ತಮ್ಮ ಹದಿನಾರರ ಹರೆಯದಲ್ಲಿಯೇ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆಗೈದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಕ್ರಿಕೆಟ್ ದೇವರು ಎಂದೇ ಜನಜನಿತರಾದವರು. ವಿಶ್ವಕಂಡ ಅತ್ಯದ್ಭುತ ಬ್ಯಾಟರ್ ಸಚಿನ್ 2013ರಲ್ಲಿ ಕ್ರಿಕೆಟ್ (Cricket) ಜಗತ್ತಿಗೆ ವಿದಾಯ ಹೇಳಿದರೂ ಕ್ರಿಕೆಟ್ ಎಂದರೆ ಸಚಿನ್ ಎನ್ನುವಷ್ಟು ಜನರಿಗೆ ತಮ್ಮ ಅಭಿಮಾನಿಗಳಿಗೆ ಅಂತೆಯೇ ಸಹಮಿತ್ರರಿಗೆ ಆಪ್ತರಾದವರು. ಕ್ರಿಕೆಟ್ನ ಯಾವುದೇ ಇತಿಹಾಸ ಹಾಗೂ ಮಹತ್ವದ ಸಾಧನೆಗಳಲ್ಲಿ ಸಚಿನ್ ಹೆಸರನ್ನು ನೆನಪು ಮಾಡಿಕೊಳ್ಳದ ಜನರೇ ಇಲ್ಲ ಎಂಬುವಷ್ಟರ ಮಟ್ಟಿಗೆ ಅವರ ಕೀರ್ತಿ ಹರಡಿದೆ.
ಸಚಿನ್ ಅಭಿಮಾನಿ ಬಳಗ:
ಸಚಿನ್ ಎಲ್ಲೇ ಹೋಗಲಿ ಅವರ ಅಭಿಮಾನಿಗಳು ಹಾಗೂ ದೇಶ ಅವರನ್ನು ನೆನಪಿಸಿಕೊಳ್ಳದ ದಿನವಿಲ್ಲ ಎಂದೇ ಹೇಳಬಹುದು. ಚಿಕ್ಕವರಿಂದಲೇ ಕ್ರಿಕೆಟ್ ಲೋಕಕ್ಕೆ ಅವರು ನೀಡಿದ ಕೊಡುಗೆಗಳಿಂದ ಇಂದಿಗೂ ಜನ ಸಚಿನ್ಗೆ ಜಯಕಾರವನ್ನು ಹಾಕುತ್ತಾರೆ.
ಜನರ ಮನದಲ್ಲಿ ಇನ್ನೂ ಸಚಿನ್ ಅಜರಾಮರ:
ಸಚಿನ್ ಇನ್ನೂ ಕೂಡ ಜನರ ಮನದಲ್ಲಿ ಅದೇ ಹಿಂದಿನ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದು ಇತ್ತೀಚೆಗೆ ನಡೆದ ಘಟನೆಯಾಗಿದೆ. ಮಿಡ್ಫ್ಲೈಟ್ ಒಂದರಲ್ಲಿ ಸಚಿನ್ ಹೆಸರನ್ನು ಪುನರುಚ್ಛರಿಸಿದ ಪ್ರಯಾಣಿಕರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಸಚಿನ್ನ ಮೇಲೆ ತಮ್ಮ ಪ್ರೀತಿ ಅಭಿಮಾನಗಳನ್ನು ತೋರ್ಪಡಿಸಿದ್ದಾರೆ.
Thank you to those on my flight who were chanting my name a little while ago, reminiscent of when I used to come out to bat. Unfortunately, the seatbelt sign was on so I could not stand up to greet you. So saying a big hello to all now 👋🏻👋🏻 https://t.co/ak4GYLjMi4
— Sachin Tendulkar (@sachin_rt) December 17, 2022
ಈ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಸಚಿನ್ ವಿಮಾನವನ್ನು ಹತ್ತುತ್ತಿದ್ದಂತೆಯೇ ಸಹ ಪ್ರಯಾಣಿಕರಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಸಚಿನ್.. ಸಚಿನ್.. ಎಂಬ ಕೂಗೇ ಎಲ್ಲೆಡೆ ವ್ಯಾಪಿಸಲಾರಂಭಿಸಿತು. ತಮ್ಮ ಅಭಿಮಾನಿಗಳ ಪ್ರೀತಿಪೂರ್ವಕ ಕೂಗಿಗೆ ಸಚಿನ್ಗೆ ಆ ಕ್ಷಣದಲ್ಲಿ ಧನ್ಯವಾದಗಳನ್ನು ಅರ್ಪಿಸಲು ಸಾಧ್ಯವಾಗದೇ ಹೋದರೂ ನಂತರ ಸಾಮಾಜಿಕ ತಾಣ ಟ್ವಿಟರ್ನಲ್ಲಿ ಅಭಿಮಾನಿಗಳ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: IND vs BAN Test: ದ್ವಿತಿಯ ಟೆಸ್ಟ್ಗೂ ಮುನ್ನ ಟೀಂ ಇಂಡಿಯಾಗೆ ಭಾರೀ ಹಿನ್ನಡೆ, ತಂಡದಿಂದ ಇಬ್ಬರು ಸ್ಟಾರ್ ಪ್ಲೇಯರ್ಸ್ ಔಟ್
ಟ್ವಿಟರ್ನಲ್ಲಿ ಧನ್ಯವಾದ ಅರ್ಪಿಸಿದ ಮಾಸ್ಟರ್ ಬ್ಲಾಸ್ಟರ್:
ವಿಮಾನವೇರುತ್ತಿದ್ದಂತೆಯೇ ಸಚಿನ್ಗೆ ಸೀಟ್ಬೆಲ್ಟ್ಗಳನ್ನು ಧರಿಸುವ ಸೂಚನೆಯನ್ನು ನೀಡಲಾಯಿತು. ಹೀಗಾಗಿ ಅಭಿಮಾನಿಗಳಿಗೆ ಎದ್ದುನಿಂತು ಧನ್ಯವಾದ ಅರ್ಪಿಸಲು ಸಾಧ್ಯವಾಗಲಿಲ್ಲ ಎಂದು ಸಚಿನ್ ತಿಳಿಸಿದ್ದಾರೆ. ಆದರೆ ಟ್ವಿಟರ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದು ನನ್ನ ಹೆಸರನ್ನು ಹೇಳುತ್ತಾ ನನ್ನ ನೆನಪು ಮಾಡಿಕೊಂಡವರಿಗೆ ಧನ್ಯವಾದಗಳು ಎಂದಿದ್ದಾರೆ.
"ದುರಾದೃಷ್ಟವಶಾತ್ ಸೀಟ್ಬೆಲ್ಟ್ ಹಾಕಿಕೊಳ್ಳಬೇಕೆಂಬ ಸೂಚನೆ ದೊರೆತ ಕಾರಣ ನಿಮ್ಮ ಕೂಗಿಗೆ ಸ್ಪಂದಿಸಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ಇದೀಗ ದೊಡ್ಡದಾಗಿ ಎಲ್ಲರಿಗೂ ಕೇಳುವಂತೆ ನಿಮಗೆಲ್ಲರಿಗೂ ನಮಸ್ಕಾರ ಹೇಳುತ್ತಿದ್ದೇನೆ" ಎಂದು ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಭಾವಪರವಶರಾಗಿ ಬರೆದುಕೊಂಡ ಸಚಿನ್ ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ದಾಖಲೆಗಳ ಸರದಾರ:
ಸಚಿನ್ ಕ್ರಿಕೆಟ್ಗೆ ವಿದಾಯ ಹೇಳಿ ಒಂಭತ್ತು ವರ್ಷಗಳು ಕಳೆದಿವೆ ಆದರೆ ಇನ್ನೂ ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಸಚಿನ್ ಹೊಂದಿದ್ದಾರೆ. ಇದುವೇ ಸಚಿನ್ ಹೆಸರಿಗಿರುವ ತಾಕತ್ತಾಗಿದೆ. ತಮ್ಮ ಹೆಸರಿನಲ್ಲಿಯೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ ಅಲ್ಲದೆ ಸಚಿನ್ ದಾಖಲೆಯ 51 ಟೆಸ್ಟ್ ಶತಕಗಳನ್ನು ಮತ್ತು ODI ಗಳಲ್ಲಿ 49 ಶತಕಗಳನ್ನು ಗಳಿಸಿದ ಕ್ರಿಕೆಟ್ ದಿಗ್ಗಜ ಎಂದೆನಿಸಿದ್ದಾರೆ.
ಸಚಿನ್ ದಾಖಲೆ ಸರಿಗಟ್ಟುವವರಿಲ್ಲ:
ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 34357 ರನ್ ಗಳಿಸುವ ಮೂಲಕ ಅಗ್ರ ರನ್ ಸ್ಕೋರರ್ ಎಂದೆನಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ನಲ್ಲಿ 15921 ರನ್ಗಳೊಂದಿಗೆ ಅಗ್ರ ರನ್ ಗಳಿಸಿದ ಆಟಗಾರರಾಗಿದ್ದಾರೆ ಮತ್ತು ODI ಕ್ರಿಕೆಟ್ನಲ್ಲಿ 18426 ರನ್ಗಳೊಂದಿಗೆ ಅದೇ ಸ್ಥಾನವನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ