ ಪ್ರದರ್ಶನ ನೀಡಿದ್ದು ವಿಶೇಷ.

  ತಮಿಳ್ ತಲೈವಾಸ್ ತಂಡದ ಪರ ಭವಾನಿ ರಾಜಪೂತ್ 8 ಅಂಕ ಗಳಿಸಿ ಗಮನ ಸೆಳೆದರು. ಸಾಗರ್ ಅವರ ಡಿಫೆನ್ಸ್ ಕೂಡ ಬಲಿಷ್ಠವಾಗಿತ್ತು. ಅಂತಿಮವಾಗಿ, ಬೆಂಗಳೂರು ಬುಲ್ಸ್ ರೋಚಕ ರೀತಿಯಲ್ಲಿ ಮೇಲುಗೈ ಸಾಧಿಸಿ 8 ಅಂಕಗಳ ಅಂತರದಿಂದ ಜಯಿಸುವಲ್ಲಿ ಯಶಸ್ವಿಯಾಯಿತು.

  ಈ ಪಂದ್ಯದ ಗೆಲುವಿನೊಂದಿಗೆ 5 ಅಂಕ ಗಳಿಸಿದ ಬೆಂಗಳೂರು ಬುಲ್ಸ್ ಅಂಕಗಳ ಖಾತೆ ತೆರೆಯಿತು. ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು.

  ಯು ಮುಂಬಾವನ್ನು ಮಣಿಸಿದ ದಬಂಗ್ ಡೆಲ್ಲಿ:

  ಇದಕ್ಕೆ ಮುನ್ನ ನಡೆದ ಇಂದಿನ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಂಗ್ ಡೆಲ್ಲಿ 31-27 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ದಬಂಗ್ ಡೆಲ್ಲಿಯ ನವೀನ್ ಸೂಪರ್ ಮ್ಯಾನ್ ಆದರು. ಬಹುತೇಕ ಏಕಾಂಗಿಯಾಗಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಡೆಲ್ಲಿ ಗಳಿಸಿದ 31 ಅಂಕಗಳಲ್ಲಿ ನವೀನ್ ಅವರೊಬ್ಬರೇ 17 ಪಾಯಿಂಟ್ ಗಳಿಸಿದರು. ಬೆಂಗಳೂರು ಬುಲ್ಸ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಯು ಮುಂಬಾದ ಅಭಿಷೇಕ್ ಸಿಂಗ್ ಇಂದು ನಿರಾಸೆ ಮೂಡಿಸಿದರು.

  ಇದನ್ನೂ ಓದಿ: PKL 8: ಪ್ರೋಕಬಡ್ಡಿಯಲ್ಲಿ 15ಕ್ಕೂ ಹೆಚ್ಚು ಕನ್ನಡಿಗರು; ಇಬ್ಬರು ಕ್ಯಾಪ್ಟನ್ಸ್; ಮೂವರು ಕೋಚ್

  ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್​ಗೆ ಸತತ ಎರಡನೇ ಜಯ:

  ಕರ್ನಾಟಕದ ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ. ರಮೇಶ್ ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡ ಈ ಸೀಸನ್​ನಲ್ಲಿ ಸತತ ಎರಡು ಗೆಲುವುಗಳೊಂದಿಗೆ ಭರ್ಜರಿ ಆರಂಭ ಪಡೆದಿದೆ. ಮೊದಲ ಪಂದ್ಯದಲ್ಲಿ ಯುಪಿ ಯೋದ್ಧಾವನ್ನು ಮಣಿಸಿದ್ದ ಬೆಂಗಾಲ್ ವಾರಿಯರ್ಸ್ ಇಂದು ನಡೆತ ತನ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನ 31-28 ಅಂಕಗಳಿಂದ ಸೋಲಿಸಿತು.

  ವಾರಿಯರ್ಸ್ ತಂಡದ ಆಲ್​ರೌಂಡ್ ಪ್ರದರ್ಶನ ಗಮನ ಸೆಳೆಯಿತು. ಇಡೀ ಪಂದ್ಯದಲ್ಲಿ ಅಂಕಗಳ ಅಂತರ ತೀರಾ ಕಡಿಮೆ ಇದ್ದರೂ ಬೆಂಗಾಲ್ ತಂಡ ತುಸು ಮೇಲುಗೈ ಹೊಂದುತ್ತಲೇ ಬಂದಿತ್ತು. ಗುಜರಾತ್ ತಂಡದ ಪರ ರಾಕೇಶ್ ನರ್ವಾಲ್ ಒಬ್ಬರೇ 12 ಅಂಕ ಗಳಿಸಿ ಏಕಾಂಗಿಯಾಗಿ ಹೋರಾಡಿದರು.

  ಡಿ. 25, ನಾಲ್ಕನೇ ದಿನದ ಪಂದ್ಯಗಳು:

  1) ಪಟ್ನಾ ಪೈರೇಟ್ಸ್ vs ಯುಪಿ ಯೋದ್ಧಾ (ಸಮಯ ಸಂಜೆ 7:30ಕ್ಕೆ)

  2) ಪುಣೇರಿ ಪಲ್ಟಾನ್ vs ತೆಲುಗು ಟೈಟಾನ್ಸ್ (ಸಮಯ ರಾತ್ರಿ 8:30ಕ್ಕೆ)

  3) ಜೈಪುರ್ ಪಿಂಕ್ ಪ್ಯಾಂಥರ್ಸ್ vs ಹರ್ಯಾಣ ಸ್ಟೀಲರ್ಸ್ (ಸಮಯ ರಾತ್ರಿ 9:30ಕ್ಕೆ)
  Published by:Vijayasarthy SN
  First published: