ಪಾಕಿಸ್ತಾನದ ಕರಾಚಿ (Karachi ) ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಒಂದು ದಿನದ ಹಿಂದೆ ಭಯೋತ್ಪಾದಕ ದಾಳಿ ನಡೆದಿತ್ತು. ಭೀಕರ ಎನ್‌ಕೌಂಟರ್ ಬಳಿಕ ಭದ್ರತಾ ಪಡೆಗಳು ಎಲ್ಲಾ ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ಆದರೆ, ಇದರಿಂದಾಗಿ ಪಾಕಿಸ್ತಾನ ಸೂಪರ್ ಲೀಗ್‌ನ (PSL 2023) ಭವಿಷ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಪ್ರಸ್ತುತ ಪಾಕಿಸ್ತಾನ್ ಸೂಪರ್ ಲೀಗ್ ನಡೆಯುತ್ತಿದ್ದು, ದಾಳಿ ನಡೆದ ಸ್ಥಳದ ಸಮೀಪ ಪಿಎಸ್‌ಎಲ್‌ನಲ್ಲಿ ಭಾಗವಹಿಸುವ ತಂಡಗಳ ಹೋಟೆಲ್ಗಳು (Hotel) ಇದ್ದವು. ರಾತ್ರೋರಾತ್ರಿ ನಡೆದ ಎನ್‌ಕೌಂಟರ್ ಸುದ್ದಿ ಕೇಳಿ ಹೋಟೆಲ್‌ನಲ್ಲಿ ತಂಗಿದ್ದ ಆಟಗಾರರಿಗೂ ಭಯ ಆವರಿಸಿದೆ.
ಭಯದ ವಾತಾವರಣದಲ್ಲಿ ಇಂಗ್ಲೆಂಡ್ ಆಟಗಾರರು:
ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಇಂಗ್ಲೆಂಡ್ ಆಟಗಾರರು ಕರಾಚಿಯ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ನಡೆದ ಉಗ್ರರ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದರು. ಈ ಭಯೋತ್ಪಾದಕ ದಾಳಿ ನಡೆದಾಗ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಲಾಹೋರ್ ಖಲಂದರ್ ತಂಡಗಳು ಕರಾಚಿ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದವು. ದಾಳಿ ಬಳಿಕ ಉಭಯ ತಂಡಗಳು ಹೆಚ್ಚು ಹೊತ್ತು ಕ್ರೀಡಾಂಗಣದಲ್ಲಿಯೇ ಇರಬೇಕಾಯಿತು. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನ ಆಟಗಾರರೂ ಇದರಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪಿಎಸ್‌ಎಲ್ ಫ್ರಾಂಚೈಸಿ ನಡುವೆ ತುರ್ತು ಸಭೆ ನಡೆದಿದೆ. ಬಳಿಕ ಪಿಸಿಬಿ ಮತ್ತು ಎಲ್ಲಾ ಫ್ರಾಂಚೈಸಿಗಳು ಲೀಗ್ ಅನ್ನು ಮುಂದುವರಿಸಲು ನಿರ್ಧರಿಸಿವೆ.
ಬಿಗಿ ಭದ್ರತೆಯ ಭರವಸೆ ನೀಡಿದ ಮುಖ್ಯಮಂತ್ರಿ:
ಇದೇ ವೇಳೆ, ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಕರಾಚಿಯ ಪೊಲೀಸ್ ಸಂಕೀರ್ಣದ ಮೇಲಿನ ಭಯೋತ್ಪಾದಕ ದಾಳಿಯು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್ 8) ನ ಎಂಟನೇ ಆವೃತ್ತಿಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ಪಂದ್ಯಗಳು ವೇಳಾಪಟ್ಟಿಯಂತೆ ನಡೆಯಲಿವೆ. ಪಿಎಸ್‌ಎಲ್ ತಂಡಗಳಿಗೆ ಅಧ್ಯಕ್ಷೀಯ ಮಟ್ಟದ ಭದ್ರತೆಯನ್ನು ಒದಗಿಸಲಾಗಿದ್ದು, ಯಾವುದೇ ಸಂದರ್ಭದಲ್ಲೂ ಭಯೋತ್ಪಾದಕರ ದಾಳಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: KL Rahul: ಟೆಸ್ಟ್ ಕ್ರಿಕೆಟ್ನಿಂದ ಕೆಎಲ್ ರಾಹುಲ್ ಔಟ್? ಕೊನೆಯ 9 ಇನ್ನಿಂಗ್ಸ್ ನೋಡಿದ್ರೆ ಶಾಕ್ ಆಗ್ತೀರಾ!
ಪಾಕಿಸ್ತಾನ ಸೂಪರ್ ಲೀಗ್ ವೇಳಾಪಟ್ಟಿಯ ಪ್ರಕಾರ ಕರಾಚಿಯಲ್ಲಿ ಪಂದ್ಯಗಳು ನಡೆಯಲಿವೆ. ಶನಿವಾರ ಸಂಜೆ ಕರಾಚಿ ಕಿಂಗ್ಸ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಸೆಣಸಲಿದ್ದು, ಪೇಶಾವರ್ ಝಲ್ಮಿ ತಂಡ ಕೂಡ ಇಂದು ನಗರಕ್ಕೆ ಆಗಮಿಸಲಿದೆ. ಶನಿವಾರ, ಭಾನುವಾರ ಮತ್ತು ಸೋಮವಾರ ಕರಾಚಿಯಲ್ಲಿ ಸತತ ಪಂದ್ಯಗಳಿವೆ. ಫೆಬ್ರವರಿ 26 ರಂದು ಕರಾಚಿಯಲ್ಲಿ ಕೊನೆಯ ಪಂದ್ಯ ನಡೆಯಲಿದೆ.
ಪಾಕ್ ಸರ್ಕಾರದ ವಿಫಲತೆ:
ಇದಕ್ಕೂ ಮುನ್ನ, ಭಯೋತ್ಪಾದನೆಯನ್ನು ಎದುರಿಸಲು ವಿಫಲವಾಗಿರುವ ಪಾಕಿಸ್ತಾನ ಸರ್ಕಾರವು ತನ್ನ ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವಾಗ್ದಾಳಿ ನಡೆಸಿದರು. ಈ ಕುರಿತು ಪ್ರಸಾದ್ ಟ್ವೀಟ್ ಮಾಡಿದ್ದು, ‘ನೀವು ಭಯೋತ್ಪಾದಕರನ್ನು ಹುಟ್ಟುಹಾಕಿದಾಗ, ಅದು ನಿಮಗೇ ಹಿಂತಿರುಗುತ್ತದೆ. ದೇಶವು ಭಯೋತ್ಪಾದನೆಯ ಬಗ್ಗೆ ಅಸಹಿಷ್ಣುತೆಯನ್ನು ಹೊಂದಲು ಸಾಧ್ಯವಾಗದ ಕಾರಣ ಪ್ರಾಣ ಕಳೆದುಕೊಳ್ಳುವ ಅಮಾಯಕರಿಗೆ ದುಃಖವಾಗುತ್ತದೆ‘ ಎಂದು ಬರೆದುಕೊಂಡಿದ್ದಾರೆ.
ಮೈದಾನದ ಬಳಿಯೇ ಬಾಂಬ್ ಸ್ಪೋಟ:
ಇನ್ನು, ಕಳೆದ ಕೆಲ ದಿನಗಳ ಹೀಮದೆ ಪಾಕ್ ನಾಯಕ ಬಾಬರ್ ಅಜಮ್ ಇತರ ಪಾಕ್ ಆಟಗಾರರು ಆಡುತ್ತಿದ್ದ ಸ್ಟೇಡಿಯಂ ಬಳಿಯೇ ಬಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದರು. ಆದರೆ ಈ ದಾಳಿಯಿಂದ ಕ್ರಿಕೆಟಿಗರು ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದರು. ಬಳಿಕ ಉಗ್ರರು ತಾವು ಕ್ರಿಕೆಟಿಗರನ್ನು ಗುರಿಯಾಗಿಸಿರಲಿಲ್ಲ ಎಂದು ಹೇಳಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ