PKL 8: ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡಕ್ಕೆ ರೋಚಕ ಗೆಲುವು
Pro Kabaddi League 2021: ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ 36-35 ಅಂಕಗಳಿಂದ ಗೆಲುವು ಸಾಧಿಸಿದೆ. ದಬಂಗ್ ಡೆಲ್ಲಿ ಮತ್ತು ಯುಪಿ ಯೋದ್ಧಾ ನಡುವಿನ ಪಂದ್ಯ 24 ಅಂಕಗಳಿಂದ ಟೈ ಆಗಿದೆ.
ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ
ಬೆಂಗಳೂರು, ಡಿ. 26: ಕಹಿ ಸೋಲಿನೊಂದಿಗೆ ಈ ಸೀಸನ್ನ ಪ್ರೋಕಬಡ್ಡಿಯನ್ನ (Pro Kabaddi League) ಆರಂಭಿಸಿದ್ದ ಬೆಂಗಳೂರು ಬುಲ್ಸ್ (Bengaluru Bulls) ಇದೀಗ ಸತತ ಎರಡು ಗೆಲುವುಗಳೊಂದಿಗೆ ಪುಟಿದೆದ್ದಿದೆ. ಬಿ.ಸಿ. ರಮೇಶ್ (Coach BC Ramesh) ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ದಧ ಬುಲ್ಸ್ ತಂಡ 36-35 ಅಂಕಗಳಿಂದ ರೋಚಕ ಜಯ ಪಡೆಯಿತು. ಕ್ಯಾಪ್ಟನ್ ಹಾಗೂ ಸೂಪರ್ ಸ್ಟಾರ್ ರೇಡರ್ ಪವನ್ ಶೆರಾವತ್ (Pavan Sehrawat) 15 ಅಂಕ ಗಳಿಸಿ ಬೆಂಗಳೂರು ಬುಲ್ಸ್ ತಂಡಕ್ಕೆ ಅಪೂರ್ವ ಗೆಲುವು ತಂದಿತ್ತರು. ಮತ್ತೊಬ್ಬ ಪ್ರತಿಭಾನ್ವಿತ ರೇಡರ್ ಚಂದ್ರನ್ ರಂಜಿತ್ (Chandran Ranjit) 6 ಅಂಕ ಗಳಿಸಿದರು. ಪಂದ್ಯದ ಕೊನೆಯ ಕ್ಷಣದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಪರ ಮ್ಯಾಚ್ ವಾಲುತ್ತಿರುವ ಹೊತ್ತಿನಲ್ಲಿ ದಕ್ಷಿಣ ಕೊರಿಯಾದ ರೇಡರ್ ಡೋಂಗಿ ಗಿಯೋನ್ ಲೀ ಭರ್ಜರಿ ರೇಡಿಂಗ್ ಮಾಡಿ 2 ಅಂಕ ಪಡೆದು ಬುಲ್ಸ್ ತಂಡಕ್ಕೆ ಗೆಲುವಿನ ಮಾಲೆ ಸಿಗುವಂತೆ ಮಾಡಿದರು.
ಹಾಲಿ ಚಾಂಪಿಯನ್ಸ್ ಬಂಗಾಲ್ ವಾರಿಯರ್ಸ್ ತಂಡದ ಕ್ಯಾಪ್ಟನ್ ಮಣಿಂದರ್ ಸಿಂಗ್ 17 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ಆಗಲಿಲ್ಲ. ಇರಾನೀ ಆಟಗಾರ ಮೊಹಮ್ಮದ್ ನಬಿಬಕ್ಷ್ ಕೂಡ ವಾರಿಯರ್ಸ್ ಪರ ಅದ್ಭುತ ಪ್ರದರ್ಶನ ನೀಡಿದರು.
ಬೆಂಗಳೂರು ಬುಲ್ಸ್ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿತು. ವಾರಿಯರ್ಸ್ ವಿರುದ್ದದ ಗೆಲುವಿನಿಂದ 5 ಅಂಕ ಪಡೆಯಿತು. ಎರಡು ಗೆಲುವಿನಿಂದ ಒಟ್ಟು 10 ಅಂಕಗಳೊಂದಿಗೆ ಬೆಂಗಳೂರು ಬುಲ್ಸ್ ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ಸ್ ತಂಡ ಈ ಪಂದ್ಯ ಸೋತರೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ದಬಂಗ್ ಡೆಲ್ಲಿ 13 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಇಂದು ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ದಬಂಗ್ ಡೆಲ್ಲಿ ತಂಡಗಳು 24-24 ಅಂಕಗಳಿಂದ ಸಮಬಲ ಸಾಧಿಸಿದವು. ದಬಂಗ್ ಡೆಲ್ಲಿಯ ನವೀನ್ ಕುಮಾರ್ ಅಕಾ ನವೀನ್ ಎಕ್ಸ್ಪ್ರೆಸ್ ಅವರು 11 ಅಂಕ ಗಳಿಸಿದರು. ಆಡಿದ ಮೂರು ಪಂದ್ಯಗಳಲ್ಲೂ ನವೀನ್ ಸೂಪರ್ 10 ಅಂಕ ಪಡೆದು ಗಮನ ಸೆಳೆದಿದ್ಧಾರೆ. ಗುಜರಾತ್ ಜೈಂಟ್ಸ್ ತಂಡದ ರಾಕೇಶ್ ನರ್ವಾಲ್ 9 ಅಂಕ ಗಳಿಸಿದರು.
2) ಯು ಪಿ ಯೋದ್ಧಾ vs ಜೈಪುರ್ ಪಿಂಕ್ ಪ್ಯಾಂಥರ್ಸ್, ಸಮಯ 8:30ಕ್ಕೆ
ಈ ಸೀಸನ್ನ ಎಲ್ಲಾ ಪಂದ್ಯಗಳು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ನ ಒಳಾಂಗಣದಲ್ಲಿ ನಡೆಯುತ್ತಿದೆ. ಜ. 20ರವರೆಗೆ ಮೊದಲ ಸುತ್ತಿನ ಪಂದ್ಯಗಳು ನಡೆಯಲಿವೆ. ಅದಾದ ಬಳಿಕ ಸ್ವಲ್ಪ ದಿನ ವಿರಾಮದ ಬಳಿಕ ಎರಡನೇ ಸುತ್ತಿನ ಪಂದ್ಯಗಳು ಇಲ್ಲೇ ನಡೆಯಲಿವೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ