Olympics Special: 120 ವರ್ಷಗಳಲ್ಲಿ ಭಾರತೀಯರು ಗೆದ್ದ ಒಲಿಂಪಿಕ್ಸ್ ಪದಕಗಳೆಷ್ಟು? ಇಲ್ಲಿದೆ ಪಟ್ಟಿ

ಒಟ್ಟು 25 ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಭಾರತ 18 ಕ್ರೀಡಾಕೂಟದಲ್ಲಿ ಕನಿಷ್ಠ ಒಂದಾದರೂ ಪದಕ ಗೆದ್ದಿದೆ. ಇದೂವರೆಗೆ 9 ಚಿನ್ನ ಸೇರಿ 28 ಪದಕಗಳನ್ನ ಗೆದ್ದಿದೆ. ಹಾಕಿಯೊಂದರಲ್ಲೇ 11 ಪದಕ ಬಂದಿದೆ.

1968ರ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಭಾರತ ಹಾಕಿ ತಂಡ

1968ರ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಭಾರತ ಹಾಕಿ ತಂಡ

  • News18
  • Last Updated :
  • Share this:
ಒಲಿಂಪಿಕ್ಸ್ ಕ್ರೀಡಾಕೂಟ ಪ್ರಾರಂಭವಾಗಿದ್ದು 1896ರಲ್ಲಿ ಅಥೆನ್ಸ್ ನಗರದಲ್ಲಿ. ಅದಾಗಿ ಮುಂದಿನ ಒಲಿಂಪಿಕ್ಸ್ ನಡೆದದ್ದು 1900ರಲ್ಲಿ. ಪ್ಯಾರಿಸ್​ನಲ್ಲಿ ನಡೆದ ಎರಡನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡ ಪದಾರ್ಪಣೆ ಮಾಡಿತು. ಅಲ್ಲಿಂದ ಭಾರತ ಕಣಕ್ಕಿಳಿದಿದ್ದು 1920ರ ಒಲಿಂಪಿಕ್ಸ್​ನಲ್ಲೇ. 1920ರಿಂದ ಪ್ರತಿಯೊಂದು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪಾಲ್ಗೊಳ್ಳುತ್ತಿದೆ. ಈಗ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಸೇರಿದಂತೆ ಭಾರತ ಒಟ್ಟು 25 ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದೆ. ಇದೂವರೆಗೂ ಎಲ್ಲಾ ಒಲಿಂಪಿಕ್ ಕ್ರೀಡಾಕೂಟ ಸೇರಿ ಭಾರತ ಗೆದ್ದಿರುವ ಪದಕಗಳು 28. ಇದರಲ್ಲಿ 9 ಚಿನ್ನ, 7 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಒಳಗೊಂಡಿವೆ. ಗಮನಿಸಬೇಕಾದ ಅಂಶವೆಂದರೆ 9 ಚಿನ್ನದ ಪದಕದ ಪೈಕಿ ಹಾಕಿ ಕ್ರೀಡೆಯೊಂದರಿಂದಲೇ 8 ಸ್ವರ್ಣಗಳು ಬಂದಿವೆ.

ಭಾರತ ಪಾಲ್ಗೊಂಡಿರುವ 25 ಒಲಿಂಪಿಕ್ ಕ್ರೀಡಾಕೂಟದ ಪೈಕಿ ಏಳು ಬಾರಿ ಪದಕ ಸಾಧನೆ ಶೂನ್ಯವಾಗಿದೆ. 1900ರ ಒಲಿಂಪಿಕ್ಸ್​ನಲ್ಲಿ ಭಾರತ 2 ಬೆಳ್ಳಿ ಪದಕ ಗೆದ್ದಿತ್ತು. ಮೊದಲ ಚಿನ್ನದ ಪದಕ ಬಂದಿದ್ದು 1928ರಲ್ಲಿ. ಈ ದಾಖಲೆ ಅಳಿಸಲು ಎಂಟು ದಶಕಗಳು ಬೇಕಾದವು. 2008ರ ಒಲಿಂಪಿಕ್ಸ್​ನಲ್ಲಿ ಭಾರತ ಒಂದು ಚಿನ್ನ ಮತ್ತು 2 ಕಂಚಿನ ಪದಕ ಸೇರಿ 3 ಪದಕಗಳನ್ನ ಗೆದ್ದಿತು. ಇದೇ ಇದೂವರೆಗೆ ಭಾರತದ ಗರಿಷ್ಠ ಸಾಧನೆ ಆಗಿದೆ. ಪದಕಗಳ ಸಂಖ್ಯೆ ಗಣನೆಗೆ ತೆಗೆದುಕೊಂಡರೆ 2012ರ ಒಲಿಂಪಿಕ್ಸ್​ನಲ್ಲಿ 2 ಬೆಳ್ಳಿ 4 ಕಂಚು ಸೇರಿ 6 ಪದಕ ಗೆದ್ದಿರುವುದು ಗರಿಷ್ಠ ಸಾಧನೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಭಾರತ 1 ಬೆಳ್ಳಿ ಮತ್ತು 2 ಕಂಚು ಗೆದ್ದಿತು.

1900ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ನಾರ್ಮನ್ ಪ್ರಿಚರ್ಡ್ ಅಥ್ಲೆಟಿಕ್ಸ್​ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದರು. 200 ಮೀಟರ್ ಓಟ ಮತ್ತು 200 ಮೀಟರ್ ಹರ್ಡನ್ಸ್ ಸ್ಪರ್ಧೆಯಲ್ಲಿ ಅವರು ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದರು.

ಆನಂತರ ಭಾರತ ಮತ್ತೊಂದು ಪದಕ ಗೆಲ್ಲಲು 1928ರವರೆಗೆ ಕಾಯಬೇಕಾಯಿತು. ಆ ಸಂದರ್ಭದಲ್ಲಿ ವಿಶ್ವ ಹಾಕಿಯ ಸೂಪರ್ ಪವರ್ ಆಗಿದ್ದ ಭಾರತ ಅದೇ ಕ್ರೀಡೆಯಲ್ಲಿ 1928ರ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿತು. ಅಲ್ಲಿಂದ 1956ರ ಒಲಿಂಪಿಕ್ಸ್​ವರೆಗೂ ಭಾರತ ಹಾಕಿ ತಂಡ ಸತತ 6 ಬಾರಿ ಸ್ವರ್ಣ ಗೆದ್ದು ಬೀಗಿತು. 1960ರ ಒಲಿಂಪಿಕ್ಸ್​ನಲ್ಲಿ ಹಾಕಿ ಫೈನಲ್​ನಲ್ಲಿ ಪಾಕಿಸ್ತಾನಕ್ಕೆ ಚಿನ್ನ ಬಿಟ್ಟುಕೊಟ್ಟಿತು. ನಂತರ 1964 ಮತ್ತು 1980ರಲ್ಲಿ ಭಾರತಕ್ಕೆ ಹಾಕಿಯಲ್ಲಿ ಚಿನ್ನ ಸಿಕ್ಕಿತು. ಹಾಕಿ ಬಿಟ್ಟರೆ ಭಾರತಕ್ಕೆ ಚಿನ್ನ ಬಂದಿದ್ದು 2008ರಲ್ಲಿ ಶೂಟಿಂಗ್​ನಲ್ಲಿ. ಅಭಿನವ್ ಬಿಂದ್ರಾ ಚಿನ್ನ ಗೆದ್ದು ಭಾರತದ ಕೀರ್ತಿಪತಾಕೆ ಹೆಚ್ಚಿಸಿದ್ದರು. ವೈಯಕ್ತಿಕವಾಗಿ ಚಿನ್ನ ಗೆದ್ದ ಮೊದಲ ಹಾಗೂ ಏಕೈಕ ಭಾರತೀಯ ಅವರೆನಿಸಿದ್ದಾರೆ.

ಇನ್ನು, ಸ್ವತಂತ್ರ ಭಾರತದಲ್ಲಿ ವೈಯಕ್ತಿಕವಾಗಿ ಮೊದಲ ಪದಕ ಗೆದ್ದ ದಾಖಲೆ ಕೆ.ಡಿ. ಜಾಧವ್ ಅವರದ್ದಾಗಿದೆ. 1952ರ ಒಲಿಂಪಿಕ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಅವರ ನಂತರ ಕುಸ್ತಿಯಲ್ಲಿ ಭಾರತೀಯರು ಪದಕ ಗೆಲ್ಲಲು 56 ವರ್ಷ ಕಾಯಬೇಕಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕ ಗೆದ್ದರು. 2012ರ ಲಂಡನ್ ಒಲಿಂಪಿಕ್ಸ್​ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗಿಟ್ಟಿಸಿದರು. ಸ್ವತಂತ್ರ ಭಾರತದಲ್ಲಿ ವೈಯಕ್ತಿಕವಾಗಿ ಎರಡು ಪದಕ ಗಳಿಸಿರುವ ಏಕೈಕ ಕ್ರೀಡಾಪಟುವೆಂದರೆ ಅದು ಸುಶೀಲ್ ಕುಮಾರ್.

2000ರ ಒಲಿಂಪಿಕ್ಸ್​ನಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದರು. ಇದು ಒಲಿಂಪಿಕ್ ಇತಿಹಾಸದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಅವರೆನಿಸಿದ್ದಾರೆ. 2004ರಲ್ಲಿ ಶೂಟಿಂಗ್ ಸ್ಪರ್ಧೆಯೊಂದರಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಬೆಳ್ಳಿ ಪದಕ ಜಯಿಸಿದರು. ಬೆಳ್ಳಿ ಗೆದ್ದ ಮೊದಲ ಭಾರತೀಯ ಕೂಡ ಅವರಾಗಿದ್ದಾರೆ.

ಇದನ್ನೂ ಓದಿ: Tokyo Olympics 2020 – ಇಂದಿನಿಂದ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟ; ಶುಕ್ರವಾರ ಉದ್ಘಾಟನಾ ಸಮಾರಂಭ

ಭಾರತ ಇದುವರೆಗೆ ಒಲಿಂಪಿಕ್ಸ್​ನಲ್ಲಿ ಎಂಟು ಕ್ರೀಡೆಗಳಲ್ಲಿ ಪದಕ ಗೆದ್ದಿದೆ. ಅದು ಗೆದ್ದಿರುವ 28 ಪದಕಗಳ ಪೈಕಿ ಹಾಕಿಯೊಂದರಿಂದಲೇ 11 ಪದಕ ಬಂದಿದೆ. ಹಾಕಿ ಬಿಟ್ಟರೆ ಭಾರತೀಯರು ಯಶಸ್ಸು ಕಂಡಿರುವುದು ಕುಸ್ತಿ ಮತ್ತು ಶೂಟಿಂಗ್ ಕ್ರೀಡೆಗಳಲ್ಲಿ. ಕುಸ್ತಿಯಲ್ಲಿ 5 ಹಾಗೂ ಶೂಟಿಂಗ್​ನಲ್ಲಿ 4 ಪದಕಗಳು ಬಂದಿವೆ. 1900ರಲ್ಲಿ ಪಿಚರ್ಡ್ 2 ಪದಕ ಗೆದ್ದ ನಂತರ ಅಥ್ಲೆಟಿಕ್ಸ್​ನಲ್ಲಿ ಇದೂವರೆಗೆ ಭಾರತಕ್ಕೆ ಪದಕ ಬಂದಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಿಲ್ಕಾ ಸಿಂಗ್ ಮತ್ತು ಪಿ ಟಿ ಉಷಾ ಓಟದ ಸ್ಪರ್ಧೆಯಲ್ಲಿ ಫೈನಲ್ ತಲುಪಿ ನಾಲ್ಕನೇ ಸ್ಥಾನ ಪಡೆದಿದ್ದೇ ಭಾರತೀಯ ಅಥ್ಲೀಟ್​ಗಳ ಗರಿಷ್ಠ ಸಾಧನೆ ಎನಿಸಿದೆ.

ಇದೂವರೆಗೆ ಒಲಿಂಪಿಕ್ ಪದಕ ಗೆದ್ದಿರುವ ಭಾರತೀಯರು:
1900: 2 ಬೆಳ್ಳಿ - ನಾರ್ಮನ್ ಪ್ರಿಚರ್ಡ್ (ಅಥ್ಲೆಟಿಕ್ಸ್)
1928: 1 ಚಿನ್ನ – ಹಾಕಿ
1932: 1 ಚಿನ್ನ – ಹಾಕಿ
1936: 1 ಚಿನ್ನ – ಹಾಕಿ
1948: 1 ಚಿನ್ನ – ಹಾಕಿ
1952: 1 ಚಿನ್ನ, 1 ಕಂಚು – ಹಾಕಿ ಮತ್ತು ಕುಸ್ತಿ (ಕೆ.ಡಿ. ಜಾಧವ್)
1956: 1 ಚಿನ್ನ – ಹಾಕಿ
1960: 1 ಬೆಳ್ಳಿ – ಹಾಕಿ
1964: 1 ಚಿನ್ನ – ಹಾಕಿ
1968: 1 ಕಂಚು – ಹಾಕಿ
1972: 1 ಕಂಚು -  ಹಾಕಿ
1980: 1 ಚಿನ್ನ – ಹಾಕಿ
1996: 1 ಕಂಚು – ಟೆನಿಸ್ (ಲಿಯಾಂಡರ್ ಪೇಸ್)
2000: 1 ಕಂಚು – ವೇಟ್ ಲಿಫ್ಟಿಂಗ್ (ಕರ್ನಂ ಮಲ್ಲೇಶ್ವರಿ)
2004: 1 ಬೆಳ್ಳಿ – ಶೂಟಿಂಗ್ (ರಾಜ್ಯವರ್ಧನ್ ಸಿಂಗ್ ರಾಥೋಡ್)
2008: 1 ಚಿನ್ನ, 2 ಕಂಚು – ಅಭಿನವ್ ಬಿಂದ್ರಾ (ಶೂಟಿಂಗ್ ಚಿನ್ನ) ವಿಜೇಂದರ್ ಸಿಂಗ್ ಬಾಕ್ಸಿಂಗ್ ಕಂಚು, ಸುಶೀಲ್ ಕುಮಾರ್ ಕುಸ್ತಿ ಕಂಚು.
2012: 2 ಬೆಳ್ಳಿ 4 ಕಂಚು – ವಿಜಯ್ ಕುಮಾರ್ (ಶೂಟಿಂಗ್ ಬೆಳ್ಳಿ), ಸುಶೀಲ್ ಕುಮಾರ್ (ಕುಸ್ತಿ ಬೆಳ್ಳಿ), ಗಗನ್ ನಾರಂಗ್ (ಶೂಟಿಂಗ್ ಕಂಚು), ಸೈನಾ ನೆಹ್ವಾಲ್ (ಬ್ಯಾಡ್ಮಿಂಟನ್ ಕಂಚು), ಮೇರಿ ಕೋಮ್ (ಬಾಕ್ಸಿಂಗ್ ಕಂಚು), ಯೋಗೇಶ್ವರ್ ದತ್ (ಕುಸ್ತಿ ಕಂಚು)
2016: 1 ಬೆಳ್ಳಿ 1 ಕಂಚು – ಪಿ.ವಿ. ಸಿಂಧು (ಬ್ಯಾಡ್ಮಿಂಟನ್ ಬೆಳ್ಳಿ), ಸಾಕ್ಷಿ ಮಲಿಕ್ (ಕುಸ್ತಿ ಕಂಚು)
Published by:Vijayasarthy SN
First published: