ಬೆಂಗಳೂರು, ಡಿ. 28: ಪ್ರೋಕಬಡ್ಡಿ ಲೀಗ್ನ 17 ಮತ್ತು 18ನೇ ಪಂದ್ಯಗಳಲ್ಲಿ ಪಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಗೆಲುವು ಸಾಧಿಸಿವೆ. ಇಂದು ಮಂಗಳವಾರ ಇಲ್ಲಿ ನಡೆದ ಪಂದ್ಯಗಳಲ್ಲಿ ಪುಣೇರಿ ಪಲ್ಟಾನ್ ಎದುರು ಪಟ್ನಾ ಪೈರೇಟ್ಸ್ 38-26 ಅಂಕಗಳಿಂದ ಭರ್ಜರಿ ಗೆಲುವು ಪಡೆಯಿತು. ನಂತರ ನಡೆದ ಇನ್ನೊಂದು ಪಂದ್ಯದಲ್ಲಿ ಸಿದ್ಧಾರ್ಥ್ ‘ಬಾಹುಬಲಿ’ ದೇಸಾಯಿ ಶಕ್ತಿ ಪ್ರದರ್ಶನದ ನಡುವೆಯೂ ಹರ್ಯಾಣ ಸ್ಟೀಲರ್ಸ್ 39-37 ಅಂಕಗಳಿಂದ ರೋಚಕ ಜಯ ಪಡೆಯಿತು.
ಪಟ್ನಾ ಪೈರೇಟ್ಸ್ ತಂಡಕ್ಕೆ ಮೂರು ಪಂದ್ಯಗಳಲ್ಲಿ ಇದು ಎರಡನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ ದಬಂಗ್ ಡೆಲ್ಲಿ ಕೆಳಗೆ ಎರಡನೇ ಸ್ಥಾನಕ್ಕೆ ಏರಿದೆ. ಹರಿಯಾಣ ಸ್ಟೀಲರ್ಸ್ ತಂಡಕ್ಕೆ ಇದು ಚೊಚ್ಚಲ ಗೆಲುವಾಗಿದೆ. ಪಾಯಿಂಟ್ ಟೇಬಲ್ನಲ್ಲಿ ಸ್ಟೀಲರ್ಸ್ 8ನೇ ಸ್ಥಾನಕ್ಕೆ ಏರಿದೆ. ಇಂದು ಸೋಲನುಭವಿಸಿದ ಪುಣೇರಿ ಪಲ್ಟಾನ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಕೊನೆಯ ಎರಡು ಸ್ಥಾನಗಳಿಗೆ ಕುಸಿದಿವೆ.
ಪಟ್ನಾ ವರ್ಸಸ್ ಪುಣೇರಿ:
ಕರ್ನಾಟಕದ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ ನಾಯಕತ್ವದ ಮೂರು ಬಾರಿ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿತು. ನಾಯಕ ಪ್ರಶಾಂತ್ ಏಳು ರೇಡ್ ಮಾಡಿ 5 ಅಂಕ ಗಳಿಸಿದರು. ಹೆಚ್ಚು ಯಶಸ್ಸು ಕಂಡಿದ್ದು ರೇಡರ್ ಸಚಿನ್. ಇವರು ಒಟ್ಟು 20 ರೇಡ್ ಮಾಡಿ 10 ಅಂಕ ಗಳಿಸುವಲ್ಲಿ ಯಶಸ್ವಿಯಾದರು. ಆದರೆ, ಪಟ್ನಾ ತಂಡದ ಡಿಫೆನ್ಸ್ ಬಲಿಷ್ಠವಾಗಿತ್ತು. ಪುಣೇರಿ ಪಲ್ಟಾನ್ ತಂಡದ ಸ್ಟಾರ್ ರೇಡರ್ಸ್ ರಾಹುಲ್ ಚೌಧರಿ, ಪಂಕಜ್ ಮೋಹಿತೆ ಅವರು ಹೆಚ್ಚು ಯಶಸ್ಸು ಕಾಣಲಿಲ್ಲ. ಅಸ್ಲಮ್ ಇನಾಮ್ದಾರ್ 6 ಅಂಕ ಮತ್ತು ಸಬ್ಸ್ಟಿಟ್ಯೂಟ್ ಆಗಿ ಬಂದ ಮೋಹಿತ್ ಗೋಯಟ್ 7 ಅಂಕ ಗಳಿಸಿ ಪುಣೇರಿ ತಂಡವನ್ನ ಗೆಲುವಿನ ದಾರಿಗೆ ತರಲು ಯತ್ನಿಸಿದರು. ಆದರೆ, ಹೆಚ್ಚು ಅಂಕ ಗಳಿಸಲು ಪಟ್ನಾ ಡಿಫೆಂಡರ್ಸ್ ಆಸ್ಪದ ಕೊಡಲಿಲ್ಲ.
ಇದನ್ನೂ ಓದಿ: IND vs SA: ಮಳೆ ನಂತರ ವಿಕೆಟ್ ಸುರಿಮಳೆ; ಒಂದೇ ದಿನ 18 ವಿಕೆಟ್ ಪತನ; 146 ರನ್ ಮುನ್ನಡೆಯಲ್ಲಿ ಭಾರತ
ತೆಲುಗು ಟೈಟಾನ್ಸ್ಗೆ ವೀರೋಚಿತ ಸೋಲು:
ಇಂದು ತೆಲುಗು ಟೈಟಾನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವೆ ನಡೆದ ಪಂದ್ಯ ರೋಚಕವಾಗಿತ್ತು. ತೆಲುಗಿನ ಸಿದ್ಧಾರ್ಥ್ ‘ಬಾಹುಬಲಿ’ ದೇಸಾಯಿಯ ಬಲಿಷ್ಠ ಸವಾಲು ಮಂಕಾಗುವ ರೀತಿಯಲ್ಲಿ ಹರಿಯಾಣದ ಮೀಟು ಆಡಿದರು. 22 ರೇಡ್ ಮಾಡಿದ ಮೀತು 12 ಅಂಕ ಗಳಿಸಿ ಸ್ಟೀಲರ್ಸ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.
ತೆಲುಗು ಟೈಟಾನ್ಸ್ ತಂಡದ ಸಿದ್ಧಾರ್ಥ್ ದೇಸಾಯಿ, ಅಕಾ ಬಾಹುಬಲಿ 9 ಅಂಕ ಗಳಿಸಿದರು. ಕರ್ನಾಟಕದ ಹುಡುಗ ರಾಕೇಶ್ ಗೌಡ 7 ಅಂಕ ಗಳಿಸಿದರು. ಅದರಲ್ಲಿ 5 ಬೋನಸ್ ಅಂಕಗಳೇ ಒಳಗೊಂಡಿವೆ. ಆದರೆ, ಅಂತಿಮವಾಗಿ ಹರಿಯಾಣ ಸ್ಟೀಲರ್ಸ್ ಚೊಚ್ಚಲ ಗೆಲುವು ಪಡೆಯುವುದನ್ನು ತೆಲುಗು ಟೈಟಾನ್ಸ್ ಆಟಗಾರರಿಂದ ತಡೆಯಲು ಸಾಧ್ಯವಾಗಲಿಲ್ಲ.
ನಿನ್ನೆ ನಡೆದ ಪಂದ್ಯಗಳು:
ನಿನ್ನೆ ಯು ಪಿ ಯೋದ್ಧಾ ತಂಡದ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ 32-29 ಅಂಕಗಳಿಂದ ಸೋಲಿಸಿತು. ಎರಡನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಯು ಮುಂಬಾ ತಂಡಗಳು 30-30 ಅಂಕಗಳಿಂದ ಡ್ರಾ ಮಾಡಿಕೊಂಡವು.
ಇದನ್ನೂ ಓದಿ: PKL 8: ಸಚಿನ್ ವಿಟ್ಲ, ವೇಗದ ಬೌಲರ್ ಆಗಿದ್ದವ ತೊಡೆ ತಟ್ಟಿ ಕಬಡ್ಡಿ ಆಟಗಾರನಾದ ಕಥೆ
ನಾಳೆಯ ಪಂದ್ಯಗಳು:
1) ದಬಾಂಬ್ ಡೆಲ್ಲಿ vs ಬೆಂಗಾಲ್ ವಾರಿಯರ್ಸ್
2) ಯು ಪಿ ಯೋದ್ಧಾ vs ಗುಜರಾತ್ ಜೈಂಟ್ಸ್
ಅಂಕಪಟ್ಟಿ:
ಈ ಸೀಸನ್ನ ಪ್ರೋಕಬಡ್ಡಿಯಲ್ಲಿ ಆಡುತ್ತಿರುವ ಎಲ್ಲಾ 12 ತಂಡಗಳು ಈವರೆಗೆ ತಲಾ 3 ಪಂದ್ಯಗಳನ್ನ ಆಡಿ ಮುಗಿಸಿವೆ. ಈ ಮೂರು ಸುತ್ತುಗಳ ಬಳಿಕ ದಬಾಂಬ್ ಡೆಲ್ಲಿ ಟಾಪರ್ ಆಗಿದ್ದರೆ, ಪುಣೇರಿ ಪಲ್ಟಾನ್ ಕೊನೆಯ ಸ್ಥಾನದಲ್ಲಿದೆ.
1) ದಬಂಗ್ ಡೆಲ್ಲಿ: 13 ಅಂಕ
2) ಪಟ್ನಾ ಪೈರೇಟ್ಸ್: 11 ಅಂಕ
3) ಬೆಂಗಾಲ್ ವಾರಿಯರ್ಸ್: 11 ಅಂಕ
4) ಜೈಪುರ್ ಪಿಂಕ್ ಪ್ಯಾಂಥರ್ಸ್: 11 ಅಂಕ
5) ಬೆಂಗಳೂರು ಬುಲ್ಸ್: 10 ಅಂಕ
6) ಯು ಮುಂಬಾ: 9 ಅಂಕ
7) ಗುಜರಾತ್ ಜೈಂಟ್ಸ್: 9 ಅಂಕ
8) ಹರಿಯಾಣ ಸ್ಟೀಲರ್ಸ್: 7 ಅಂಕ
9) ಯು ಪಿ ಯೋದ್ಧಾ: 7 ಅಂಕ
10) ತಮಿಳ್ ತಲೈವಾಸ್: 6 ಅಂಕ
11) ತೆಲುಗು ಟೈಟಾನ್ಸ್: 5 ಅಂಕ
12) ಪುಣೇರಿ ಪಲ್ಟಾನ್: 5 ಅಂಕ
ಈ ಸೀಸನ್ನ ಮೂರನೇ ಸುತ್ತಿನ ಬಳಿಕ ಒಂದೂ ಸೋಲು ಕಾಣದ ತಂಡವೆಂದರೆ ದಬಂಗ್ ಡೆಲ್ಲಿ. ಹಾಗೆಯೇ ಒಂದೂ ಗೆಲುವು ಕಾಣದ ತಂಡಗಳೆಂದರೆ ತಮಿಳ್ ತಲೈವಾಸ್ ಮತ್ತು ತೆಲುಗು ಟೈಟಾನ್ಸ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ