ಭುಬನೇಶ್ವರ್, ಡಿ. 3: ಇಲ್ಲಿ ನಡೆಯುತ್ತಿರುವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನ ತಂಡದ ಆಟಗಾರರು ಭಾರತದಲ್ಲಿನ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದು, ಇಲ್ಲಿನ ಆತಿಥ್ಯ ಮತ್ತು ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಈ ವಿಶ್ವಕಪ್ನಲ್ಲಿ ಕ್ವಾರ್ಟರ್ಫೈನಲ್ ತಲುಪಲು ವಿಫಲವಾಗಿದೆ. ಆದರೆ, ಟೂರ್ನಿಯಲ್ಲಿ ನಾವು ಗೆದ್ದಿದ್ದೇವೋ, ಸೋತಿದ್ದೇವೋ ಎಂಬುದಕ್ಕಿಂತ ಹೆಚ್ಚಾಗಿ ನಮಗೆ ಭಾರತದಲ್ಲಿ ಸಿಕ್ಕ ಪ್ರೀತಿ ಮತ್ತು ಸ್ನೇಹ ಬಹಳ ಅಮೂಲ್ಯವಾದುದು ಎಂದು ಪಾಕಿಸ್ತಾನದ ಕಿರಿಯ ಹಾಕಿ ಆಟಗಾರರು ಸಿಎನ್ಎನ್-ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ.
“ಭುಬನೇಶ್ವರ್ ನಗರದ ಕಳಿಂಗ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡುವುದರಿಂದು ಹಿಡಿದು ಟೂರ್ನಿಯ ಪಂದ್ಯ ಆಡುವವರೆಗೆ ಪ್ರತಿಯೊಂದೂ ನಮಗೆ ಖುಷಿ ಕೊಟ್ಟಿದೆ. ಗೆಲುವು ಅಥವಾ ಸೋಲು ಬೇರೆ ವಿಷಯ. ಆದರೆ, ಇಲ್ಲಿ ನಮಗೆ ಸಿಕ್ಕ ಪ್ರೀತಿ ಮತ್ತು ಸ್ನೇಹ ನಿಜಕ್ಕೂ ನಮಗೆಲ್ಲರಿಗೂ ಅಮೂಲ್ಯವಾದುದು. ಒಡಿಶಾ ಮತ್ತು ಹಾಕಿ ಇಂಡಿಯಾ ಮಾಡಿದ ಎಲ್ಲಾ ವ್ಯವಸ್ಥೆಗಳೂ ಉತ್ತಮವಾಗಿವೆ. ಹಾಕಿಗೆ ಕಳಿಂಗ ಸ್ಟೇಡಿಯಂ ಅತ್ಯುತ್ತಮ ಸ್ಥಳ” ಎಂದು ಪಾಕಿಸ್ತಾನದ ಕಿರಿಯ ಹಾಕಿ ಆಟಗಾರ ಅಬ್ದುಲ್ ಸಾಹಿದ್ ಹೇಳಿದ್ದಾರೆ.
ಜೂನಿಯರ್ ವಿಶ್ವಕಪ್ನಲ್ಲಿ ಪಾಕಿಸ್ತಾನ ತನ್ನ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು ಮೂರನೇ ಸ್ಥಾನ ಪಡೆಯಿತು. ಜರ್ಮನಿ ವಿರುದ್ಧ ಮೊದಲ ಪಂದ್ಯ ಸೋತ ಪಾಕಿಸ್ತಾನ ಬಳಿಕ ಈಜಿಪ್ಟ್ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿತು. ಆದರೆ, ಕೊನೆಯ ಲೀಗ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸೋತು ನಾಕೌಟ್ ಪ್ರವೇಶದ ಬಾಗಿಲು ಬಂದ್ ಆಯಿತು.
ಕ್ಲಾಸಿಫಿಕೇಶನ್ ಹಂತದಲ್ಲಿ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಪಾಕಿಸ್ತಾನ 18-2 ಗೋಲುಗಳಿಂದ ಸೋಲಿಸಿತಾದರೂ ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಎದುರು ವೀರೋಚಿತ ಸೋಲುಂಡಿತು. ಇದರಿಂದಾಗಿ ಅದು 11ನೇ ಸ್ಥಾನಕ್ಕಾಗಿ ಸ್ಪರ್ಧಿಸುವ ಸ್ಥಿತಿ ಬಂದಿದೆ. ನಾಳೆ ಪೋಲೆಂಡ್ ವಿರುದ್ಧ ಪಾಕಿಸ್ತಾನ ಸೆಣಸಲಿದೆ.
ಇದನ್ನೂ ಓದಿ: Pro Kabaddi- ಬೆಂಗಳೂರಿನ ಶೆರಟಾನ್ ಹೋಟೆಲ್ನಲ್ಲಿ ಪ್ರೋಕಬಡ್ಡಿ ಪಂದ್ಯಾವಳಿ; ಇಲ್ಲಿದೆ ವೇಳಾಪಟ್ಟಿ
ಪಾಕಿಸ್ತಾನದ ಕಳಪೆ ಸಾಧನೆಗೆ ಕಾರಣ?:
ಭಾರತದಂತೆ ಪಾಕಿಸ್ತಾನ ಕೂಡ ಒಂದು ಕಾಲದಲ್ಲಿ ಹಾಕಿಯಲ್ಲಿ ಸೂಪರ್ ಪವರ್ ಎನಿಸಿತ್ತು. ಆದರೆ, ಇತ್ತೀಚೆಗೆ ಆ ತಂಡ ಸಾಕಷ್ಟು ಪರದಾಡುತ್ತಿದೆ. ಆ ತಂಡದ ನಾಯಕ ರಾಣಾ ವಾಹಿದ್ ಹೇಳುವ ಪ್ರಕಾರ, ಕಳೆದ ಮೂರು ವರ್ಷಗಲಿಂದ ಪಾಕಿಸ್ತಾನದ ಜೂನಿಯರ್ ಹಾಕಿ ತಂಡ ಒಂದೂ ಪಂದ್ಯ ಆಡಿರಲಿಲ್ಲವಂತೆ. ಇದು ವಿಶ್ವಕಪ್ನಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಲಾಗಿದೆ.
ಅಷ್ಟೇ ಅಲ್ಲ, ಪಾಕಿಸ್ತಾನ ಹಾಕಿ ಮಂಡಳಿಯ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಆಟಗಾರರಿಗೆ ಒಳ್ಳೆಯ ಗುಣಮಟ್ಟದ ಸಲಕರಣೆಗಳು ಸಿಕ್ಕಿಲ್ಲ. ಇಲ್ಲಿನ ಪ್ರತಿಭಾನ್ವಿತ ಹಾಕಿ ಆಟಗಾರರು ಹಾಕಿ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಂಥ ಸ್ಥಿತಿಯಿಂದ ಪಾಕಿಸ್ತಾನದ ಹಾಕಿ ಕ್ಷೇತ್ರ ನಲುಗುತ್ತಿದೆ ಎಂದು ಕ್ರೀಡಾ ವಿಶ್ಲೇಷಕ ಸುಶಾಂತ್ ಬೆಹೆರಾ ಹೇಳುತ್ತಾರೆ.
ಇದನ್ನೂ ಓದಿ: ಡಿ. 17ಕ್ಕೆ ನಿಗದಿಯಾಗಿದ್ದ ಭಾರತ-ಸೌತ್ ಆಫ್ರಿಕಾ ಕ್ರಿಕೆಟ್ ಸರಣಿ ಮುಂದೂಡಿಕೆ ಸಾಧ್ಯತೆ
ಸೆಮಿಫೈನಲ್ನಲ್ಲಿ ಭಾರತಕ್ಕೆ ಸೋಲು:
ಇದೇ ವೇಳೆ ಹಾಲಿ ಜೂನಿಯರ್ ವಿಶ್ವ ಹಾಕಿ ಚಾಂಪಿಯನ್ ಭಾರತ ತಂಡ ಸೆಮಿಫೈನಲ್ನಲ್ಲಿ ಸೋಲನುಭವಿಸಿತು. ಇಂದು ಜರ್ಮನಿ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಭಾರತ 2-4 ಗೋಲುಗಳಿಂದ ಪರಾಭವಗೊಂಡಿತು.
ಡಿಸೆಂಬರ್ 5ರಂದು ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಭಾರತ ಎದಿರುಗೊಳ್ಳಲಿದೆ. ಟೂರ್ನಿಯ ಲೀಗ್ ಹಂತದಲ್ಲಿ ತನ್ನ ವಿರುದ್ಧ ಗೆಲುವು ಸಾಧಿಸಿದ್ದ ಫ್ರಾನ್ಸ್ ತಂಡದ ಮೇಲೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಸಿಕ್ಕಿದೆ.
ಇನ್ನು, ಫೈನಲ್ನಲ್ಲಿ ಜರ್ಮನಿ ಮತ್ತು ಅರ್ಜೆಂಟೀನಾ ತಂಡಗಳು ಹಣಾಹಣಿ ನಡೆಸಲಿವೆ. ಅರ್ಜೆಂಟೀನಾ ತಂಡ ಇಂದು ನಡೆದ ಸೆಮಿಫೈನಲ್ನಲ್ಲಿ ಫ್ರಾನ್ಸ್ ತಂಡವನ್ನ ಪೆನಾಲ್ಟಿ ಶೂಟೌಟ್ನಲ್ಲಿ 3-1 ಗೋಲುಗಳಿಂದ ಮಣಿಸಿ ಫೈನಲ್ ತಲುಪಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ